Homeಚಳವಳಿದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ಕಳೆದ ಒಂದು ದಶಕದಲ್ಲಿ ದಲಿತರ ಮೇಲೆ ಅದೆಷ್ಟು ದೌರ್ಜನ್ಯಗಳು ನಡೆದಿಲ್ಲ? ಸ್ಥಾಪಿತ ದಲಿತ ಸಂಘಟನೆಗಳ ನಾಯಕರಿಂದ ಒಂದಾದರೂ ಬೃಹತ್ ಹೋರಾಟ ರೂಪುಗೊಂಡಿತೆ? ಇಲ್ಲ. ಹಾಗಾದರೆ ಆ ನಾಯಕತ್ವ ಬದಲಾಗಬೇಕಲ್ಲದೆ ಮತ್ತೇನು?

- Advertisement -
- Advertisement -

ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ ಚಳವಳಿಗಳ ಗೆಲುವು ಮತ್ತು ಸೋಲು ಸ್ವತಂತ್ರಪೂರ್ವದಲ್ಲಿಯೇ ಅಂಬೇಡ್ಕರರು ’ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು’ ಪ್ರತ್ಯೇಕಿಸಿ ಅವುಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂದು ವಿವರಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣವೊಂದೇ ಶೋಷಿತರ ವಿಮೋಚನೆಯ ಹಾದಿಯಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಸ್ವತಂತ್ರ ಭಾರತದ ಮನುವಾದಿ ರಾಜಕಾರಣವು ವೋಟ್‌ಬ್ಯಾಂಕ್ ರಾಜಕಾರಣವನ್ನೇ ಪ್ರಜಾಪ್ರಭುತ್ವವೆಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು.

’ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಾಗ ಮೊದಲು ಹೊಡೆತ ಬೀಳುವುದೇ ಆ ಪ್ರಜೆಗಳ ಏಣಿಶ್ರೇಣಿಯಲ್ಲಿ ಅತಿ ಕೆಳಗಿರುವ ದಲಿತರಿಗೆ. ಯುಪಿಎ ಆಡಳಿತವಿದ್ದಾಗಲೂ ದಲಿತರು ಸ್ವತಂತ್ರರಾಗಿರಲಿಲ್ಲ. ಬಿಜೆಪಿ ಆಡಳಿತದಲ್ಲಿಯೂ ದಲಿತರು ಸ್ವತಂತ್ರರಾಗಿಲ್ಲ. ಎರಡೂ ಅವಧಿಗಳಲ್ಲಿಯೂ ದಲಿತರ ಸ್ಥಿತಿ ಸಾಮಾಜಿಕ ಮತ್ತು ಆರ್ಥಿಕವಾಗಿ ಚಿಂತಾಜನಕವಾಗಿಯೇ ಮುಂದುವರೆದಿದೆ. ಆದರೆ ಇವೆರಡರಲ್ಲಿ ಯಾವುದು ಬೆಂಕಿ ಯಾವುದು ಕುದಿಯುವ ಎಣ್ಣೆ ಎಂಬುದನ್ನು ಪರಿಶೀಲಿಸಲೇಬೇಕಾಗಿದೆ.

