ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ.
ಕಿರ್ಗಿಸ್ತಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು “ಪರಿಸ್ಥಿತಿ ಪ್ರಸ್ತುತ ಶಾಂತವಾಗಿದೆ” ಎಂದು ಹೇಳಿದೆ, ಆದರೆ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳು ವಾಸಿಸುವ ಬಿಷ್ಕೆಕ್‌ನಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯಗಳ ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ನಾವು ನಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ ಆದರೆ ವಿದ್ಯಾರ್ಥಿಗಳು ಸದ್ಯಕ್ಕೆ ಮನೆಯೊಳಗೆ ಇರಲು ಮತ್ತು ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಲಾಗುತ್ತದೆ. ಅಗತ್ಯಬಿದ್ದರೆ 24×7 ಸಂಪರ್ಕ ಸಂಖ್ಯೆ 0555710041ಕ್ಕೆ ಕರೆ ಮಾಡುವಂತೆ ಸೂಚಿಸಲಾಗಿದೆ.
ಪ್ರಸ್ತುತ ಮಧ್ಯ ಏಷ್ಯಾ ರಾಷ್ಟ್ರ ಕಿರ್ಗಿಸ್ತಾನ್‌ನಲ್ಲಿ ಸುಮಾರು 14,500 ಭಾರತೀಯ ಮತ್ತು ಸುಮಾರು 10,000 ಪಾಕಿಸ್ತಾನಿ ವಿದ್ಯಾರ್ಥಿಗಳಿದ್ದಾರೆ.
ಏನಿದು ಹಿಂಸಾಚಾರ?
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ಮೇ 13ರಂದು ಕಿರ್ಗಿಜ್ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಹೊಡೆದಾಟದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯ ಮತ್ತು ವಿದೇಶಿಗರ ನಡುವಿನ ಜಗಳದಿಂದ ಹಿಂಸಾಚಾರ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಮಧ್ಯೆ ಕಿರ್ಗಿಸ್ತಾನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯವು ವಲಸೆ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿಯರಿಗೆ ಮೇಲ್ವಿಚಾರಣೆ ಮತ್ತು ದಂಡವನ್ನು ಹೆಚ್ಚಿಸುತ್ತಿದೆ ಎಂದು ಸ್ಥಳೀಯ ಮಾದ್ಯಮ ವರದಿ ಮಾಡಿದೆ.
ಬಿಶ್ಕೆಕ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಮೇ 13ರಂದು ಕಿರ್ಗಿಜ್ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಹೊಡೆದಾಟದ ವೀಡಿಯೊಗಳು ಶುಕ್ರವಾರ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಹಿಂಸಾಚಾರ ಉಲ್ಬಣಗೊಂಡಿದೆ ಎಂದು ತಿಳಿಸಿದೆ.
ಆಪಾದಿತ ಹಿಂಸಾಚಾರವು ಹಾಸ್ಟೆಲ್‌ನಲ್ಲಿ ಸಂಭವಿಸಿದೆ, ಇದು ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹುಟ್ಟುಹಾಕಿದೆ. ವಿದೇಶಿಯರ ಬಗ್ಗೆ ಮೃದು ನಿರ್ಧಾರ ತಾಳಲಾಗುತ್ತಿದೆ ಎಂದು ಅಲ್ಲಿನ ಜನರು ಪ್ರತಿಭಟನೆಯನ್ನು ವ್ಯಕ್ತಪಡಿಸಲು ಒಗ್ಗೂಡಲು ಪ್ರಾರಂಭಿಸಿದ್ದಾರೆ. ಎಕೆಐಪ್ರೆಸ್ ಪ್ರಕಾರ, ಗೂಂಡಾಗಿರಿಯ ಶಂಕೆಯ ಮೇಲೆ ಮೂವರು ವಿದೇಶಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿಯ ಎಚ್ಚರಿಕೆಯ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಬಿಷ್ಕೆಕ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪರಿಸ್ಥಿತಿ ಈಗ ಶಾಂತವಾಗಿದೆ ಎಂದು ವರದಿಯಾಗಿದೆ. ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸ್ವಾತಿ ಮಲಿವಾಲ್ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್


