ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿರುವ ಆರೋಪ ನಿಜ ಎಂದು ಮೂವರು ನ್ಯಾಯಾಧೀಶರ ಆಂತರಿಕ ಸಮಿತಿಯು ಸಿಜೆಐಗೆ ಸಲ್ಲಿಸಿದ ಗೌಪ್ಯ ವರದಿಯಲ್ಲಿ ದೃಢೀಕರಿಸಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ವರದಿ ಸ್ವೀಕರಿಸಿದ ಸಿಜೆಐ ಸಂಜೀವ್ ಖನ್ನಾ ಅವರು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಂದ 48 ಗಂಟೆಗಳ ಒಳಗೆ (ಮೇ.9ರ ಒಳಗೆ) ಪ್ರತಿಕ್ರಿಯೆ ಕೇಳಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಬೆಳವಣಿಗೆಯಿಂದ ನ್ಯಾ. ವರ್ಮಾ ಅವರ ಮುಂದಿರುವ ಮೊದಲ ಆಯ್ಕೆ ರಾಜೀನಾಮೆ ನೀಡುವುದು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ವಾಗ್ದಂಡನೆಗೆ ಶಿಫಾರಸು ಮಾಡುವ ವರದಿಯನ್ನು ರಾಷ್ಟ್ರಪತಿಗಳಿಗೆ ಕಳಿಸಲಾಗುತ್ತದೆ ಎಂದು ನ್ಯಾಯಾಂಗದ ಉನ್ನತ ಮೂಲಗಳು ತಿಳಿಸಿರುವುದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ನ್ಯಾ.ವರ್ಮಾ ಮೇಲಿನ ಆರೋಪದ ಕುರಿತು ವರದಿ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶೆ ಅನು ಶಿವರಾಮನ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ಮಾರ್ಚ್ 22ರಂದು ಸಿಜೆಐ ರಚಿಸಿದ್ದರು. ಈ ಸಮಿತಿ ಮೇ 4 ರಂದು ಸಿಜೆಐ ಖನ್ನಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.
ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ 3 ರಂದು ವರದಿಯನ್ನು ಅಂತಿಮಗೊಳಿಸಿತ್ತು. ಅದನ್ನು ಮೇ4 ರಂದು ಸಿಜೆಐ ಅವರಿಗೆ ಸಲ್ಲಿಸಲಾಗಿದೆ.
ನ್ಯಾ.ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಉಳಿದುಕೊಂಡಿದ್ದ ದೆಹಲಿಯ ಮನೆಯಲ್ಲಿ ಮಾರ್ಚ್ 14ರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ವಿಚಾರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ್ದ ನ್ಯಾ. ವರ್ಮಾ, “ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ” ಎಂದಿದ್ದರು.
ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸಿಜೆಐ ಆಂತರಿಕ ಸಮಿತಿ ರಚಿಸಿದ್ದರು.
ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾದ ಬಳಿಕ ನ್ಯಾಯಾಂಗದ ಪಾರದರ್ಶಕತೆಯ ಬಗ್ಗೆ ದೇಶದಲ್ಲಿ ಚರ್ಚೆಯಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಮುಖ್ಯ ನ್ಯಾಯಮೂರ್ತಿ ಮುಂದೆ ಬಹಿರಂಗಪಡಿಸಲು ನಿರ್ಧರಿಸಿದ್ದರು. ಅದರಂತೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ 21 ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಆಪರೇಷನ್ ಸಿಂಧೂರ | ಪತ್ರಿಕಾಗೊಷ್ಠಿಯಲ್ಲಿದ್ದ ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಯಾರು?