2012ರ ಎನ್.ಸಿ.ಆರ್.ಬಿ ವರದಿ ಪ್ರಕಾರ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. 2019ರಲ್ಲಿ 15 ನಿಮಿಷಗಳಿಗೊಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಇಬ್ಬರು ಹತರಾಗುತ್ತಿದ್ದಾರೆ. ಕಳೆದ ೬ ವರ್ಷಗಳಲ್ಲಿ ದಲಿತರ ಮೇಲೆ ಗುಂಪು ಹಲ್ಲೆಗಳು ಹೆಚ್ಚಾಗಿವೆ. ಹಿಂದೆ ಜಜ್ಜಾರ್‌ನಂತಹ (2002) ಘಟನೆಗಳು ನಮ್ಮಲ್ಲಿ ನಡೆದಿದ್ದರೂ ಇತ್ತೀಚೆಗೆ ಗೋರಕ್ಷಣೆ, ದೇಗುಲ ಪ್ರವೇಶ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ 28 ಗುಂಪು ಹಲ್ಲೆಗಳು ದಾಖಲಾಗಿದ್ದು ಅದರಲ್ಲಿ 8 ದಲಿತರನ್ನು ಕೊಲ್ಲಲಾಗಿದೆ. ಹಿಂದುತ್ವ ರಾಜಕಾರಣದಿಂದಾಗಿಯೇ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಆಡಳಿತದಲ್ಲಿ ದೇಶದಲ್ಲಿಯೇ ಅತಿಹೆಚ್ಚು ದಲಿತರ ಮೇಲೆ ದೌರ್ಜನ್ಯಗಳು ನಡೆದಿದ್ದು ನಂತರದ ಸ್ಥಾನ ಮತ್ತೊಂದು ಹಿಂದುತ್ವ ರಾಜಕಾರಣದ ಕೂಸಾದ ಗುಜರಾತ್ ಸರ್ಕಾರದ್ದು. ಇವೆರಡೂ ರಾಜ್ಯಗಳ ಬಿಜೆಪಿ ಆಡಳಿತವು ದಲಿತರನ್ನು ’ಹಿಂದೂ ರಾಷ್ಟ್ರದಲ್ಲಿ ಹೇಗೆ ನಡೆಸಿಕೊಳ್ಳಬಹುದು ಎಂಬುದನ್ನು ಸಾಕ್ಷೀಕರಿಸುತ್ತಿವೆ.

ಇನ್ನು ದಲಿತ ಚಳವಳಿಯು ಬಹಳ ಅಸಡ್ಡೆ ಮಾಡಿರುವ ಆರ್ಥಿಕ ವಿಚಾರಕ್ಕೆ ಬರೋಣ. ಪ್ರತಿ ವರ್ಷದ ಕೇಂದ್ರ ಬಜೆಟ್ಟಿನಲ್ಲಿ ಯೋಜನಾ ಗಾತ್ರದಲ್ಲಿ ಪರಿಶಿಷ್ಟ ಜಾತಿಗಳ ಉಪಯೋಜನೆಗಾಗಿ ಶೇ.16.6ರಷ್ಟು ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗಾಗಿ ಶೇ.೮.೬ರಷ್ಟನ್ನು ಮೀಸಲಿಡಬೇಕು. (ಕೇಂದ್ರ ಸರ್ಕಾರ ಕರ್ನಾಟಕದಂತೆ ಕಡ್ಡಾಯ ಕಾನೂನು ಮಾಡಿಲ್ಲ) ಆದರೆ 2020-21 ನೇ ಸಾಲಿನ ಕೇಂದ್ರ ಬಜೆಟ್ಟಿನಲ್ಲಿ ಬಿಜೆಪಿ ಸರ್ಕಾರವು 83.256 ಕೋಟಿಗಳನ್ನು ಅಂದರೆ ಕೇವಲ ಶೇ. 8.6ರಷ್ಟನ್ನು ಪ.ಜಾಗಳಿಗೂ ಹಾಗೂ 53.256 ಕೋಟಿಯನ್ನು ಅಂದರೆ ಶೇ. 5.6ರಷ್ಟನ್ನು ಪ.ಪಂಗಳಿಗೂ ಮೀಸಲಿಟ್ಟಿದೆ. ಈ ಮೂಲಕ ಪ.ಜಾಗಳಿಗೆ 70.000 ಕೋಟಿ ಮತ್ತು ಪ.ಪಂಗಳಿಗೆ 50.000 ಕೋಟಿಯನ್ನು ಕಡಿಮೆ ನೀಡಲಾಗಿದೆ. ಅಟ್ರಾಸಿಟಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇವಲ 165 ಕೋಟಿ ನೀಡಲಾಗಿದೆ. ಕಳೆದ ವರ್ಷ 189 ಕೋಟಿ ನೀಡಲಾಗಿತ್ತು. 2019-20 ರಲ್ಲಿ 22.000 ಕೋಟಿಯಷ್ಟನ್ನು ಕೃಷಿ ಆರ್ಥಿಕತೆಗಾಗಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯಿದೆ. ಆಶ್ಚರ್ಯವೆಂದರೆ, ದಲಿತರಿಗೆ ಕೃಷಿ ಭೂಮಿ ಎಲ್ಲಿದೆ? ಹೆಚ್ಚಾಗಿ ದಲಿತರು ಹಣ ಗಳಿಸುವ ಕ್ಷೇತ್ರವಾದ ನರೇಗಾ ಯೋಜನೆಗೆ ಈ ವರ್ಷ ಕೇವಲ 61.500 ಕೋಟಿ ಮೀಸಲಿಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ 10,000 ಕೋಟಿ ಕಡಿಮೆ. 2019-20ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರವು, ಅದೇ ವರ್ಷ ವಿದ್ಯಾರ್ಥಿವೇತನಕ್ಕೆ ಅರ್ಧದಷ್ಟು ಅನುದಾನವನ್ನು ಕಡಿತಗೊಳಿಸಿದೆ. ಹಾಗಾದರೆ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ ಕಡಿಮೆಯಾಗಬೇಕಲ್ಲವೆ?

