ಆಕ್ರಮಿತ ಪಶ್ಚಿಮ ದಂಡೆಯನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳುವ ಅಥವಾ ಕಾನೂನು ಹೇರುವ ವಿವಾದಾತ್ಮಕ ಮಸೂದೆಗೆ ಇಸ್ರೇಲ್ ಸಂಸತ್ (ನೆಸೆಟ್) ಬುಧವಾರ (ಅ.22) ಪ್ರಾಥಮಿಕ ಅನುಮೋದನೆ ನೀಡಿದೆ.
“ಜೂಡಿಯಾ ಮತ್ತು ಸಮರಿಯಾದಲ್ಲಿ ಇಸ್ರೇಲಿ ಸಾರ್ವಭೌಮತ್ವದ ಅನ್ವಯ, 2025” ಎಂಬ ಶೀರ್ಷಿಕೆಯ ಈ ಮಸೂದೆಯನ್ನು ನೋಮ್ ಪಕ್ಷವನ್ನು ಪ್ರತಿನಿಧಿಸುವ ತೀವ್ರ ಬಲಪಂಥೀಯ ಸಂಸದ ಅವಿ ಮಾವೋಜ್ ಅವರು ಸಂಸತ್‌ನಲ್ಲಿ ಮಂಡಿಸಿದ್ದರು.
ಇಸ್ರೇಲಿ ಸಂಸತ್ತಿನ 120 ಶಾಸಕರಲ್ಲಿ 25-24 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಮಸೂದೆಯನ್ನು ಬೆಂಬಲಿಸದಿದ್ದರೂ, ಅವರ ಒಕ್ಕೂಟದ ಕೆಲವು ಸದಸ್ಯರು, ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಯಹೂದಿ ಶಕ್ತಿ ಪಕ್ಷ ಮತ್ತು ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರ ರಿಲೀಜಿಯಸ್ ಜಿಯೋನಿಸಂ ಪಕ್ಷದ ಸದಸ್ಯರು ಮಸೂದೆ ಪರ ಮತ ಚಲಾಯಿಸಿದ್ದಾರೆ.
ಇನ್ನು ಮಾಲೆ ಅಡುಮಿಮ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಹೊಂದಿರುವ ವಿರೋಧ ಪಕ್ಷದ ಎರಡನೇ ಮಸೂದೆಯು 31-9 ಮತಗಳಿಂದ ಅಂಗೀಕಾರಗೊಂಡಿದೆ.
ಮಸೂದೆಯು ಆರಂಭಿಕ ಮತದಾನದಲ್ಲಿ ಅಂಗೀಕಾರವಾಗಿದ್ದರೂ, ಅಂತಿಮ ಅಂಗೀಕಾರ ಪಡೆಯಲು ಇನ್ನೂ ಮೂರು ಸುತ್ತುಗಳನ್ನು ಒಳಗೊಂಡ ದೀರ್ಘ ಶಾಸಕಾಂಗ ಪ್ರಕ್ರಿಯೆನ್ನು ಹಾದು ಹೋಗಬೇಕಿದೆ.
ಇಸ್ರೇಲ್ ಬೈಬಲ್ ಮತ್ತು ಐತಿಹಾಸಿಕ ಸಂಬಂಧಗಳನ್ನು ಉಲ್ಲೇಖಿಸುವ ಪ್ರದೇಶವಾದ ಪಶ್ಚಿಮ ದಂಡೆಯ ಕೆಲವು ಭಾಗಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ನೆತನ್ಯಾಹು ಅವರ ಒಕ್ಕೂಟದ ಸದಸ್ಯರು ವರ್ಷಗಳಿಂದ ಇಸ್ರೇಲ್‌ಗೆ ಕರೆ ನೀಡುತ್ತಿದ್ದಾರೆ.
1967ರ ಯುದ್ಧದಲ್ಲಿ ವಶಪಡಿಸಿಕೊಂಡ ಪ್ರದೇಶಗಳು ವಿವಾದಿತ ಭೂಮಿಯಲ್ಲಿ ಇರುವುದರಿಂದ ಅವುಗಳನ್ನು ಕಾನೂನುಬದ್ಧವಾಗಿ ಆಕ್ರಮಿಸಲಾಗಿಲ್ಲ ಎಂದು ಇಸ್ರೇಲ್ ವಾದಿಸುತ್ತಿದೆ. ಆದರೆ, ವಿಶ್ವಸಂಸ್ಥೆ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಸಮುದಾಯವು ಅವುಗಳನ್ನು ಆಕ್ರಮಿತವೆಂದು ಪರಿಗಣಿಸಿದೆ.
