Homeಚಳವಳಿಇರೋಮ್ ಶರ್ಮಿಳಾರ ಉಪವಾಸ, Indian Army Rape us ಎಂಬ ಮಹಿಳೆಯರ ಬೆತ್ತಲೆ ಪ್ರತಿಭಟನೆ ಮತ್ತು...

ಇರೋಮ್ ಶರ್ಮಿಳಾರ ಉಪವಾಸ, Indian Army Rape us ಎಂಬ ಮಹಿಳೆಯರ ಬೆತ್ತಲೆ ಪ್ರತಿಭಟನೆ ಮತ್ತು ಕರಾಳ AFSPA ಕಾಯ್ದೆ

AFSPA ಕಾನೂನಿನಂತೆ ಅಲ್ಲಿನ ಸೇನಾಪಡೆಗಳಿಗೆ ಅನುಮತಿಯಿಲ್ಲದೇ ಯಾರನ್ನಾದರೂ ವಿಚಾರಣೆ ಮಾಡುವ, ಬಂಧಿಸುವ ಅಧಿಕಾರವಿದೆ. ಸೇನಾಪಡೆಗಳ ವಿರುದ್ಧ ದೂರು ನೀಡುವ ಹಕ್ಕು ನಾಗರಿಕರಿಗಿಲ್ಲ!

- Advertisement -

ನವೆಂಬರ್ 02, 2000ನೇ ಇಸವಿ. ಅಸ್ಸಾಂ ರಾಜ್ಯದ ಇಂಫಾಲ ಬಳಿ ಇರುವ ಮಾಲೋಮ್ ನಗರದಲ್ಲಿ 10 ಜನ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿರುತ್ತಾರೆ. ಅಲ್ಲಿಗೆ ಏಕಾಏಕಿ ನುಗ್ಗಿದ ಅಸ್ಸಾಂ ರೈಫಲ್ಸ್ ನ ಸೈನಿಕರು ಗುಂಡಿನ ದಾಳಿ ನಡೆಸಿ 10 ಜನರನ್ನು ಕೊಂದು ಹಾಕುತ್ತಾರೆ. ಈ ಘೋರ ದುರಂತದ ವಿರುದ್ಧ ಅಸ್ಸಾಂ ಜನತೆ ಕಂಬನಿ ಮಿಡಿಯುತ್ತದೆ. ಆದರೆ 28 ವರ್ಷದ ಒಬ್ಬ ಯುವತಿಯೊಬ್ಬರು ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದೆಂದರೆ ಆ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯಕ್ಕಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ. ಅಲ್ಲಿಂದ ಆರಂಭವಾದ ಇರೋಮ್ ಶರ್ಮಿಳಾರವರ ಉಪವಾಸ ಸತ್ಯಾಗ್ರಹ ಹೋರಾಟ 2016ರವರೆಗೆ ಅಂದರೆ ಸತತ 16 ವರ್ಷ ಮುಂದುವರೆಯುತ್ತದೆ…

ಈಗ 21 ವರ್ಷಗಳ ನಂತರ ಅದೇ ಅಮಾನವೀಯ ದಾಳಿ ಪಕ್ಕದ ನ್ಯಾಗಲ್ಯಾಂಡ್‌ ರಾಜ್ಯದಲ್ಲಿ ಸಂಭವಿಸಿದೆ. ನಾಗಾಲ್ಯಾಂಡ್‌ನ ಮಯನ್ಮಾರ್‌ ಗಡಿಯ ಬಳಿ ದಂಗೆಕೋರರ ವಿರುದ್ಧದ ಕಾರ್ಯಾಚರಣೆಯ ವೇಳೆ ಸೇನೆಯು ಗುಂಡಿನ ದಾಳಿ ನಡೆಸಿ 14 ಅಮಾಯಕ ನಾಗರೀಕರನ್ನು ಹತ್ಯೆಗೈದಿದೆ. ಘಟನೆಯಲ್ಲಿ ಓರ್ವ ಯೋಧನು ಪ್ರಾಣ ಕಳೆದುಕೊಳ್ಳಬೇಕಾಗಿದೆ. ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಗಳ ಹೊಣೆಗಾರಿಕೆಯನ್ನು ಸೇನೆ ಹೊರುತ್ತಿದೆ ಎಂದು ದಿಮಾಪುರ್ ಮೂಲದ 3 ಕಾರ್ಪ್ಸ್ ಹೇಳಿದೆ. ಈಘಟನೆಯ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾಗಲ್ಯಾಂಡ್‌ನಲ್ಲಿ ಪ್ರತಿಭಟನೆ ತಾರಕಕ್ಕೇರಿದೆ.

ಈ 21 ವರ್ಷಗಳ ನಡುವೆ ಇಂತಹ ನೂರಾರು ಹತ್ಯಾಕಾಂಡಗಳು ನಡೆದಿವೆ. ಕೆಲವು ವರದಿಯಾದರೆ ಹಲವು ವರದಿಯಾಗದೆ ಹೂತುಹೋಗಿವೆ. ಮುಖ್ಯವಾಗಿ ಹುಳುಗಳ ರೀತಿಯಲ್ಲಿ ಮನುಷ್ಯರನ್ನು ಕೊಂದು ಹಾಕಲು ಸೇನೆಗೆ ಹೇಗೆ ಮನಸ್ಸು ಬರುತ್ತದೆ? ಅವರಿಗೆ ಶಿಕ್ಷೆಯ ಭಯವಿಲ್ಲವೇ? ಖಂಡಿತ ಇಲ್ಲ. ಏಕೆಂದರೆ ಅವರಿಗೆ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಥವಾ AFSPA’ದ ಬಲವಿದೆ. ಇಲ್ಲಿ ಸೇನಾಪಡೆಗಳಿಗೆ ಅನುಮತಿಯಿಲ್ಲದೇ ಯಾರನ್ನಾದರೂ ವಿಚಾರಣೆ ಮಾಡುವ, ಬಂಧಿಸುವ ಅಧಿಕಾರವಿರುತ್ತದೆ. ಈ ವಿಚಾರವಾಗಿ ಸೇನಾಪಡೆಗಳ ವಿರುದ್ಧ ದೂರು ನೀಡುವ ಹಕ್ಕು ನಾಗರಿಕರಿಗಿರುವುದಿಲ್ಲ!

ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಥವಾ AFSPA ಹಲವಾರು ದಶಕಗಳಿಂದ ನಾಗಾಲ್ಯಾಂಡ್ ಮತ್ತು ಈಶಾನ್ಯದ ಭಾಗಗಳಲ್ಲಿ ಜಾರಿಯಲ್ಲಿದೆ. ವಿವಾದಿತ ಕಾನೂನಿನ ಅಡಿಯಲ್ಲಿ ಭದ್ರತಾ ಪಡೆಗಳು ರಾಜ್ಯದಲ್ಲಿ ಎಲ್ಲಿಯಾದರೂ ಕಾರ್ಯಾಚರಣೆಯನ್ನು ನಡೆಸಲು ಮತ್ತು ಯಾವುದೇ ಪೂರ್ವ ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸಬಹುದಾಗಿದೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ (ಇಂಫಾಲ್ ಮುನ್ಸಿಪಲ್ ಕೌನ್ಸಿಲ್ ಪ್ರದೇಶವನ್ನು ಹೊರತುಪಡಿಸಿ), ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ಲಾಂಗ್ಡಿಂಗ್ ಮತ್ತು ತಿರಾಪ್ ಜಿಲ್ಲೆಗಳು ಮತ್ತು ಅಸ್ಸಾಂ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ AFSPA ಜಾರಿಯಲ್ಲಿದೆ.

ಈ AFSPA ಕಾಯ್ದೆಯಿಂದಾಗಿ ಸೇನೆಯು ಪ್ರತಿನಿತ್ಯ ಅಮಾಯಕರನ್ನು ಹಿಂಸಿಸುತ್ತಿದೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದೆ. ಪ್ರಭುತ್ವದ ವಿರುದ್ಧ ಪ್ರತಿಭಟಿಸುವವರನ್ನು ಹತ್ಯೆಗೈಯ್ಯುತ್ತಿದೆ. ಸಾವಿರಾರು ನಿರಪರಾಧಿಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ಸೇನೆಗೆ ಅಪರಿಮಿತ ಅಧಿಕಾರ ಸಿಕ್ಕಿರುವುದು ಅವರನ್ನು ಕುರುಡಾಗಿ ಮಾಡಿದೆ ಎಂದು ನೂರಾರು ಹೋರಾಟಗಳು ನಡೆದವು. 2004ರಲ್ಲಿ ಮಣಿಪುರದಲ್ಲಿ ತಂಗ್ಜಮ್ ಮನೋರಮಾ ಎಂಬ ಯುವತಿಯ ಮೇಲೆ ಅಸ್ಸಾಂ ರೈಫಲ್ಸ್ ಸೈನಿಕರು ಅತ್ಯಾಚಾರವೆಸಗಿ ಹತ್ಯೆ ಮಾಡಿದರು ಎಂಬ ಆರೋಪ ಕೇಳಿಬಂತು. ಆಗ ಆಕ್ರೋಶಗೊಂಡ 12 ಮಹಿಳೆಯರು ಸೇನೆಯ ಕಚೇರಿ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಸೈನಿಕರೆ ಬನ್ನಿ ನಮ್ಮನ್ನು ಅತ್ಯಾಚಾರ ಮಾಡಿ, ನಮ್ಮನ್ನು ಕೊಲ್ಲಿ ಎಂದು ಕೂಗಿದರು. ಈ ಚಿತ್ರ ಇಡೀ ಪ್ರಪಂಚಾದಾದ್ಯಂತ ವ್ಯಾಪಕವಾಗಿ ಹರಡಿತ್ತಲ್ಲದೆ AFSPA ಕಾಯ್ದೆ ಭಾರತ ಈಶಾನ್ಯ ರಾಜ್ಯಗಳ ಜನರ ಮೇಲೆ ಮಾಡುತ್ತಿರುವ ಕ್ರೂರ ಗಾಯವನ್ನು ಪ್ರಪಂಚಕ್ಕೆ ಪರಿಚಯಿಸಿತು.

AFSPA ವಿರುದ್ಧ ನಡೆದ ನೂರಾರು ಹೋರಾಟಗಳನ್ನು ಪ್ರಭುತ್ವ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತು. ಉಪವಾಸ ಆರಂಭಿಸಿದ್ದ ಇರೋಮ್ ಶರ್ಮಿಳಾರವರ ಮೇಲೆ ಮೂರೇ ದಿವಸಕ್ಕೆ ಇವರ ಮೇಲೆ ಆತ್ಮಹತ್ಯೆಗೆ ಪ್ರಯತ್ನ ಎಂಬ ಕೇಸ್ ಜಡಿಯಿತು. ಶರ್ಮಿಳಾ ಜಗ್ಗಲಿಲ್ಲ. ನಂತರ ನ್ಯಾಯಾಂಗ ಬಂಧನ, ಜೈಲಿನಲ್ಲಿದ್ದಾಗಲೂ ಉಪವಾಸ ಮುಂದುವರೆಸಿದರು. ಕೊನೆಗೆ ಆಸ್ಪತ್ರೆಯಲ್ಲಿಟ್ಟು ಮೂಗಿನ ನಳಿಕೆ ಮೂಳಕ ಬಲವಂತವಾಗಿ ಆಹಾರ ನೀಡುವ ಪದ್ದತಿಯನ್ನು ಪೊಲೀಸರು ಅನುಸರಿಸಿದರು.

ಜಗತ್ತಿನಾದ್ಯಂತ ಇರೋಮ್ ಶರ್ಮಿಳಾರವರ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದುಬಂತು. ಇವರ ಹೋರಾಟಕ್ಕೆ ಸಹಮತ ಸೂಚಿಸಿ ದೇಶಾದ್ಯಂತ ಹೋರಾಟಗಳು ನಡೆದವು. ಆದರೆ ಕಿವುಡು, ಕುರುಡು ಸರ್ಕಾರ ಬಗ್ಗಲಿಲ್ಲ. ದಾಖಲೆಯ 16 ವರ್ಷಗಳ ಉಪವಾಸದ ನಂತರ ತಮ್ಮ ಹೋರಾಟದ ಮಾರ್ಗ ಬದಲಿಸಲು ಶರ್ಮಿಳಾ ನಿರ್ಧರಿಸಿದರು. ಅದರಂತೆ 2016ರ ಆಗಸ್ಟ್ 09 ರಂದು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿ ಚುನಾವಣಾ ರಾಜಕೀಯದ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದರು.

ಇಂದು ಅದೇ AFSPA ಕಾಯ್ದೆಗೆ 15 ಜನರು ಬಲಿಯಾಗಿದ್ದಾರೆ. ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ. ಈಶಾನ್ಯ ರಾಜ್ಯ ಸರ್ಕಾರಗಳಿಗೆ ಆ ಕಾಯ್ದೆಯ ಅಪಾಯಗಳು ಈಗ ಗೋಚರಿಸುತ್ತಿವೆ. ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರು AFSPA ವಿಸ್ತರಣೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಕೂಡ AFSPA ರದ್ದಾಗಬೇಕೆಂದು ಒತ್ತಾಯಿಸಿದ್ದಾರೆ. ವಿಶೇ‍ಷವೆಂದರೆ ಈ ಇಬ್ಬರೂ ಸಹ ಬಿಜೆಪಿ ಮೈತ್ರಿ ಸರ್ಕಾರದವರಾಗಿದ್ದಾರೆ.

ಈಗಲಾದರೂ ಈ ವಿವಾದಾತ್ಮಕ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡು ಈಶಾನ್ಯ ರಾಜ್ಯಗಳಲ್ಲಿ ಜನರು ನೆಮ್ಮದಿ ಶಾಂತಿಯಿಂದ ಬದುಕುವಂತೆ ಮಾಡಬೇಕಿದೆ. ಇಲ್ಲದಿದ್ದರೆ ಪ್ರಭುತ್ವ ಮತ್ತು ನಾಗರೀಕರ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ; ನಾಗಾಲ್ಯಾಂಡ್ ಹತ್ಯಾಕಾಂಡ: ವಿಷಾದ ವ್ಯಕ್ತಪಡಿಸಿದ ಅಮಿತ್‌ ಶಾ

Website | + posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial