ಫ್ಯಾಸಿಸ್ಟ್ ಧೋರಣೆಯ ಬಿಜೆಪಿಯನ್ನು ಸೋಲಿಸಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಐದು ತಿಂಗಳು ತುಂಬಿದೆ. ಹೊಸ ಸರ್ಕಾರವೊಂದಕ್ಕೆ ನೂರು ದಿನಗಳಾದಾಗ ಮಾಧ್ಯಮಗಳು ಇಷ್ಟು ಬೇಗ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎನ್ನುತ್ತಲೇ ಆ ಶತಕದ ಕುರಿತು ವಿಶ್ಲೇಷಣೆ ಮಾಡುತ್ತಾರೆ. ಎಲ್ಲವನ್ನೂ ಈಗಲೇ ನಿರ್ಧರಿಸಲು ಸಾಧ್ಯವಿಲ್ಲವೆನ್ನುತ್ತಲೇ ಸಾಧಕ, ಬಾಧಕಗಳ ಪಟ್ಟಿ ಮಾಡುತ್ತಾರೆ. ಈಗ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ 150 ದಿನಗಳಾಗಿರುವುದರಿಂದ ಅದನ್ನು ವಿಮರ್ಶೆಗೆ ಒಳಪಡಿಸಬಹುದೇ ಎನ್ನುವ ಪ್ರಶ್ನೆಯಿದ್ದರೂ ಸಹ, ಖಂಡಿತವಾಗಿ ಮಾಡಬಹುದು ಎನ್ನುವ ಉತ್ತರ ಸಕಾರಣವಾಗಿದೆ. ಕೊಡಬೇಕಾದ ವಿನಾಯಿತಿ ಕೊಟ್ಟು ಅದು ಸಾಗುತ್ತಿರುವ ಹಾದಿ, ಆರಿಸಿಕೊಂಡ ದಿಕ್ಕು, ಜಾರಿಗೊಳಿಸಲು ಮುಂದಾಗಿರುವ ನೀತಿನಿಯಮಗಳು, ಕಾರ್ಯ ಯೋಜನೆಗಳು ಎಲ್ಲವನ್ನೂ ವಿಶ್ಲೇಷಿಸಬಹುದಾಗಿದೆ. ಮುಖ್ಯವಾಗಿ ಐದು ತಿಂಗಳ ನಂತರ ಸರ್ಕಾರ ಸರಿಯಾದ ಟ್ರ್ಯಾಕ್‌ನಲ್ಲಿದೆಯೇ ಎನ್ನುವ ಚರ್ಚೆ ಮುಖ್ಯವಾಗುತ್ತದೆ. ಇದೆಲ್ಲವನ್ನೂ ಸಮೀಕ್ಷೆ ಮೂಲಕ ತಿಳಿದುಕೊಳ್ಳಬಹುದೆ ಎಂದು ಕೇಳಿದರೆ ಅದು ಯಾವ ಮಾಧ್ಯಮ, ಎನ್‌ಜಿಒ ಸಮೀಕ್ಷೆ ಮಾಡುತ್ತಿದೆ? ಎನ್ನುವ ಮರುಪ್ರಶ್ನೆ ಹುಟ್ಟುತ್ತದೆ. ನಂತರವಷ್ಟೇ ಉತ್ತರ ಕೊಡಬಹುದು. ಆದರೆ ಇಲ್ಲಿ ಎಲ್ಲವೂ ಲೊಳಲೊಟ್ಟೆ ಎನ್ನುವಂತಹ ವಾತಾವರಣ ಇರುವುದರಿಂದ ಯಾರನ್ನು ಯಾರು ಮೌಲ್ಯಮಾಪನ ಮಾಡಬೇಕು ಎನ್ನುವ ಯಕ್ಷಪ್ರಶ್ನೆಗೆ ಉತ್ತರವಿಲ್ಲ.
ಈ ಹಿನ್ನೆಲೆಯಲ್ಲಿ ಈಗಾಗಲೇ ಆಡಳಿತ ನಡೆಸಿ ಅನುಭವವಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿದೆಯೇ? ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ, ಸಾಮಾಜಿಕ ನ್ಯಾಯ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದಂತೆ ನೀತಿನಿಯಮಗಳನ್ನು ರೂಪಿಸಿದೆಯೇ? ಕಾನೂನು ಸುವ್ಯವಸ್ಥೆ ಹೇಗಿದೆ? ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಈಗ ಭ್ರಷ್ಟಾಚಾರ ಕಡಿಮೆಯಾಗಿದೆಯೇ? ಇತ್ಯಾದಿ ಪ್ರಶ್ನೆಗಳಿವೆ. ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳ ಮೂಲಕ ಇವಕ್ಕೆ ಉತ್ತರಗಳನ್ನು ಪಡೆದುಕೊಳ್ಳಬಹುದಾದರೂ ಸಹ ಕೆಲವನ್ನು ಹೊರತುಪಡಿಸಿ ಇಲ್ಲಿನ ಬಹುಪಾಲು ಮಾಧ್ಯಮಗಳು ಬೌದ್ಧಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಭ್ರಷ್ಟರಾಗಿದ್ದಾರೆ. ಸ್ವತಃ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲು ಅಗತ್ಯವಾದ ನೈತಿಕತೆ ಮತ್ತು ಮೌಲ್ಯಗಳನ್ನು ಕಳೆದುಕೊಂಡಿದೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಲು ಸಹ ಸಾಧ್ಯವಾಗದಷ್ಟು ದೈನೇಸಿಸ್ಥಿತಿಗೆ ತಲುಪಿದೆ. ಕಡೆಗೂ ಅಳಿದುಳಿದ ಪ್ರಜ್ಞಾವಂತರೇ ತಮ್ಮ ವಿವೇಚನೆಗೆ, ನ್ಯಾಯಪ್ರಜ್ಞೆಗೆ ದಕ್ಕಿದಷ್ಟು ಮಾತನಾಡಬೇಕಿದೆ.
ಗ್ಯಾರಂಟಿ ಭರವಸೆಗಳು: ಹಿಂದು, ಮುಂದು ಕೆಟ್ಟದಾದ, ಕೇಡಿತನದ, ದ್ವೇಷ ತುಂಬಿದ ಆಡಳಿತ ನೀಡಿದ ಬಿಜೆಪಿ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆಯ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳ ಪ್ರಚಾರದ, ದಲಿತರು ಹಾಗೂ ಮುಸ್ಲಿಂರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ ಮತ್ತು ಕಾಂಗ್ರೆಸ್ ಅಂತರ್ಜಾಲ ತಾಣವು ಈ ಬಾರಿ ಸಕ್ರಿಯವಾಗಿದ್ದ ಹತ್ತು ಹಲವು ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಅದಕ್ಕೆ ಬಹುಮತ ಬರಲು ಕಾರಣವಾಯಿತು. ಗ್ಯಾರಂಟಿಗಳ ಕುರಿತು ಹೇಳುವುದಾದರೆ ಬಡ ಕುಟುಂಬಗಳಿಗೆ ಕನಿಷ್ಟ ಸೌಲಭ್ಯಗಳನ್ನು ಒದಗಿಸುವ ಈ ಕಲ್ಯಾಣ ಯೋಜನೆಗಳು ಒಳಗೊಳ್ಳುವಿಕೆಯ ಭಾಗವಾಗಿದೆ. ಇದು ಪ್ರಗತಿಪರ ಆರ್ಥಿಕ ನೀತಿಯಾಗಿದೆ. ಶೇ.60 ಕುಟುಂಬಗಳಿಗೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುವ ಈ ಗ್ಯಾರಂಟಿಗಳು ಉಚಿತ ಸೌಭ್ಯಗಳಲ್ಲ; ಚುನಾಯಿತ ಸರ್ಕಾರದ ಹೊಣೆಗಾರಿಕೆಯಾಗಿದೆ.
ತನ್ನ ಐದು ಗ್ಯಾರಂಟಿಗಳ ಪೈಕಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ಕೊಡುವ ಗೃಹಲಕ್ಷ್ಮಿ (ಕೆಲವು ನಿಬಂಧನೆಗಳಿಗೆ ಒಳಪಡಿಸಿ), ಎಲ್ಲಾ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಮತ್ತು 200 ಯೂನಿಟ್‌ಗಿಂತಲೂ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆಯ ಗೃಹಜ್ಯೋತಿ ಈ ಮೂರನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ, ತನ್ನ ವಿರೋಧ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣದ ಕಾರಣದಿಂದ ನಾಲ್ಕನೇ ಗ್ಯಾರಂಟಿಯಾಗಿರುವ 10 ಕೆಜಿ ಉಚಿತ ಪಡಿತರ ಭರವಸೆಯ ಅನ್ನಭಾಗ್ಯವನ್ನು ಸಮಗ್ರವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಬದಲು ರೂ. 170 ಹಣವನ್ನು ಕುಟುಂಬದ ಪ್ರತಿ ಸದಸ್ಯರಿಗೆ ನೇರ ವರ್ಗಾವಣೆ ಮಾಡುವ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐದನೇ ಗ್ಯಾರಂಟಿಯಾದ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ಕೊಡುವ ಯುವನಿಧಿಯು 2023ರ ಶೈಕ್ಷಣಿಕ ವರ್ಷದ ನಂತರದ ಪದವೀಧರರಿಗೆ ಅನ್ವಯವಾಗುವುದರಿಂದ ಸದ್ಯಕ್ಕೆ ಇದರ ಕುರಿತು ಯಾರಿಗೂ ಆಸಕ್ತಿ ಇದ್ದಂತಿಲ್ಲ.
ಮೇಲಿನ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ 54,000 ಕೋಟಿ ಮೊತ್ತದ ಅಗತ್ಯವಿದೆ ಎಂದು ಸ್ವತಃ ಹಣಕಾಸು ಮಂತ್ರಿಗಳಾಗಿರುವ ಮು.ಮಂ. ಸಿದ್ದರಾಮಯ್ಯನವರು ಸದನದಲ್ಲಿ ಹೇಳಿದ್ದಾರೆ. ಸರ್ಕಾರಕ್ಕೆ 100 ದಿನಗಳು ತುಂಬಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ’ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. 1.36 ಕೋಟಿ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಮಾಡಿದ್ದೇವೆ, 1.41 ಕೋಟಿ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. 1.1 ಕೋಟಿ ಮಹಿಳೆಯರಿಗೆ ಮಾಸಿಕ 2000 ರೂ ದೊರಕಲಿದೆ’ ಎಂದು ವಿವರಿಸಿದ್ದರು. ಒಟ್ಟಾರೆ ಈ ಮೂರು ಯೋಜನೆಗಳ ಕುರಿತು ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ಮಿಕ್ಕ ಯಾರಿಗೂ ತಕರಾರು ಇದ್ದಂತಿರಲಿಲ್ಲ. ಅದರಲ್ಲಿಯೂ ಸಮೀಕ್ಷೆಗಳ ಪ್ರಕಾರ ಉಚಿತ ಬಸ್ ಪ್ರಯಾಣ ಸಂಪೂರ್ಣವಲ್ಲದಿದ್ದರೂ ಬಹುಪಾಲು ಮಹಿಳೆಯರಲ್ಲಿ ಮಂದಹಾಸ ಮೂಡಿಸಿದೆ. ಸಂದರ್ಶನಗಳಲ್ಲಿ ಉಳಿತಾಯವಾದ ಹಣದಿಂದ ತಾವು ಮೊದಲ ಬಾರಿಗೆ ಪೌಷ್ಠಿಕ ಆಹಾರವನ್ನು ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. ಇನ್ನೂ ಕೆಲವರು ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡುತ್ತಿದ್ದೇವೆ ಎಂದಿದ್ದಾರೆ. ಅಂದರೆ ಕೆಳ ಮಧ್ಯಮವರ್ಗದ ಕುಟುಂಬಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೊಳ್ಳುವ ಸಾಮರ್ಥ್ಯವೂ ಹೆಚ್ಚಾಗಿದೆ. ಇದು ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ ಇದನ್ನು ವಿಶ್ಲೇಷಿಸಲು ಇನ್ನೂ ಕಾಲಾವಕಾಶ ಬೇಕು. ಗೃಹಲಕ್ಷ್ಮಿ ಯೋಜನೆ ಕುರಿತಾಗಿಯೂ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದೆ. ಆದರೆ ಅನೇಕ ಕಡೆಗೆ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ದೂರುಗಳಿವೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಮಂಜಸ ಪ್ರತಿಕ್ರಿಯೆ ಕೊಡುತ್ತಿಲ್ಲ. ಇದು ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾದಂತಿದೆ. ಇದನ್ನು ಸರಿಪಡಿಸಿದರೆ ಇದೂ ಸಹ ಜನಪ್ರಿಯ ಯೋಜನೆಯಾಗುತ್ತದೆ. ಉಚಿತ ವಿದ್ಯುತ್ ಸೌಲಭ್ಯದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಟ್ಟಾರೆ ಮೂರು ಗ್ಯಾರಂಟಿಗಳ ಅನುಷ್ಠಾನದ ಕುರಿತು ಇರುವ ಅಸಮಾಧಾನವು ಆಡಳಿತಾತ್ಮಕವಾದ ಲೋಪದೋಷಗಳಿಗೆ ಸಂಬಂಧಿಸಿದೆ. ಇದಕ್ಕೆ ಸರ್ಕಾರ ಆದಷ್ಟು ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದೇಹೋದರೆ ಈ ಭ್ರಷ್ಟ ಕಾರ್ಯಾಂಗ ವ್ಯವಸ್ಥೆಯು ಈ ಗ್ಯಾರಂಟಿ ಯೋಜನೆಗಳ ಸದುದ್ದೇಶವನ್ನೇ ಹಾಳು ಮಾಡುವುದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯ ಸರ್ಕಾರವು ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ.
