Homeಮುಖಪುಟಮಕ್ಕಳಿಗೆ ಮಕ್ಕಳಿಗೆ ಮೊಟ್ಟೆ ನೀಡಬೇಕೆಂಬುದು ಸಾಂವಿಧಾನಿಕ ಆಶಯ: ಟಿ.ಕುಮಾರಸ್ವಾಮಿ

ಮಕ್ಕಳಿಗೆ ಮಕ್ಕಳಿಗೆ ಮೊಟ್ಟೆ ನೀಡಬೇಕೆಂಬುದು ಸಾಂವಿಧಾನಿಕ ಆಶಯ: ಟಿ.ಕುಮಾರಸ್ವಾಮಿ

- Advertisement -
- Advertisement -

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿಯಲ್ಲಿ ಬೇಯಿಸಿದ ಮೊಟ್ಟೆಯನ್ನು ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಯಾವುದೇ ವಿರೋಧ ಮತ್ತು ಒತ್ತಾಯಗಳಿಗೆ ಮಣಿಯದೇ ರಾಜ್ಯದ್ಯಾಂತ ಯೋಜನೆಯನ್ನು ವಿಸ್ತರಿಸಬೇಕು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಆಹಾರ ಹಕ್ಕು ಕಾರ್ಯಕ್ರಮ ಮಗು ಮತ್ತು ಕಾನೂನು ಕೇಂದ್ರದ (ತರಬೇತಿ) ಸಂಯೋಜಕರಾದ ಟಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಂವಿಧಾನ ಮತ್ತು ಕಾನೂನಿನ ಆಶಯಗಳಿಗೆ ಅನುಗುಣವಾಗಿ ಮಕ್ಕಳಿಗೆ ಮೊಟ್ಟೆ ಕೊಡುವುದು ಅನಿವಾರ್ಯ ಎಂದು ಪತ್ರ ಬರೆದಿರುವ ಅವರು, “ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮದಡಿಯಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಬೇಯಿಸಿದ ಮೊಟ್ಟೆಯನ್ನು ಪೂರಕ ಪೌಷ್ಟಿಕ ಆಹಾರವನ್ನಾಗಿ ಸೇರಿಸಿರುವುದರ ಪರವಾಗಿ ಸರ್ಕಾರದ ತೀರ್ಮಾನವನ್ನು ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಮೊಟ್ಟೆಯನ್ನು ತಿನ್ನದಿರುವ ಮಕ್ಕಳಿಗೆ ಹಣ್ಣು ಅಥವಾ ಕಾಳುಗಳನ್ನು ಕೂಡ ನೀಡಬೇಕೆಂದು ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಭಾರತದ ಸಂವಿಧಾನ ಹಾಗೂ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ತತ್ವಗಳ ಅನುಸಾರ ಮಕ್ಕಳ ದೈಹಿಕ ಬೆಳವಣಿಗೆಯ ದೃಷ್ಟಿಯಿಂದ ಸರ್ಕಾರದ ನಿರ್ಧಾರವು ಮಕ್ಕಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಸರ್ಕಾರ ಈಗ ಅನುಷ್ಠಾನಗೊಳಿಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಪೌಷ್ಟಿಕತೆಯ ಅಂಶವನ್ನು ಸೇರಿಸುತ್ತಿರುವುದು ಕಾರ್ಯಕ್ರಮ ಮತ್ತಷ್ಟು ಅರ್ಥ ಪೂರ್ಣವಾಗುವಂತೆ ಮಾಡಿದೆ. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಇದು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?


ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಒಂದಾದ ಪರಿಚ್ಛೇದ 47 ರಾಜ್ಯವು ತನ್ನ ಜನತೆಯ ಪೌಷ್ಟಿಕತೆಯ ಮಟ್ಟವನ್ನು ಹಾಗೂ ಜೀವನದ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಅರೋಗ್ಯವನ್ನು ಸುಧಾರಿಸುವುದು ತನ್ನ ಪ್ರಾಥಮಿಕ ಕರ್ತವ್ಯ ಎಂದು ಪ್ರತಿಪಾದಿಸಿದೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 27(1) ಹೇಳುವಂತೆ, “ಸರ್ಕಾರಗಳು ಮಕ್ಕಳ ಶಾರೀರಿಕ ಮಾನಸಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಹಕ್ಕನ್ನು ಅಂಗೀಕರಿಸಬೇಕು”. ಮುಂದುವರಿದು ಪರಿಚ್ಛೇದ 27 (3)ರಲ್ಲಿ “ರಾಷ್ಟ್ರೀಯ ಪರಿಸ್ಥಿತಿ ಮತ್ತು ತನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಎಲ್ಲಾ ಸಮಂಜಸ ಕ್ರಮಗಳನ್ನು ಸರ್ಕಾರಗಳು ಕೈಗೊಂಡು ಮಕ್ಕಳ ಅಭಿವೃದ್ದಿಯಲ್ಲಿ ಜವಾಬ್ದಾರರಾಗಿರುವ ಮಕ್ಕಳ ತಂದೆ ತಾಯಿಗಳು ಮತ್ತು ಇತರರಿಗೆ ಸಹಾಯ ಒದಗಿಸಬೇಕು” ಎಂದು ಸೂಚಿಸುತ್ತದೆ ಎಂದಿದ್ದಾರೆ.

ನಮ್ಮ ಸಂವಿಧಾನ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳಿಗೆ ಬದ್ದರಾಗಿ ಮಕ್ಕಳ ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸಬೇಕೆಂದು ನಾವು ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತೇನೆ. ಇದರಿಂದ ಮಕ್ಕಳ ಅಪೌಷ್ಟಿಕತೆ ದೂರವಾಗುವುದಲ್ಲದೆ ಎಲ್ಲಾ ರೀತಿಯ ದೈಹಿಕ ನ್ಯೂನತೆಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರಾತಾ ಕಾಯ್ದೆ 2013 ಕೂಡ ಈ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ದೇಶದ ಅಭಿವೃದ್ದಿಯಲ್ಲಿ ಮಕ್ಕಳ ಬೆಳವಣಿಗೆಯೂ ಮಹತ್ವದಾಗಿದ್ದು ಮಕ್ಕಳಿಗೆ ನಿರಂತರವಾಗಿ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದೆ. ಇದೇ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುವ ಯಾವುದೇ ಧಾರ್ಮಿಕ ಮೂಲಭೂತವಾದಿ ಮತ್ತು ರಾಜಕೀಯ ಶಕ್ತಿಗಳ ಒತ್ತಡಗಳಿಗೆ ಮಣಿಯಬಾರದು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಯಿಸಿದ ಮೊಟ್ಟೆಯನ್ನು ಕೇವಲ 7 ಜಿಲ್ಲೆಗಳಿಗಷ್ಟೇ ಸೀಮಿತ ಮಾಡದೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಹಣ್ಣು ಮತ್ತು ಮೊಳಕೆ ಕಾಳುಗಳ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.
ವಾರದ ಪೂರ್ತಿ ಮೊಟ್ಟೆಯನ್ನುನೀಡುವ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರಿಗೆ ತಜ್ಞ ವೈದ್ಯರು ಹೇಳುವುದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೊಟ್ಟೆ ವಿಚಾರದಲ್ಲಿ ರಾಜಕೀಯ ಮಾಡೋರನ್ನ ಏನನ್ನಬೇಕು ,ಮೊಟ್ಟೆ ಬೇಕಾದೋರು ಮೊಟ್ಟೆ ತಿನ್ನಲಿ ,ತಿನ್ನದ ಮಕ್ಕಳಿಗೆ ಹಣ್ಣನ್ನು ನೀಡಲಿ ,ಮೊಟ್ಟೆ ವಿಷಯದಲ್ಲಿ ಬೀದಿಗೆ ಬಂದ ಮಠಗಳನ್ನ ಸರ್ಕಾರ ಆಸ್ತಿ ಸಮೇತ ಮುಟ್ಟು ಗೋಲು ಹಾಕಿಕೊಳ್ಳಲಿ ,ಮಠಗಳು ಧರ್ಮ ರಕ್ಷಣೆಗೆ ವಿನಹ ,ರಾಜಕೀಯ ಮಾಡಲು ಅಲ್ಲಾ .

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...