Homeಕರ್ನಾಟಕಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಊರಿನ ಗ್ರಾಮದೇವತೆ ಊರಿನ ಜನರ ಭಯ ಭಕ್ತಿಗಳಿಗೆ ನೆಲೆಯಾಗಿ ನಿಂತರೆ ಪ್ರತಿಯೊಂದು ಮನೆಯ ಮನೆದೇವರು ಅವರ ನಿತ್ಯದ ಆಗುಹೋಗುಗಳಿಗೆ ಸ್ಪಂದನೆಯ ರೂಪವಾಗಿ ನಿಂತಿವೆ.

- Advertisement -
- Advertisement -

ಭಾರತದ ಪರಂಪರೆಯ ಆಳಕ್ಕಿಳಿದಂತೆಲ್ಲಾ ಗ್ರಾಮದೇವತೆಗಳೊಂದಿಗಿನ ನಂಟು ತಿಳಿಯುತ್ತಾ ಹೋಗುತ್ತದೆ. ಗ್ರಾಮದೇವತೆಗಳಿಗೂ ಈ ದೇಶಕ್ಕೂ ಇರುವ ಸಂಬಂಧ ಅಂತಹುದು. ಪ್ರತಿಯೊಂದು ಊರಿನಲ್ಲೂ ಒಂದಲ್ಲಾ ಒಂದು ಗ್ರಾಮದೇವತೆ ನೆಲೆಸಿರುತ್ತದೆ. ಆ ಇಡೀ ಊರು ಆ ದೇವರಿಗೆ ಭಕ್ತಿಯ ಮಹಾಪೂರವನ್ನೇ ಹರಿಸುವಂತೆ ನಡೆದುಕೊಳ್ಳುತ್ತದೆ. ಇದಕ್ಕೆ ಲಕ್ಷಾಂತರ ಹಳ್ಳಿಗಳಲ್ಲಿ ಇಂದಿಗೂ ನಡೆಯುತ್ತಿರುವ ಜಾತ್ರೆಗಳೇ ಸಾಕ್ಷಿ. ಈ ಜಾತ್ರೆಗಳಲ್ಲಿ ಕೆಲವೊಂದು ಸಸ್ಯಾಹಾರಕ್ಕೆ ಸೀಮಿತವಾದರೆ, ಇನ್ನೂ ಕೆಲವು ಮಾಂಸಾಹಾರಕ್ಕೆ, ಮತ್ತೂ ಕೆಲವು ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಒಳಗೊಂಡಂತವು.

ಊರಿನ ಗ್ರಾಮದೇವತೆ ಊರಿನ ಜನರ ಭಯ ಭಕ್ತಿಗಳಿಗೆ ನೆಲೆಯಾಗಿ ನಿಂತರೆ ಪ್ರತಿಯೊಂದು ಮನೆಯ ಮನೆದೇವರು ಅವರ ನಿತ್ಯದ ಆಗುಹೋಗುಗಳಿಗೆ ಸ್ಪಂದನೆಯ ರೂಪವಾಗಿ ನಿಂತಿವೆ. ವರ್ಷಕ್ಕೊಮ್ಮೆ ಈ ಮನೆದೇವರಿಗೆ ಮುಡಿಯನ್ನು ಕೊಡುವುದರ ಜೊತೆಗೆ ಆ ದೇವರ ಬಳಿ ನಡೆಯುವ ಜಾತ್ರೆಗೋ, ಪರಿಷೆಗೋ ಕುಟುಂಬ ಸಮೇತ ಹೊರಡುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಇಷ್ಟೇ ಅಲ್ಲದೆ ಆ ಮನೆದೇವರ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು, ಅಲ್ಲೇ ನಾಮಕರಣದ ವ್ಯವಸ್ಥೆ ಮಾಡುವುದು, ಮದುವೆ ಮಾಡುವುದು, ಗುಡ್ಡ, ಜೋಗಿ ಮುಂತಾದವುಗಳನ್ನು ಬಿಡುವುದು ಎಲ್ಲವೂ ಇಲ್ಲಿಯೇ ನಡೆಯುತ್ತದೆ.

ಗ್ರಾಮದೇವರಿಗಂತೂ ಎಲ್ಲ ಸಮುದಾಯದವರು ಚಂದಾ ಎತ್ತಿ, ಕೊಂಡ ತೋಡಿ, ಹಣ್ಣು ಜವನ ಎಸೆದು ಸಂಭ್ರಮದೋಪಾದಿಯಲ್ಲಿ ಜಾತ್ರೆಯನ್ನು ನೆರವೇರಿಸುತ್ತಾರೆ. ಹತ್ತಾರು ಮನೆಗಳ ನೆಂಟರುಗಳನ್ನು ಕರೆದು ಊಟೋಪಚಾರ ಮಾಡಿ ತಾವೂ ಖುಷಿ ಪಟ್ಟು, ಅವರನ್ನೂ ಖುಷಿಪಡಿಸಿ ನಿರಂತರವಾಗಿ ಈ ಹಬ್ಬಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇವೆಲ್ಲವೂ ಸಮುದಾಯದ ಹಬ್ಬಗಳಾಗಿವೆ. ಕೆಲವೊಂದು ಗ್ರಾಮದೇವತೆಗಳಿಗೆ ದೊಡ್ಡದೊಡ್ಡ ಗುಡಿಗಳಿದ್ದರೆ, ಇನ್ನೂ ಕೆಲವು ದೇವರುಗಳಿಗೆ ಸಣ್ಣ ಮಂಟಪವೇ ವಾಸಸ್ಥಾನವಾಗಿದೆ. ಅದರಲ್ಲೂ ಮಾರಮ್ಮನಂತಹ ದೇವರುಗಳು ಒಂದು ಕಲ್ಲಿನ ರೂಪದಲ್ಲಿ ಬೇವಿನ ಮರದ ಕೆಳಗೆ ನಿಂತಿರುವುದಷ್ಟೇ ಆಗಿದೆ. ಈ ಗ್ರಾಮದೇವರುಗಳಲ್ಲಿ ಮಾರಮ್ಮರ ಪಾತ್ರವೇ ದೊಡ್ಡದು. ಭಿನ್ನ ಭಿನ್ನ ಹೆಸರುಗಳಲ್ಲಿ ಕರೆಸಿಕೊಳ್ಳುವ ಇವರುಗಳು ಪ್ರತಿ ಊರಿನ ರಕ್ಷಕಿಯರು ಎನ್ನುವಂತೆ ಬಿಂಬಿತಗೊಂಡು ಪೂಜಿಸಲ್ಪಡುತ್ತಿವೆ. ಮನೆದೇವರಿಗೆ ಹರಕೆಯನ್ನು ಹೊರುವ, ಮುಡಿಯನ್ನು ಕೊಡುವ, ಈ ದೇವರುಗಳ ಹುಂಡಿಗೆ ಅಂತಲೇ ವರ್ಷವಿಡೀ ಮುಡಿಪು ಕಟ್ಟುವ ಒಂದು ವರ್ಗವೇ ಹಲವು ಸಮುದಾಯದಲ್ಲಿ ಇಂದಿಗೂ ಜೀವಂತವಿದೆ. ಇಲ್ಲಿ ಒಂದೊಂದು ದೇವರಿಗೂ ಒಂದೊಂದು ಕಥೆಗಳಿವೆ, ಜನಗಳದ್ದೇ ಆದ ನಂಬಿಕೆಗಳಿವೆ, ಆಚರಣೆಗಳಿವೆ, ಸಂಪ್ರದಾಯಗಳಿವೆ ಮತ್ತು ಹಾಡುಗಳಿವೆ. ನಿರಂತರವಾಗಿ ಇವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಹೊತ್ತುಕೊಂಡು ರವಾನಿಸುತ್ತಾ ಬರಲಾಗುತ್ತಿದೆ.