ನಾಲ್ಕನೇ ಗ್ಯಾರಂಟಿಯಾದ ಅನ್ನಭಾಗ್ಯದ ಜಾರಿಯಲ್ಲಿ ಕೇಂದ್ರದಿಂದ ಬರಬೇಕಾದ 5 ಕೆಜಿ ಅಕ್ಕಿ ದೊರಕುತ್ತಿಲ್ಲ ಎನ್ನುವ ಕಾರಣದಿಂದ ಬದಲಿಯಾಗಿ ಕೊಡುತ್ತಿರುವ ನಗದು ವರ್ಗಾವಣೆ ತಾತ್ಕಾಲಿಕ ಪರಿಹಾರವಾಗಿದೆ. ಕೃಷಿ ಪರಿಣಿತರು ಮತ್ತು ಇತರರು ಮಿಕ್ಕ ಐದು ಕೆಜಿಗೆ ಕೇಂದ್ರದಿಂದ ಅಕ್ಕಿಗಾಗಿ ಕಾಯುವುದರ ಬದಲು ಆಯಾ ಜಿಲ್ಲೆಗಳ ಅಗತ್ಯಕ್ಕೆ ತಕ್ಕಂತೆ ರಾಗಿ, ಗೋಧಿ, ಜೋಳ ವಿತರಿಸುವಂತೆ ಸಲಹೆ ಕೊಟ್ಟಿದ್ದಾರೆ. ಈ ಕುರಿತು ಮುಂಗಡವಾಗಿ ಸರ್ಕಾರ ಪ್ರಕಟಣೆ ಹೊರಡಿಸಬೇಕು, ರೈತರಿಗೆ ಎಷ್ಟು ಟನ್ ರಾಗಿ, ಭತ್ತ ಬೆಳೆಯಬೇಕು ಎಂದು ಕೃಷಿ ಇಲಾಖೆ ಮುಂಚಿತವಾಗಿ ತಿಳಿಸಬೇಕು, ಅದಕ್ಕೆ ಪೂರಕವಾಗಿ ರೈತರು ಹೆಚ್ಚುವರಿ ರಾಗಿ, ಭತ್ತ ಬೆಳೆಯುತ್ತಾರೆ. ಈ ಫಸಲನ್ನು ವಿಕೇಂದ್ರಿತವಾಗಿ ಆಯಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ವಿತರಿಸುವಂತಹ ಸೂಕ್ತ ವ್ಯವಸ್ಥೆ ಸರ್ಕಾರ ಕಲ್ಪಿಸಲಿ ಎನ್ನುವ ಸ್ಥೂಲ ಕಾರ್ಯಯೋಜನೆಯನ್ನು ಸಹ ವಿವರಿಸಿದ್ದರು. ಇದರಿಂದ ಪರ್ಯಾಯ ಆರ್ಥಿಕತೆ ರೂಪುಗೊಳ್ಳುತ್ತದೆ ಎನ್ನುವ ಮಾತಿನಲ್ಲಿಯೂ ಅರ್ಥವಿದೆ. ಇದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲದೇ ಹೋದರೂ, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ದಕ್ಷತೆಯಿಂದ ಕೆಲಸ ಮಾಡಿದರೆ ಹಾಗೂ ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವ ಕೃಷಿ ಇಲಾಖೆ ತನ್ನ ಜಡತ್ವದಿಂದ ಹೊರಬಂದು ಸಕ್ರಿಯ ಬದ್ಧತೆಯಿಂದ ತನ್ನ ಜವಾಬ್ದಾರಿ ನಿಭಾಯಿಸಿದರೆ ಈ ನೀಲನಕ್ಷೆಯನ್ನು ಕಾರ್ಯಗತಗೊಳಿಸುವುದು ಕಷ್ಟವಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದಕ್ಷತೆ ಕುರಿತು ಅಪಥ್ಯವಿರುವ ಇತಿಹಾಸವಿರುವುದರಿಂದ ಮತ್ತು ಭ್ರಷ್ಟಾಚಾರದ ಕುರಿತು ತಿರಸ್ಕಾರವೇನೂ ಇಲ್ಲದೆ ಇರುವುದರಿಂದ, ಸರ್ಕಾರಕ್ಕೆ ಇದರ ಕುರಿತು ಹೆಚ್ಚಿನ ಆಸಕ್ತಿ ಇದ್ದಂತಿಲ್ಲ. ಈ ನಾಲ್ಕನೇ ಗ್ಯಾರಂಟಿಯ ಅನುಷ್ಠಾನದ ಈ ಮಿತಿಯು ಮುಂದಿನ ದಿನಗಳಲ್ಲಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಆದರೆ ಸಚಿವರು ಮತ್ತು ಕಾಂಗ್ರೆಸ್ ಪಕ್ಷ ಇದರ ಕುರಿತು ಯಾವುದೇ ಎಚ್ಚರಿಕೆ ವಹಿಸಿದಂತಿಲ್ಲ. ಎಲ್ಲರೂ ದೇಶಾವರಿ ಮಾತುಗಳನ್ನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.

ಇದು ಗ್ಯಾರಂಟಿಗಳ ಅನುಷ್ಠಾನದ ಕುರಿತಾಗಿದ್ದರೆ ಇದಕ್ಕಾಗಿ ತಗಲುವ ವಾರ್ಷಿಕ 54,000 ವೆಚ್ಚ ಕೋಟಿ ಮೊತ್ತದ ಸಂಗ್ರಹದ ಕುರಿತು ಇನ್ನೂ ಸ್ಪಷ್ಟ ಚಿತ್ರಣ ದೊರಕಿಲ್ಲ. ಎಲ್ಲವೂ ಮುಸುಕುಮುಸುಕಾಗಿದೆ. ಸಿದ್ದರಾಮಯ್ಯನವರು ಮಂಡಿಸಿದ 3.27 ಲಕ್ಷ ಕೋಟಿ ವೆಚ್ಚದ ಬಜೆಟ್‌ನಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾದ ಹಣಕಾಸಿನ ಸಂಚಯದ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ. ಆದರೆ ಅವರು ಅಬಕಾರಿ ತೆರಿಗೆ ಮತ್ತು ಇತರೆ ನೇರ ಮತ್ತು ಪರೋಕ್ಷ ತೆರಿಗೆಯನ್ನು ಅವಲಂಬಿಸಿದ್ದಾರೆ. ಆರ್ಥಿಕತಜ್ಞರ ಅನುಸಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ವಾರ್ಷಿಕವಾಗಿ 65,082 ಕೋಟಿ ವೆಚ್ಚವಾಗುತ್ತದೆ. ಗೃಹಲಕ್ಷ್ಮಿಗೆ 42,960 ಕೋಟಿ, ಗೃಹಜ್ಯೋತಿಗೆ 15,498 ಕೋಟಿ, ಅನ್ನಭಾಗ್ಯಕ್ಕೆ 5,728 ಕೋಟಿ ಮತ್ತು ಯುವನಿಧಿಗೆ 896 ಕೋಟಿ ವಾರ್ಷಿಕ ವೆಚ್ಚ ತಗಲುತ್ತದೆ. ಅಂದರೆ ರಾಜ್ಯ ಬಜೆಟ್‌ನ ಶೇ.20ರಷ್ಟು ಮೊತ್ತವು ಗ್ಯಾರಂಟಿಗಳ ಅನುಷ್ಠಾನಕ್ಕೆ ವೆಚ್ಚವಾಗುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯದ ಜಿಎಸ್‌ಡಿಪಿಯು 23.33 ಲಕ್ಷ ಕೋಟಿಯಿದೆ. ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.5.38 ರಷ್ಟಿದೆ (60,531 ಕೋಟಿ). ಆದರೆ ಕರ್ನಾಟಕದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002ರ ಪ್ರಕಾರ ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಮಿತಿಗೊಳಿಸಲಾಗಿದೆ. ಹೆಚ್ಚುವರಿ ಶೇ.2.38ರಷ್ಟು ವಿತ್ತೀಯ ಕೊರತೆಯ ಜೊತೆಗೆ ಈ ಗ್ಯಾರಂಟಿಗಳ ವೆಚ್ಚವೂ ಸೇರಿಕೊಳ್ಳುವುದರಿಂದ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗುತ್ತದೆ ಎಂದು ಆರ್ಥಿಕತಜ್ಞರು ಹೇಳುತ್ತಾರೆ. ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಬಿಜೆಪಿ ಸರ್ಕಾರವು ಕೃಷಿ, ಸಹಕಾರ, ಗ್ರಾಮೀಣಾಭಿವೃದ್ಧಿ (3,255 ಕೋಟಿ), ವಸತಿ (1000 ಕೋಟಿ), ಆರೋಗ್ಯ (881 ಕೋಟಿ), ಶಿಕ್ಷಣ (1500 ಕೋಟಿ), ನಗರಾಭಿವೃದ್ಧಿ (604 ಕೋಟಿ), ಮಹಿಳಾ ಮತ್ತು ಮಕ್ಕಳ ಕಲ್ಯಾಣ (765 ಕೋಟಿ), ಕಂದಾಯ (402 ಕೋಟಿ), ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ (284 ಕೋಟಿ) ಗೃಹ, ಸಣ್ಣ ನೀರಾವರಿ ಒಳಗೊಂಡಂತೆ 23 ಇಲಾಖೆಗಳ 61 ಯೋಜನೆಗಳಿಗೆ 2023-24 ಸಾಲಿನ ಕರ್ನಾಟಕದ ಪಾಲಿನ ಅನುದಾನ ಬಿಡುಗಡೆ ಮಾಡಲಿಲ್ಲ. ವಿರೋಧ ಪಕ್ಷಗಳ ವಿರುದ್ಧ ದ್ವೇಷದ ರಾಜಕಾರಣ ಮಾಡುವ ಮೋದಿ ನೇತೃತ್ವದ ಸರ್ಕಾರವು ಮುಂದೆಯೂ ಬಿಡುಗಡೆ ಮಾಡುವ ಸಾಧ್ಯತೆಗಳು ಅತಿ ಕಡಿಮೆ. ಇಂತಹ ಕಠಿಣ ಸವಾಲನ್ನು ಸಿದ್ದರಾಮಯ್ಯ ಹೇಗೆ ಎದುರಿಸುತ್ತಾರೆ ಎನ್ನುವುದು ಮುಖ್ಯ ಪ್ರಶ್ನೆ. ತಮ್ಮ ಪಕ್ಷದೊಳಗೆ ಸೂಕ್ತ ಬೆಂಬಲವಿಲ್ಲದೆ ಏಕಾಂಗಿಯಾಗಿ ಕೇಂದ್ರದ ವಿರುದ್ಧ ರಾಜ್ಯದ ಪಾಲಿನ ಅನುದಾನಕ್ಕಾಗಿ ಹೋರಾಡುವುದು ಕಷ್ಟವಿದೆ. ಆದರೆ ಪಕ್ಷದೊಳಗೆ ಆಶಿಸ್ತು ತಾಂಡವವಾಡುತ್ತಿದೆ. ಕಡೆಗೂ ಸಿದ್ಧರಾಮಯ್ಯನವರು ತ.ನಾಡು, ಕೇರಳ ಒಳಗೊಂಡಂತೆ ಮಿಕ್ಕ ವಿರೋಧ ಪಕ್ಷದ ಸರಕಾರಗಳೊಂದಿಗೆ ಒಗ್ಗಟ್ಟಾಗಿ ಸಂಘಟಿತರಾಗುವುದೊಂದೇ ಉಳಿದಿರುವ ದಾರಿ. ಆದರೆ ಇದು ದೀರ್ಘಕಾಲೀನ ಪ್ರಕ್ರಿಯೆ. ಮುಂದೇನು ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.
ಇದನ್ನೂ ಓದಿ: ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗಲ್ಲ: ಕೆ.ಎಸ್ ಈಶ್ವರಪ್ಪ
ಆದರೆ ಈಗಾಗಲೇ ದಾಖಲೆ 14 ಬಜೆಟ್‌ಗಳನ್ನು ಮಂಡಿಸಿರುವ, ಪರಿಣಿತ ಆರ್ಥಿಕತಜ್ಞರಾಗಿರುವ ಮು.ಮಂ. ಸಿದ್ದರಾಮಯ್ಯನವರು ವಿತ್ತೀಯ ಕೊರತೆಯನ್ನು ತಗ್ಗಿಸಿ, ಗ್ಯಾರಂಟಿಗಳ ಅನುಷ್ಠಾನವು ರಾಜ್ಯ ಬೊಕ್ಕಸಕ್ಕೆ ಹೊರೆಯಾಗದಂತೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಾರೆ. ಇದರ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಾಗದಂತೆ ನಿಭಾಯಿಸುವ ಸಾಮರ್ಥ್ಯ ಸಿದ್ದರಾಮಯ್ಯನವರಿಗಿದೆ ಎನ್ನುವ ವಿಶ್ವಾಸವೂ ಪ್ರಜ್ಞಾವಂತರಿಗಿದೆ. ಆದರೆ ಇದು ತಂತಿಯ ಮೇಲಿನ ನಡಿಗೆ ಎನ್ನುವುದು ಕೂಡ ನಿಜ. ಒಂದು ವರ್ಷದ ನಂತರವಷ್ಟೇ ಪೂರ್ಣ ಚಿತ್ರಣ ದೊರಕುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ಶಾಸಕರು ಈ ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ, ಅಗತ್ಯ ಅನುದಾನ ದೊರಕುತ್ತಿಲ್ಲ ಎಂದು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹೊಸ ಯೋಜನೆಗಳ ಘೋಷಣೆಯಾಗುತ್ತಿಲ್ಲ, ಉದ್ಯಮ ನೀತಿ, ಕೃಷಿ ನೀತಿಯ ಕುರಿತು ಸ್ಪಷ್ಟ ಚಿತ್ರಣಗಳಿಲ್ಲ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.4 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ ಎನ್ನುವುದಂತೂ ಸತ್ಯ. ಮೇಲ್ನೊಟಕ್ಕೆ ಕಾಣುವಂತೆ ಸರ್ಕಾರ ಗೊಂದಲದಲ್ಲಿದೆ. ಒಂದೆಡೆ ಉಪ ಮು.ಮಂ. ಡಿ.ಕೆ.ಶಿವಕುಮಾರ್ ಅವರು ತಮ್ಮ ನೀರಾವರಿ ಇಲಾಖೆಯ ಜವಾಬ್ದಾರಿ ಕುರಿತು ನಿರ್ಲಕ್ಷ್ಯ ವಹಿಸಿ ಸಂಪೂರ್ಣವಾಗಿ ಬೆಂಗಳೂರು ಅಭಿವೃದ್ಧಿ ಮತ್ತು ಬಿಬಿಎಂಪಿಯ ಯೋಜನೆಗಳಲ್ಲಿ ಮಗ್ನರಾಗಿರುವುದು ಕುತೂಹಲಕಾರಿಯಾಗಿದೆ. ಇಲ್ಲಿ ಮು.ಮಂಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ದೂರಿನಲ್ಲಿ ಹುರುಳಿದೆ. ಇದು ಈಗಿರುವ ಇಬ್ಬರ ನಡುವಿನ ಬಿರುಕನ್ನು ಮತ್ತಷ್ಟು ಹಿಗ್ಗಿಸುತ್ತಿದೆ ಎನ್ನುವುದು ಕೇವಲ ಗಾಸಿಪ್ ಅಂತೂ ಅಲ್ಲ.
