ಹೀಗೊಂದು ತಮಾಷೆಯ ಲೆಕ್ಕಾಚಾರ ಎಂದಿಟ್ಟುಕೊಳ್ಳಿ: 120 ಕೋಟಿ ಜನಸಂಖ್ಯೆ. ಒಂದು ಕೋಟಿಗೆ ಒಂದು ಮೆಡಲ್ ಅಂತ ಲೆಕ್ಕ ಹಾಕಿದರೂ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಲ್ಲಿತನಕ ಕನಿಷ್ಟ 120 ಪದಕಗಳನ್ನಾದರೂ ಪಡೆಯಬಹುದಿತ್ತು. ಆದರೆ ಅದ್ಯಾಕೋ ಒಲಿಂಪಿಕ್ಸ್ ಅಂದ್ರೆ ಭಾರತದ ಪಾಲಿಗೆ ನತದೃಷ್ಟ ಕ್ರೀಡಾಕೂಟವಾಗಿದೆ. ಇವರು ಪದಕ ಗೆದ್ದೇ ಗೆಲ್ತಾರೆ ಎನ್ನುವ ನಿರೀಕ್ಷೆಯೊಂದಿಗೆ ಒಲಿಂಪಿಕ್ಸ್‌ಗೆ ಕಾಲಿಟ್ಟವರಲ್ಲಿ ಬಹುತೇಕ ಮಂದಿ ಬರಿಗೈಯಲ್ಲಿ ಮರಳಿದ್ದೇ ಹೆಚ್ಚು. ಹೀಗಾಗಿ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಪಡೆದುಕೊಂಡಿರುವ ಒಟ್ಟು ಪದಕಗಳ ಸಂಖ್ಯೆಯೇ ಜಸ್ಟ್ 28.
ಅಮೆರಿಕ, ಚೀನಾ, ಇಂಗ್ಲೆಂಡ್‌ನಂತಹ ದೇಶಗಳು ಒಲಿಂಪಿಕ್ ಮೆಡೆಲ್ ಲಿಸ್ಟ್‌ನಲ್ಲಿ ಚಿನ್ನ ಎಷ್ಟು ಗೆದ್ದಿದೆ ಅಂತ ಲೆಕ್ಕ ಹಾಕುವಂತಿದ್ದರೆ, ಭಾರತ ತಾನು ಗೆದ್ದಿರುವ ಅಷ್ಟೂ ಪದಕಗಳನ್ನು ಲೆಕ್ಕಹಾಕುವ ಸ್ಥಿತಿಯಲ್ಲಿದೆ. ಭಾರತದಲ್ಲಿ ಕ್ರಿಕೆಟ್ ಬಿಟ್ಟು ಉಳಿದ ಕ್ರೀಡೆಗಳಿಗೆ ಪ್ರೋತ್ಸಾಹ ಇಲ್ಲದೇ ಇರುವುದು ಒಲಿಂಪಿಕ್ಸ್‌ನಲ್ಲಿ ಭಾರತದ ಹೀನಾಯ ಸ್ಥಿತಿಗೆ ಕಾರಣವಾಗಿದೆ. ಅಂದಹಾಗೆ ಭಾರತ ತನ್ನ ಒಲಿಂಪಿಕ್ ಇತಿಹಾಸದಲ್ಲಿ ಗೆದ್ದಿರುವ ಒಟ್ಟು ಚಿನ್ನದ ಪದಗಳ ಸಂಖ್ಯೆ ಕೇವಲ 9. ಅದರಲ್ಲಿ 8 ಟೀಮ್‌ಗೇಮ್‌ನಲ್ಲಿ ಬಂದಿದ್ದರೆ, ವೈಯಕ್ತಿಕವಾಗಿ ಬಂದಿರುವುದು ಕೇವಲ ಒಂದು. 7 ಬೆಳ್ಳಿಯ ಪದಕಗಳಿವೆ. 12 ಕಂಚಿನ ಪದಕದ ಸಾಧನೆಯನ್ನು ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಮಾಡಿದೆ. ಕುಸ್ತಿ, ಶೂಟಿಂಗ್, ಟೆನಿಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್‌ನಲ್ಲಿ ಭಾರತ ಪದಕ ಗೆದ್ದಿದ್ದು ಬಿಟ್ರೆ ಉಳಿದ ಕ್ರೀಡೆಗಳಲ್ಲಿ ಶೂನ್ಯ ಸಾಧನೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಹೆಸರು ಕಾಣಸಿಕ್ಕಿದ್ದು 1900ರಲ್ಲಿ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾರ್ಮನ್ ಪ್ರಿಚರ್ಡ್ 200 ಮೀಟರ್ ಹರ್ಡಲ್ಸ್ ಮತ್ತು 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಅದು ಬ್ರಿಟಿಷ್ ಇಂಡಿಯಾ ಆಗಿತ್ತು. ಭಾರತದ ಹಾಕಿ ತಂಡ 1928, 1932, 1936, 1948, 1952, 1956, 1964, 1980 ಹೀಗೆ 8 ಬಾರಿ ಚಿನ್ನದ ಪದಕ ಗಳಿಸಿತ್ತು. 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಿಂದ 1996ರ ಬಾರ್ಸಿಲೋನ ಒಲಿಂಪಿಕ್ಸ್ ನಡುವೆ ಭಾರತ ಒಂದೂ ಪದಕ ಗೆದ್ದಿರಲಿಲ್ಲ.

ಅಂದಹಾಗೆ ನಾರ್ಮನ್ ಪ್ರಿಚರ್ಡ್ ನಂತರ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದವರು ಕಶಬಾ ಜಾಧವ್. 1952ರ ಹಲ್ಸೆಂಕಿ ಒಲಿಂಪಿಕ್ಸ್‌ನಲ್ಲಿ ಜಾಧವ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದು ಸ್ವತಂತ್ರ ಭಾರತ ಮೊದಲ ವೈಯಕ್ತಿಕ ಪದಕ. ಇದನ್ನು ಬಿಟ್ಟರೆ ವೈಯಕ್ತಿಕ ವಿಭಾಗದಲ್ಲಿ ಮತ್ತೊಂದು ಪದಕವನ್ನು ಭಾರತ ಗೆಲ್ಲಬೇಕಾದರೆ 1996ರ ತನಕ ಕಾಯಬೇಕಾಗಿತ್ತು. 1996ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಗೆದ್ದಿದ್ದು ಹೊಸ ಇತಿಹಾಸ ಸೃಷ್ಟಿಸಿತ್ತು. ಇಲ್ಲಿಂದ ನಂತರ ಭಾರತ ಪ್ರತಿಯೊಂದು ಒಲಿಂಪಿಕ್ಸ್‌ನಲ್ಲೂ ಕನಿಷ್ಟ ಒಂದಾದರೂ ಪದಕವನ್ನು ಪಡೆದುಕೊಂಡಿದೆ.
2000ದಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಭಾರತದ ಭಾರ ಎತ್ತಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಶೂಟಿಂಗ್ ವಿಭಾಗದ ಡಬಲ್ ಟ್ರಾಪ್‌ನಲ್ಲಿ ರಜತ ಗೆದ್ದಿದ್ದರು. ಭಾರತದ ಪಾಲಿಗೆ ವೈಯಕ್ತಿಕ ಮಟ್ಟದಲ್ಲಿ ಇದು ಹೊಸ ಸಾಧನೆ ಆಗಿತ್ತು.
ಭಾರತ ಒಲಿಂಪಿಕ್ಸ್‌ನ ಮೊದಲ ವೈಯಕ್ತಿಕ ಚಿನ್ನ ಗೆದ್ದಿದ್ದು 2008ರಲ್ಲಿ. ಕೊನೆಗೂ ಒಲಿಂಪಿಕ್ ಸ್ವರ್ಣವನ್ನು ನನಸು ಮಾಡಿದ್ದು ಅಭಿನವ್ ಭಿಂದ್ರಾ. ಭಿಂದ್ರಾ ಅಂದು 10 ಮೀ ರೈಫಲ್ ವಿಭಾಗದಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದರು. ಇದು ಸ್ವರ್ಣದ ಓಪನಿಂಗ್ ಆಗಿದ್ದರೂ, ಅಲ್ಲಿಂದ ಇಲ್ಲಿ ತನಕ ಮತ್ತೊಂದು ಚಿನ್ನ ಭಾರತಕ್ಕೆ ದಕ್ಕಿಲ್ಲ ಅನ್ನುವುದು ಕೂಡ ನಿರಾಶಾದಾಯಕ ಸತ್ಯ.
ಬೀಜಿಂಗ್‌ನಲ್ಲಿ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಮತ್ತು ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕಕ್ಕೆ ಕೊರಳೊಡ್ಡಿ ಇತಿಹಾಸ ಬರೆದಿದ್ದರು.
ಇನ್ನು 2012ರ ಲಂಡನ್ ಒಲಿಂಪಿಕ್ಸ್ ಭಾರತಕ್ಕೆ ಸರ್ವಶ್ರೇಷ್ಠ ಒಲಿಂಪಿಕ್ಸ್. ಲಂಡನ್‌ನಲ್ಲಿ ಭಾರತ 2 ಬೆಳ್ಳಿ ಮತ್ತು 4 ಕಂಚಿನ ಪದಕ ಗೆದ್ದುಕೊಂಡಿತ್ತು. ಶೂಟಿಂಗ್‌ನಲ್ಲಿ ವಿಜಯ ಕುಮಾರ್ ಮತ್ತು ಕುಸ್ತಿಯಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಗೆದ್ದರೆ, ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಬಾಕ್ಸಿಂಗ್‌ನಲ್ಲಿ ಮೇರಿಕೋಮ್, ಶೂಟಿಂಗ್‌ನಲ್ಲಿ ಗಗನ್ ನಾರಂಗ್ ಮತ್ತು ಕುಸ್ತಿಯಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಒಟ್ಟು ಪದಕಗಳು ಸಂಚಲನ ಸೃಷ್ಟಿಸಿತ್ತು ಅನ್ನುವುದು ಸುಳ್ಳಲ್ಲ.
2016ರ ರಿಯೋ ಒಲಿಂಪಿಕ್ಸ್ ಮೇಲೆ ಭಾರತಕ್ಕೆ ದೊಡ್ಡ ಆಸೆಯಿತ್ತು. ಆದರೆ ಅಲ್ಲೂ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಬ್ಯಾಡ್ಮಿಂಟನ್‌ನಲ್ಲಿ ಸಿಂಧೂ ಬೆಳ್ಳಿಗೆ ಮುತ್ತಿಟ್ಟರೆ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿಗೆ ತೃಪ್ತಿ ಪಟ್ಟಿದ್ದರು. ಈಗ ಟೋಕಿಯೋ ಕಡೆ ಭಾರತ ಗಮನ ಇಟ್ಟಿದೆ. ಪದಕದ ನಿರೀಕ್ಷೆ ಇಟ್ಟುಕೊಂಡವರು ಈ ಬಾರಿಯಾದರೂ ಯಶಸ್ಸು ಕಾಣಲಿ ಅನ್ನುವುದು ಶತಕೋಟಿ ಭಾರತೀಯರ ಹಾರೈಕೆ.

ಜೀವನ್ ಅರಂತೊಡ್
ಟಿವಿ9ನಿಂದ ಪ್ರಾರಂಭಿಸಿ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡ ಜೀವನ್ ಅವರು ಈಗ ಸ್ವತಂತ್ರವಾಗಿ ಪತ್ರಿಕೋದ್ಯಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ: ದೈನಿಕ್ ಭಾಸ್ಕರ್


