ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರ ಲೋಕಸೇವಾ ಆಯೋಗದ (BPSC) ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ನಡುವೆ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಬಗ್ಗೆ ವಿದ್ಯಾರ್ಥಿಗಳ ಬೇಡಿಕೆಯನ್ನು ಮನ್ನಿಸಿ ಸಮಸ್ಯೆ ಬಗೆಹರಿಸಲು ಸಮಿತಿ ರಚಿಸುವಂತೆ ಕಿಶೋರ್ ಅವರು ಸಿಎಂ ನಿತೀಶ್ ಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ. ತೀವ್ರಗೊಂಡ ಬಿಹಾರ
ಖಾನ್ ಸರ್ ಎಂದೆ ಜನಪ್ರಿಯರಾಗಿರುವ ಖ್ಯಾತ ಶಿಕ್ಷಣತಜ್ಞ ಫೈಝಲ್ ಖಾನ್ ಅವರು ಕಳೆದ ಒಂಬತ್ತು ದಿನಗಳಿಂದ ಧರಣಿ ನಡೆಸುತ್ತಾ ಮರು ಪರೀಕ್ಷೆಗೆ ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಗರ್ದಾನಿಬಾಗ್ ಪ್ರದೇಶದಲ್ಲಿ ಪ್ರತಿಭಟನಾನಿರತ ಅಭ್ಯರ್ಥಿಗಳನ್ನು ಭೇಟಿ ಮಾಡಿದ ಖಾನ್ ಸರ್, “ಆಯೋಗವು ಸಾಕ್ಷ್ಯ ಮತ್ತು ಸಿಸಿಟಿವಿ ದೃಶ್ಯಗಳನ್ನು ಏಕೆ ಮರೆಮಾಚುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಪಿಎಸ್‌ಸಿ ನಡೆಸಿದ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮತ್ತು ರಾಜ್ಯಾದ್ಯಂತ ಮರುಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಹಲವು ಬಿಪಿಎಸ್‌ಸಿ ಅಭ್ಯರ್ಥಿಗಳು ಡಿಸೆಂಬರ್ 13ರಂದು ಪ್ರತಿಭಟನೆ ಆರಂಭಿಸಿದ್ದರು. ಹಲವಾರು ಅಭ್ಯರ್ಥಿಗಳು ಸುಮಾರು ಒಂದು ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದು, ಇತರ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳು ಹರಿದಿತ್ತು ಎಂದು ಹೇಳಿದ್ದಾರೆ. ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವೆ ಎಂದು ಅನುಮಾನಗಳನ್ನು ಮುಂದಿಟ್ಟಿದ್ದಾರೆ. ತೀವ್ರಗೊಂಡ ಬಿಹಾರ
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಖಾನ್ ಸರ್,”ನಾವು ಆಯೋಗದಿಂದ ಮರು ಪರೀಕ್ಷೆಗೆ ಒತ್ತಾಯಿಸುತ್ತೇವೆ. ಆಯೋಗವು ಸಾಕ್ಷ್ಯ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ಮರೆಮಾಚುತ್ತಿದೆ? ಈ ಬಗ್ಗೆ ತನಿಖೆ ಮಾಡಬೇಕು… ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಬಿಹಾರದಲ್ಲಿ ನಡೆಯುತ್ತಿರುವುದನ್ನು ರಾಷ್ಟ್ರಪತಿಯವರಿಗೂ ಹೇಳುತ್ತೇವೆ… ಮೊದಲು ದೇಶದ ಜಿಡಿಪಿ ಕುಸಿಯಿತು, ನಂತರ ಬಿಹಾರದಲ್ಲಿ ಸೇತುವೆ ಕುಸಿದಿದೆ ಮತ್ತು ಈಗ ಬಿಪಿಎಸ್‌ಸಿ ಕುಸಿದಿದೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ಜನಪ್ರಿಯ ಶಿಕ್ಷಕ ಮತ್ತು ಕೋಚಿಂಗ್ ಸೆಂಟರ್ ಮಾಲೀಕ ಗುರು ರೆಹಮಾನ್ ಕೂಡ ಅಭ್ಯರ್ಥಿಗಳನ್ನು ಬೆಂಬಲಿಸಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೋಚಿಂಗ್ ಸೆಂಟರ್‌ಗಳು ತಮ್ಮ ಆಂದೋಲನವನ್ನು ‘ಹೈಜಾಕ್’ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ ನಂತರ ಖಾನ್ ಸರ್ ಮತ್ತು ಗುರು ರೆಹಮಾನ್ ಇಬ್ಬರೂ ಸ್ಥಳವನ್ನು ತೊರೆದಿದ್ದಾರೆ. ಇದಕ್ಕೂ ಮುನ್ನ ಧರಣಿ ಸತ್ಯಾಗ್ರಹದಲ್ಲಿ ಪಕ್ಷೇತರ ಸಂಸದ ಪೂರ್ಣೆ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಭಾಗವಹಿಸಿದ್ದರು.
#WATCH | Patna, Bihar | Educator and YouTuber Khan Sir, who came to meet the protesting BPSC candidates, says, "We are only demanding a re-examination from the commission. The commission can conduct as difficult an examination as it wants. We are not running away from this. We… pic.twitter.com/8BFccuPir1
— ANI (@ANI) December 27, 2024
ಅದಾಗ್ಯೂ, BPSC ಪರೀಕ್ಷಾ ನಿಯಂತ್ರಕ ರಾಜೇಶ್ ಕುಮಾರ್ ಸಿಂಗ್ ಅವರು, 70 ನೇ ಇಂಟಿಗ್ರೇಟೆಡ್ ಕಂಬೈನ್ಡ್ ಸ್ಪರ್ಧಾತ್ಮಕ ಪರೀಕ್ಷೆ (CCE) 2024 ಅನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಭ್ಯರ್ಥಿಗಳು ಅಕ್ರಮಗಳು ಎಸಗಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅದಾಗ್ಯೂ, BPSC ಬಾಪು ಪರೀಕ್ಷಾ ಪರಿಸರ್ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಡಿಸೆಂಬರ್ 13 ರಂದು ನಡೆಸಲಾದ ಪರೀಕ್ಷೆಯ ವೇಳೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದರು. ಈ ವೇಳೆ ಉಂಟಾದ ಗೊಂದಲದ ಸಮಯದಲ್ಲಿ ಕೇಂದ್ರದಲ್ಲಿ ಅಭ್ಯರ್ಥಿಗಳಿಂದ “ಅಶಿಸ್ತು” ನಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ರೈತ ನಾಯಕ ದಲ್ಲೆವಾಲ್ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ – ಪಂಜಾಬ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ


