ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು, ದೇಶದ ಕಾನೂನು ವ್ಯವಸ್ಥೆಯನ್ನು “ಭಾರತೀಕರಣ” ಮಾಡಬೇಕು ಎಂದು ಶುಕ್ರವಾರ ಕರೆ ನೀಡಿದ್ದಾರೆ. ಪ್ರಸ್ತುತ ಅನುಸರಿಸುತ್ತಿರುವ ವಸಾಹತುಶಾಹಿ ನಿಯಮಗಳು ಭಾರತೀಯ ಜನರ ಅಗತ್ಯಗಳಿಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಸಾಮಾನ್ಯವಾಗಿ ನಮ್ಮ ನ್ಯಾಯ ವಿತರಣೆಯು ಸಾಮಾನ್ಯ ಜನರಿಗೆ ಅನೇಕ ಅಡೆತಡೆಗಳನ್ನು ಉಂಟು ಮಾಡುತ್ತದೆ. ನ್ಯಾಯಾಲಯದ ಕೆಲಸ ಮತ್ತು ಶೈಲಿಯು ಭಾರತದ ಸಂಕೀರ್ಣತೆಗಳಿಗೆ ಸರಿಹೊಂದುವುದಿಲ್ಲ. ವಸಾಹತುಶಾಹಿ ಮೂಲದ ನಮ್ಮ ವ್ಯವಸ್ಥೆಗಳು, ನಿಯಮಗಳು ಭಾರತೀಯ ಜನರ ಅಗತ್ಯಗಳಿಗೆ ಸೂಕ್ತವಾಗಿರುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ ಈ ಸಮಯದ ಅವಶ್ಯಕತೆ” ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
ಇದನ್ನೂ ಓದಿ: RSS ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ವಿವಾದ ಸೃಷ್ಟಿಸಿದ ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ!
ಸುಪ್ರೀಂಕೋರ್ಟ್‌ನ ದಿವಂಗತ ನ್ಯಾಯಾಧೀಶ ಮೋಹನ್ ಶಾಂತನಗೌಡರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತನ್ನ ಹೇಳಿಕೆಯನ್ನು ವಿವರಿಸಿದ ರಮಣ ಅವರು, “ಭಾರತೀಕರಣ ಎಂದರೆ, ನಮ್ಮ ಸಮಾಜದ ಪ್ರಾಯೋಗಿಕ ವಾಸ್ತವಗಳಿಗೆ ಹೊಂದಿಕೊಳ್ಳುವ ಮತ್ತು ನಮ್ಮ ನ್ಯಾಯ ವಿತರಣಾ ವ್ಯವಸ್ಥೆಗಳನ್ನು ಸ್ಥಳೀಕರಿಸುವುದಾಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಉದಾಹರಣೆಗೆ ನೀಡಿದ ಅವರು, “ಕೌಟುಂಬಿಕ ವಿವಾದದ ವಿರುದ್ಧ ಹೋರಾಡುವ ಗ್ರಾಮೀಣ ಭಾಗದ ಜನರಿಗೆ ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಸ್ಥಾನವಿಲ್ಲದಿರುವಂತೆ ಆಗಿವೆ. ತಮಗೆ ಅನ್ಯ ಭಾಷೆಯಾದ ಇಂಗ್ಲಿಷ್‌ನಲ್ಲಿರುವ ವಾದ ಪ್ರತಿವಾದಗಳು ಅವರಿಗೆ ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಈ ದಿನಗಳಲ್ಲಿ ತೀರ್ಪುಗಳು ದೀರ್ಘವಾಗಿ ಇರುತ್ತವೆ, ಇದು ದೂರುದಾರರ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ತೀರ್ಪಿನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು, ಅವರು ಹೆಚ್ಚಿನ ಹಣವನ್ನು ಖರ್ಚು ಮಾಡುವಂತೆ ಆಗುತ್ತಿದೆ” ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?


