ಕವಿತೆಯ ಬಗ್ಗೆ ಮಾತನಾಡಲೇಬಾರದು. ಬರೆಯುವುದಂತೂ ನಿಷಿದ್ಧ. ಕವಿತೆ ತನ್ನ ಮಾತನ್ನು ತಾನೇ ಮಾತಿನ ಅತ್ಯಂತಿಕ ನೆಲೆಯಲ್ಲಿ ಬರೆದುಕೊಂಡಿರುತ್ತದೆ. ಕವಿತೆಯಲ್ಲಿ ಏನಿದೆ, ಏನಿಲ್ಲ ಎಂಬ ಮಾತು ರುಚಿಯಾದ ಅಡುಗೆಯಲ್ಲಿ ಏನಿದೆ ಏನಿಲ್ಲ ಎಂದು ಹೇಳಿದಷ್ಟೇ ಜಾಳು ಜಾಳು. ಯಾಕೆಂದರೆ ಅದು ಕಡೆಗೂ ಅಡುಗೆಯ ರುಚಿ ಸಮಾಹಿತವಾದ ಸ್ಥಿತಿ ಯಾವುದೆಂದು ಹೇಳಲು ಸೋಲುತ್ತದೆ. ಹೀಗೆ ಮಾತು ಸೋಲುವ ಸಂದರ್ಭವನ್ನು ಈ ಸಂಕಲನದ ಹಲವು ಕವಿತೆಗಳು ಒದಗಿಸುತ್ತವೆ.
ಕವಿತೆ ಯಾರು ಬರೆಯುತ್ತಾರೋ ಅವರದಲ್ಲ
ಯಾರಿಗೆ ಅವಶ್ಯಕತೆಯಿದೆಯೋ ಅವರದು
ಎನ್ನುತ್ತಾನೆ ಪಾಬ್ಲೋ ನೆರೂಡ. ಹೀಗೆ ಬರೆದವರಿಂದ ಬಿಡುಗಡೆಗೊಂಡು ಓದುಗರದಾಗಿಬಿಡುವ, ನಮ್ಮದೇ ನೆತ್ತರ ಬಿಸುಪಿನವೆನ್ನಿಸುವ ಕವಿತೆಗಳೂ ಇಲ್ಲಿವೆ.
ಬದುಕೂ ಬಂಡವಾಳೋದ್ಯಮವಾಗಿರುವ, ಮನುಷ್ಯ ಸಂವೇದನೆಗಳು ಲಾಭ-ನಷ್ಟಗಳ ಪ್ಯಾರಾಮೀಟರನ್ನು ಲಗತ್ತಿಸಿಕೊಂಡಿರುವ ಈ ಕೇಡುಗಾಲದಲ್ಲೂ ಬರೆಯಲೇಬೇಕೆಂಬ ಗರಜು ಯಾಕೆ ಹುಟ್ಟುತ್ತದೆ? ಕವಿತೆಗೆ ರೇಟ್‌ಬೋರ್ಡ್ ಇಲ್ಲ. ಆದರೂ ಸಂವೇದನಾಶೀಲ ಮನಸ್ಸು ಕವಿತೆಯೆಂಬ ಆಲದ ಬೆನ್ನಿಗಾತು ಕೂಡಲು ಹಂಬಲಿಸುತ್ತದಲ್ಲ, ಅದೇ ಬಾಳಿಗೆ ಉಳಿದಿರುವ ಭರವಸೆ. ಈ ಸಂವೇದನಾಶೀಲ ಮನಸ್ಸು ಹೆಣ್ಣಿನದಾಗಿದ್ದರೆ ಅದು ಇದಿರಾಗುವ ಅನುಭವ ಜಗತ್ತು ಬೇರೆ. ಯಾಕೆಂದರೆ, ಈ ಜಗತ್ತಿನಲ್ಲಿ ಹೆಣ್ಣಿನ ಹಾದಿ ಈಗಲೂ ಬೇರೆಯೇ. ನಿಜ, ಬೆಳಗೆರೆ ಜಾನಕಮ್ಮ ಇದ್ದಿಲ ಗೋಡೆಯ ಮೇಲೆ ಸುಣ್ಣದರಳಿಂದ ಕವಿತೆ ಬರೆದ ದಿನಮಾನ ಇದಲ್ಲ. ಬರೆವ, ಓದುವ ಜಗತ್ತು ಈಗ ಹೆಣ್ಣಿಗೆ ತೆರೆದಾಗಿದೆ. ಆದರೆ ವ್ಯವಸ್ಥೆ ಈ ದಾರಿಯ ಮುನ್ನೋಟವನ್ನು ತನ್ನ ತಾಬೆಯಲ್ಲಿಯೇ ಇರಿಸಿಕೊಂಡಿದೆ ಎಂದು ಹೆಣ್ಣಿಗೆ ಅನ್ನಿಸುತ್ತಲೇ ಇದೆ. ನಿನ್ನ ಹೆಸರು ಗುರುತುಗಳೊಂದಿಗೆ ನಿಶ್ಚಿಂತೆಯಿಂದ ಬದುಕಿ ಸಾಯಬಾರದೇ? ಎಂಬ ತಲೆಮೊಟಕು ನಿರ್ಬಂಧಗಳು ಜಾರಿಯಲ್ಲಿ ಇದ್ದೇ ಇವೆ. ಹೇಳುವ ಭಾಷೆ ಬದಲಾಗಿದೆ, ಶೈಲಿ ಬದಲಾಗಿದೆ. ಅರ್ಥ ಮಾತ್ರ ಇನ್ನೂ ಹರಿತವಾಗುತ್ತಲೇ ಇದೆ. ನಿಷ್ಪಾಪಿ ಕಂಬಳಿಹುಳುವಿನ ತುಪ್ಪುಳದಂಥ ಮೃದು ಮೌಲ್ಯಗಳು ಮನಸ್ಸಿಗೆ ತಾಕಿ ಸದಾ ಗೀರಿಕೊಳ್ಳುವ ಅಸ್ವಸ್ಥತೆಗೆ ದೂಡುತ್ತಿರುತ್ತವೆ. ಅದಕ್ಕೇ ಏನೋ, ಲೋಕ, ಸುಳಿವ ಗಾಳಿಯ ಅಲೆಗಳ ಬಗ್ಗೆ ಮಾತನಾಡಿದರೆ ಹೆಣ್ಣು ಮನಸ್ಸಿನ ಸಂವೇದನೆಗೆ ಇನ್ನೂ ಮೂಡದ ಎಲೆಗಳೊಳಗೆ ತುಯ್ಯುವ ಗಾಳಿಯ ಹಂಬಲ ಕಾಣುತ್ತದೆ. ಯಾವುದೇ ಕವಿತೆಯೂ ಮರ ಹೆತ್ತ ಹೊಸ ಚಿಗುರಿನಂತೆ ತನ್ನ ರೂಪ-ರಸ-ಗಂಧದಲ್ಲಿ ಪರಂಪರೆಯೊಂದಿಗೆ ಸಂಬಂಧ ಹೊಂದಿರುತ್ತದೆ.
ಹೆಣ್ಣು ಸಂವೇದನೆ ಮತ್ತೆಮತ್ತೆ ನಿಷ್ಕರ್ಷೆಗೆ ಹಚ್ಚುವುದು ಪ್ರೇಮವನ್ನು, ದಾಂಪತ್ಯವನ್ನು. ಅಲ್ಲಿಯ ಆಯ್ಕೆ-ಅನಾಯ್ಕೆಗಳನ್ನು. ಪ್ರಶ್ನಿಸಬೇಕಾದದ್ದು ಅವನು ಮೀರುವವನಾಗಿ, ಅವಳು ಮುಳುಗುವವಳಾಗಿ ಇರಬೇಕಾದ ದಂದುಗವನ್ನು. ಈ ಜೊತೆಯಾಟದ ದಣಿವಿನಲ್ಲಿ ತನ್ನದೆಂಬ ಹೆಜ್ಜೆಯೂರಲಾರದೆ ಹೋದ ನಿಯತಿಯನ್ನು. ಇದನ್ನು ಮೀರುವ ದಾರಿಗಳಿರಬಹುದೆ ಎಂಬ ಹುಡುಕಾಟವನ್ನು. ಒಂದೇ ವ್ಯತ್ಯಾಸವೆಂದರೆ, ಇದು ವ್ಯಕ್ತಿಗತ ಶೋಧನೆಯದಲ್ಲ. ಪ್ರತಿ ಉಸಿರೂ ಅಗಣಿತ ಜೀವಕಣಗಳಿಗೆ ಋಣಿ ಎಂಬ ಸ್ಪಷ್ಟತೆಯದು. ಪ್ರತಿಯೊಂದು ಅನುಭವವೂ ರಾಜಕೀಯವಾದದ್ದು ಎಂಬ ಸ್ಪಷ್ಟತೆಯದು. ಹಾಗಾಗಿಯೇ ನೋಯುತ್ತಿರುವುದು ನಾನು, ನೋಯಿಸುತ್ತಿರುವುದು ಅವನು ಎಂಬ ವರ್ಗೀಕರಣವನ್ನು ಮೀರಿದ್ದು. ರಾಮಾಯಣವಾಗುವ ಬಾಳಿನಲ್ಲಿ ಸೀತೆ ದುಃಖಿತಳು ನಿಜ. ಆದರೆ ರಾಮ ಸುಖಿಯೇ? ಎಂಬ ಒಳಗೊಳ್ಳುವ ತಿಳಿವಿನದು. ಹಾಗಾಗಿಯೇ ಇಲ್ಲಿಯ ಕವಿತೆಯೊಂದು, ಲೋಕ ಕಲಿಸಿದ ಕಟ್ಟಳೆಗಳು ನಮ್ಮನ್ನು ನಾವು ಇರಿದುಕೊಳ್ಳುವುದನ್ನು ಕಲಿಸಿದವು-ಎಂದು ಗಾಯ ಆರಿಸಿಕೊಳ್ಳುತ್ತಿರುವ ಹೊತ್ತಿನ ಜ್ಞಾನೋದಯವನ್ನು ಹೇಳುತ್ತಿದೆ. “ಕಟ್ಟಳೆಗಳ ಕಾಯಿಲೆಯಿಂದ ಬಿಡಿಸಿಕೊಳ್ಳುತ್ತಿದ್ದೇವೆ” ಎನ್ನುವುದೇ ಚೇತೋಹಾರಿ ಬಿಡುಗಡೆಯಾಗಿದೆ. ದಾಂಪತ್ಯವೆಂಬ ಎರಡು ರೆಕ್ಕೆಯ ಹಕ್ಕಿ ತನ್ನ ಎರಡೂ ರೆಕ್ಕೆಗಳನ್ನು ಸಂಭಾಳಿಸಿಕೊಳ್ಳಬೇಕಾದ ನಡೆಯಾಗಿದೆ. “ನನ್ನ ಕಣ್ಣೀರಿನ ಬಿಸಿಗೆ, ನಿನ್ನ ಕೈಯಲ್ಲಿ ಬೊಬ್ಬೆಯೆದ್ದಿವೆ ನೋಡು”- ಎಂದು ತಿಳಿಯುವುದು ಸಾಧ್ಯವಾಗುತ್ತದೆ. ತಪ್ಪು ನಿನ್ನದೂ ಅಲ್ಲ, ನನ್ನದೂ ಅಲ್ಲ, ರೂಢಿಗತ ಹೆಜ್ಜೆಗಳು ಬೇಡದ ಕಡೆಯಲ್ಲಿ ತಂದು ನಿಲ್ಲಿಸುತ್ತಿವೆ- ಎಂದು ಸಮಾಧಾನವಾಗುತ್ತದೆ. ಈ ತಿಳಿವು ಇದ್ದಕ್ಕಿದ್ದಂತೆ ರಾತ್ರಿಬೆಳಗಾಗುವುದರಲ್ಲಿ ಸಂಭವಿಸಿಬಿಡುವುದಿಲ್ಲ. ಅವೆಷ್ಟೋ ದಿನಗಳು ಉಸಿರುಗಟ್ಟಿದಂತಿರುತ್ತವೆ, ದಿಕ್ಕೆಟ್ಟಿರುತ್ತವೆ. ಯಾವ ಕಾಲುದಾರಿಯೂ ಕಾಣದ, ಯಾವ ಕವಲುಗಳೂ ಗೋಚರಿಸದ, ನಡೆದಷ್ಟೂ ಕಾಣದ, ಮುಕ್ತಾಯವೇ ಇಲ್ಲದ ಏಕರೂಪಿ ಸಂಹಿತೆಯಾಗಿ ಹೆದರಿಸುತ್ತವೆ.
ಅರೆ, ಈ ಒಂಟಿ ರಸ್ತೆಗೆ ಕವಲುಗಳೇ ಇಲ್ಲ
ಈ ದಾರಿ ಹಿಡಿಯದೇ ಬೇರೆ ಗತಿಯಿಲ್ಲ
ಇದು ಯಾವುದೋ ಒಂದು ಬದುಕಿನ ಫೋಟೋಗ್ರಫಿಯಲ್ಲ, ಒಟ್ಟಾಗಿ ನಡೆಯುತ್ತಾ ಒಂಟಿಯಾದ ಎಲ್ಲರೆಲ್ಲರ ಕಥನ. ಮನಸ್ಸು ಕನ್ನಡಿಯಲ್ಲ, ಚೂರಾದ ಮೇಲೆ ಕೂಡಿಸಲಾಗದ ವಸ್ತುವಲ್ಲ. ಅದು ಪಡೆಯುವ, ಕೂಡುವ, ಬೆಳೆಯುವ ಜೀವಕಣ. ಅದೊಂದು ಜೀವಕೋಶಿ ಅಮೀಬಾ, ನಾಶವಾಗದ್ದು. ಹಾಗಾಗಿಯೇ ಎಂತಹ ಗಾಯವನ್ನೂ ಮಾಯಿಸುವ, ಬೇನೆಯನ್ನು ಸಹಿಸುವ ಬದುಕಿನ ಪ್ರತಿ ಹೆಜ್ಜೆಯನ್ನೂ ಚಿಮ್ಮುಹಲಗೆಯಾಗಿಸಿಕೊಳ್ಳುವ ತ್ರಾಣ ಅದಕ್ಕಿದೆ. ಇಲ್ಲಿ ಯಾವುದೂ ಜಡವಲ್ಲ. ಬದುಕೆಂದರೆ, ಉರು ಹೊಡೆದು ಅಟ್ಟಹತ್ತುವ ರಂಗಸಜ್ಜಿಕೆಯಲ್ಲ. ನಾನೂ ಬದಲಾಗುತ್ತ ಸುತ್ತಲನ್ನೂ ಬದಲಿಸಿಕೊಳ್ಳುತ್ತ ನಡೆಯಬೇಕಾದ ಪ್ರಯೋಗಭೂಮಿ. ಇಲ್ಲಿ ಏಕರೂಪಗಳಿಲ್ಲ. ಪ್ರಕೃತಿಯ ಜಡವಿದೆ, ಜಂಗಮವಿದೆ.
ಚಲಿಸದ ನಡುಗಡ್ಡೆಗಳ ನೆತ್ತಿಯ ಮೇಲೆ
ಚಲಿಸುತ್ತಿವೆ ಚುಕ್ಕಿಗಳು
ಈ ವಿವೇಕವೇ ಬದುಕನ್ನು ಕಾಪಿಡುವ ತಾಯ್ತನ. ಲೋಕನಿಶ್ಚಿತ ದೃಷ್ಟಿಕೋನದ ತಪ್ಪುಗಳಿಗೆ ಸರಿಯನ್ನು ರೂಪಿಸಿಕೊಳ್ಳುವುದು ಪ್ರತಿಯೊಂದು ಜೀವದ ಹೊಣೆಗಾರಿಕೆ. ಅದು ನಮಗೆ ನಾವೇ ಸಲ್ಲಿಸಿಕೊಳ್ಳುವ ಗೌರವ. ಇಲ್ಲಿಯ ಕವಿತೆ ದಾಂಪತ್ಯ ಸಂಹಿತೆಯನ್ನು ಮುರಿದುಕಟ್ಟುತ್ತದೆ. ಬಳ್ಳಿ-ಮರ, ಬೆಳೆ-ಬೇಲಿ, ನದಿ-ಕಡಲು ಈ ಭಾಷಿಕ ಕಟ್ಟುವಿಕೆಯಲ್ಲಿ ಬೆರೆತ ನೀತಿ ಹೆಣ್ಣನ್ನು ಸತಾಯಿಸಿದೆ. ಅದಕ್ಕೆ,
ಬಳ್ಳಿಯಾಗದ ನಾನು
ದೃಢವಾಗಿ ಬೇರೂರಿದ ಗಿಡವಾಗಿ
ಹರ್ಷದಿಂದ ತೊನೆದಾಡುತ್ತೇನೆ
ಬೇಲಿಯಾಗದ ನೀನು
ನನ್ನೊಳಗೆ ಹೂವಾಗಿ ಅರಳಿ ತಲೆದೂಗುತ್ತೀಯ
ಎಂಬ ಪರ್ಯಾಯದ ಕನಸು ಮೊಳೆಯುತ್ತದೆ.
ಕವಿತೆ ಎನ್ನುವುದೇ ಅನುಸಂಧಾನ. ತನ್ನೊಳಗನ್ನು ತನ್ನ ಸುತ್ತಲೂ ಪ್ರಾಮಾಣಿಕವಾಗಿ ಹೊಕ್ಕು ಹೊರಬರುವ ಕ್ಷ-ಕಿರಣ. ಹಾಗಾಗಿಯೇ ಅಲ್ಲಿ ಆರೋಪ-ಪ್ರತ್ಯಾರೋಪಗಳಿರುವುದಿಲ್ಲ. ನಾನು ಎನ್ನುವುದು ನೀನೂ ಆಗಿ ಹದಗೊಳ್ಳುವ ಪ್ರಕ್ರಿಯೆ ಅದು. ಸಮಾಜ, ಕವಿತೆಗೆ ಹೊರ ಆವರಣವಲ್ಲ, ತನ್ನನ್ನೂ ಒಳಗೊಂಡಿರುವ ಒಳ ಆವರಣ. ತನ್ನ ದೇಶ-ಕಾಲಗಳ ಪರಿವರ್ತಿತ ಸ್ಥಿತಿಗಳು ತನ್ನನ್ನೂ ತೆಕ್ಕೆಗೆ ತೆಗೆದುಕೊಂಡುಬಿಡುತ್ತವೆ. ಅದೊಂದು ಪರಿಸ್ಥಿತಿ ಎನ್ನುವಂತೆ. ಹಾಗಾಗಿ ಹೊರಗೆ ಇಣುಕುವಷ್ಟೇ ತನ್ನೊಳಗನ್ನೂ ಇಣುಕಬೇಕಾದದ್ದು, ಆಗಾಗ ಮತ್ತೆಮತ್ತೆ ಬಂದುಬೀಳುವ ಕಸವನ್ನು ಎತ್ತಬೇಕಾದ್ದು ಕವಿತೆಯ ಧರ್ಮ. ಹೆಸರು ಮಾಡುವ ರೋಗ ಅಂತಹ ಸಾಂಕ್ರಾಮಿಕ ರೋಗಗಳಲ್ಲೊಂದು. ಇಂತಹ ಆಪತ್ತಿನಲ್ಲಿ ದೇಹದ ಆರೋಗ್ಯವನ್ನು ಕಾಪಿಡುವ ಬಿಳಿ ರಕ್ತಕಣಗಳ ಹಾಗೆ, ವಿವೇಕಮತಿಯು ರೋಗನಿರೋಧಕವಾಗಿ ಆತ್ಮವನ್ನು ಮೈಲಿಗೆಗೊಳಿಸದೆ ಕಾಪಿಡುವುದಿದೆಯಲ್ಲ, ಅದೊಂದು ಹರುಷ, ತೃಪ್ತಿ.
ಆಳಕ್ಕೆ ಚಾಚಿಕೊಂಡಂತೆಲ್ಲ ಮೇಲಕ್ಕೂ ಹಸಿರು
ನನ್ನಾಳ, ಎತ್ತರಕ್ಕೀಗ ಗುರುತಿನ ಸೂತಕವಿಲ್ಲ
ತೂತಾಗದಂತೆ ಹೊಲಿವ ಸೂಜಿ, ತಾವರೆಯ ಎಲೆಯ ಮೇಲಿನ ಬಿಂದು, ಬೆಂದರೂ ಬೂದಿಯಾಗದ ಬದುಕು- ಇವೆಲ್ಲ ಹಳೆಯ ಪ್ರತಿಮೆಗಳೇ ಇದ್ದೀತು. ಆದರವು ಪ್ರತಿ ಕವಿತೆಯ ಸಂದರ್ಭಕ್ಕೂ ಹೊಸತಾಗುತ್ತವೆ. ಪ್ರತಿ ಮಗುವಿಗೂ ಹೊಸದಾಗುವ ವರ್ಣಮಾಲೆಯಂತೆ.
ಇದನ್ನೂ ಓದಿ: ಡಾ. ಕೆ. ಬಾಲಗೋಪಾಲ್ ಅವರ ’ಅಭಿವೃದ್ಧಿ ಎಂಬ ವಿನಾಶ’ ಪುಸ್ತಕದ ಆಯ್ದ ಅಧ್ಯಾಯ
ವರ್ತಮಾನಕ್ಕೆ ಇದಿರಾಗುವುದು ಪರಂಪರೆಗೆ ಇದಿರಾದಷ್ಟು ಸರಳವಲ್ಲ. ಯಾಕೆಂದರೆ ವರ್ತಮಾನದ ಚಲನೆಯ ಬಿಂದು, ನಮ್ಮನ್ನೂ ಒಳಗೊಂಡಿರುತ್ತದೆ. ಅದು ನಮ್ಮನ್ನು ಪಲ್ಲಟಿಸಿಬಿಟ್ಟೀತು ಎಂಬ ಭಯ ಸಂವೇದನಾಶೀಲತೆಯನ್ನು ಕಾಡುತ್ತಲೇ ಇರುತ್ತದೆ. ಸಾಗರದ ಅಲೆಗಳ ಹೊಡೆತಕ್ಕೂ ಜಗ್ಗದೆ ದಡದತ್ತಲೇ ವಾಲುವುದು, ಕೋಟಿ ಕಣಗಳ ನಡುವೆಯೂ ಅಂಟದ ಒಂಟಿ ಮರಳಾಗುಳಿಯುವುದು ಸವಾಲು, ಅನುಕ್ಷಣದ ಸವಾಲು. ಇಂತಹ ಹಾದಿಗಳಲ್ಲಿ ಮುಳ್ಳು ಬಿತ್ತಲು, ಮೊಳೆ ಬಡಿಯಲು ಯಾಜಮಾನ್ಯ ವ್ಯವಸ್ಥೆ ಸಿದ್ಧವಾಗಿಯೇ ಇರುತ್ತದೆ. “ಇಲ್ಲಿ ಇಳಿದರೆ ಗೆದ್ದಲು, ಏರಿದರೆ ಗಿಡುಗ” ಎಂಬ ಧರ್ಮಸಂಕಟವಿದು. ಮುಳ್ಳು ಒಳಗೇ ಮುರಿದು ಸಿಡಿಯುತ್ತಿರುತ್ತದೆ, ಯಾರ ಕಣ್ಣಿಗೂ ಕಾಣದಂತೆ. ಈ ವಿರೋಧವೇ ಬೇಡವೆಂದು ಹತ್ತರಲ್ಲಿ ಹನ್ನೊಂದಾಗುವುದು ಸಾಧ್ಯವಿದೆಯೇ? ತಪ್ಪುಗಳು, ಸುಳ್ಳುಗಳು, ಮೋಸಗಳು, ವಂಚನೆಗಳು ವಿದ್ಯುದಾಲಿಂಗನದಂತೆ ವ್ಯಾಪಿಸಿಕೊಳ್ಳುತ್ತಿವೆ. ಪ್ರತಿಕ್ಷಣ ಹೆಣ್ಣನ್ನು ಘಾಸಿಗೊಳಿಸುತ್ತಲೂ ಇವೆ.
ಪದಸ್ಪರ್ಶಕೆ ಕರಸ್ಪರ್ಶಕೆ
ದಕ್ಕಿದ್ದಷ್ಟೇ ಹೆಣ್ಣೆಂಬ
ಹುಸಿಗಳ ಎದುರು ಗಟ್ಟಿಯಾಗಿ ಹೇಳಬೇಕಿದೆ. ನಾನು ವಿದೇಹಿ, ನಿಮ್ಮ ಎಲ್ಲ ಗ್ರಹಿಕೆಗಳ ಆಚೆಯವಳು. ಪ್ರತಿ ಚಿಗುರಿನಲ್ಲೂ ನಭ ಮುಟ್ಟುವ ಉನ್ಮಾದದವಳು ಎಂದು. ಇದನ್ನು ಕೇಳಿಸಿಕೊಳ್ಳುತ್ತಾರೆಯೇ? ಯಾಜಮಾನ್ಯ ತಾನು ರೂಪಿಸಿ ಚಲಾವಣೆಗೆ ಬಿಟ್ಟ ಮಾತುಗಳಲ್ಲದೆ ಬೇರೆ ಯಾವುದನ್ನೂ ಕೇಳಿಸಿಕೊಳ್ಳಬಾರದಂತೆ ಕಿವುಡು ತಂದಿದೆ. ಕವಿತೆಗೆ ಸಂಕಟವೇನೆಂದರೆ, ತನ್ನ ನೆಲದಲ್ಲಿ ಸಂವೇದನೆ ಸಾಯುತ್ತಿದೆ. ನಿಶಾನೆಗಳೇ ಅಸ್ತಿತ್ವಗಳಾಗುತ್ತಿವೆ. ಹೊಟ್ಟೆಯ ಹಸಿವಿನ ಬೆಂಕಿಗೆ ತುಪ್ಪ ಸುರಿಯಲಾಗುತ್ತಿದೆ.
ತೋರುಂಬ ಲಾಭದಿಂದ ತೇಗಿದ ಭಕ್ತಿಗೀಗ
ನೆತ್ತರಿನ ವಿಚಿತ್ರ ದಾಹ
ಈ ದಾಹ, ಮನುಷ್ಯರನ್ನು ಬೇಟೆಯಾಗಿಸುತ್ತದೆ. ಹೆಣ್ಣಿನ ತಾಯ್ತನವನ್ನು ಉಡಾಫೆ ಮಾಡುತ್ತದೆ. ವರ್ತಮಾನದ ಈ ಕಾಲದಲ್ಲಿ ಸಿದ್ಧಪುರುಷರು ಅವತರಿಸಿದ್ದಾರೆ. ಅವರಿಗೆ ಹಸಿವು, ಅಸಹಾಯಕತೆಗಳ ಬೆಲೆ ಗೊತ್ತಿದೆ. ಎಲ್ಲವನ್ನೂ ತಮ್ಮ ತಾಬೆಯ ಕರೆನ್ಸಿಗಳಾಗಿಸಿಕೊಳ್ಳುವ ಚಾಣಕ್ಯತೆ ಇದೆ. ಈ ಎಲ್ಲಕ್ಕೂ ಸಾಕ್ಷಿಪ್ರಜ್ಞೆಯಾಗುತ್ತಿರುವ ಕವಿತೆಗೆ ತನ್ನ ಮಾತು ಸೋಲುತ್ತಿರುವ ಹಾಗೆ ಭಾಸವಾಗುತ್ತಿದೆ. ನದಿಯ ದಿಕ್ಕನ್ನೂ ತಮಗೆ ಬೇಕಾದತ್ತ ಹೊರಳಿಸುತ್ತೇವೆ ಎಂಬ ದಾಹಿಗಳೊಂದಿಗೆ ಸಂವಾದ ಸಾಧ್ಯವಿಲ್ಲ. ಆದರೂ ಕವಿತೆ ಮಾತನಾಡಬೇಕಿದೆ. ಯಾಕೆಂದರೆ, ಅದು ಕವಿತೆಯ ಕರ್ತವ್ಯ. ಸತ್ಯದ ಪ್ರತಿ ಮಾತು ನಿಷೇಧಕ್ಕೊಳಪಡುತ್ತಿರುವಾಗ ಸತ್ಯವನ್ನು ಪ್ರಿಯವಾಗುವಂತೆ ಪರಿವರ್ತಿಸಿಕೊಳ್ಳುವ ಗರಜು ಕವಿತೆಗಿದೆ. ವರ್ತಮಾನಕ್ಕೆ ಮುಖಾಮುಖಿಯಾಗುವ ಮಾತು ಈ ಅಗ್ನಿದಿವ್ಯವನ್ನು ಹಾಯಲೇಬೇಕಾಗಿದೆ. ಈ ಸಂಕಲನದಲ್ಲಿ ’ಅವಳಿಗೆ ನಗಲು ಅನುಮತಿಯಿಲ್ಲ, ಅಳಲು ಕಣ್ಣೀರಿಲ್ಲ ಎಂಬ ನೇತ್ರಾವತಿ ನದಿಯ ಒಳತೋಟಿಯಂತೆ ಕಾಣುವ ಕವಿತೆಯಿದೆ. ಅದು ಮಹತ್ವದ ಕವಿತೆಯಾಗಿದೆ. ಮನುಷ್ಯರ ಅಪಸವ್ಯಗಳಿಗೆ ವಿಕಾರಗಳಿಗೆ ಒಡ್ಡಿಕೊಳ್ಳಬೇಕಾದ ಪ್ರಕೃತಿಯ ಬೇಗುದಿ ಹೇಗಿದ್ದೀತು? ನಮ್ಮ ಈ ಕೇಡುಕಾಲದಲ್ಲಿ ಪ್ರಕೃತಿ ಬರೀ ಪ್ರಕೃತಿಯಲ್ಲ, ನೇತ್ರಾವತಿ ನದಿಯಷ್ಟೇ ಅಲ್ಲ. ಪುರುಷ ಅಹಂಕಾರ ಮತ್ತು ಧರ್ಮಕಾರಣದ ಮಿಲಾವತ್‌ನಲ್ಲಿ ಬಲಿಯಾಗುತ್ತ ಮರೆಯಾಗುತ್ತ ಹೋದ ಹೆಣ್ಣಿನ ಸಂಕೇತವೂ ಪುರುಷ ಹಿತಾಸಕ್ತಿಯ ಅಮಾನವೀಯತೆಯೂ ಧರ್ಮವನ್ನು ಹೊದ್ದುಕೊಂಡಿದೆ.
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ
ಎಲ್ಲೆಲ್ಲೂ ಹಸಿ ಹಸಿ ವಾಸನೆ
ಈಗೀಗ ಮಳೆಗಾಲ ಕಳೆದರೂ
ನೇತ್ರಾವತಿಯ ಕೆಂಪು ನೀರು ತಿಳಿಯಾಗುತ್ತಿಲ್ಲ
ಕವಿತೆಯಿಲ್ಲಿ ಕಿರುಗನ್ನಡಿ; ತನ್ನನ್ನು ಹಾಸಿ ವರ್ತಮಾನದ ವೃಣಗಾಯಗಳನ್ನು ತೋರುತ್ತಿದೆ, ಸುಮ್ಮನಿರಲಾರದ ತಾಯ ಬೇಗುದಿಯಲ್ಲಿ.
ಕವಿತೆ ಬರೆಯುವುದು ಸುಲಭ ಸಾಧ್ಯವಾಗಬಾರದ ಕಾಲವಿದು. ಬರೆಯದಿರಬಾರದ ಕಾಲವೂ ಹೌದು. ಈ ಕಾಲದಲ್ಲಿ ಬದುಕಿರುವುದಕ್ಕಾಗೋ, ಕಾಲಕಥನವನ್ನು ಬರೆದಿಡುವ ದರ್ದಿನಲ್ಲಿ ಮೂಡಿದ ಬೆಳಕಿಂಡಿಯಂತಹ ಇಲ್ಲಿಯ ಕವಿತೆಗಳಿಗೆ ಶುಭಾಶಯಗಳು. ಅವು ಎಲ್ಲರನ್ನೂ ತಲುಪಲಿ.
ಡಾ. ವಿನಯಾ
ವಿನಯಾ ಸದ್ಯ ಧಾರವಾಡಲ್ಲಿ ನೆಲೆಸಿದ್ದಾರೆ. ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನಯಾ ಕವಿಯಾಗಿ ಪರಿಚಿತರು. ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ ಕವನ ಸಂಕಲನಗಳು. ಊರ ಒಳಗಣ ಬಯಲು, ಉರಿ ಅವರ ಕಥಾಸಂಕಲನಗಳು.