ಮೋದಿಯವರ ಅತ್ಯಂತ ಪ್ರಚಾರ ಪಡೆದ ಹಾಗೂ ಆತ್ಯಂತಿಕವಾಗಿ ನೆಲಕಚ್ಚಿದ ಯೋಜನೆಯಾದ ನೋಟು ರದ್ಧತಿಯಿಂದಾಗಿ ಮೊದಲು ಪೆಟ್ಟು ತಿಂದದ್ದು ದಲಿತರು. ಏಕೆಂದರೆ ದೇಶದ ಅತಿಹೆಚ್ಚು ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ದಲಿತರೇ ಆಗಿದ್ದಾರೆ. ಇದಕ್ಕೆ ಉದಾಹರಣೆ ಬಾಗಿಲು ಮುಚ್ಚಿದ ಆಗ್ರಾದ ಚರ್ಮೋದಮ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅತಿಹೆಚ್ಚು ಬೀದಿಗೆ ಬಿದ್ದ ಹಾಗೂ ಸವರ್ಣೀಯರಿಂದ ದೌರ್ಜನ್ಯಕ್ಕೊಳಗಾದ ಜನರೆಂದರೆ ದಲಿತರು. ಕಾರ್ಮಿಕರ ಕಾಯ್ದೆ ದುರ್ಬಲಗೊಂಡರೆ, ಭೂಸ್ವಾಧಿನ ಕಾಯ್ದೆ ಜಾರಿಗೊಂಡರೂ ಕೂಡ ಅತಿಹೆಚ್ಚು ಅನ್ಯಾಯಕ್ಕೊಳಗಾಗುವವರು ದಲಿತರೇ ಆಗಿದ್ದಾರೆ.

