Homeಎಕಾನಮಿಅಸಮರ್ಥರ ಕೈಯ್ಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆ : ಎಚ್‌.ಎಸ್‌ ದೊರೆಸ್ವಾಮಿ

ಅಸಮರ್ಥರ ಕೈಯ್ಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆ : ಎಚ್‌.ಎಸ್‌ ದೊರೆಸ್ವಾಮಿ

- Advertisement -

ಅಸಮರ್ಥರ ಕೈಯಲ್ಲಿರುವ ಭಾರತದ ಆರ್ಥಿಕತೆ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ಮಾಜಿ ವಿತ್ತಮಂತ್ರಿ ಪಿ.ಚಿದಂಬರಂ ಕಾತರ ವ್ಯಕ್ತಪಡಿಸಿದ್ದಾರೆ. ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಜೆಎನ್‌ಯುನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು ಪ್ರಧಾನಿ ಮೋದಿ. ಭಾರತದ ಇಂದಿನ ಆರ್ಥಿಕತೆಯನ್ನು ನಿಭಾಯಿಸುವ ಸಾಮರ್ಥ್ಯ ವಿತ್ತಮಂತ್ರಿಗಿದ್ದರೂ, ಅವರನ್ನು ಕಡೆಗಣಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದ ಆರ್ಥಿಕ ಬೆಳವಣಿಗೆ ಕುಂಟುತ್ತಾ ಸಾಗಿದೆ. ಯಾವಾಗ ಬೇಕಾದರೂ ಅದು ಮತ್ತಷ್ಟು ಬಿಗಡಾಯಿಸಬಹುದು ಎನ್ನುತ್ತಾರೆ ಪಿ.ಚಿದಂಬರಂ.

ಮಾರುಕಟ್ಟೆಗೆ ಸೇರುವ ಜನ ಒಬ್ಬರಿಗೊಬ್ಬರು ಪರಿಚಯಸ್ತರೇನಲ್ಲ. ನಂಬಿಕೆಯ ಮೇಲೆ ಅಲ್ಲಿಯ ವಹಿವಾಟು ನಡೆಯುತ್ತದೆ. ಆದರೆ ಅವರಲ್ಲಿ ಅಸ್ಥಿರತೆಯ ಭಯ ಉಂಟಾದರೆ ಮಾರುಕಟ್ಟೆಯಲ್ಲಿ ಏರುಪೇರು ಸಂಭವಿಸುತ್ತದೆ.

ಜಿಡಿಪಿ ಮೋದಿ ಆಳ್ವಿಕೆ ಆರಂಭವಾಗುವುದಕ್ಕೆ ಮೊದಲು 8 ಇದ್ದದ್ದು ಬರುಬರುತ್ತಾ 7.6, 6.6, 5.8, 5ಕ್ಕೆ ಇಳಿದು ಅದು ಈಗ 4.5ಕ್ಕೆ ಬಂದು ನಿಂತಿದೆ. ಇದರಿಂದ ಆಡಳಿತ ನಡೆಸುವವರಿಗೆ ತಲೆನೋವಾಗಿದೆ. ಆದರೆ ಅದನ್ನು ಅವರು ಪ್ರಕಟಪಡಿಸುವುದಿಲ್ಲ. ಮೋದಿಯವರ ತೀರ್ಮಾನವೇ ಅಂತ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಅದನ್ನು ಜಾರಿಗೆ ತರುವುದಷ್ಟೇ ಅರ್ಥಸಚಿವರ ಕೆಲಸ ಎಂಬುದು ಸತ್ಯ. ಈ ಪರಿಸ್ಥಿತಿಯಲ್ಲಿ ಆರ್ಥಿಕ ತಜ್ಞರಿಗೂ, ಸರ್ಕಾರಕ್ಕೂ ಘರ್ಷಣೆಗಳಾಗುತ್ತಿರುವುದು ನಮ್ಮ ನಿತ್ಯದ ನಿರಂತರ ಅನುಭವ.