2024ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವು ಪಶ್ಚಿಮ ದಂಡೆ ಸೇರಿದಂತೆ ಪ್ಯಾಲೆಸ್ತೀನ್ ಪ್ರದೇಶಗಳ ಮೇಲಿನ ಇಸ್ರೇಲ್‌ನ ಆಕ್ರಮಣ ಮತ್ತು ಅಲ್ಲಿನ ಅದರ ವಸಾಹತುಗಳು ಕಾನೂನುಬಾಹಿರವಾಗಿದ್ದು, ಸಾಧ್ಯವಾದಷ್ಟು ಬೇಗ ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಒಂದು ವೇಳೆ ಪಶ್ಚಿಮ ದಂಡೆಯ ಮಸೂದೆ ಅಂಗೀಕಾರವಾದರೂ, ಅದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಇಸ್ರೇಲ್ ಹೆಣಗಾಡಬೇಕಾಗುತ್ತದೆ. ಏಕೆಂದರೆ, ಜೆರುಸಲೆಮ್‌ನ ಅತ್ಯಂತ ನಿರ್ಣಾಯಕ ಬೆಂಬಲಿಗ ಅಮೆರಿಕವು ಈಗಾಗಲೇ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಪಶ್ಚಿಮ ದಂಡೆಯ ಸ್ವಾಧೀನವು ಇಸ್ರೇಲ್‌ಗೆ ತನ್ನ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧದಲ್ಲಿ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ವಿಶೇಷವಾಗಿ, ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ನಡೆದ ಅಬ್ರಹಾಂ ಒಪ್ಪಂದದ ಮೂಲಕ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಪ್ರಮುಖ ಅರಬ್ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಶ್ಚಿಮ ದಂಡೆಯ ಸ್ವಾಧೀನವನ್ನು ತಾನು ಸಹಿಸುವುದಿಲ್ಲ ಎಂದು ಘೋಷಿಸಿದೆ. ಇದು ಯುಎಇಗೆ ಒಂದು ಗಂಭೀರ ಸಮಸ್ಯೆಯಾಗಿದೆ ಎಂದು ಎಚ್ಚರಿಕೆ ನೀಡಿದೆ.
ಪಶ್ಚಿಮ ದಂಡೆ ಮತ್ತು ಮಾಲೆ ಅದುಮಿಮ್ ಸಂಬಂಧಿತ ಮಸೂದೆಗಳಿಗೆ ಇಸ್ರೇಲ್ ಮತ ಚಲಾಯಿಸಿರುವುದನ್ನು ಹಮಾಸ್ ತೀವ್ರವಾಗಿ ಖಂಡಿಸಿದೆ. ಇದು ವಸಾಹತುಗಾರಿಕೆ ಆಕ್ರಮಣದ ಅತ್ಯಂತ ಕೆಟ್ಟ ಸ್ವರೂಪ ಎಂದು ಹಮಾಸ್ ಕಿಡಿಕಾರಿದೆ. ಪಶ್ಚಿಮ ದಂಡೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಇಸ್ರೇಲ್‌ನ ಪ್ರಯತ್ನಗಳು ಕಾನೂನುಬಾಹಿರ ಮತ್ತು ಅಮಾನ್ಯವೆಂದು ಹಮಾಸ್ ಒತ್ತಿ ಹೇಳಿದೆ.
ಪಶ್ಚಿಮ ದಂಡೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯವು ಇಸ್ರೇಲ್‌ನಲ್ಲಿ ದೀರ್ಘಕಾಲದಿಂದ ಚರ್ಚೆಯಲ್ಲಿದೆ. ಏಕೆಂದರೆ ಈ ಭೂಮಿಯನ್ನು ಪ್ಯಾಲೆಸ್ತೀನ್‌ನವರು ತಮ್ಮ ಭವಿಷ್ಯದ ರಾಷ್ಟ್ರಕ್ಕಾಗಿ ಬಯಸುತ್ತಿದ್ದಾರೆ. 2020ರ ಚುನಾವಣೆಯಲ್ಲಿ ಈ ಭೂಮಿಯ ಸ್ವಾಧೀನದ ಭರವಸೆಯನ್ನು ನೀಡಿದ್ದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಯುಎಇ ಮತ್ತು ಬಹ್ರೇನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವ ಒಪ್ಪಂದಕ್ಕೆ ಒಲವು ತೋರಿದ್ದಾರೆ. ಆದರೆ, ಸೆಪ್ಟೆಂಬರ್‌ನಲ್ಲಿ ಕೆಲವು ಪಾಶ್ಚಿಮಾತ್ಯ ದೇಶಗಳು ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಿದ್ದರು. ಆ ಬಳಿಕ ನೆತನ್ಯಾಹು ಈ ವಿಷಯವನ್ನು ಮತ್ತೆ ಚರ್ಚೆಗೆ ತಂದಿದ್ದಾರೆ.
ಕಾಗದಕ್ಕೆ ಸೀಮಿತವಾದ ಕದನ ವಿರಾಮ : ಗಾಝಾ ಮೇಲೆ ಅಕ್ರಮಣ ಮುಂದುವರಿಸಿದ ಇಸ್ರೇಲ್; ನೂರಾರು ಪ್ಯಾಲೆಸ್ತೀನಿಯರ ಹತ್ಯೆ