ಹೀಗೆ ಕಳೆದ ಐದಾರು ವರ್ಷಗಳಿಂದ ದಿನದಿಂದ ದಿನಕ್ಕೆ ದಲಿತರಿಗೆ ಅಭದ್ರತೆ ಹೆಚ್ಚಾಗುತ್ತಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿ ದಲಿತ ಚಳವಳಿ ಹಾಗೂ ದಲಿತಪರ ಚಳವಳಿಗಳು ಅನ್ಯಾಯದ ವಿರುದ್ಧ ದನಿ ಎತ್ತಿದ್ದಿದೆ. ಊನಾ ಚಳವಳಿ, ರೋಹಿತ್ ವೇಮುಲಾ ಚಳವಳಿ, ಅಟ್ರಾಸಿಟಿ ಕಾಯ್ದೆ ದುರ್ಬಲದ ವಿರುದ್ಧದ ಚಳವಳಿ ಮುಖ್ಯವಾದವು. ಈ ಮೂರೂ ಚಳವಳಿಗಳಲ್ಲಿ ದಲಿತರು ಬೀದಿಗಿಳಿದು ಹೋರಾಡಿದರು. ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡು ಸುಮ್ಮನಿರಲಾರೆವು ಎಂದು ಸರ್ಕಾರಕ್ಕೆ ಹಾಗೂ ಜಾತೀಯ ಸಮಾಜಕ್ಕೆ ಚುರುಕು ಮುಟ್ಟಿಸಿದರು. ಆದರೆ ಇದಕ್ಕೆ ಅಷ್ಟೇ ಪ್ರಬಲವಾಗಿ ಹಾಗೂ ವಿರುದ್ಧವಾಗಿ ಪ್ರಭುತ್ವವೇ ರೋಹಿತ್ ವೇಮುಲ ದಲಿತನಲ್ಲ ಎಂಬ ತನಿಖೆ ಮಾಡಲು ನಿಂತಿತು. ಅಟ್ರಾಸಿಟಿ ಕಾಯ್ದೆ ಪರವಾಗಿ ಹೋರಾಟಕ್ಕಿಳಿದ 11 ದಲಿತರನ್ನು ಗೋಲಿಬಾರ್ ಮೂಲಕ ಕೊಂದಿತು. ಕೊರೆಗಾಂವ್ ವಿಜಯೋತ್ಸವದಲ್ಲಿ ಗಲಭೆ ಸೃಷ್ಟಿಸಿದ ಸಾಂಬಾಜಿ ಭಿಡೆಯನ್ನು ಬಂಧಿಸದೇ ರಕ್ಷಣೆ ನೀಡಿತು. ಅಂಬೇಡ್ಕರರ ಕುಟುಂಬದ ಸದಸ್ಯ ಆನಂದ್ ತೇಲ್ತುಂಬ್ಡೆಯವರನ್ನೇ ಬಂಧಿಸಿ ಜೈಲಿಗಟ್ಟಿತು. ಈ ಮೂಲಕ ಹಿಂದುತ್ವಕ್ಕೆ ಬೇಕಾಗಿರುವುದು ’ಅಠಾವಳೆ’ಯಂತಹವರೇ ಹೊರತು ಆನಂದ್ ತೇಲ್ತುಂಬ್ಡೆಯಂತಹವರಲ್ಲ ಎಂದು ಬಹಿರಂಗವಾಗಿ ಘೋಷಿಸಿತು ಹಾಗೂ ತನಗೆ ಬೇಕಾದವರನ್ನೇ ಪೋಷಿಸಿತು.

ಹೀಗೆ ಪ್ರಭುತ್ವವೇ ದಲಿತರ ಮೇಲೆ ದಮನಕಾರಿ ದಾಳಿ ಮಾಡುತ್ತಿರುವಾಗ ದಲಿತ ಚಳವಳಿಯು ತೋರಿದ ಪ್ರತಿರೋಧ ಇತಿಹಾಸವನ್ನು ನೆನಪಿಸಲೇ ಇಲ್ಲ. ಜಿಗ್ನೇಶ್ ಮೇವಾನಿ, ಚಂದ್ರಶೇಖರ್ ಆಜಾದ್‌ನಂತಹ ಯುವ ಹೋರಾಟಗಾರರು ದಲಿತ ನಾಯಕತ್ವವು ಬದಲಾಗಬೇಕಾದ ದಾರಿಯನ್ನು ಗ್ರಹಿಸಿದರಾದರೂ ಅವರ ಆಲೋಚನೆಗಳನ್ನು ಜನಮಾನಸದಲ್ಲಿ ಇಳಿಸಲಾಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚೂಕಡಿಮೆ ಅವರು ನಿರಾಶೆಗೆ ಒಳಗಾದಂತಿದೆ. ಇದಕ್ಕೆ ಕಾರಣ ಚುನಾವಣಾ ರಾಜಕಾರಣದಲ್ಲಿ ಮಾತ್ರ ದಲಿತ ವಿಮೋಚನೆಗೆ ಪರಿಹಾರ ಹುಡುಕುತ್ತಿರುವುದಾಗಿದೆ.

ಅಂಬೇಡ್ಕರರು ’ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ’ ಎರಡನ್ನೂ ಶೋಷಿತರ ಶತ್ರುಗಳೆಂದು ತೀರ್ಪಿತ್ತು ಸುಮಾರು 80 ವರ್ಷಗಳೇ ಕಳೆದವು. ಇವೆರಡರ ವಿರುದ್ಧದ ಕಾರ್ಯಯೋಜನೆಯೇ ’ಜಾತಿವಿನಾಶ ಮತ್ತು ಪ್ರಭುತ್ವ ಮತ್ತು ಅಲ್ಪಸಂಖ್ಯಾತರು’ ಕೃತಿಗಳು ಎಂಬುದನ್ನು ಗ್ರಹಿಸದಾದೆವು. ದಲಿತರು ಬ್ರಾಹ್ಮಣ್ಯಕ್ಕೆ ಎದುರಾದರೇ ಹೊರತು ಬಂಡವಾಳಶಾಹಿಯ ಕಡೆ ತಿರುಗಿಯೂ ನೋಡಲಿಲ್ಲ. ದೇಶದ ಶೇ. 3 ರಷ್ಟಿರುವ ಶ್ರೀಮಂತರ ಬಳಿ ಶೇ. 75 ರಷ್ಟು ಸಂಪತ್ತಿದೆ ಎಂಬ ಸುದ್ದಿಯು ದಲಿತರಿಗೆ ಆತಂಕಕಾರಿಯಾಗಿ ಕಾಣುವುದೇ ಇಲ್ಲ. ಮುಂದೆ ಮನುವಾದಿಗಳು ದಲಿತ ಜಾತಿಗಳೊಳಗೇ ಸೃಷ್ಟಿಸಿದ ಸಿಕ್ಕುಗಳನ್ನು ಬಿಡಿಸಿಕೊಳ್ಳಲೂ ಪ್ರಯತ್ನಿಸಲಿಲ್ಲ. ಭಾರತದ ದಲಿತರು ಒಕ್ಕೊರಲಿನಿಂದ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ಕಳಿಸಿ ಅವರ ನಾಟಕವನ್ನು ಬಹಿರಂಗಗೊಳಿಸಬಹುದಿತ್ತಾದರೂ ದಲಿತರೊಳಗೇ ಇರುವ ಮಧ್ಯಮವರ್ಗದ ಅವಕಾಶವಾದಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಅಂಬೇಡ್ಕರರನ್ನೇ ಒಂದು ಜಾತಿಗೆ ಸೀಮಿತಗೊಳಿಸಿ ತಮ್ಮ ಕತ್ತನ್ನು ತಾವೇ ಕೊಯ್ದುಕೊಳ್ಳಲು ಹೊರಟಿರುವ ದಲಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಂಬೇಡ್ಕರ್‌ವಾದಿ ದಲಿತರು ’ಅಂಬೇಡ್ಕರ್ ಪ್ರತಿಮೆ’ಗೆ ಬೆಲೆ ಕೊಟ್ಟಷ್ಟು ’ಅಂಬೇಡ್ಕರ್ ಪ್ರಜ್ಞೆ’ಗೆ ಬೆಲೆ ಕೊಡಲಿಲ್ಲ, ಕೊಡುತ್ತಿಲ್ಲ. ತಮ್ಮನ್ನು ಅಂಬೇಡ್ಕರ್‌ವಾದಿಗಳೆಂದು ಹೇಳಿಕೊಳ್ಳುವ ಮಧ್ಯಮವರ್ಗದ ದಲಿತ ಬುದ್ಧಿಜೀವಿಗಳೂ ಸಹ ’ಜಾತಿ ಪದ್ಧತಿ ನಾಶವಾಗುವುದಿಲ್ಲ. ಜಾತಿಗಳನ್ನು ಪರಸ್ಪರ ಸಮಾನಗೊಳಿಸಬೇಕಷ್ಟೆ’ ಎಂದು ಬಡಬಡಾಯಿಸುತ್ತಿದ್ದಾರೆ.