ಕೃಷಿ ಬೆಳವಣಿಗೆ ದರ ಮೋದಿ ಅಧಿಕಾರಕ್ಕೆ ಬಂದಾಗ 6.3 ಇತ್ತು. 2017ರಲ್ಲಿ 5ಕ್ಕೆ 2018ರಲ್ಲಿ 2.9ಕ್ಕೆ ಇಳಿದ ಅದು 2019ರಲ್ಲಿ 2.1ಕ್ಕೆ ಬಂದು ನಿಂತಿದೆ. ಕೈಗಾರಿಕಾ ಬೆಳವಣಿಗೆ ಶೇ.4.6 ಇದ್ದದ್ದು ಈಗ 2.4ಕ್ಕೆ ಇಳಿದಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಯಾವ ವರ್ಷವೂ ಅದು ಮೇಲಕ್ಕೇರಿದ್ದಿಲ್ಲ. ಇಳಿಮುಖವಾಗುತ್ತಲೇ ಇದೆ. ಬೃಹತ್ ಕೈಗಾರಿಕೆಗಳು ಮೋದಿ ಅಧಿಕಾರಕ್ಕೆ ಬರುವ ಮುನ್ನ 4.8 ಇದ್ದದ್ದು 0.2ಕ್ಕೆ ಇಳಿದಿದ್ದರೆ ಅದೇ ಸಣ್ಣ ಕೈಗಾರಿಕೆಗಳು 0.9 ಇದ್ದದ್ದು ಈಗ 2.7 ಆಗಿದೆ. ಹೀಗಾಗಿ ಇದು ಮುನ್ನಡೆ ಸಾಧಿಸಿದೆ.

ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಿದೆ. ಗೃಹಬಳಕೆಯ ಸಾಮಗ್ರಿಗಳ ಮಾರಾಟವೂ ಇಳಿಮುಖವಾಗಿದೆ. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ.

ಈರುಳ್ಳಿ ವಿಚಾರವನ್ನೇ ತೆಗೆದುಕೊಳ್ಳೋಣ. ರೈತರು ಈರುಳ್ಳಿ ಹೆಚ್ಚಾಗಿ ಬೆಳೆದರು. ವರ್ತಕರು ಅದನ್ನು ಅಗ್ಗವಾಗಿ ಕೊಂಡು ದಾಸ್ತಾನು ಮಾಡಿಕೊಂಡರು. ಈರುಳ್ಳಿ ಮಾರುಕಟ್ಟೆಯಲ್ಲಿ ತುಂಬಾ ಇದೆ. ಇದನ್ನು ರಫ್ತು ಮಾಡದಿದ್ದರೆ ರೈತರು, ವರ್ತಕರು ನಾಶವಾಗಿ ಬಿಡುತ್ತಾರೆ. ಈರುಳ್ಳಿ ಕೊಳೆತುಹೋಗುತ್ತದೆ ಕೂಡಲೇ ಅನುಮತಿಕೊಡಿ ಎಂದು ರಫ್ತುದಾರರು ಬೊಬ್ಬೆ ಹಾಕುತ್ತಾರೆ. ಅಧಿಕಾರಿಗಳಿಗೆ, ಮಂತ್ರಿಗೆ, ಶಾಸಕರಿಗೆ ಕಾಂಚಾಣ ಕೊಟ್ಟು ಸರಿಮಾಡಿಕೊಳ್ಳುತ್ತಾರೆ. ರೈತರಿಗೆ ನಾಮಹಾಕಿ ಈ ವರ್ತಕರು ಲಕ್ಷಾಂತರ ಸಂಪಾದಿಸುತ್ತಾರೆ.

ಈಗ ಈರುಳ್ಳಿ ಭಾರತದ ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ. ರಫ್ತುಮಾಡಿ ಮಿಕ್ಕ ಈರುಳ್ಳಿಯನ್ನು ಅವರು ಸ್ವಲ್ಪ ಸ್ವಲ್ಪವೇ ಮಾರುಕಟ್ಟೆಗೆ ಬಿಡುತ್ತಾರೆ. ಬೆಲೆ ಕೆಜಿಗೆ 100-200 ಆಯಿತು. ಅದರಿಂದ ಮಧ್ಯವರ್ತಿ ವರ್ತಕರಿಗೆ ಲಾಭ.

ಇದೊಂದು ವಿಷವ್ಯೂಹ. ಈ ಬೆಲೆ ಏರಿಕೆಯನ್ನು ತಡೆಗಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ. ಬಡವರಿಗೆ ತಿಂಗಳಲ್ಲಿ 15 ದಿನ ಕೂಲಿ ಕೆಲಸ ಸಿಗುವುದೇ ದುರ್ಲಭವಾಗಿದೆ.