ಸೆಪ್ಟೆಂಬರ್ 1ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಧ್ಯಮ ಮತ್ತು ಭಾರಿ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್‌ರು ’ಕಳೆದ ನೂರು ದಿನಗಳಲ್ಲಿ 60,000 ಕೋಟಿ ಮೊತ್ತದ ಹೂಡಿಕೆಗೆ ಎಂಓಯು ಸಹಿಯಾಗಿದೆ. ಇದು 30,000 ಉದ್ಯೋಗ ಸೃಷ್ಟಿಸುತ್ತದೆ. 1 ಲಕ್ಷ ಕೋಟಿ ಬಂಡವಾಳ ಹೂಡಿಕೆಗಾಗಿ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದ್ದಾರೆ. ಈ ತರಹದ ಭರವಸೆಗಳು ಕೇವಲ ಕಾಗದದ ಮೇಲೆ ಮಾತ್ರ ಎಂದು ಎಲ್ಲರಿಗೂ ಗೊತ್ತು. ಕಳೆದ 30 ವರ್ಷಗಳ ಇತಿಹಾಸ ಕೆದಕಿದರೆ ಎಷ್ಟು ಬಂಡವಾಳ ಹೂಡಿಕೆ ಕುರಿತು ಭರವಸೆ ನೀಡಲಾಗಿತ್ತು, ಪ್ರಾಯೋಗಿಕವಾಗಿ ಎಷ್ಟು ಹೂಡಿಕೆಯಾಗಿದೆ ಎಂದು ಗೊತ್ತಾಗುತ್ತದೆ. ಇಂತಹ ನೀರ ಮೇಲಿನ ಗುಳ್ಳೆಯನ್ನು ನಂಬಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಇದು ನವ ಉದಾರೀಕರಣದ ಮಾದರಿಯ ಅಭಿವೃದ್ಧಿಯಾಗಿರುವುದರಿಂದ ಇಲ್ಲಿ ಆರ್ಥಿಕ ಸಮಾನತೆ ಎನ್ನುವುದು ಕನಸಿನ ಮಾತಾಗಿದೆ. ನವ ಉದಾರೀಕರಣದ ವ್ಯವಸ್ಥೆಯೊಳಗೆ ಕಾಂಗ್ರೆಸ್‌ನ ಈ ಗ್ಯಾರಂಟಿ ಯೋಜನೆಗಳು ರೂಪಿತವಾಗಿವೆ. ಹೀಗಾಗಿ ಇದು ದುರ್ಬಲ, ವಂಚಿತ ಸಮುದಾಯಗಳ ಬದುಕಿನಲ್ಲಿ ಸಮಗ್ರ ಬದಲಾವಣೆ ತರಲು ಸಾಧ್ಯವಿಲ್ಲ. ಸದ್ಯದ ಹಸಿವನ್ನು ನೀಗಿಸುತ್ತವೆ. ಇದರಾಚೆಗೆ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮುಂತಾದ ವಲಯಗಳಲ್ಲಿ ಹೆಚ್ಚಿನ ಮಟ್ಟದ ಸಾರ್ವಜನಿಕ ಬಂಡವಾಳ ಹೂಡಿಕೆಯ ಅಗತ್ಯವಿದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳಾದ ಈ ವಲಯಗಳ ಸಬಲೀಕರಣದ ಅವಶ್ಯಕತೆ ಇದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ, ಸಾರ್ವಜನಿಕ ಸಂಸ್ಥೆಗಳ ಪರವಾದ ನೈಜ ಕಾಳಜಿ ಅಗತ್ಯವಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಇದರ ಕುರಿತಾದ ಯಾವುದೇ ಸ್ಪಂದನೆ ಅಥವಾ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ಇವರು ಕೇವಲ ಗ್ಯಾರಂಟಿಗಳನ್ನು ಮಾತ್ರ ನೆಚ್ಚಿಕೊಂಡು ಮುಂದಿನ ಐದು ವರ್ಷಗಳನ್ನು ತಳ್ಳುವ ಹವಣಿಕೆಯಲ್ಲಿರುವಂತಿದೆ. ಈ ಧೋರಣೆಯು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯಾವುದೇ ಸಹಕಾರ ನೀಡುವುದಿಲ್ಲ. ಬದಲಿಗೆ ಮತ್ತಷ್ಟು ಹಿನ್ನಡೆಗೆ ಕಾರಣವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ಅತಿರಥಮಹಾರಥರಿಗೆ ಇದರ ಕುರಿತಾಗಿ ಸಣ್ಣಮಟ್ಟದ ಕಾಳಜಿಯೂ ಇದ್ದಂತಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಅಧಿಕಾರದ ಹಿಂದೆ ಅಲೆಯುತ್ತಿದ್ದಾರೆ. ಒಳಜಗಳದಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ನ್ಯಾಯ
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದಲಿತರ ಪರವಾಗಿ ಅನೇಕ ಯೋಜನೆಗಳ ಕುರಿತು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದನಂತರ ಒಳಮೀಸಲಾತಿ ಜಾರಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಒಳಗೊಂಡಂತೆ ಕಾಂತರಾಜ್ ಸಮಿತಿ ನಡೆಸಿದ ಜಾತಿ ಜನಗಣತಿಯ ಮಂಡನೆ ಮತ್ತು ಅನುಮೋದನೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸಮರ್ಪಕವಾದ ಅನುಷ್ಠಾನ ಮುಂತಾದ ವಿಚಾರಗಳ ಕುರಿತಾಗಿ ಪ್ರಚಾರ ಮಾಡಿದ್ದರು. ಈಗ ಅಧಿಕಾರಕ್ಕೆ ಬಂದನಂತರ ತನ್ನ ಭರವಸೆಗಳನ್ನು ಈಡೇರಿಸಲು ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎನ್ನುವ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆ ದೊರಕುತ್ತದೆ.

ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮೀಸಲಾತಿ ಚೌಕಟ್ಟನ್ನು ಬದಲಿಸಿ ಪ.ಜಾತಿ ಸಮುದಾಯಕ್ಕೆ ಶೇ.2 ಮತ್ತು ಪ.ಪಂಗಡಕ್ಕೆ ಶೇ.4ರಷ್ಟು ಹೆಚ್ಚಳ ಮಾಡಿದ್ದು, ಪ್ರವರ್ಗಗಳನ್ನು ವಿಭಜಿಸಿದ್ದು, ಮುಸ್ಲಿಂರಿಗೆ ಪ್ರವರ್ಗ ಬಿ ಅಡಿಯಲ್ಲಿ ನೀಡಲಾಗಿದ್ದ ಶೇ.4 ಪ್ರಮಾಣದ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಪ್ರಬಲ ಲಿಂಗಾಯತರು, ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದು, ಬ್ರಾಹ್ಮಣರು, ಬ್ರಾಹ್ಮಣೇತರ ಅನುಕೂಲವಂತ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಜಾತಿ 10% ಎನ್ನುವ ಸಾಮಾಜಿಕ ಅನ್ಯಾಯವನ್ನು ಅನುಷ್ಠಾನಗೊಳಿಸಿದ್ದು- ಇನ್ನೂ ಮುಂತಾದ ನೀತಿಗಳ ಕುರಿತು ವಂಚಿತ ಸಮುದಾಯಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮರುಪರಿಶೀಲಿಸಲಾಗುವುದು ಎಂದು ಚುನಾವಣೆಯ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಈ ಕುರಿತು ಉಸಿರು ಬಿಡುತ್ತಿಲ್ಲ. ಹಾಗಿದ್ದಲ್ಲಿ ವೈಜ್ಞಾನಿಕವಾದ ಮೀಸಲಾತಿ ಹೆಚ್ಚಳದ ಕತೆ ಏನು? ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.
ಎಚ್.ಸಿ.ಮಹದೇವಪ್ಪನವರು ಸಚಿವರಾಗಿರುವ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಭೂ ಒಡೆತನದ ಯೋಜನೆ, ಗಂಗಾ ಕಲ್ಯಾಣ ಯೋಜನೆಗಳಿಗೆ ಸಹಾಯಧನ ಮತ್ತು ಸಾಲ ಮಂಜೂರಾತಿಗೆ ಪ.ಜಾತಿ/ಪ.ಪಂಗಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಸ್ವಾಗತಾರ್ಹ ಕ್ರಮ. ದಲಿತರ ಉದ್ಯಮಶೀಲತೆಗೆ, ಆರ್ಥಿಕ ಸಬಲೀಕರಣಕ್ಕೆ ಇದು ಅಗತ್ಯವಾಗಿತ್ತು. ಈ ಯೋಜನೆಗಳು ಮುಂಚಿನಿಂದಲೂ ಇಲಾಖೆಯ ಪಟ್ಟಿಯಲ್ಲಿದ್ದರೂ ಕಾರ್ಯಾಂಗದ ಭ್ರಷ್ಟತೆ ಮತ್ತು ಬದ್ಧತೆಯ ಹಾಗೂ ಸಂಬಂಧಪಟ್ಟ ಸಚಿವರ ಇಚ್ಛಾಶಕ್ತಿಯ ಕೊರತೆ, ಅನುದಾನ ಹಂಚಿಕೆಯಲ್ಲಿ ಭ್ರಷ್ಟತೆ ಹಾಗು ಅದಕ್ಷತೆ ಮುಂತಾದ ಕಾರಣಗಳಿಂದ ನಿಜಕ್ಕೂ ಅರ್ಹರಾದವರಿಗೆ ದೊರಕುತ್ತಿರಲಿಲ್ಲ. ಸಚಿವ ಮಹದೇವಪ್ಪ ಅವರು ಈ ಬಾರಿ ಇದೆಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆ. ಕಾದುನೋಡಬೇಕು. ಆದರೆ ಸ್ವಯಂಉದ್ಯೋಗಕ್ಕಾಗಿ ಘಟಕದ ವೆಚ್ಚವನ್ನೂ ಒಳಗೊಂಡಂತೆ ಸಹಾಯಧನ ಮತ್ತು ಸಾಲದ ಮೊತ್ತವನ್ನು ಕನಿಷ್ಠ 1 ಲಕ್ಷದಿಂದ ಗರಿಷ್ಠ 2.5 ಲಕ್ಷ ನಿಗದಿಪಡಿಸಿದ್ದಾರೆ. ಆದರೆ ಈ ಮೊತ್ತವು ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಕಾಗುವುದಿಲ್ಲ. ಯಾವುದೇ ನೆರವನ್ನು ಕೊಡುವುದಿಲ್ಲ. ಇಂದು ಸಣ್ಣ ಮತ್ತು ಅತಿಸಣ್ಣ ಉದ್ಯೋಗ ಪ್ರಾರಂಭಿಸಲು ಕನಿಷ್ಠ 25 ಲಕ್ಷದ ಆರ್ಥಿಕ ನೆರವಿನ ಅಗತ್ಯವಿದೆ. ಅದರೆ ಇಲಾಖೆಯ ಅಧಿಕಾರಿಗಳು ಇದನ್ನು ಕಡೆಗಣಿಸಿರುವುದು ಇಡೀ ಯೋಜನೆಗಳ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಇದು ಸಚಿವರ ಗಮನಕ್ಕೆ ಬಂದಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ದೊರಕಿಲ್ಲ. ಮಹದೇವಪ್ಪನವರು ಕೂಡಲೇ ಕ್ರಮ ತೆಗೆದುಕೊಂಡು ಸಹಾಯಧನ ಮತ್ತು ಸಾಲದ ಮೊತ್ತ ಹೆಚ್ಚಿಸಬೇಕು, ಅನುಷ್ಠಾನದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಹ ಭ್ರಷ್ಟಾಚಾರರಹಿತ ವ್ಯವಸ್ಥೆ ರೂಪಿಸಬೇಕು. ಇದೆಲ್ಲವು ಸಾಧ್ಯವಾದರೆ ಐದು ವರ್ಷಗಳ ನಂತರ ಒಂದು ಕ್ರಾಂತಿಯೇ ಆಗಿಬಿಡುವ ದಿನಗಳಿಗೆ ಸಾಕ್ಷಿಯಾಗುತ್ತೇವೆ. ಆದರೆ ಎಲ್ಲವೂ ಸಚಿವರು ಮತ್ತು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಸಮರ್ಪಕ ಅನುಷ್ಠಾನ, ನ್ಯಾಯವಾದ ಹಂಚಿಕೆ ಮತ್ತು ಅನುದಾನವು ದುರ್ಬಳಕೆಯಾಗದಂತೆ ಕಡ್ಡಾಯವಾಗಿ ದಲಿತರ ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದವುಗಳಿಗೆ ಮಾತ್ರ ಬಳಸುವುದರ ಕುರಿತು ಈಗಿನ ಸರ್ಕಾರದ ಮೇಲೆ ಭರವಸೆಗಳಿದ್ದವು. ಯಾಕೆಂದರೆ ಇವರು ಆ ವಚನವನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಐದು ತಿಂಗಳು ಕಳೆದರೂ ಯಾವುದೇ ಆಶಾದಾಯಕ ಬೆಳವಣಿಗೆ ಕಾಣುತ್ತಿಲ್ಲ. ಬದಲಿಗೆ ಈ ಯೋಜನೆಯ 11,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆಯಾಗಿದೆ ಎನ್ನುವ ವರದಿ ಪ್ರಕಟವಾಗಿದೆ. ಇದಕ್ಕೆ ಸಚಿವರು ಹೇಳುವಂತೆ ಈ ಮೊತ್ತವನ್ನು ದಲಿತರಿಗೆ ಮಾತ್ರ ವಿನಿಯೋಗಿಸಲಾಗಿದೆ ಎನ್ನುವ ಸಮರ್ಥನೆ ದುರ್ಬಲವಾಗಿದೆ. ಈ 11,000 ಕೋಟಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೊತ್ತವನ್ನು ಗ್ಯಾರಂಟಿ ಯೋಜನೆಯ ಅಡಿಯಲ್ಲಿ ದಲಿತರಿಗೆ ಮಾತ್ರ ಹಂಚಿಕೆ ಮಾಡುವಂತಹ ವ್ಯವಸ್ಥೆಯೇ ಇಲ್ಲದಿರುವಾಗ ಅದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ. ಇದು ಅನ್ಯಾಯದ ನಿರ್ಧಾರವಾಗಿದೆ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.
ಕಾಂಗ್ರೆಸ್ ಭಾಗವಾಗಿರುವ ಬಿಹಾರ್‌ನ ಮೈತ್ರಿ ಸರ್ಕಾರವು ಜಾತಿ ಜನಗಣತಿಯನ್ನು ಪ್ರಕಟಿಸಿದ ನಂತರ ಇಲ್ಲಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಒಳಗೊಂಡ ಜಾತಿ ಜನಗಣತಿಗಾಗಿ 2015ರಲ್ಲಿ ಆಗಿನ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದ ಸಮಿತಿ ರಚಿಸಲಾಯಿತು. ಇದರ ಕುರಿತು ದೇಶದಲ್ಲಿಯೇ ಮೊಟ್ಟಮೊದಲ ಸಮಿತಿ ಎನ್ನುವ ಹೆಗ್ಗಳಿಕೆಯೂ ಕಾಂಗ್ರೆಸ್ ಹೆಗಲಿಗೇರಿತ್ತು. ಆದರೆ ನಂತರ ಸರ್ಕಾರ ಬದಲಾವಣೆಯಾಗಿ ಆ ವರದಿಯೂ ಸಲ್ಲಿಕೆಯಾಗದೆ ನೆನಗುದಿಯಲ್ಲಿತ್ತು. ಈಗ ಮರಳಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಾಲಿ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಗಡೆಯವರು ಜಾತಿ ಜನಗಣತಿಯ ವರದಿಯನ್ನು ನವೆಂಬರ್ 24ರಂದು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ. ನಂತರ ಚೆಂಡು ಸರ್ಕಾರದ ಅಂಗಳದಲ್ಲಿ ಬೀಳುತ್ತದೆ. ಅತ್ತ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಜಾತಿಜನಗಣತಿ ಪರವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಐದು ರಾಜ್ಯಗಳ ಚುನಾವಣೆಯಲ್ಲಿ ಇದರ ಭರವಸೆ ಕೊಡುತ್ತಿದ್ದಾರೆ. ಆದರೆ ಇಲ್ಲಿ ಈಗಾಗಲೇ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಜಾತಿ ಜನಗಣತಿ ವರದಿಯನ್ನು ವಿರೋಧಿಸುತ್ತಿವೆ. ಸಚಿವ ಸಂಪುಟದಲ್ಲಿರುವ ಈ ಜಾತಿಗಳ ಸಚಿವರು ಮತಬ್ಯಾಂಕ್ ರಾಜಕಾರಣಕ್ಕಾಗಿ ತಮ್ಮ ಸಮುದಾಯದ ಜೊತೆಗೆ ದನಿಗೂಡಿಸುತ್ತಿದ್ದಾರೆ. ಈ ಬಲಾಢ್ಯ ಜಾತಿಗಳನ್ನು ಎದುರಿಸಲಾಗದೆ ಸಿದ್ದರಾಮಯ್ಯನವರು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೂ ಜಾತಿ ಜನಗಣತಿಯ ಪರವಾಗಿರುವ ಮು.ಮಂ.ಗಳು ಮೇಲ್ಜಾತಿ, ಮಧ್ಯ ಜಾತಿಗಳ ಠೇಂಕಾರ, ದರ್ಪದ ಎದುರು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ತಡ ಮಾಡಿದಷ್ಟು ಅಹಿಂದ ಪರವಾದ ಸರ್ಕಾರ ಎನ್ನುವ ಇಮೇಜ್‌ಗೆ ಧಕ್ಕೆಯಾಗುತ್ತದೆ. ಇದೆಲ್ಲದರಾಚೆಗೆ, ತಾತ್ವಿಕವಾಗಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವವರು ಈ ಕಾಲದ ಅಗತ್ಯವಾದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಒಳಗೊಂಡ ಜಾತಿ ಜನಗಣತಿಯನ್ನು ಕಡ್ಡಾಯವಾಗಿ ಬೆಂಬಲಿಸಬೇಕಾಗುತ್ತದೆ. ಮುಂದಿನ ದಿನಗಳು ಸಿದ್ದರಾಮಯ್ಯನವರ ಪಾಲಿಗೆ ಪರೀಕ್ಷೆಯ ಕಾಲಘಟ್ಟವಾಗಿದೆ.
ಮತ್ತೊಂದೆಡೆ ಈ ಸರ್ಕಾರವು ಒಳ ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಎಡವುತ್ತಿದೆ. ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಒಳ ವರ್ಗೀಕರಣವನ್ನು ಜಾರಿಗೊಳಿಸುವ ಭರವಸೆ ನೀಡಿ ಐದು ತಿಂಗಳು ಕಳೆದರೂ ಒಳ ಮೀಸಲಾತಿಯ ಕುರಿತು ಮಾತನಾಡದಿರುವುದು, ಸದಾಶಿವ ಅಯೋಗದ ವರದಿಯನ್ನು ಸದನದಲ್ಲಿ ಮಂಡಿಸಲು ಸಂಪುಟದ ಒಪ್ಪಿಗೆ ಪಡೆಯದಿರುವುದು ಎಲ್ಲವೂ ಆಪೇಕ್ಷಣೀಯ ಬೆಳವಣಿಗೆಗಳಲ್ಲ. ಭಾರತದಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಾಜದಲ್ಲಿ ಒಳಮೀಸಲಾತಿ ಒಂದೇ ದಲಿತರ ಪ್ರಾತಿನಿಧ್ಯಕ್ಕೆ ಸೂಕ್ತ ನ್ಯಾಯ ಒದಗಿಸಬಲ್ಲದು. ಇದು ಸಿದ್ದರಾಮಯ್ಯ ಸರ್ಕಾರದ ನೈತಿಕತೆಯ ಪ್ರಶ್ನೆಯಾಗಿದೆ. ಮತ್ತೊಮ್ಮೆ ಹಿಂಜರಿದರೆ ಇವರು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಾರೆ.