90ರ ದಶಕದ ನಂತರ ದಲಿತ ಚಳವಳಿಯ ನಾಯಕತ್ವವು ವೈಯಕ್ತಿಕ ಸ್ವಾರ್ಥ-ಪ್ರತಿಷ್ಠೆಗಳಿಗೆ ಬಲಿಯಾಗಿ ದುರ್ಬಲಗೊಂಡಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಸೈದ್ಧಾಂತಿಕವಾಗಿಯೂ ಭ್ರಷ್ಟಗೊಂಡಿದೆ. ’ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದಂತಹ ಪ್ರತಿಗಾಮಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂಬ ಅಂಬೇಡ್ಕರರ ಎಚ್ಚರಿಕೆಯನ್ನೇ ಮೀರಿ ವೈಯಕ್ತಿಕ ಸ್ವಾರ್ಥಕ್ಕೆ ಸಾಮುದಾಯಿಕ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ರಾಜಕೀಯವಾಗಿ ಬಿಜೆಪಿಯನ್ನು ಏಣಿಯಾಗಿಸಿಕೊಳ್ಳುತ್ತೇವೆ ಎಂದವರೆಲ್ಲ ಬಿಜೆಪಿ ಏಣಿಯ ಮೆಟ್ಟಿಲುಗಳಾಗಿಬಿಟ್ಟಿದ್ದಾರೆ.

ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರುವಾಗ ಮೀಸಲಾತಿ ಪಡೆದ ದಲಿತ ಮಧ್ಯಮವರ್ಗವು ತನಗೂ ದಲಿತ ಸಮೂಹಕ್ಕೂ ಸಂಬಂಧವೇ ಇಲ್ಲದಂತೆ ಸತ್ಯನಾರಾಯಣ ವ್ರತ ಮತ್ತು ವರಮಹಾಲಕ್ಷ್ಮಿ ಪೂಜೆಯಲ್ಲಿ ನಿರತವಾಗಿದೆ. ಇದಕ್ಕೆಲ್ಲ ಮೂಲಕಾರಣ ’ದಲಿತ ಪ್ರಜ್ಞೆ’ಯು ’ಅಂಬೇಡ್ಕರ್ ಪ್ರಜ್ಞೆ’ ಕಡೆಗೆ ಹೆಜ್ಜೆ ಹಾಕುವ ಬದಲು ಅವಕಾಶವಾದಿ ದಲಿತ ನಾಯಕರ ಹಾದಿಯನ್ನು ನಂಬಿಕೊಂಡು ’ಹರಿಜನ ಪ್ರಜ್ಞೆ’ಯೆಡೆಗೆ ಹೆಜ್ಜೆ ಹಾಕಿದ್ದಾಗಿದೆ. ಹರಿಜನ ಪ್ರಜ್ಞೆಯ ಹಾದಿಗೆ ದಶಕದ ಹಿಂದೆಯೇ ’ಹಿಂದುತ್ವ ಪ್ರಜ್ಞೆ’ಯು ಸೇತುವೆ ನಿರ್ಮಿಸಿ ತನ್ನ ಹಾದಿಯನ್ನು ಸುಗಮವಾಗಿಸಿಕೊಂಡಿದೆ. ಮೀಸಲು ಕ್ಷೇತ್ರಗಳಿಂದ ಆರಿಸಿ ಬಂದಿರುವ ದಲಿತ ನಾಯಕರು ನಾಲಾಯಕ್ಕಾಗಿದ್ದು ಅವರ್‍ಯಾರೂ ದಲಿತರನ್ನು ಪ್ರತಿನಿಧಿಸುವವರಾಗಿ ಉಳಿದಿಲ್ಲ. ಸಂಸತ್ತಿನಲ್ಲಿ ಪಕ್ಷಾತೀತವಾಗಿ ದಲಿತರ ಪರವಾಗಿ ಮಾತನಾಡುವ ನಾಲಿಗೆಗೆ ಕಾಂಗ್ರೆಸ್ ಲಕ್ವ ಹೊಡೆಸಿತ್ತು ಆದರೆ ಹಿಂದುತ್ವ ರಾಜಕಾರಣ ನಾಲಿಗೆಯನ್ನೇ ಕತ್ತರಿಸಿಬಿಟ್ಟಿದೆ. ಸಂಸತ್ತಿನಲ್ಲೀಗ ಏಕಲವ್ಯರ ದಂಡು. ಹಾಗಾಗಿಯೇ ದಲಿತರು ಜಿಗ್ನೇಶ್, ಆಜಾದ್ ಕಡೆಗೆ ಆಸೆ ಕಣ್‌ಗಳಿಂದ ನೋಡುತ್ತಿದ್ದಾರೆ. ಆದರೆ ಆ ಅಸೆಯು ಕನಿಷ್ಠ 10 ವರ್ಷಗಳ ಕಾಲ ದಲಿತ ಸೇನಾನಿಗಳ ತ್ಯಾಗ ಬಲಿದಾನವನ್ನು ಕೇಳುತ್ತಿದೆ. ಇದು ಚುನಾವಣಾ ರಾಜಕೀಯದಿಂದ ಖಂಡಿತವಾಗಿಯೂ ಅಸಾಧ್ಯವಾದ ಮಾತು. ಕಳೆದ 70 ವರ್ಷಗಳಲ್ಲಿ ದಲಿತರನ್ನು ಚಳವಳಿ ರಾಜಕಾರಣ ಮಾತ್ರ ಕೈಹಿಡಿದಿದೆ. ಈ ಚಳವಳಿ ರಾಜಕಾರಣದ ಕೈಗೆ ಚುನಾವಣಾ ರಾಜಕಾರಣ ಜುಟ್ಟು ಸಿಕ್ಕಾಗ ಮಾತ್ರ ದಲಿತರ ವಿಮೋಚನೆಯಾಗುತ್ತದೆ.

ಹಾಗಾದರೆ ದಲಿತ ಚಳವಳಿ ರಾಜಕಾರಣವನ್ನು ಪುನರುಜ್ಜೀವನಗೊಳಿಸುವುದು ಹೇಗೆ? ಅಂಬೇಡ್ಕರರು ’ನನ್ನ ಹೋರಾಟದ ರಥವನ್ನು ಸಾಧ್ಯವಾದರೆ ಮುನ್ನಡೆಸಿ ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ ಹಿಂದಕ್ಕೆ ಮಾತ್ರ ಎಳೆಯಬೇಡಿ’ ಎಂದಿದ್ದರು. ದುರಂತವೆಂದರೆ, ೯೦ರ ದಶಕದ ನಂತರ ರಾಜಕೀಯ ಮತ್ತು ಚಳವಳಿಯ ದಲಿತ ನಾಯಕರು ಅಂಬೇಡ್ಕರರ ರಥವನ್ನು ಹಿಂದಕ್ಕೆ ಎಳೆದೊಯ್ದರು. ಕಳೆದ ಆರೇಳು ವರ್ಷದಲ್ಲಿ ಆ ರಥದ ಭಾಗಗಳನ್ನು ಕಿತ್ತುಕೊಂಡು ತಮ್ಮ ಮನೆಗಳಿಗೆ ಹೊತ್ತೊಯ್ದಿದ್ದಾರೆ. ಈಗ ಆ ರಥದ ಭಾಗಗಳನ್ನು ಒಂದೊಂದಾಗಿ ಮನುವಾದಿಗಳಿಗೆ ಅಡವಿಡುವುದಕ್ಕೆ ಆರಂಭಿಸಿದ್ದಾರೆ. ದಲಿತ ಯುವಕ-ಯುವತಿಯರು ಎಚ್ಚೆತ್ತುಕೊಳ್ಳದಿದ್ದರೆ ಮನುವಾದಿಗಳ ಮನೆ ಹೊರಗೆ ಸಂಪೂರ್ಣ ರಥ ತಲುಪುತ್ತದೆ. ಅವರು ಅದನ್ನು ಸುಟ್ಟು ಆ ದಿನವನ್ನು ಹಬ್ಬವನ್ನಾಗಿ ದಲಿತರೇ ಆಚರಿಸುವಂತೆ ಮಾಡುತ್ತಾರೆ. ಈಗಾಗಲೇ ದಲಿತರಿಗೆ ವಾಮನನ ಬಗ್ಗೆ ಕೊಂಚವೂ ಸಿಟ್ಟಿಲ್ಲದೆ ಬಲಿ ಚಕ್ರವರ್ತಿಯನ್ನು ಪೂಜಿಸುವುದನ್ನು ಕಲಿಸಲಾಗಿದೆ.

ಕಳೆದ ಒಂದು ದಶಕದಲ್ಲಿ ದಲಿತರ ಮೇಲೆ ಅದೆಷ್ಟು ದೌರ್ಜನ್ಯಗಳು ನಡೆದಿಲ್ಲ? ಸ್ಥಾಪಿತ ದಲಿತ ಸಂಘಟನೆಗಳ ನಾಯಕರಿಂದ ಒಂದಾದರೂ ಬೃಹತ್ ಹೋರಾಟ ರೂಪುಗೊಂಡಿತೆ? ಇಲ್ಲ. ಹಾಗಾದರೆ ಆ ನಾಯಕತ್ವ ಬದಲಾಗಬೇಕಲ್ಲದೆ ಮತ್ತೇನು? ಯುವ ನಾಯಕತ್ವ ಅರಳಬೇಕಿದೆ. ಅದು ಚಳವಳಿ ರಾಜಕಾರಣದಲ್ಲಿ ನಂಬಿಕೆ ಹೊಂದಬೇಕಿದೆ. ಅಂಬೇಡ್ಕರ್ ಪ್ರಜ್ಞೆಯನ್ನೇ ತನ್ನ ಆಯುಧವನ್ನಾಗಿ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಮೊದಲು ’ಕಳೆ ನಾಶಕ’ ಸಿಂಪಡಿಸಿ ಹೊಸ ಬೆಳೆಯನ್ನು ಬೆಳೆಯಬೇಕಿದೆ. ಈಗಿರುವುದು ಅದೊಂದೇ ದಾರಿ. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ದಲಿತ ಯುವಕರಿಗೆ ಕುತ್ತಿಗೆಗೆ ’ಹಗ್ಗದಂತಹ ಚಿನ್ನದ ಸರ’ ಕೈಗೆ ’ಚಿನ್ನದ ಕಡಗ’ ಸಂಜೆಯಾದರೂ ಸ್ವಲ್ಪವೂ ಕರೆಯಾಗದ ಬಿಳಿಯ ಬಟ್ಟೆ ಧರಿಸಿ ಅರ್ಧಕೋಟಿ ಬೆಲೆಬಾಳುವ ಕಾರಿನಲ್ಲಿ ಕೈ ಬೀಸುವ ’ದಲಿತ ವಿರೋಧಿಗಳು ಆದರ್ಶವಾಗುತ್ತಾರೆ.

ಮಾತುಗಳು ಇರಿಯುತ್ತಿರಬಹುದು, ನಿಜ. ಆದರೆ ಈಗಲೂ ಮಾತು ಮೊನಚಾಗದಿದ್ದರೆ ಮುಂದೆ ಮನುವಾದಿಗಳ ಕಮಿಷನ್ ಆಸೆಗೆ ದಲಿತರ ’ವೋಟು’ಗಳನ್ನು ಕೊಂಡುಕೊಳ್ಳುವ ಬೂತುಗಳಲ್ಲಿ ಮುಂದಿನ ತಲೆಮಾರಿನ ದಲಿತ ಯುವಜನತೆ ಇರುತ್ತದೆ. ಹಾಗಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಿರಿಯ ದಲಿತ ನಾಯಕತ್ವವು ಯುವಜನತೆಯನ್ನು ಗುರುತಿಸಿ ಅಂಬೇಡ್ಕರರ ಹಿಂದೆ ನಡೆಯುವಂತೆ ಪ್ರೇರೇಪಿಸಬೇಕಿದೆ. ಇಲ್ಲದಿದ್ದರೆ ಈಗಾಗಲೇ ಧ್ವಂಸಗೊಂಡಿರುವ ದಲಿತ ಚಳವಳಿಯನ್ನು ನಿರ್ನಾಮ ಮಾಡಲು ಮನುವಾದಿಗಳು ದಲಿತರನ್ನೇ ಬಳಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಸಾಕ್ಯ ಸಮಗಾರ
ಹೊಸ ತಲೆಮಾರಿನ ಚಿಂತಕ ಮತ್ತು ಆಕ್ಟಿವಿಸ್ಟ್ ಆದ ’ಸಾಕ್ಯ, ಅಂಬೇಡ್ಕರ್ ಚಿಂತನೆಯ ಆಳವಾದ ಓದಿನ ಜೊತೆಗೆ ಬದಲಾವಣೆಯ ಕೆಲಸದಲ್ಲಿ ಸ್ವತಃ ತೊಡಗಿಕೊಂಡಿರುವವರು.


ಇದನ್ನೂ ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...