ತರಕಾರಿ, ದಿನಸಿ ಬೆಲೆಗಳು ಗಗನಕ್ಕೇರುತ್ತಿವೆ. ಅದನ್ನು ನಿಯಂತ್ರಣ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಸಗಟುಬೆಲೆ ಹಣದುಬ್ಬರ ಶೇ.1.92ರಷ್ಟು ಹೆಚ್ಚಿದೆ. ಈ ಎಲ್ಲಾ ಸಮಸ್ಯೆಗಳು ತಾನೇ ತಾನಾಗಿ ಸರಿಹೋಗುತ್ತದೆ ಎಂದು ಸರ್ಕಾರ ಭಾವಿಸಿದಂತಿದೆ. ಆರ್ಥಿಕ ಸಚಿವರು ಸಮಸ್ಯೆಯನ್ನು ಅವರ ಮುಂದಿಟ್ಟಾಗ ವಿತಂಡವಾದ ಮಾಡುತ್ತಾರೆ. ಮೋದಿ ಮೌನತಳೆಯುತ್ತಾರೆ.

500, 1000 ರೂಗಳ ನೋಟುರದ್ದತಿ, ದೋಷಪೂರಿತ ಜಿಎಸ್‌ಟಿ, ಹೆಚ್ಚುತ್ತಿರುವ ನಿಯಂತ್ರಣ, ಪ್ರಧಾನಿ ಕಚೇರಿಯ ಅಧಿಕಾರದ ಕೇಂದ್ರೀಕರಣ ವ್ಯವಸ್ಥೆ ಇವುಗಳಿಂದ ಉಂಟಾಗಿರುವ ಗಂಡಾಂತರದ ಬಗೆಗೆ ಆರ್ಥಿಕ ತಜ್ಞರು ಎಚ್ಚರಿಕೆಯ ಮಾತನ್ನಾಡಿದರೆ ಅದನ್ನು ನಿರ್ಲಕ್ಷಿಸುವ ಮನೋಭಾವ ಸರ್ಕಾರದ್ದು. ಇಂದಿನ ಜ್ವಲಂತ ಸಮಸ್ಯೆಗಳು ದೇಶದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂಬುದನ್ನು ಮೋದಿಯವರೂ, ಅರ್ಥಸಚಿವರು ಒಪ್ಪಿಕೊಳ್ಳುತ್ತಾರೆ. ಆದರೆ ಅವರು ಹೇಳುವುದು ಇಂದಿನ ಪರಿಸ್ಥಿತಿ ಹೀಗೆಯೇ ಮುಂದುವರೆಯುವುದಿಲ್ಲ. ವಿಶ್ವದ ಎಲ್ಲೆಡೆ ಈ ಸಮಸ್ಯೆ ಇದೆ. ಅಲ್ಲೆಲ್ಲ ಸರಿಹೋದರೆ ಇಲ್ಲಿಯೂ ಸರಿ ಹೋಗುತ್ತದೆ. ಅಚ್ಛೇದಿನ್ ಬಂದೇ ಬರುತ್ತದೆ ಎನ್ನುವುದು ಅವರ ವಾದ.

ಆರ್ಥಿಕ ತಜ್ಞರು, ಪ್ರಧಾನಿಗಳ ಆರ್ಥಿಕ ಸಲಹೆಗಾರರು ರಾಜೀನಾಮೆ ಕೊಟ್ಟುಹೋದರು. ಅವರು ನಿರ್ಗಮಿಸುವ ಮುನ್ನ ಹೇಳಿದ ಮಾತು: ಈ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಕೆಲಸ ಸರ್ಜನ್ ಇಲ್ಲದೇ ಶಸ್ತ್ರಚಿಕಿತ್ಸೆ ಮಾಡಲು ಹೊರಟಂತಿದೆ. ಮುಗ್ಗಟ್ಟಿನಿಂದ ಬಳಲಿರುವ ಆರ್ಥಿಕ ವ್ಯವಸ್ಥೆಯು ಅಸಮರ್ಥರ ಹಿಡಿತದಲ್ಲಿ ನರಳುತ್ತಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial