ಕಲಬುರ್ಗಿ ಗ್ರಾಮೀಣದ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿ ಜಯಶ್ರೀ ಮತ್ತಿಮೂಡ ಹೆಸರಿನಲ್ಲಿರುವ ಇನ್ನೋವಾ ಕ್ರಿಸ್ಟಾ ಕಾರನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಮಹರಾಷ್ಟ್ರದ ಸೊಲ್ಲಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಟ್ಟಿಂಗ್‌ಗೆ ಸಂಬಂಧಿಸಿ, ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಕಾರಂಜೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಶಾಸಕರ ಪತ್ನಿಗೆ ಸೇರಿರುವ KA 51 MP 9955 ಕಾರಿನ ಜೊತೆಗೆ, ಮತ್ತೊಂದು ಕಾರು, 38.44 ಲಕ್ಷ ರೂಪಾಯಿ ನಗದು, ಲ್ಯಾಪ್ ಟಾಪ್, ಮೊಬೈಲ್, ಸ್ಕೂಟರ್ ಸೇರಿದಂತೆ ಇತರ ವಸ್ತು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ವೇಶ್ಯಾವಾಟಿಕೆ ನಡೆಸುತ್ತಿದ್ದ BJP ಮಹಿಳಾ ಮೋರ್ಚಾ ಅಧ್ಯಕ್ಷೆ ಬಂಧನ

ಖಚಿತ ಮಾಹಿತಿಯ ಮೇರೆಗೆ ಕಲಬುರ್ಗಿಗೆ ಬಂದಿದ್ದ ಮಹಾರಷ್ಟ್ರ ಪೊಲೀಸರು, ಕಲಬುರ್ಗಿ ಪೊಲೀಸರ ಗಮನಕ್ಕೂ ಬಾರದೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ಐಪಿಎಲ್ ಎರಡನೆಯ ಕ್ವಾಲಿಫೈಯರ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದೆ.
ಬೆಟ್ಟಿಂಗ್‌ನಲ್ಲಿ ಇನ್ನೂ ಹಲವು ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಶಾಸಕರ ಪತ್ನಿ ಜಯಶ್ರೀ ಅವರ ಸಂಬಂಧಿ ಗೋರಖನಾಥ್ ಹೆಸರೂ ಬೆಟ್ಟಿಂಗ್ ಪ್ರಕರಣದಲ್ಲಿ ಕೇಳಿಬಂದಿದ್ದು, ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪುರಸಭಾ ಸದಸ್ಯೆಯನ್ನು ಎಳೆದಾಡಿದ ಬಿಜೆಪಿ ಶಾಸಕ ಸಿದ್ದು ಸವದಿ


