ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಲ್-ಇನ್ ಪಾಡ್‌ಕಾಸ್ಟ್‌ನ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು “ಸ್ಪಷ್ಟವಾಗಿ ಹೇಳುವುದಾದರೆ, ಇದು ಅವರ (ಟ್ರಂಪ್ ಅವರ) ಒಪ್ಪಂದ. ಅವರೇ ಇದನ್ನು ಅಂತಿಮಗೊಳಿಸುವವರು. ಅವರು ಇದನ್ನು ಮಾಡಿಯೇ ಮಾಡುತ್ತಾರೆ. ಒಪ್ಪಂದಕ್ಕೆ ಎಲ್ಲವೂ ಸಿದ್ಧವಾಗಿತ್ತು, ಮೋದಿ ಅವರು ಅಧ್ಯಕ್ಷರಿಗೆ ಕರೆ ಮಾಡಬೇಕಿತ್ತು. ಕರೆ ಮಾಡಲು ಅನಾನುಕೂಲತೆ ಇತ್ತು. ಆದ್ದರಿಂದ ಮೋದಿ ಕರೆ ಮಾಡಲಿಲ್ಲ. ಆ ಶುಕ್ರವಾರ ಮುಗಿಯಿತು. ಅದರ ಮುಂದಿನ ವಾರ ನಾವು ಇಂಡೋನೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಜೊತೆ ಒಪ್ಪಂದಗಳನ್ನು ಮಾಡಿದೆವು. ನಾವು ಬಹಳಷ್ಟು ಒಪ್ಪಂದಗಳನ್ನು ಘೋಷಿಸಿದೆವು,” ಎಂದು ಲುಟ್ನಿಕ್ ಹೇಳಿದ್ದಾರೆ.
ಇದೇ ವೇಳೆ ಒಪ್ಪಂದ ಇನ್ನೂ ಯಾಕೆ ಆಗಲಿಲ್ಲ ಎಂಬುದನ್ನು ವಿವರಿಸಿದ ಅವರು ದೇಶಗಳ ಜೊತೆ ಮಾತುಕತೆ ನಡೆಸುತ್ತಿದ್ದ ದರಗಳ (ಟ್ಯಾರಿಫ್‌ಗಳ) ಮುಂದಿನ ರಚನೆಯ ಬಗ್ಗೆಯೂ ಹೇಳಿದರು. ಮೋದಿ ಅವರು ಕರೆ ಮಾಡದ ಕಾರಣ ಆನಂತರದಲ್ಲಿ ಅಮೆರಿಕವು ಮುಂದಿನ ಆಯ್ಕೆಯಂತೆ ಇಂಡೋನೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು ಮಲೇಷ್ಯಾ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿತು ಎಂದಿದ್ದಾರೆ.
ಮುಂದುವರೆದು ಸುಂಕದ ಕುರಿತು ಮಾತನಾಡಿದ ಅವರು ‘ಜುಲೈ 2025 ರಲ್ಲಿ ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಜಪಾನ್, ವಿಯೆಟ್ನಾಂ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಕೊರಿಯಾ ಜೊತೆಗಿನ ಸುಂಕ ಮಾತುಕತೆಗಳನ್ನು ಅಮೆರಿಕ ಮುಕ್ತಾಯಗೊಳಿಸಿದೆ. ಭಾರತದಿಂದ ಅಮೆರಿಕಕ್ಕೆ ಮಾಡುವ ರಫ್ತುಗಳು ಪ್ರಸ್ತುತ ಶೇಕಡಾ 50 ರಷ್ಟು ಸುಂಕ ದರವನ್ನು ಹೊಂದಿವೆ. “ಏಕೆಂದರೆ ನಾವು (ಯುಎಸ್) ಅವರೊಂದಿಗೆ (ಭಾರತ) ಮಾತುಕತೆ ನಡೆಸಿದ್ದೇವೆ ಮತ್ತು ಭಾರತವು (ಇತರ ಏಷ್ಯಾದ ದೇಶಗಳು) ಮೊದಲೇ ಮಾತುಕತೆ ಮುಗಿಸಲಿದೆ ಎಂದು ಭಾವಿಸಿ ಹೆಚ್ಚಿನ ದರದಲ್ಲಿ ಮಾತುಕತೆ ನಡೆಸಿದ್ದೇವೆ.
ಈಗ ಸಮಸ್ಯೆ ಏನೆಂದರೆ, ಒಪ್ಪಂದಗಳು ಹೊಸ ಮತ್ತು ಹೆಚ್ಚಿನ ದರದಲ್ಲಿ ಹೊರಬಂದವು, ಆ ನಂತರ ಭಾರತವು ಮತ್ತೆ ಕರೆ ಮಾಡಿ ‘ಓಹ್, ನಾವು ಸಿದ್ಧರಿದ್ದೇವೆ’ ಎಂದು ಹೇಳುತ್ತದೆ. ಅದರಿಂದ ನಾನು ಅವರಿಗೆ ಹೇಳಿದೆ, ಯಾವುದಕ್ಕೆ ಸಿದ್ಧ? ನಿಮಗೆ ಗೊತ್ತಾ, ಅದು ಮೂರು ವಾರಗಳ ನಂತರ ಹಾಗೆ ಆಯಿತು. ‘ಮೂರು ವಾರಗಳ ಹಿಂದೆ ನಿಲ್ದಾಣದಿಂದ ಹೊರಟ ರೈಲಿಗೆ ಹತ್ತಲು ನೀವು ಸಿದ್ಧರಿದ್ದೀರಾ?'” ಎಂದು ಕೇಳಿದೆ ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೇಳಿದ್ದಾರೆ.
ಭಾರತ ರಷ್ಯಾದ ತೈಲ ಖರೀದಿಯಿಂದ ಅತೃಪ್ತರಾಗಿದ್ದಾರೆಂದು ಮೋದಿಗೆ ತಿಳಿದಿದೆ ಮತ್ತು ವಾಷಿಂಗ್ಟನ್ ನವದೆಹಲಿಯ ಮೇಲೆ ಸುಂಕವನ್ನು “ಬಹಳ ಬೇಗನೆ” ಹೆಚ್ಚಿಸಬಹುದು ಎಂದು ಟ್ರಂಪ್ ಹೇಳಿದ ಕೆಲವು ದಿನಗಳ ನಂತರ ಲುಟ್ನಿಕ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಅಮೆರಿಕ ಅಧ್ಯಕ್ಷರ ಬೆದರಿಕೆ ಮಾತು ಕೇಳಿ ಬಂದಿದೆ. ಇಲ್ಲಿಯವರೆಗೆ, ಅದಕ್ಕಾಗಿ ಆರು ಸುತ್ತಿನ ಮಾತುಕತೆಗಳು ನಡೆದಿವೆ.
ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲಿನ ಶೇಕಡಾ 50 ರಷ್ಟು ಸುಂಕವನ್ನು ಪರಿಹರಿಸಲು ಒಂದು ಚೌಕಟ್ಟಿನ ಒಪ್ಪಂದವನ್ನು ಈ ಒಪ್ಪಂದ ಒಳಗೊಂಡಿದೆ. ಈಗ ದರ ಮತ್ತಷ್ಟು ಹೆಚ್ಚಾಗಿರುವುದಾಗಿಯೂ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.


