ಭಾರತೀಯ ನೌಕಪಡೆಯ ಹಡಗಿನಿಂದ ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರಕ್ಕೆ ತಳ್ಳಲಾಗಿದೆ ಎಂಬ ಆರೋಪದ ಕುರಿತು ತಜ್ಞರು ತನಿಖೆ ಪ್ರಾರಂಭಿಸಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ಕುರಿತು ಮೇ 15ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ “ಕಳೆದ ವಾರ ರೋಹಿಂಗ್ಯಾ ನಿರಾಶ್ರಿತರನ್ನು ಭಾರತೀಯ ನೌಕಾಪಡೆಯ ಹಡಗಿನಿಂದ ಅಂಡಮಾನ್ ಬಳಿ ಬಲವಂತವಾಗಿ ಸಮುದ್ರಕ್ಕೆ ತಳ್ಳಲಾಗಿದೆ ಎಂಬ ವಿಶ್ವಾಸಾರ್ಹ ವರದಿಗಳಿಂದ ಗಾಬರಿಗೊಂಡ ವಿಶ್ವಸಂಸ್ಥೆಯ ತಜ್ಞರು, ಇಂತಹ ‘ಊಹಿಸಲಾಗದ’ ಮತ್ತು ‘ಒಪ್ಪಿಕೊಳ್ಳಲಾಗದ’ ಕೃತ್ಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ” ಎಂದಿದೆ.
ಮ್ಯಾನ್ಮಾರ್‌ನ ಅಪಾಯಕಾರಿ ಪರಿಸ್ಥಿತಿಗೆ ವಾಪಸ್ ಕಳುಹಿಸುವುದು ಸೇರಿದಂತೆ ಅಮಾನವೀಯ ಮತ್ತು ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ನಡೆಸಿಕೊಳ್ಳುವುದನ್ನು ಭಾರತ ಸರ್ಕಾರ ನಿಲ್ಲಿಸಬೇಕು ಎಂದು ಇದೇ ವೇಳೆ ಮಂಡಳಿ ಆಗ್ರಹಿಸಿದೆ.
“ರೋಹಿಂಗ್ಯಾ ನಿರಾಶ್ರಿತರನ್ನು ನೌಕಾಪಡೆಯ ಹಡಗುಗಳಿಂದ ಸಮುದ್ರಕ್ಕೆ ತಳ್ಳಲಾಗಿದೆ ಎಂಬ ಕಲ್ಪನೆಯು ಅತಿರೇಕದ ಸಂಗತಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯವನ್ನು ನಾನು ಹುಡುಕುತ್ತಿದ್ದೇನೆ. ಏನಾಯಿತು ಎಂಬುದರ ಸಂಪೂರ್ಣ ವರದಿಯನ್ನು ಒದಗಿಸುವಂತೆ ಭಾರತ ಸರ್ಕಾರವನ್ನು ಕೋರಿದ್ದೇನೆ” ಎಂದು ಮ್ಯಾನ್ಮಾರ್‌ನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಟಾಮ್ ಆಂಡ್ರ್ಯೂಸ್ ತಿಳಿಸಿದ್ದಾರೆ.
“ಅಂತಾರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವವರ ಜೀವನ ಮತ್ತು ಸುರಕ್ಷತೆಯ ಬಗ್ಗೆ ಸ್ಪಷ್ಟವಾಗಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇಂತಹ ಕ್ರೂರ ಕ್ರಮಗಳು ಮಾನವ ಸಭ್ಯತೆಗೆ ಅವಮಾನವಾಗಿದೆ ಮತ್ತು ಜೀವ ಅಥವಾ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವ ಜನರನ್ನು ಬಲವಂತವಾಗಿ ವಾಪಸ್ ಕಳಿಸುವುದನ್ನು ನಿಷೇಧಿಸುವ ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವ ಸ್ಪಷ್ಟ ಉಲ್ಲಂಘನೆಯಾಗಿದೆ ಆಂಡ್ರ್ಯೂಸ್ ಹೇಳಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಹಿಂಸೆ, ಕಿರುಕುಳ ಮತ್ತು ಇತರ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಬೆದರಿಕೆಯನ್ನು ಎದುರಿಸುತ್ತಿರುವ ರೋಹಿಂಗ್ಯಾ ನಿರಾಶ್ರಿತರನ್ನು ಬಲವಂತವಾಗಿ ವಾಪಸ್ ಕಳುಹಿಸುವುದನ್ನು ಕೊನೆಗೊಳಿಸಬೇಕು” ಎಂದು ಆಂಡ್ರ್ಯೂಸ್ ಆಗ್ರಹಿಸಿದ್ದಾರೆ.
ಕಳೆದ ವಾರದ ಕೊನೆಯಲ್ಲಿ ಭಾರತೀಯ ಅಧಿಕಾರಿಗಳು ದೆಹಲಿಯಲ್ಲಿ ವಾಸಿಸುತ್ತಿದ್ದ ಹಲವಾರು ರೋಹಿಂಗ್ಯಾ ನಿರಾಶ್ರಿತರನ್ನು ಬಂಧಿಸಿದ್ದಾರೆಂದು ವರದಿಯಾಗಿದೆ. ಅವರಲ್ಲಿ ಹೆಚ್ಚಿನವರು ಅಥವಾ ಎಲ್ಲರೂ ನಿರಾಶ್ರಿತರ ಗುರುತಿನ ದಾಖಲೆಗಳನ್ನು ಹೊಂದಿದ್ದರು. ಈ ಗುಂಪಿನ ಸುಮಾರು 40 ಸದಸ್ಯರ ಕಣ್ಣುಗಳಿಗೆ ಬಟ್ಟೆ ಕಟ್ಟಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕರೆದೊಯ್ಯಲಾಗಿದೆ. ನಂತರ ಭಾರತೀಯ ನೌಕಾಪಡೆಯ ಹಡಗಿಗೆ ಅವರನ್ನು ಸ್ಥಳಾಂತರಿಸಲಾಗಿದೆ. ಹಡಗು ಅಂಡಮಾನ್ ಸಮುದ್ರವನ್ನು ದಾಟಿದ ನಂತರ, ನಿರಾಶ್ರಿತರಿಗೆ ಲೈಫ್ ಜಾಕೆಟ್‌ಗಳನ್ನು ನೀಡಿ, ಬಲವಂತವಾಗಿ ಸಮುದ್ರಕ್ಕೆ ಇಳಿಸಿ, ಮ್ಯಾನ್ಮಾರ್ ಪ್ರದೇಶದ ದ್ವೀಪಕ್ಕೆ ಈಜುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ನಿರಾಶ್ರಿತರು ದಡಕ್ಕೆ ಈಜುವ ಮೂಲಕ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ, ಆದರೆ ಅವರ ಪ್ರಸ್ತುತ ಸ್ಥಳ ಮತ್ತು ಸ್ಥಿತಿ ಗೊತ್ತಾಗಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತೀಯ ಅಧಿಕಾರಿಗಳು ಅಸ್ಸಾಂ ರಾಜ್ಯದ ಬಂಧನ ಕೇಂದ್ರದಿಂದ ಸುಮಾರು 100 ಮಂದಿ ರೋಹಿಂಗ್ಯಾ ನಿರಾಶ್ರಿತರ ಗುಂಪನ್ನು ಬಾಂಗ್ಲಾದೇಶದ ಗಡಿಯಲ್ಲಿರುವ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಎಂದು ವರದಿಯಾಗಿದೆ. ಈ ಗುಂಪಿನ ಪ್ರಸ್ತುತ ಸ್ಥಳ ಮತ್ತು ಸ್ಥಿತಿಯೂ ತಿಳಿದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
“ಮಾರ್ಚ್ 3, 2025ರಂದು, ವಿಶೇಷ ವರದಿಗಾರ ಆಂಡ್ರ್ಯೂಸ್ ಅವರು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದು, ರೋಹಿಂಗ್ಯಾಗಳು ಸೇರಿದಂತೆ ಇತರ ನಿರಾಶ್ರಿತರ ವ್ಯಾಪಕ, ಅನಿಯಂತ್ರಿತ ಮತ್ತು ಅನಿರ್ದಿಷ್ಟ ಬಂಧನ ಹಾಗೂ ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸಲಾಗುತ್ತದೆ ಎಂಬ ಆರೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್ ನಿರಾಶ್ರಿತರನ್ನು ಅನಿಯಂತ್ರಿತ ಬಂಧನದಿಂದ ಮುಕ್ತಗೊಳಿಸಬೇಕು ಮತ್ತು ಬಂಧನ ಸ್ಥಳಗಳಿಗೆ ಅವರಿಗೆ ಪ್ರವೇಶ ಅವಕಾಶ ನೀಡಬೇಕು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.”
“ಭಾರತ ಸರ್ಕಾರವು ರೋಹಿಂಗ್ಯಾ ನಿರಾಶ್ರಿತರ ವಿರುದ್ಧದ ಎಲ್ಲಾ ರೀತಿಯ ಒಪ್ಪಿಕೊಳ್ಳಲಾಗದ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು. ಮ್ಯಾನ್ಮಾರ್‌ಗೆ ಅವರನ್ನು ಗಡಿಪಾರು ಮಾಡುವುದನ್ನು ಕೊನೆಗಳಿಸಬೇಕು. ಭಾರತದ ಅಂತಾರಾಷ್ಟ್ರೀಯ ಬಾಧ್ಯತೆಗಳ ಈ ಸ್ಪಷ್ಟ ಉಲ್ಲಂಘನೆಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂಬುವುದಾಗಿ ಆಂಡ್ರ್ಯೂಸ್ ಪತ್ರದಲ್ಲಿ ಆಗ್ರಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಗಾಜಾದಲ್ಲಿ ಮುಂದುವರೆದ ಇಸ್ರೇಲ್ ವಾಯುದಾಳಿ; 80 ಜನರು ಸಾವು, ಕ್ಯಾನ್ಸರ್ ಆಸ್ಪತ್ರೆ ಸೇವೆ ಸ್ಥಗಿತ



Ninage yake adella? Royingya galu ninna relative vaa?