ಇನ್ನು ಬುಡಕಟ್ಟುಗಳ ವಿಷಯಕ್ಕೆ ಬಂದರೆ ಅಲ್ಲೂ ಕೂಡ ಅವರು ತಮ್ಮದೇ ಆದ ದೇವರುಗಳನ್ನು ಹೊಂದಿದ್ದಾರೆ. ಹಲವು ಅಲೆಮಾರಿ ಸಮುದಾಯಗಳಿಗೂ ಕೂಡ ತಮ್ಮದೇ ಆದ ದೇವರುಗಳಿವೆ. ಒಂದು ಕಡೆ ನೆಲೆನಿಂತಿರುವ ಎಷ್ಟೋ ಸಮುದಾಯಗಳಿಗೂ ದೇವರುಗಳಿವೆ. ಎಷ್ಟೋ ಸಮುದಾಯಗಳ ಊರಿನ ಹೆಬ್ಬಾಗಲಿಗೆ ಈ ದೇವತೆಗಳು ನೆಲೆನಿಂತಿರುತ್ತವೆ. ಇನ್ನೂ ಮುಂದುವರಿದು ಹೇಳುವುದಾದರೆ ಎಷ್ಟೋ ಸಮುದಾಯಗಳಿಗೆ ಮರಗಳೇ ಪವಿತ್ರ ನೆಲೆಗಳಾಗಿ ನೆಲೆಯೂರಿವೆ. ಬಹುಪಾಲು ಗ್ರಾಮದ ಮುಖಂಡರುಗಳು ಈ ಗ್ರಾಮದೇವತೆಗಳಿಗೆ ಕೈಮುಗಿದೇ ತಮ್ಮ ನಿತ್ಯದ ಕಾಯಕವನ್ನು ಆರಂಭಿಸುತ್ತಾರೆ. ಉಳುವಾಗ, ಬಿತ್ತುವಾಗ, ಬೆಳೆ ಬೆಳೆಯುವಾಗ, ಬೆಳೆದು ಕಣಜಗಳಿಗೆ ತುಂಬುವಾಗ, ಕೇರುವಾಗ, ತೂರುವಾಗ, ಬೀಸುವಾಗ ಎಲ್ಲ ಸಂದರ್ಭಗಳಲ್ಲೂ ಈ ಗ್ರಾಮದೇವತೆಗಳೊಂದಿಗಿನ ನಂಟು ಊರಿನವರಿಗೆ ಇದ್ದೇ ಇರುತ್ತದೆ. ಇಷ್ಟೇ ಅಲ್ಲ ಮದುವೆಯಾದಾಗ, ಮಕ್ಕಳಾದಾಗ, ಅವುಗಳಿಗೆ ಹೆಸರಿಡುವಾಗ, ಸತ್ತಾಗ ಎಲ್ಲ ಶುಭ ಮತ್ತು ಅಶುಭ ಕಾರ್ಯಗಳ ಒಳಗೆ ಈ ದೇವರುಗಳ ನೆನಪು ಅವರಲ್ಲಿ ಸದಾ ಜಾಗೃತವಾಗೇ ಇರುತ್ತದೆ.

ಈ ಗ್ರಾಮದೇವತೆಗಳ ಆಚರಣೆಗಳೇ ಭಾರತದ ಬಹುಸಂಸ್ಕೃತಿಗೆ ಹಿಡಿದ ಕನ್ನಡಿ. ಇದು ಬಗೆಬಗೆಯ ಆಚರಣೆಗಳ ತವರೂರು ಎಂಬುದನ್ನು ಇವುಗಳೇ ತೋರಿಸಿಕೊಡುತ್ತವೆ. ಇದೇ ಭಾರತದ ನೈಜ ಜೀವಾಳ ಎನ್ನುವಂತೆ ಹಿಂದಿನಿಂದ ನಡೆಯುತ್ತಲೇ ಬಂದಿದೆ. ಕರ್ನಾಟಕವನ್ನೇ ಕೇಂದ್ರೀಕರಿಸಿ ಹೇಳುವುದಾದರೆ ಇಲ್ಲಿ ಮಾದಪ್ಪ, ಮಂಟೆಸ್ವಾಮಿ, ಜುಂಜಪ್ಪ, ಮೈಲಾರಲಿಂಗ ಮುಂತಾದ ಜನಪದ ದೇವರುಗಳ ಆಚರಣೆಯೇ ವೈಶಿಷ್ಟ್ಯೆತೆಯಿಂದ ಕೂಡಿದೆ. ಇಲ್ಲಿ ಇವುಗಳಿಗೇ ಆದ ಮಹತ್ವದ ಸ್ಥಾನವೂ ಇದೆ. ಈ ದೇವರುಗಳಿಗೆ ಅಂತನೇ ನಿತ್ಯ ನಡೆದುಕೊಳ್ಳುವ ಒಂದು ದೊಡ್ಡ ಪಡೆಯೇ ಇಲ್ಲಿ ಬೀಡುಬಿಟ್ಟಿದೆ. ಗುಡ್ಡರು, ಸಂತರು, ಜೋಗಿಗಳು, ದಾಸರು, ಜಂಗಮರು ಎನ್ನುವ ಹಲವು ಭಕ್ತಿವಂತರ ದಂಡೇ ಇಲ್ಲಿ ಸುತ್ತುವರೆದಿದೆ. ಇವರುಗಳಿಂದಲೇ ಇಂಡಿಯಾ ಬಹುವೈವಿಧ್ಯತೆಯಿಂದ ಕೂಡಿರುವಂತೆ ಕಾಣುತ್ತಿದೆ ಮತ್ತು ಅದು ಸತ್ಯವೂ ಆಗಿದೆ. ಈ ರೀತಿ ಇರುವುದರಿಂದಲೇ ಇಲ್ಲಿನ ವೈವಿಧ್ಯತೆ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿದೆ.

PC : Sidilaghatta

ಇಂದು ಬಹುಸಂಸ್ಕೃತಿಯೇ ಅಪಾಯದ ಅಂಚಿಗೆ ಬಂದು ನಿಲ್ಲುತ್ತಿದೆಯೇನೋ ಎನ್ನುವಂತಾಗಿದೆ. ಎಲ್ಲೆಲ್ಲೂ ಏಕ ಸಂಸ್ಕೃತಿಯನ್ನು ಬಿತ್ತುವ ಹುನ್ನಾರದಿಂದ ಇವುಗಳನ್ನೆಲ್ಲ ತೆರೆಮರೆಗೆ ಸರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲಿನಿಂದಲೂ ಈ ಗ್ರಾಮದೇವತೆಗಳ ಬಗ್ಗೆ ಒಂದು ತಾತ್ಸಾರ ಇದ್ದೇ ಇದೆ. ಈ ಕಾರಣದಿಂದಲೇ ಗ್ರಾಮಗಳನ್ನು ದಾಟಿ ಗ್ರಾಮದೇವತೆಗಳು ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ಪ್ರಧಾನ ಸಂಸ್ಕೃತಿ ಎನಿಸಿಕೊಂಡಿರುವ ಮೇಲ್ಜಾತಿಗರು ಪೂಜಿಸುವ ಶ್ರೀಕೃಷ್ಣನ ದೇವಸ್ಥಾನಗಳು ಅಮೆರಿಕದಂತಹ ದೇಶಗಳಲ್ಲೂ ಅಸ್ತಿತ್ವವನ್ನು ಪಡೆದುಕೊಳ್ಳುತ್ತವೆ. ಇಲ್ಲಿ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮುನ್ನಡೆಯನ್ನು ಕಾಯ್ದುಕೊಂಡು ಆ ಮೂಲಕ ರಾಜಕೀಯ ಅಸ್ತಿತ್ವಕ್ಕೂ ಕಾರಣೀಭೂತವಾಗುತ್ತಿವೆ. ರಾಮನನ್ನು ಎಲ್ಲರ ದೇವರೆನ್ನುವ, ಕೃಷ್ಣನೇ ಎಲ್ಲದಕ್ಕು ಮೂಲ ಎನ್ನುವ, ಎಲ್ಲ ಆಗುಹೋಗುಗಳಿಗೆ ತ್ರಿಮೂರ್ತಿಗಳೇ ಕಾರಣ ಎನ್ನುವುದರ ಹಿಂದಿನ ಹುನ್ನಾರ ಈ ಆದಿವಾಸಿ, ಬುಡಕಟ್ಟು, ಅಲೆಮಾರಿ ಮತ್ತು ನೆಲೆ ನಿಂತ ಸಮುದಾಯಗಳ ಗ್ರಾಮದೇವತೆಗಳನ್ನು ತೆರೆಮರೆಗೆ ಸರಿಸುವ ಪ್ರಯತ್ನವೇ ಆಗಿದೆ.

ಇಂದು ಎಲ್ಲ ಮೂಲನೆಲೆಯ ದೇವರುಗಳನ್ನು ಮರೆಮಾಚುವ ನಿಟ್ಟಿನಲ್ಲಿ ಹಳ್ಳಿಹಳ್ಳಿಯಿಂದ ಪಟ್ಟಣಗಳ ಮನೆ ಮನೆಯವರೆಗೂ ವರಮಹಾಲಕ್ಷ್ಮಿ ಹಬ್ಬವನ್ನು ಪರಿಚಯಿಸಲಾಗುತ್ತಿದೆ. ಲಕ್ಷ್ಮಿ ಪೂಜೆಯನ್ನು ಪ್ರತಿ ಶುಕ್ರವಾರ ಮಾಡುವಂತೆ ಹೇಳಲಾಗುತ್ತಿದೆ. ಪ್ರತಿ ಮನೆಯ ಗೃಹ ಪ್ರವೇಶಕ್ಕೆ ಸತ್ಯನಾರಾಯಣ ಪೂಜೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಯೋಜನೆ ರೂಪಿಸಲಾಗುತ್ತಿದೆ. ಭೂಮಿ ಪೂಜೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲೂ ಈ ದೇವರುಗಳನ್ನೇ ಮುನ್ನಲೆಗೆ ತರಲಾಗುತ್ತಿದೆ. ಸಂಕಷ್ಠಿ, ಏಕಾದಶಿ, ಭೀಮನ ಅಮವಾಸ್ಯೆ, ಗೊಂಬೆ ಪೂಜೆ, ತುಳಸಿಪೂಜೆ ಮುಂತಾದವುಗಳನ್ನು ಸದ್ದಿಲ್ಲದೆ ಎಲ್ಲರ ಮನೆಯೊಳಗೆ ಪ್ರವೇಶ ಮಾಡುವಂತೆ ಮಾಡಲಾಗಿದೆ. ಹಿಂದೆ ಪ್ರಧಾನ ಸಂಸ್ಕೃತಿ ಮತ್ತು ಅಧೀನ ಸಂಸ್ಕೃತಿ ಎನ್ನುವ ಹೆಸರಿನಲ್ಲಿ ಯಾವ ಚರ್ಚೆಗಳು ನಡೆಯುತ್ತಿದ್ದವೋ ಇಂದು ಅದೇ ಮುಂದುವರಿಯುತ್ತಿದೆ. ಪ್ರಧಾನ ಸಂಸ್ಕೃತಿಯು ಯಾವಾಗಲೂ ತನ್ನದನ್ನೇ ಮೇಲುಗೈ ಸಾಧಿಸಲು ಶ್ರಮಿಸುತ್ತಿರುತ್ತದೆ. ಇದಕ್ಕೆ ಯಾವ ಬಹುತ್ವವೂ ಮುಖ್ಯವಲ್ಲ.

ಇದಕ್ಕಾಗಿ ದಿನನಿತ್ಯ ಟಿವಿಗಳಲ್ಲಿ ಜ್ಯೋತಿಷಿಗಳನ್ನು ಕೂರಿಸಿ ಅವರಿಂದ ಪ್ರವಚನ ಕೊಡಿಸಲಾಗುತ್ತಿದೆ. ಕೆಲವೊಂದು ಚಾನಲ್‍ಗಳನ್ನು ನಿಗದಿತ ದೇವರನ್ನು ವಿಜೃಂಭಿಸಲಿಕ್ಕೇ ರೂಪಿಸಲಾಗಿದೆ. ಅನೇಕ ಪ್ರವಚನಗಳಲ್ಲಿ ಬೆಳಿಗ್ಗೆ ಎದ್ದು ಈ ಸಿರಿವಂತ ಅಥವಾ ಮೇಲ್ಜಾತಿಯವರೇ ಪೂಜಿಸುವ ದೇವರುಗಳನ್ನೇ ಆರಾಧಿಸುವಂತೆ ಪ್ರೇರಣೆ ಕೊಡಲಾಗುತ್ತಿದೆ. ಕೆಲವೊಂದು ದೇವರ ಹೆಸರಿನಲ್ಲಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ದಿನಕ್ಕೆ ಐದು ಬಾರಿ ಇಂತಹ ದೇವರುಗಳನ್ನೇ ಆರಾಧಿಸಬೇಕೆಂದು ಹೇಳಿಕೊಡಲಾಗುತ್ತಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಭಾಷೆಯಲ್ಲಿ ಧಾರಾವಾಹಿಗಳನ್ನು ಸೃಷ್ಟಿಸಿ ರಾಮ, ಕೃಷ್ಣ ಇಂತಹ ದೇವರುಗಳನ್ನೇ ಮತ್ತೆ ಮತ್ತೆ ಮೆರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಬಾಲ್ಯದಿಂದಲೂ ಕೂಡ ಇವರ ವಿಚಾರಗಳನ್ನೇ ತಲೆಯಲ್ಲಿ ಹೊತ್ತು ತಿರುಗಬೇಕು. ಆ ನೆಲೆಯಲ್ಲಿ ಎಲ್ಲ ರೀತಿಯ ಯೋಜನೆಗಳು ತಯಾರಾಗಿರುವಂತೆ ಕಾಣಿಸುತ್ತಿದೆ. ಇನ್ನೂ ಮುಂದುವರಿದಂತೆ ಅಲ್ಲಲ್ಲಿನ ಸ್ಥಳೀಯ ಗ್ರಾಮದೇವತೆಗಳ ಇತಿಹಾಸವನ್ನೇ ಬದಲಿಸಿ ಅದಕ್ಕೊಂದು ಹೊಸ ಹೆಸರಿಟ್ಟು ಅದನ್ನು ತಮ್ಮ ಮೇಲ್ ಸಂಸ್ಕೃತಿಯ ನೆಲೆಯಲ್ಲಿ ನಿಲ್ಲಿಸಿ ಆ ಮೂಲಕ ಮತ್ತೊಮ್ಮೆ ಮೇಲು ವರ್ಗದ ಸಂಸ್ಕೃತಿಯನ್ನೇ ಎಲ್ಲರೆದೆಯಲ್ಲಿ ಬಿತ್ತುವಂತೆ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಉಕ್ಕಡಗಾತಿ ಗ್ರಾಮದೇವತೆ ಇದಕ್ಕಿದ್ದಂತೆ ಅಹಲ್ಯಾದೇವಿ ಎನ್ನುವ ಹೆಸರು ಪಡೆದು ಚಾಲ್ತಿಗೆ ಬರುತ್ತಿದೆ. ಇತ್ತೀಚೆಗೆ ನಡೆದ ಅಯೋಧ್ಯೆಯ ವಿಚಾರವನ್ನುಎಲ್ಲರೂ ಭಾವನಾತ್ಮಕವಾಗಿ ತೆಗೆದುಕೊಳ್ಳುವಂತೆ ಮಾಡಿ ಸ್ಥಳೀಯ ದೇವರುಗಳಿಗಿಂತ ಅದೇ ಮುಖ್ಯ ಎನ್ನುವಂತೆ ಮಾಡಲಾಯಿತು.

ಭಾರತದ ಬಹುತ್ವ ಉಳಿಯಬೇಕಾದರೆ ಈ ಗ್ರಾಮದೇವತೆಗಳೂ ಉಳಿಯಬೇಕು. ಇವುಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಗಣಿಸುವಂತೆ ಮಾಡಬೇಕು. ಗ್ರಾಮದೇವತೆಗಳನ್ನು ಉಳಿಸಿಕೊಂಡರೆ ಮಾತ್ರ ಬಹುತ್ವದ ಭಾರತವನ್ನು ಉಳಿಸಲು ಸಾಧ್ಯ. ಇಲ್ಲದಿದ್ದರೆ ಇದು ಏಕಸಂಸ್ಕೃತಿಯ ನೆಲೆಗೆ ದೂಡಿ ಇನ್ನಷ್ಟು ಅಸಮಾನತೆಯನ್ನೇ ಹಾಸಿಹೊದ್ದು ಮಲಗಿಬಿಡುವಂತೆ ಮಾಡಿಬಿಡುತ್ತಾರೆ. ಈ ಎಲ್ಲ ಕಾರಣಗಳಿಂದ ಜನರ ಜೀವನಾಡಿಯಾಗಿ ಬಹುತ್ವದ ಪಾಠವನ್ನು ಸದಾ ತಲೆಯಲ್ಲಿ ತುಂಬುತ್ತಿರುವ ಗ್ರಾಮದೇವತೆಗಳು ಉಳಿಯಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕು. ಇದರೊಂದಿಗೆ ಈ ದೇವತೆಗಳೊಂದಿಗೆ ಅಂಟಿರುವ ಜಾತಿ ರೋಗಗಳನ್ನು ಕಿತ್ತು ಮೂಲೆಗೆ ಎಸೆಯಬೇಕು. ಎಲ್ಲ ಸಮುದಾಯದವರು ಇವುಗಳನ್ನು ಮುಟ್ಟಿ ಪೂಜಿಸುವಂತೆ ಮಾಡಬೇಕು. ಜಾತ್ರೆಗಳಲ್ಲಿ ಒಂದಾಗಿ ಒಂದು ಕಡೆ ಸೇರಿ ನಡೆಯುವಂತೆ ಆ ಜಾತ್ರೆಗಳಲ್ಲಿ ನಡೆಯುವ ಊಟೋಪಚಾರದ ವಿಷಯದಲ್ಲೂ ಒಗ್ಗೂಡುವಂತೆ ಮಾಡಬೇಕಿದೆ. ಸಸ್ಯಹಾರ ಮತ್ತು ಮಾಂಸಾಹಾರ ಪದ್ಧತಿಯ ಎಲ್ಲ ಆಚರಣೆಗಳನ್ನು ಒಂದೇ ಎನ್ನುವ ದೃಷ್ಟಿಕೋನದಲ್ಲಿ ನೋಡುವಂತೆ ಮಾಡಬೇಕಿದೆ. ಬಹುತ್ವದ ಅಡಿಪಾಯವಾಗಿರುವ ಈ ಗ್ರಾಮದೇವತೆಗಳನ್ನು ಜಾತಿ, ಕುಲ, ವರ್ಗಗಳಿಂದ ಮುಕ್ತಗೊಳಿಸಿದರೆ ಇನ್ನಷ್ಟು ಜನತೆಗೆ ಹತ್ತಿರವಾಗಿ ಈ ದೇಶದ ಬಹುತ್ವವನ್ನು ಅವುಗಳೇ ಕಾಪಾಡಿಕೊಳ್ಳುತ್ತಾ ಮುಂದುವರೆಸುತ್ತವೆ. ಕಲ್ಲನ್ನು ಪೂಜಿಸುವ, ಮರದಲ್ಲೇ ದೇವರನ್ನು ಕಾಣುವ, ತನ್ನ ಸುತ್ತಲಿನ ಪ್ರತಿಯೊಂದು ವಸ್ತುಗಳಿಗೂ ಪೂಜನೀಯ ಸ್ಥಾನ ಕೊಡುವ, ಪ್ರಕೃತಿಯ ಚರಾಚರ ವಸ್ತುಗಳಿಗೆ ನಮಿಸುವ ಕೈಗಳು ಇಲ್ಲಿ ಇನ್ನೂ ಜೀವಂತವಿವೆ. ಈ ಕೈಗಳನ್ನು ಉಳಿಸಿದಷ್ಟೂ ಇಲ್ಲಿ ಬಹುತ್ವ ಜೀವಂತವಿರುತ್ತದೆ.


ಇದನ್ನೂ ಓದಿ: ದಲಿತರಿಗೆ ಕ್ಷೌರ ಮಾಡಿದ್ದಕ್ಕೆ ಬಹಿಷ್ಕಾರದ ಶಿಕ್ಷೆ: ನಂಜನಗೂಡಿನಲ್ಲೊಂದು ಅಮಾನವೀಯ ಘಟನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನವನ ಉಪಯೋಗಕ್ಕೆ ಧರ್ಮ ಮತ್ತು ಸಂಕೃತಿಗೆ ವಿವಿಧ ಅರ್ಥ್ಯ ಮತ್ತು ಕಲ್ಪನೆ ನೀಡಿ ದೇವರ ಹೆಸರುಗಳಲ್ಲಿ ಆತ್ಮವಿಶ್ವಾಸವಿಟ್ಟು ಜಾತಿ ಮತ ಎಂದು ಮೂಢನಂಬಿಕೆಗೆ ಮಾರುಹೋಗಿದ್ದಾರೆ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...