ಮಾನವ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ
ಮಾನವ ಹಕ್ಕುಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಮಾರ್ಗವನ್ನು ಅನುಸರಿಸುತ್ತಿದೆ. ದುರ್ಬಲರ ಮೇಲೆ ದಾಳಿ ನಡೆದಾಗ ಅದನ್ನು ಪ್ರತಿಭಟಿಸುವುದು ನಾಗರಿಕರ ಹಕ್ಕು. ಈ ಸರ್ಕಾರವು ಪ್ಯಾಲೆಸ್ತೀನ್‌ನ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸಲು, ಪ್ಯಾಲೆಸ್ತೀನ್ ಪರವಾಗಿ ಮಾತನಾಡಲು ಸಾಮಾಜಿಕ ಸಂಘಟನೆಗಳಿಗೆ ಅವಕಾಶ ಕೊಡುತ್ತಿಲ್ಲ. ಸಭೆ, ಸೆಮಿನಾರ್ ನಡೆಸಲು ಅನುಮತಿ ನಿರಾಕರಿಸಲಾಗುತ್ತಿದೆ. ಬೆಂಗಳೂರಿನ ಫ್ರೀಡಂಪಾರ್ಕನಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನಾತ್ಮಕವಾಗಿ ಪ್ರತಿಭಟಿಸಿದರೂ ಸಹ ನಾಗರಿಕರನ್ನು ಬಂಧಿಸಲಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಸೂಕ್ತ ಕಾರಣ ಕೊಡದೆ ನುಣುಚಿಕೊಳ್ಳುತ್ತಿದೆ. ಗೃಹಮಂತ್ರಿ ಉತ್ತರಿಸುತ್ತಿಲ್ಲ. ಇಲ್ಲಿ ಪ್ಯಾಲೆಸ್ತೀನ್ ಪರವಾದ ಪ್ರತಿಭಟನೆ ಎಂದರೆ ಸರ್ಕಾರವೇಕೆ ಅಳುಕುತ್ತಿದೆ? ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ಯಾಲೆಸ್ತೀನ್‌ಅನ್ನು ಬೆಂಬಲಿಸಿದರು. ಮುಖ್ಯಮಂತ್ರಿಗಳು ’ಅಭಿವ್ಯಕ್ತಿ ಸ್ವಾತಂತ್ರ್ಯ ನನ್ನ ಮೊದಲ ಆದ್ಯತೆ’ ಎಂದು ಹೇಳಿದ್ದರು. ಆದರೂ ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ತೀನ್ ಪರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ದಮನಕಾರಿ ನೀತಿ ಅಳವಡಿಸಿಕೊಳ್ಳುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಿದೆ. ಮತ್ತೊಂದೆಡೆ ನವೆಂಬರ್ 10ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜನ್ಮ ದಿನಾಚರಣೆ ಆಚರಿಸಲು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಎಲ್ಲದಕ್ಕೂ ಬಲಪಂಥೀಯರು ಮಧ್ಯಪ್ರವೇಶಿಸಿ ದಾಳಿ ಮಾಡುತ್ತಾರೆ ಎನ್ನುವ ಸಬೂಬು ಕೊಡುತ್ತಿದ್ದಾರೆ. ಹಾಗಿದ್ದಲ್ಲಿ ಗೃಹ ಇಲಾಖೆಯ ಹೊಣೆಗಾರಿಕೆ ಏನು? ಸಿದ್ದರಾಮಯ್ಯ ಸರ್ಕಾರದಿಂದ ಇಂತಹ ಧೋರಣೆಯನ್ನು ನಿರೀಕ್ಷೆ ಮಾಡಿರಲಿಲ್ಲ
ಭ್ರಷ್ಟಾಚಾರ ನಿಯಂತ್ರಣ
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಮಾತನಾಡಲು ಇಚ್ಛಿಸದ ವಿಷಯಗಳಲ್ಲಿ ಭ್ರಷ್ಟಾಚಾರವೂ ಒಂದು. ಆದರೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಎನ್ನುವ ಅಭಿಯಾನವು ಕಾಂಗ್ರೆಸ್ ಗೆಲುವಿನಲ್ಲಿ ಸಹಕಾರಿಯಾಗಿತ್ತು. ಆದರೆ ಅಧಿಕಾರಕ್ಕೆ ಬಂದು ಐದು ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಅರೋಪ ಎದುರಿಸುತ್ತಿದೆ. ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲ, ಸ್ವತಃ ಕಾಂಗ್ರೆಸ್‌ನ ಶಾಸಕರೂ ಸಹ ಈ ಆರೋಪ ಮಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬರುತ್ತಿದೆ. ವರ್ಗಾವಣೆಯನ್ನು ಒಂದು ದಂಧೆಯಾಗಿಸಿ, ಇಲ್ಲಿ ಬಲುದೊಡ್ಡ ಭ್ರಷ್ಟಾಚಾರದ ಹಗರಣವೇ ನಡೆದಿದೆ ಎನ್ನುವ ಆರೋಪಗಳು ದಿನನಿತ್ಯ ವರದಿಯಾಗುತ್ತಿದೆ. ಪಕ್ಷವು ಈ ಕುರಿತು ಆಂತರಿಕ ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ. ಒಮ್ಮೆ ಈ ಆರೋಪಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡತೊಡಗಿದರೆ ಅದರಿಂದ ಮುಕ್ತರಾಗುವ ಎಲ್ಲಾ ದಾರಿಗಳು ಮುಚ್ಚಿಕೊಂಡಿರುತ್ತವೆ. ನಂತರ ಕತೆಯನ್ನು ಹೇಳಲು ಸಹ ಬಹಳ ದಿನಗಳು ಉಳಿದಿರುವುದಿಲ್ಲ.
ಉಪ ಸಂಹಾರ
ಇನ್ನೂ ಅನೇಕ ವಿಷಯಗಳ ಕುರಿತು ಬರೆಯಬಹುದು. ಆದರೆ ಈ ಎಲ್ಲದರ ಅರ್ಥ ಎಲ್ಲವೂ ಸರಿಯಾಗಿಲ್ಲ ಎಂದೇ ಧ್ವನಿಸುತ್ತದೆ. ಸಿದ್ದರಾಮಯ್ಯನವರಂತಹ ಸಮರ್ಥ, ದಕ್ಷ ಆಡಳಿತಗಾರರು ಮುಖ್ಯಮಂತ್ರಿಗಳು ಆಗಿರುವಂತಹ ಅವಧಿಯು ಆಡಳಿತಾತ್ಮಕವಾಗಿ, ಆರ್ಥಿಕವಾಗಿ, ಸಾಮಾಜಿಕತೆ ಅನುಷ್ಠಾನದಲ್ಲಿ ವಿಫಲಗೊಂಡಿದೆ ಎನ್ನುವ ವಿಮರ್ಶೆಗೆ ಗುರಿಯಾಗಬಾರದು. ಇದರ ಹೊಣೆ ಸಚಿವಸಂಪುಟ, ಶಾಸಕರ ಜೊತೆಗೆ ಸಿದ್ದರಾಮಯ್ಯನವರ ಮೇಲೆ ಹೆಚ್ಚಿದೆ. ಆದರೆ ಸ್ವತಃ ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟುಗಳು ದಿನದಿನಕ್ಕೂ ಉಲ್ಬಣಿಸುತ್ತಿದೆ. ಇದರಲ್ಲಿ ಮಾಧ್ಯಮಗಳ ಪಾಲೆಷ್ಟು ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷರೇ ಸಾಕ್ಷಿ ಸಮೇತ ನಿರೂಪಿಸಬೇಕು. ಇಲ್ಲದೇಹೋದರೆ ಪಕ್ಷದೊಳಗೆ ಅರಾಜಕತೆ ವಾತಾವರಣ ಉಂಟಾಗುತ್ತದೆ. ಉತ್ತಮ ಸರ್ಕಾರ, ಜನ ಮೆಚ್ಚುವ ಸರ್ಕಾರದ ಭರವಸೆ ಕೊಟ್ಟು ಆಡಳಿತ ನಡೆಸಲು ಜನಾಭಿಪ್ರಾಯ ಪಡೆದುಕೊಂಡವರಿಗೆ ಕೊಟ್ಟ ಕುದುರೆಯನ್ನು ಏರಲು ಸಾಧ್ಯವಾಗುತ್ತಿಲ್ಲವೇ? ಅಥವಾ ಕುದುರೆ ಹತ್ತಿ ಸರಿಯಾದ ದಿಕ್ಕಿನೆಡೆಗೆ ಪಯಣಿಸಲು ಸೋತಿದ್ದಾರೆಯೇ? ಐದು ತಿಂಗಳು ಮಾತ್ರವೇ ತಾನೆ ಎನ್ನುವ ಉದಾಸೀನವು ಇನ್ನುಳಿದ ನಾಲ್ಕು ವರ್ಷಗಳಿಗೂ ವಿಸ್ತರಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಕಾಲು ಜಾರಿದ ನಂತರವೇ ಕೈಯೂರಿ ಏಳುವುದು ಜಾಣತನದ ಲಕ್ಷಣವಲ್ಲ. ಅದರಲ್ಲಿಯೂ ರಾಜಕಾರಣದಲ್ಲಂತೂ ಖಂಡಿತವಾಗಿಯೂ ಅಲ್ಲ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


