ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ನೇತೃತ್ವದ ಏಕಸದಸ್ಯ ಆಯೋಗವು ಗುರುವಾರ (ಮಾ.27) ರಾಜ್ಯ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿದೆ.
ಈ ವರದಿಯಲ್ಲಿ ಸರ್ಕಾರಕ್ಕೆ ನಾಲ್ಕು ಶಿಫಾರಸ್ಸುಗಳನ್ನು ಮಾಡಲಾಗಿದೆ. ಈ ಪೈಕಿ ಮೊದಲನೇ ಶಿಫಾರಸ್ಸು, “ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು” ಎಂಬುವುದಾಗಿದೆ.
ಹಾಗಾದರೆ, ಈ ಹೊಸ ಸಮೀಕ್ಷೆ ಏಕೆ ಎಂಬ ಗೊಂದಲ ಅನೇಕ ಜನರಲ್ಲಿದೆ. ಆ ಬಗ್ಗೆ ವಿವರಣೆ ಇಲ್ಲಿದೆ.
ಕರ್ನಾಟಕದ ಪರಿಶಿಷ್ಟ ಜಾತಿಗಳಲ್ಲಿ ಅಸ್ಪೃಶ್ಯರೆಂದು ಪರಿಗಣಿತವಾಗಿರುವ ಮಾದಿಗರು (ಎಡಗೈ) ಮತ್ತು ಹೊಲೆಯರು, ಛಲವಾದಿ (ಬಲಗೈ) ಸಮುದಾಯದವರು ಜಾತಿ ಪ್ರಮಾಣ ಪತ್ರಗಳಲ್ಲಿ ತಮ್ಮ ಜಾತಿಯ ಹೆಸರನ್ನು ಮಾದಿಗರು ಅಥವಾ ಹೊಲೆಯರು ಎಂದು ನೇರವಾಗಿ ಬರೆಸದೆ ಆದಿ ಕರ್ನಾಟಕ (ಎಕೆ), ಆದಿ ದ್ರಾವಿಡ (ಎಡಿ) ಮತ್ತು ಆದಿ ಆಂಧ್ರ (ಎಎ) ಎಂದು ನಮೂದಿಸುತ್ತಾ ಬಂದಿರುವುದು ಹಲವಾರು ಗೊಂದಲಕ್ಕೆ ಕಾರಣವಾಗಿದೆ.
ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೊಲೆಯ ಸಮುದಾಯದವರು ಆದಿ ಕರ್ನಾಟಕ ಎಂದು ಬರೆಸಿದರೆ, ದಾವಣಗೆರೆ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದವರು ಅವರನ್ನು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರಗಳಲ್ಲಿ ಬರೆಸಿದ್ದಾರೆ.
ಆದಿ ಕರ್ನಾಟಕ ಎಂದು ಬರೆಸುವಾಗ ಅವರ ಮೂಲ ಜಾತಿಗಳಾದ ಮಾದಿಗರು ಅಥವಾ ಹೊಲೆಯರು ಎಂಬುದನ್ನು ನಮೂದಿಸಿಲ್ಲ. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಹೊಲೆಯರು ಆದಿ ಕರ್ನಾಟಕ ಎಂಬುದಾಗಿ ಪರಿಗಣಿತವಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಮಾದಿಗರನ್ನು ಆದಿ ಕರ್ನಾಟಕ ಎಂದು ಪರಿಗಣಿಸಲಾಗುತ್ತಿದೆ. ಈ ಜಿಲ್ಲೆಯವರು ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಆದಾಗ ಈ ಗೊಂದಲ ಇನ್ನಷ್ಟು ಜಟಿಲಗೊಂಡಿದೆ.
ಎಕೆ, ಎಡಿ, ಎಎ ಎಂದು ಮಾತ್ರವೇ ಬರೆಸಿರುವ ಜನರ ಸಂಖ್ಯೆ ಸುಮಾರು ಆರೂವರೆ ಲಕ್ಷ ಇದ್ದು, ಎರಡೂ ಸಮುದಾಯಗಳು ಈ ಜನರನ್ನು ಅವರವರ ಲೆಕ್ಕದಲ್ಲಿ ತೋರಿಸುತ್ತಾ, “ನೋಡಿ ನಮ್ಮ ಜನಸಂಖ್ಯೆ ಹೆಚ್ಚಿಗೆ ಇದೆ, ಆದರೆ ನಮಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕಿಲ್ಲ” ಎಂದು ಪ್ರತಿಪಾದಿಸುತ್ತಿರುವುದು ಒಳ ಮೀಸಲಾತಿ ಜಾರಿ ವಿಳಂಬಕ್ಕೆ ಕಾರಣವಾಗಿದೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಮೂಲ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ನಾಗಮೋಹನದಾಸ್ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರ ಮಧ್ಯಂತರ ವರದಿ ಅಂಗೀಕರಿಸಿದ್ದು, ಅದರಲ್ಲಿನ ನಾಲ್ಕು ಶಿಫಾರಸ್ಸುಗಳನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಕೊಂಡಿದೆ. ಹೊಸದಾಗಿ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನೂ ನಾಗಮೋಹನದಾಸ್ ಆಯೋಗಕ್ಕೇ ನೀಡಿದೆ. ಆಯೋಗದ ಅವಧಿಯನ್ನು 60 (ಎರಡು ತಿಂಗಳು) ದಿನಕ್ಕೆ ವಿಸ್ತರಣೆ ಮಾಡಿದೆ.
ಸಮೀಕ್ಷೆ ಹೇಗೆ ನಡೆಯಲಿದೆ?
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30-40 ದಿನಗಳೊಳಗೆ ಹೊಸ ಸಮೀಕ್ಷೆ ನಡೆಸಬಹುದು ಎಂದು ನಾಗಮೋಹನ್ ದಾಸ್ ಆಯೋಗ ಹೇಳಿದೆ. ಸರ್ಕಾರ ಇದನ್ನು 60 ದಿನಗಳವರೆಗೆ ವಿಸ್ತರಿಸಿದೆ. ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸುವುದು, ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಿಬ್ಬಂದಿಗೆ ತರಬೇತಿ, ಸಂಪನ್ಮೂಲಗಳ ಕ್ರೂಢೀಕರಣದ ಇತ್ಯಾದಿ ಉಸ್ತುವಾರಿ ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಮತ್ತು ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡದಂತೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು ಎಂದೂ ನಾಗಮೋಹನದಾಸ್ ಆಯೋಗ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
“ರಾಜ್ಯದಲ್ಲಿ ಆರು ಸಾವಿರ ಗ್ರಾಮ ಪಂಚಾಯತ್ ಹಾಗೂ 300ಕ್ಕೂ ಹೆಚ್ಚು ವಾರ್ಡ್‌ಗಳಿವೆ. ಸಮೀಕ್ಷೆ ಕಾರ್ಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತೀವ್ರಗತಿಯಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸೂಚನೆ ನೀಡಿದೆ. ಆಯೋಗವು ಸಮೀಕ್ಷೆ ಕೈಗೊಳ್ಳಲು ಬೇಕಿರುವ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು. ಭವಿಷ್ಯದಲ್ಲಿ ಯಾವುದೇ ಗೊಂದಲಗಳಾಗದಂತೆ ದತ್ತಾಂಶಗಳು ಕರಾರುವಕ್ಕಾಗಿ ಪಡೆದು ಮೀಸಲಾತಿ ಹಂಚಿಕೆ ಮಾಡಲಾಗುವುದು” ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಶಾಲಾ ಶಿಕ್ಷಕರು, ಗ್ರಾಮಪಂಚಾಯತ್-ವಾರ್ಡ್ ಸಿಬ್ಬಂದಿ ಮತ್ತು ಇತರರ ಮೂಲಕ ಪರಿಶಿಷ್ಟ ಜಾತಿಗಳ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಯಲಿದೆ. ಈ ವೇಳೆ ಬಲಗೈ ಮತ್ತು ಎಡಗೈ ಎರಡೂ ಸಮುದಾಯಗಳ ಮೂಲ ಜಾತಿಗಳನ್ನು ನಮೂದು ಮಾಡಿಕೊಂಡು ಎಕೆ, ಎಡಿ, ಎಎ ಗೊಂದಲ ಪರಿಹರಿಸಬೇಕಿದೆ. ಆ ಬಳಿಕ 17 ಶೇಕಡ ಮೀಸಲಾತಿಯನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಬೇಕಿದೆ. ಸಮಾಜ ಕಲ್ಯಾಣ ಇಲಾಖೆ ಸಮೀಕ್ಷೆಯ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಒಳಮೀಸಲಾತಿ ಜಾರಿ ಸಂಬಂಧ ಸರ್ಕಾರವು ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದ್ದ ಸಂದರ್ಭದಲ್ಲೇ ಸರ್ಕಾರವು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿತ್ತು. ಇದು ವಿಶೇಷವಾಗಿ ಮಾದಿಗ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡುವ ಆದೇಶವನ್ನು ತಡೆಹಿಡಿಯಬೇಕು ಮತ್ತು ಈ ಕೂಡಲೇ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಹರಿಹರದಿಂದ ಇತ್ತೀಚೆಗೆ ಕೆಲವರು ಕ್ರಾಂತಿಕಾರಿ ಪಾದಯಾತ್ರೆಯನ್ನು ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಇದರ ನೇತೃತ್ವವನ್ನು ವಹಿಸಿದವರನ್ನು ಮಾತುಕತೆಗೆ ಕರೆಸಿದ ಸರ್ಕಾರವು ವಾರದೊಳಗೆ ಮಧ್ಯಂತರ ವರದಿ ತರಸಿಕೊಂಡು ಒಳಮೀಸಲಾತಿ ಜಾರಿಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿತ್ತು.
ಕಳೆದ 30 ವರ್ಷಗಳಿಂದ ಈ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬರುತ್ತಿರುವ ಹಲವು ಹೋರಾಟಗಾರರು ಈ ಕೂಡಲೇ ಒಳಮೀಸಲಾತಿಯನ್ನು ಸರಿಯಾದ ದತ್ತಾಂಶ ಸಂಗ್ರಹಿಸದೆ ಜಾರಿ ಮಾಡಿದರೆ ಈಗಾಗಲೇ ಹಲವು ಗೊಂದಲಗಳಿರುವುದರಿಂದ ಇದು ನ್ಯಾಯಾಲಯದ ಮೆಟ್ಟಿಲೇರಿ, ಇದರ ಜಾರಿಗಾಗಿ ಹತ್ತಾರು ವರ್ಷಗಳು ಕಾಯಬೇಕಾಗುತ್ತದೆ, ಆತುರ ಬೇಡ ಎಂಬುದು ಇವರ ವಾದವಾಗಿತ್ತು. ಈ ಕೂಡಲೇ ಒಳಮೀಸಲಾತಿ ಜಾರಿ ಮಾಡುವುದು ದುರಂತಕ್ಕೆ ಕಾರಣವಾಗಿ ನ್ಯಾಯ ಮರೀಚಿಕೆಯಾಗುತ್ತದೆ ಎಂಬುದು ಇವರ ವಾದವಾಗಿತ್ತು. ನಾಗಮೋಹನ್ ದಾಸ್ ಅವರ ಮಧ್ಯಂತರ ವರದಿಯ ಕೆಲ ಪ್ರಮುಖ ಅಂಶಗಳು ಈ ಮೇಲೆ ವಿವರಿಸಿರುವಂತೆ ಕೆಲ ಗೊಂದಲಗಳಿರುವುದರಿಂದ ಇವರ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಒಳ ಮೀಸಲಾತಿ| ಮಧ್ಯಂತರ ವರದಿ ಅಂಗೀಕರಿಸಿದ ಸರ್ಕಾರ; ಆಯೋಗದ ಅವಧಿ 60 ದಿನಕ್ಕೆ ವಿಸ್ತರಣೆ


