ಡಿಸೆಂಬರ್ 4 ಗುರುವಾರ ದೇಶದಾದ್ಯಂತ 1,000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದ್ದು ಮತ್ತು ದೆಹಲಿಯಿಂದ ಎಲ್ಲಾ 235 ದೇಶೀಯ ನಿರ್ಗಮನಗಳು 24 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತೀವ್ರ ಪರದಾಡಿದ್ದರು.
ಈ ಬೆನ್ನಲ್ಲೇ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ (ಡಿಸೆಂಬರ್ 5) ವಿಮಾನಯಾನ ನಿಯಂತ್ರಕ ಡಿಜಿಸಿಎಯ ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿಗಳು (ಎಫ್‌ಡಿಟಿಎಲ್) ಮಾನದಂಡಗಳನ್ನು ತಕ್ಷಣ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.
ಇಂಡಿಗೋ ಸೇವೆಗಳನ್ನು ಮೂರು ದಿನಗಳಲ್ಲಿ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗುವುದು ಮತ್ತು ಶನಿವಾರದ ವೇಳೆಗೆ ವೇಳಾಪಟ್ಟಿ ಸ್ಥಿರವಾಗಲಿದೆ ಎಂದು ನಾಯ್ಡು ಭರವಸೆ ನೀಡಿದ್ದಾರೆ.
ಆದಾಗ್ಯೂ, ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ಎಲ್ಲಾ ವಿಮಾನ ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಲು ಡಿಸೆಂಬರ್ 10-15ರವರೆಗೆ ಸಮಯ ಬೇಕು ಎಂದು ವಿಡಿಯೋ ಸಂದೇಶದಲ್ಲಿ ಹೇಳುವ ಮೂಲಕ ಸಮಯಸೂಚಿಯನ್ನು ವಿರೋಧಿಸಿದ್ದಾರೆ. ಹಾರಾಟದ ವೇಳಾಪಟ್ಟಿಗಳು ಸಂಪೂರ್ಣ ಚೇತರಿಕೆ ಕಾಣಲು ಫೆಬ್ರವರಿ 1, 2026ರವರೆಗೆ ಸಮಯ ಬೇಕಾಗಬಹುದು ಎಂದು ಈ ಹಿಂದೆ ಡಿಜಿಸಿಎಗೆ ತಿಳಿಸಿತ್ತು.
ಸಚಿವಾಲಯ, ಡಿಜಿಸಿಎ, ಎಎಐ ಮತ್ತು ಇಂಡಿಗೋ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆಯ ನಂತರ, ನಾಯ್ಡು ಅವರು ವಿಮಾನ ವ್ಯತ್ಯಯದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಘೋಷಿಸಿದ್ದಾರೆ. ಡಿಜಿಸಿಎ ಜಂಟಿ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಣೆ, ಉಪ ಮಹಾನಿರ್ದೇಶಕ ಅಮಿತ್ ಗುಪ್ತಾ, ಹಿರಿಯ ವಿಮಾನ ಕಾರ್ಯಾಚರಣಾ ನಿರೀಕ್ಷಕ (ಎಸ್‌ಎಫ್‌ಒಐ) ಕಪಿಲ್ ಮಾಂಗ್ಲಿಕ್ ಮತ್ತು ಎಫ್‌ಒಐ ಲೋಕೇಶ್ ರಾಂಪಾಲ್ ಅವರನ್ನು ಒಳಗೊಂಡ ನಾಲ್ವರು ಸದಸ್ಯರ ಡಿಜಿಸಿಎ ಸಮಿತಿಯು ಎರಡು ವಾರಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಕೇಳಲಾಗಿದೆ.
ಹೊಸ ರೋಸ್ಟರಿಂಗ್ (ಸಿಬ್ಬಂದಿ ಕರ್ತವ್ಯ ಸಮಯ ನಿಯಮಗಳು) ನಿಯಮಗಳಿಗೆ ಸಿದ್ಧವಾಗಿರುವಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ, ಇಂಡಿಗೋ ಆ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದೆ ಎಂದು ನಿಯಂತ್ರಕರು ಆರೋಪ ಮಾಡಿದ್ದಾರೆ.
ಶುಕ್ರವಾರವೂ ವಿಮಾನ ಸೇವೆಗಳಲ್ಲಿ ವ್ಯತ್ಯಯ ಮುಂದುವರೆದಿತ್ತು. ದೆಹಲಿಯ ಐಜಿಐಎ ಟರ್ಮಿನಲ್‌ಗಳಲ್ಲಿ ಆಕ್ರೋಶಗೊಂಡ ಪ್ರಯಾಣಿಕರು ಇಂಡಿಗೋ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು, ಹೈದರಾಬಾದ್‌ನಲ್ಲಿ 90ಕ್ಕೂ ವಿಮಾನಗಳ ಹಾರಾಟ ರದ್ದಾಗಿತ್ತು. ಚೆನ್ನೈನಲ್ಲಿ ಇಂಡಿಗೋದ ದೇಶೀಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಖಾಸಗಿ ಸಂಸ್ಥೆ ಇಂಡಿಗೋ ಕಡೆಯಿಂದ ಉಂಟಾದ ಸಮಸ್ಯೆಗೆ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳುವ ಬದಲು, ಕೇಂದ್ರ ಸರ್ಕಾರ ಜನರ ಸುರಕ್ಷತಾ ನಿಯಮಗಳಲ್ಲಿ ರಾಜಿ ಮಾಡಿಕೊಂಡಿದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಇಂಡಿಗೋದ ಏಕಸ್ವಾಮ್ಯಕ್ಕೆ ಸರ್ಕಾರ ತಲೆಬಾಗಿದೆ ಎಂದಿದ್ದಾರೆ.

ಈ ಆರೋಪಕ್ಕೆ, ಹೊಸ ರೋಸ್ಟರಿಂಗ್ (ಸಿಬ್ಬಂದಿ ಕರ್ತವ್ಯ ಸಮಯ ನಿಯಮಗಳು) ನಿಯಮಗಳಿಗೆ ಸಿದ್ಧವಾಗಿರುವಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ, ಇಂಡಿಗೋ ಆ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದೆ ಎಂದು ವಿಮಾನಯಾನ ನಿಯಂತ್ರಕರು ಹೇಳಿರುವುದು ಪುಷ್ಠಿ ನೀಡುತ್ತಿದೆ.


