ಈ ವಾರ ಸಂಭವಿಸಿದ ಮೂವರು ಗಣ್ಯರ ವಿಶೇಷ ನಡೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿ ಒಂದು ವೈರುಧ್ಯವಿದೆ. ಸಾಮಾನ್ಯವಾಗಿ, ಅದರಲ್ಲು ಬಿರುಸಿನ ರಾಜಕೀಯ ಚಟುವಟಿಕೆ ನಡೆದಿರುವ ಹೊತ್ತಿನಲ್ಲಿ ರಾಜಕಾರಣ ಬದಿಗಿಟ್ಟು ವಿದ್ಯಾರ್ಥಿಗಳ ಜೊತೆ ರಾಜಕಾರಣಿ ನಿಂತರೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಯತ್ನಿಸಬೇಕಾದ ವಿಜ್ಞಾನಿ ಮೂಢನಂಬಿಕೆಯನ್ನು ವೈಭವಿಕರಿಸಿದರು. ಇತ್ತೀಚಿಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ಉಲ್ಲೇಖಿಸಲ್ಪಟ್ಟಿರುವ ವಿದ್ಯಾರ್ಥಿ ಸಂಘಟನೆಯನ್ನು ಪ್ರಮೋಟ್ ಮಾಡಲು ‘ಪ್ರಗತಿಪರ’ ಸಾಹಿತಿ ಹೊರಟರು… ಇದನ್ನು ವಿವರಿಸುವ ಮೂರು ತುಣುಕುಗಳಲ್ಲಿ ಇವೆ:.
1. ದೇವಸ್ಥಾನದೊಳ್ ಚಂದ್ರಯಾನ್: ಇಸ್ರೋ ಮುಖ್ಯಸ್ಥರ ಟೆಂಪಲ್‍ರನ್!
ಅಯ್ಯ ತನ್ನ ತಾನರಿಯಬೇಕಲ್ಲದೇ,
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ
ಕೇಳಲುಂಟೇ ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಎನಗೆ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿವೆನು
-ಅಕ್ಕಮಹಾದೇವಿ
ಇಸ್ರೋ ಮುಖ್ಯಸ್ಥರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ಕುಳಿತ ಚಿತ್ರ ನೋಡಿದಾಗ ಅಕ್ಕನ ಈ ವಚನ ನೆನಪಾಗಿತು.. ‘ಅನ್ಯರ’ ಮುಂದೆ ತಲೆಬಾಗಿ ಅವರು ತಮ್ಮ ಅರಿವಿಗಷ್ಟೇ ಅಲ್ಲ, ಇಸ್ರೋದ ‘ಅರಿವು’, ಅದರ ಸಾಧನೆ-ಶ್ರೇಯಸ್ಸುಗಳಿಗೇ ಕಳಂಕ ತಂದಿದ್ದಾರೆ.
ಜುಲೈ 15ರಂದು ಇಸ್ರೋದ ಬಹು ಮಹತ್ತರ ‘ಚಂದ್ರಯಾನ-2’ ಆರಂಭಗೊಳ್ಳಲಿದ್ದು, ಅದರ ಯಶಸ್ಸಿಗಾಗಿ ಇಸ್ರೊ ಮುಖ್ಯಸ್ಥ ಶಿವನ್ ಅವರು ಜುಲೈ 7ರಂದು ದೇವಸ್ಥಾನಗಳನ್ನು ಸುತ್ತಿ ದೇವರ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಇಂಥದ್ದನ್ನು ನಮ್ಮ ರಾಜಕಾರಣಿಗಳು ಮಾಡಿದಾಗ ಟೆಂಪಲ್ ರನ್ ಎನ್ನುವ ಮಾಧ್ಯಮಗಳು ಇದಕ್ಕೆ ಮಾತ್ರ ಚಕಾರ ಎತ್ತಿಲ್ಲ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಅವರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ನಮ್ರತೆಯಿಂದ ತಲೆಬಾಗಿ ಚಂದ್ರಯಾನ ಯಶಸ್ವಿಗೆ ಆಶೀರ್ವಾದ ಪಡೆಯುವ ಮೂಲಕ ತಮ್ಮ ಘನ ಹುದ್ದೆಗೆ ಅವಮಾನ ಮಾಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಮಠಕ್ಕೂ ಭೇಟಿ ನೀಡಿ ಚಂದ್ರಯಾನ ಯಶಸ್ಸಿಗೆ ಪೂಜೆ ಸಲ್ಲಿಸಿದ್ದಾರೆ.
