ರಾಜ್ಯ ನಾಗರಿಕ (ಸಿವಿಲ್) ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಹೊರಡಿಸುವುದನ್ನು ತಡೆ ಹಿಡಿಯುವಂತೆ ಸಿಬ್ಬಂದಿ ಹಾಗೂ ಅಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25ರಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಕೆಲವು ನೇಮಕಾತಿ ಪ್ರಾಧಿಕಾರಗಳು ಈ ಸೂಚನೆಯನ್ನು ಉಲ್ಲಂಘಿಸುತ್ತಿವೆ ಎನ್ನಲಾಗಿದೆ.
ಹಾಗಾಗಿ, ಆದೇಶ ಉಲ್ಲಂಘಿಸಿ ಹೊಸ ಅಧಿಸೂಚನೆ ಹೊರಡಿಸುವ ನೇಮಕಾತಿ ಪ್ರಾಧಿಕಾರಗಳ ವಿರುದ್ದ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಉಪ ಕಾರ್ಯದರ್ಶಿ ಉಮಾ ವರದಯ್ಯ ಶನಿವಾರ (ಮಾ.29) ಸೂಚನೆ ನೀಡಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಬರುವವರೆಗೆ ಯಾವುದೇ ಹೊಸ ನೇಮಕಾತಿ ನಡೆಸದಿರಲು ರಾಜ್ಯ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿತ್ತು. ಅದರನ್ವಯ 2024ರ ನವೆಂಬರ್ 25 ರಂದು ಸುತ್ತೋಲೆ ಹೊರಡಿಸಿದ್ದ ಡಿಪಿಎಆರ್, ರಾಜ್ಯ ನಾಗರಿಕ ಸೇವೆಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಹೊರಡಿಸಬಾರದು ಎಂದು ಸೂಚನೆ ನೀಡಿತ್ತು.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನೇಮಿಸಿದ ರಾಜ್ಯ ಸರ್ಕಾರ ನೇಮಿಸಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಏಕಸದಸ್ಯ ಆಯೋಗ ಮಾರ್ಚ್ 27ರಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಉಪ ಜಾತಿಗಳ ವರ್ಗೀಕರಣಕ್ಕೆ ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಶಿಫಾರಸ್ಸು ಮಾಡಿದೆ. ಅದಕ್ಕೆ ಒಪ್ಪಿಗೆ ಸೂಚಿಸಿರುವ ಸರ್ಕಾರ, ಹೊಸ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ನಾಗಮೋಹನದಾಸ್ ಆಯೋಗಕ್ಕೇ ನೀಡಿದ್ದು, ಆಯೋಗದ ಅವಧಿಯನ್ನು ಎರಡು ತಿಂಗಳಿಗೆ ವಿಸ್ತರಿಸಿದೆ.


