ಮಣಿಪುರದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಡ್ರೋನ್, ರಾಕೆಟ್ ದಾಳಿ ಹೆಚ್ಚಾಗಿದ್ದು, ಮೂರು ಜಿಲ್ಲೆಗಳಲ್ಲಿ ಮಂಗಳವಾರ ಕರ್ಫ್ಯೂ ವಿಧಿಸಲಾಗಿದೆ.
ಲೋಕಸಭೆ ಚುನಾವಣೆ ನಂತರ ತಹಬದಿಗೆ ಬಂದಿದ್ದ ಮಣಿಪುರದಲ್ಲಿ, ಇದೀಗ ಘರ್ಷಣೆ ಮತ್ತೆ ಉಲ್ಬಣಗೊಂಡಿದೆ. ಇತ್ತೀಚಿನ ಹಿಂಸಾಚಾರದ ಘಟನೆಗಳು ಮತ್ತು ಪ್ರತಿಭಟನೆಗಳು ಪ್ರಕ್ಷುಬ್ಧತೆಯನ್ನು ಹೆಚ್ಚಿಸಿವೆ. ಹಿಂಸಾಚಾರದ ಉಲ್ಬಣದಿಂದಾಗಿ, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಿದ್ದರು. ಆದರೆ, ಸಂಘರ್ಷ ಹೆಚ್ಚುತ್ತಿರುವ ಕಾರಣ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ. ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಡಿಎಂಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮ, ವಿದ್ಯುತ್, ನ್ಯಾಯಾಲಯ ಮತ್ತು ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಒಳಗೊಂಡಿರುವ ರಾಜ್ಯದಲ್ಲಿ ಆರಂಭವಾಗಿರುವ ಹೊಸ ಹಿಂಸಾಚಾರದಲ್ಲಿ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೋಮವಾರ ಇಂಫಾಲ್‌ನ ಖ್ವೈರಂಬಂಡ್ ಮಹಿಳಾ ಮಾರುಕಟ್ಟೆಯಲ್ಲಿ ವಿವಿಧ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರಗಳನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳು, ಅವರ ಸಮವಸ್ತ್ರದಲ್ಲಿ, ಮಹಿಳಾ ಅಂಗಡಿಯವರು ಮಾರುಕಟ್ಟೆಯಲ್ಲಿ ಶಿಬಿರಗಳನ್ನು ಸ್ಥಾಪಿಸಲು ಸಹಾಯ ಮಾಡಿದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ರಾಜ್ಯದ “ಪ್ರಾದೇಶಿಕ ಮತ್ತು ಆಡಳಿತ ಸಮಗ್ರತೆ” ರಕ್ಷಣೆಗೆ ಕರೆ ನೀಡಿ ಸೋಮವಾರ ಮಣಿಪುರ ಸೆಕ್ರೆಟರಿಯೇಟ್ ಮತ್ತು ರಾಜಭವನದ ಮುಂದೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿಗಳು ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ; ‘ಲೋಕಸಭೆ ಚುನಾವಣೆಗೂ ಮುನ್ನ ಜನರಲ್ಲಿ ಇದ್ದ ಭಯದ ಭಾವನೆ ಈಗ ಮಾಯವಾಗಿದೆ..’; ರಾಹುಲ್ ಅಭಿಪ್ರಾಯ