ಸಾವಿರಾರು ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ಅವಿರತ ಶ್ರವನ್ನು ಶಿವನ್ ಅವಮಾನಿಸಿದ್ದಾರೆ. ಈ ಹಿಂದೆಯೂ ಹಲವು ಇಸ್ರೋ ಅಧ್ಯಕ್ಷರು ಉಪಗ್ರಹಗಳ ಪ್ರತಿಕೃತಿಗಳನ್ನು ತಿರುಪತಿ ತಿಮ್ಮಪ್ಪನ ಮುಂದೆ ಇಟ್ಟು ಪೂಜೆ ಮಾಡಿಸಿ ಇಂತಹ ಮೂರ್ಖತನ ಮೆರದಿದ್ದರು. ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಇಂತಹ ನಡೆ ತಪ್ಪು ಸಂದೇಶಗಳನ್ನು ರವಾನೆ ಮಡುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇಂಹ ವಿಜ್ಞಾನಿಗಳು ಮೂಢನಂಬಿಕೆಗಳ ವಕ್ತಾರರಂತೆ ವರ್ತಿಸುವುದು ಅಕ್ಷಮ್ಯ.
ರಾಜಸ್ಥಾನದಲ್ಲಿ ವೈದ್ಯ ಸಂಘದ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದಕ್ಕೆ ಕೋಪಗೊಂಡ ಸ್ವಾಮೀಜಿಯೊಬ್ಬ ಕಾರ್ಯಕ್ರಮ ಬಹಿಷ್ಕರಿಸಿ ನಡೆದಿದ್ದಾನೆ. ಆತನ ಸ್ತ್ರೀದ್ವೇಷಿ ಗುಣ ಗೊತ್ತಿದ್ದರೂ ಆತನ್ನು ಕಾರ್ಯಕ್ರಮಕ್ಕೆ ವೈದ್ಯರು ಕರೆಯುತ್ತಾರೆಂದರೆ?
2. ‘ಕಾಡುಕುದುರೆ’ಗಳ ಸಂಗದಲ್ಲಿ ಕಂಬಾರರು!
ಸೃಜನಶೀಲ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ಸ್ಥಾನ ಗಳಿಸಿರುವ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು ಎಬಿವಿಪಿಯ ಸದಸ್ಯತ್ವ ಪಡೆದು, ಆ ಸಂಘಟನೆಯ ಸದಸ್ಯತ್ವ ಅಭಿಯಾನದ ಬ್ರ್ಯಾಂಡ್ ಅಂಬಾಸೆಡರ್ ಆಗಿದ್ದಾರೆ. ಕಂಬಾರ ಬ್ರಾಹ್ಮಣಶಾಹಿಯ ಆರಾಧಕರಲ್ಲ ನಿಜ. ಆದರೆ ಅಧಿಕಾರ, ಸ್ಥಾನಮಾನಕ್ಕಾಗಿ ಏನನ್ನು ಮಾಡಬಲ್ಲರು ಎಂಬುದು ಪದೇಪದೇ ಸಾಬೀತಾಗಿದೆ. ಅವರು ಮೊದಲ ಸಲ ಕನ್ನಡ ವಿವಿಯ ಕುಲಪತಿಯಾಗುವಾಗ ಅಂದಿನ ಮುಖ್ಯಮಂತ್ರಿ ಬಂಗಾರಪ್ಪರ ಎದುರು ತಳ ಸಮುದಾಯದ ಸಾಹಿತಿಯಾಗಿ (ಕನ್ನಡ ವಿವಿಯ ಕುಲಪತಿಯಾಗುವ ಎಲ್ಲ ಅರ್ಹತೆಗಳು ಅವರಿದ್ದರೂ), ಅಲ್ಲಿ ಎರಡನೇ ಅವಧಿಗೆ ವಿಸ್ತರಣೇ ಮಾಡಿಕೊಳ್ಳುವಾಗ ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲರ ಎದುರು ಸಮಾಜವಾದಿ ಸಾಹಿತಿಯಾಗಿ ತಮ್ಮನ್ನು ಪ್ರಸ್ತುತಪಡಿಸಿಕೊಂಡಿದ್ದರು.

ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮತ್ತು ಇಲ್ಲೂ ಅದೇ ಸರ್ಕಾರ ಬರಬಹುದಾದ್ದರಿಂದ ಆ ಪಕ್ಷದ ವಿದ್ಯಾರ್ಥಿ ಸಂಘಟನೆ ವಕ್ತಾರರಾಗುವ ಮೂಲಕ ಸಾಹಿತ್ಯಾಸಕ್ತರಲ್ಲಿ ಅಸಹ್ಯ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ತಗಲು ಹಾಕಿಸಿಕೊಂಡಿರುವ, ಕೋಮುವಾದಿ ಸಿದ್ದಾಂತಗಳ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗುವ ಮೂಲಕ ಅವರು ಯಾವ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೋ?
3. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾದ ರಾಜಕಾರಣಿ
ಸಮಾಜಕ್ಕೆ ಆದರ್ಶವಾಗಬೇಕಿದ್ದ ವಿಜ್ಞಾನಿ ಮತ್ತು ಸಾಹಿತಿ ತಪ್ಪು ನಡೆಗಳನ್ನು ಇಟ್ಟ ಈ ಸಂದರ್ಭದಲ್ಲಿ ರಾಜಧಾನಿಯ ಮಹತ್ವದ ರಾಜಕೀಯ ಚಟುವಟಿಕೆಗಳನ್ನು ಬದಿಗೆ ಸರಿಸಿ, ವಿದ್ಯಾರ್ಥಿಗಳೊಂದಿಗೆ ಒಂದು ದಿನವನ್ನು ಕಳೆಯುವ ಮೂಲಕ ಎಚ್.ಕೆ. ಪಾಟೀಲರು ಆದರ್ಶದ ನಡೆ ಇಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ವಿ.ವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ಬ್ಯಾಚಿನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದೇ ಬೆಂಗಳೂರಿನಿಂದ ಗದಗಿಗೆ ಬಂದು ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ, ಗ್ರಾಮೀಣ ಭಾರತದ ಅಭಿವೃದ್ಧಿ ಅಗತ್ಯತೆಯ ಕುರಿತು ಮಾತಾಡಿದ್ದಾರೆ, ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರೆಲ್ಲೂ ರಾಜಕಾರಣದ ವಿಷಯ ಪ್ರಸ್ತಾಪಿಸದೇ ಘನತೆ ಮೆರೆದಿದ್ದಾರೆ.

ಇವತ್ತು ರಾಜಕಾರಣಿಗಳೆಲ್ಲ ಪಕ್ಷ ರಾಜಕಾರಣದಲ್ಲಿ ಮುಳುಗಿರುವ ‘ಅಧಿಕಾರದ ಅಮಲಿನ’ ಸಂದರ್ಭದಲ್ಲಿ ಎಚ್. ಕೆ. ಪಾಟೀಲ ವಿದ್ಯಾರ್ಥಿಗಳ ಜೊತೆ ಇದ್ದುದು ಆದರ್ಶಪ್ರಾಯವಾದರೆ, ಶಿವನ್ ಮತ್ತು ಕಂಬಾರ ಮಾತ್ರ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಸಣ್ಣವರಾಗಿದ್ದಾರೆ.


