ಜಸ್ಟೀಸ್ ನಾಗಮೋಹನ್ ದಾಸ್ ಏಕ ಸದಸ್ಯತ್ವ ಆಯೋಗದ ವರದಿ ಅನ್ವಯ, ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಮೀಸಲಿಟ್ಟಿದ್ದ ಪ್ರತ್ಯೇಕ ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿರುವ ‘ಸಿ’ ಗುಂಪಿಗೆ (ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಇತರೆ ಜಾತಿಗಳು) ಸೇರಿಸಿರುವುದು ತಬ್ಬಲಿ ಸಮುದಾಯಗಳಿಗೆ ಎಸಗಿರುವ ಚಾರಿತ್ರಿಕ ದ್ರೋಹವಾಗಿದೆ ಎಂದು ‘ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ಬೃಹತ್ ‘ಬೆಂಗಳೂರು ಚಲೋ’ ಪ್ರತಿಭಟನೆಗೆ ಕರೆ ನೀಡಿದೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟ ಇಂದಿಗೆ 22 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮೀಸಲಾತಿ ವರ್ಗೀಕರಣ ಘೋಷಣೆ ಮಾಡಿದ್ದರೂ, ಅದೆ ವೇದಿಕೆಯಲ್ಲೇ ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಬೇಡಿಕೆಗೆ ಹೋರಾಟ ಮುಂದುವರಿದಿದೆ. ಸ್ಪೃಶ್ಯ ಜಾತಿಗಳಿಂದ ತಮ್ಮನ್ನು ಬೇರ್ಪಡಿಸಿ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯದ 59 ನೈಜ ಅಲೆಮಾರಿ ಸಮುದಾಯಗಳು ನಾಳೆ (03-10-2025) ಬೃಹತ್ ಬೆಂಗಳೂರು ಚಲೋ ಹೋರಾಟಕ್ಕೆ ಕರೆ ನೀಡಿವೆ.

ಪ್ರಗತಿಪರ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಒಳ ಮೀಸಲಾತಿ ವರ್ಗೀಕರಣದ ಕುರಿತು ಚಿಂತಕರಾದ ಶಿವಸುಂದರ್, ವಡ್ಡಗೆರೆ ನಾಗರಾಜಯ್ಯ, ಮಂಗಳೂರು ವಿಜಯ ಹಾಗೂ ಒಳ ಮೀಸಲಾತಿ ಹೋರಾಟಗಾರರಾದ ಅಂಬಣ್ಣ ಅರೋಲಿಕರ್ ವಿಷಯ ಮಂಡನೆ ಮಾಡಲಿದ್ದಾರೆ.
ನಾಗಮೋಹನ್ ದಾಸ್ ಆಯೋಗದ ವರದಿ ಕುರಿತು ಡಾ. ಎಚ್.ವಿ.ವಾಸು, ಡಾ.ಹುಲಿಕುಂಟೆ ಮೂರ್ತಿ, ಡಾ.ಬಾಲಗುರುಮೂರ್ತಿ, ಡಾ. ಎ.ಎಸ್. ಪ್ರಭಾಕರ ಮಾತನಾಡಲಿದ್ದಾರೆ.
ಅಲೆಮಾರಿ ಸಮುದಾಯದ ಹಿರಿಯ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಸಿಳ್ಳೇಕ್ಯಾತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಚನ್ನರಾಯಪಟ್ಟಣ ಭೂ ಸ್ವಾಧೀನ | ಸಿಎಂ ಮಾತಿಗೆ ಬೆಲೆ ಕೊಡದೆ ಕೆಐಎಡಿಬಿ ಅಧಿಕಾರಿಗಳಿಂದ ನೋಟಿಸ್: ರೈತರ ಆಕ್ರೋಶ


