ಯೆಮನ್ ರಾಜಧಾನಿ ಸನಾ ಮತ್ತು ಕೆಂಪು ಸಮುದ್ರದ ಬಂದರು ನಗರ ಹೊದೈದಾದಲ್ಲಿನ ಪ್ರಮುಖ ಮೂಲ ಸೌಕರ್ಯ ಮತ್ತು ಹೌತಿ ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ಗುರುವಾರ (ಡಿ.26) ವೈಮಾನಿಕ ದಾಳಿ ನಡೆಸಿದೆ.
ಹೌತಿ ಗುಂಪಿನ ನಿಯಂತ್ರಣದಲ್ಲಿರುವ ಪ್ರದೇಶಗಳಾದ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೆಝ್ಯಾಝ್, ರಾಸ್ ಕನಾತಿಬ್ ವಿದ್ಯುತ್ ಸ್ಥಾವರಗಳು ಮತ್ತು ಹೊದೈದಾ, ಸಲೀಫ್ ಮತ್ತು ರಾಸ್ ಕನಾತಿಬ್ ಬಂದರುಗಳಲ್ಲಿನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಪ್ರಾಣಾಪಾಯದಿಂದ ಪಾರಾದ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ
ವರದಿಗಳ ಪ್ರಕಾರ, ಸನಾ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮತ್ತು ಅಧಿಕಾರಿಗಳು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಘೆಬ್ರೆಯೆಸಸ್ ಮತ್ತು ವಿಶ್ವಸಂಸ್ಥೆಯ ಇತರ ಅಧಿಕಾರಿಗಳು ವಿಮಾನ ಹತ್ತಲು ಸಿದ್ದತೆ ನಡೆಸುತ್ತಿದ್ದಾಗ ದಾಳಿ ನಡೆದಿದೆ. ಇದರಲ್ಲಿ ಯುಎನ್ ವಿಮಾನದ ಸಹಾಯಕ ಕ್ಯಾಪ್ಟನ್ ಸೇರಿದಂತೆ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಹೌತಿ ಸರ್ಕಾರದ ವಿದೇಶಾಂಗ ಸಚಿವ ಜಮಾಲ್ ಅಮೆರ್ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ದಾಳಿ ನಡೆದಾಗ ಡಬ್ಲ್ಯುಎಚ್ಒ ಮುಖ್ಯಸ್ಥರು ವಿಮಾನ ನಿಲ್ದಾಣದ ವಿಐಪಿ ಲಾಂಜ್ನಲ್ಲಿದ್ದರು ಎಂದು ಅಮೆರ್ ಹೇಳಿದ್ದಾರೆ.
ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಘೆಬ್ರೆಯೆಸಸ್ ಅವರು ಇದ್ದರು ಎಂಬ ವಿಚಾರ ಗೊತ್ತಿತ್ತಾ? ಎಂಬುವುದರ ಬಗ್ಗೆ ಇಸ್ರೇಲ್ ಪ್ರತಿಕ್ರಿಯಿಸಿಲ್ಲ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಎರಡು ಡ್ರೋನ್‌ಗಳನ್ನು ಹಾರಿಸಿರುವುದಾಗಿ ಹೇಳಿಕೊಂಡ ಒಂದು ದಿನದ ನಂತರ ಇಸ್ರೇಲ್ ದಾಳಿ ನಡೆಸಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಮತ್ತೊಂದು ಗುಂಪು, ಲೆಬನಾನ್‌ನ ಹಿಜ್ಬುಲ್ಲಾ ನಡುವೆ ಕದನ ವಿರಾಮ ಜಾರಿಗೆ ಬಂದ ನವೆಂಬರ್ ಅಂತ್ಯದಿಂದ ಯೆಮೆನ್‌ನ ಹೌತಿಗಳು ಇಸ್ರೇಲ್ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸಿದ್ದಾರೆ.
ರಾಜಧಾನಿ ಸನಾದ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮತ್ತು ರಾಸ್ ಇಸ್ಸಾ ಬಂದರಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೌತಿ ಮೂಲಗಳು ಆರಂಭದಲ್ಲಿ ಹೇಳಿತ್ತು. ಆದರೆ, ಇಸ್ರೇಲ್ ದಾಳಿಗಳಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೌತಿ ಅಲ್-ಮಸಿರಾ ಟಿವಿ ಹೇಳಿದೆ.
ಡಿಸೆಂಬರ್ 19ರ ಬಳಿಕ ಹೌತಿ ಹಿಡಿತದಲ್ಲಿರುವ ವಿಮಾನ ನಿಲ್ದಾಣ, ಮಿಲಿಟರಿ ಸೌಲಭ್ಯಗಳು ಮತ್ತು ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಹೌತಿ ಕೂಡ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ವಿಶ್ವಸಂಸ್ಥೆ ಕಾರ್ಯದರ್ಶಿ ಕಳವಳ
ಇಸ್ರೇಲ್ ಮತ್ತು ಹೌತಿಗಳ ನಡುವಿನ ಕಾಳಗ “ಹೆಚ್ಚಾಗುತ್ತಿರುವುದಕ್ಕೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಕಳವಳವ್ಯಕ್ತಪಡಿಸಿದ್ದಾರೆ. ಸನಾ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ‘ಆತಂಕಕಾರಿ’ ಎಂದಿದ್ದಾರೆ.
ಯೆಮನ್‌ನ ಶೇ.80ರಷ್ಟು ಜನಸಂಖ್ಯೆಯು ವಾಯುಮಾರ್ಗವನ್ನು ಅವಲಂಬಿಸಿದೆ. ಹೀಗಿರುವಾಗ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿರುವುದರಿಂದ ಅಲ್ಲಿನ ಮಾನವೀಯ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ಅಗತ್ಯ ಸಾಮಾಗ್ರಿಗಳ ಸರಬರಾಜಿಗೆ ತಡೆಯಾಗಲಿದೆ ಎಂದು ಗುಟೆರೆಸ್ ಹೇಳಿದ್ದಾರೆ.
ಇದನ್ನೂ ಓದಿ : ಮನಮೋಹನ್ ಸಿಂಗ್ ಎಂಬ ಮೌನಿಸಿಂಗ್… ಇತಿಹಾಸ ಎಂದು ನಿಮ್ಮನ್ನು ಮರೆಯುವುದಿಲ್ಲ…


