Homeಕರ್ನಾಟಕಇದೊಂದು ಕಾರ್ಪೊರೇಟ್‌ ಪರ ಬಜೆಟ್‌: ಆರ್ಥಿಕ ವಿಶ್ಲೇಷಕರು ಹೇಳುವುದೇನು?

ಇದೊಂದು ಕಾರ್ಪೊರೇಟ್‌ ಪರ ಬಜೆಟ್‌: ಆರ್ಥಿಕ ವಿಶ್ಲೇಷಕರು ಹೇಳುವುದೇನು?

- Advertisement -
- Advertisement -

2024ರ ಚುನಾವಣೆಯ ಮೊದಲು ತನ್ನ ಕೊನೆಯ ಪೂರ್ಣ ಬಜೆಟ್ ಅನ್ನು ಎನ್‌ಡಿಎ ಸರ್ಕಾರ ಘೋಷಿಸಿದೆ. 2023-24ರ ಕೇಂದ್ರ ಬಜೆಟ್ ಗಾತ್ರ 45,03,097 ಕೋಟಿ (45.03 ಲಕ್ಷ ಕೋಟಿ) ಎಂದು ಅಂದಾಜಿಸಲಾಗಿದೆ. 2022-23 ರಲ್ಲಿ 39,44,909 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ಪ್ರಸ್ತಾಪಿಸಿತ್ತು.

ಅರ್ಥಸಚಿವೆ ನಿರ್ಮಲಾ ಸೀತಾರಾಮನ್‌ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ತೆರಿಗೆ ಮಿತಿಯನ್ನು ಹೆಚ್ಚಳ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಈ ಸಲದ ಬಜೆಟ್ ವೆಚ್ಚ ಹೆಚ್ಚಾಗಿದೆ. ಆರ್ಥಿಕ ವಿಶ್ಲೇಷಕರು ಈ ಭಾರಿಯ ಬಜೆಟ್‌ಅನ್ನು ಕಟುವಾಗಿ ಟೀಕಿಸಿದ್ದಾರೆ.

ಚಿಂತಕರಾದ ಶಿವಸುಂದರ್‌ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಈ ಬಜೆಟ್‌ನಲ್ಲಿ ವಿಶೇಷವಾದದ್ದು ಏನೂ ಇಲ್ಲ. ಇದೊಂದು ಸುಳ್ಳುಪೊಳ್ಳುಗಳ ಬಜೆಟ್. ಇಷ್ಟು ಬಂದರೆ ಇಷ್ಟು ಖರ್ಚು ಮಾಡುತ್ತೇವೆ ಎಂಬುದಕ್ಕೆ ತರ್ಕ ಇರಬೇಕು. ಇಷ್ಟು ಏರಿಕೆ ಮಾಡಿದ್ದೇವೆ, ಅಷ್ಟು ಏರಿಕೆ ಮಾಡಿದ್ದೇವೆ ಎಂಬುದೆಲ್ಲ ವಾಸ್ತವದಲ್ಲಿ ಏರಿಕೆಗಳಾಗಿರುವುದಿಲ್ಲ. ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳಬೇಕು. ಕಳೆದ ವರ್ಷಕ್ಕಿಂತ ಈ ವರ್ಷ 7 ಪರ್ಸೆಂಟ್‌ ಹಣದುಬ್ಬರ ಇದೆ ಎನ್ನುವುದಾದರೆ, ಕಳೆದ ವರ್ಷ 100 ಕೋಟಿ ರೂ. ಕೊಟ್ಟು, ಈ ವರ್ಷ107 ಕೋಟಿ ರೂ. ಕೊಟ್ಟರೆ ಅದು ವಾಸ್ತವದಲ್ಲಿ ಏರಿಕೆಯಲ್ಲ. ಹೋದ ವರ್ಷದಷ್ಟೇ ಕೊಟ್ಟ ಲೆಕ್ಕವಾಗುತ್ತದೆ. ಇದನ್ನು ಯಾರೂ ಪರಿಗಣಿಸುತ್ತಿಲ್ಲ” ಎಂದು ಟೀಕಿಸಿದರು.

“ಬಜೆಟ್‌ನಿಂದ ಹೊರಗೆಯೇ ಪ್ರಮುಖವಾದ ಆರ್ಥಿಕ ನೀತಿಗಳೆಲ್ಲ ಜಾರಿಗೆ ಬರುತ್ತವೆ. ಬಜೆಟ್‌ನಿಂದ ಏನೋ ಆಗುತ್ತದೆ ಎಂದು ಭಾವಿಸುವುದು ತಪ್ಪು. 2003ರಲ್ಲಿ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಹಣಕಾಸಿನ ಒಟ್ಟಾರೆ ವಹಿವಾಟಿನಲ್ಲಿ ಒಂದು ಶಿಸ್ತು ಇರಬೇಕು ಎಂಬುದು ಅದರ ಉದ್ದೇಶ. ಈ ವರ್ಷದ ಬಜೆಟ್‌ನಲ್ಲಿ 45 ಲಕ್ಷ ಕೋಟಿ ರೂ.ಗಳನ್ನು ತೋರಿಸಲಾಗಿದೆ. ಆದಾಯವಿರುವುದು 39 ಲಕ್ಷ ಕೋಟಿ ರೂ. ಇನ್ನುಳಿದ ಹಣಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಈ ಸಾಲ ಒಟ್ಟಾರೆ ಜಿಡಿಪಿಯ ಶೇ. 3ನ್ನು ದಾಟಬಾರದು ಎಂದಿತ್ತು. ಇದನ್ನು ಸಾಧಿಸಿಕೊಳ್ಳಬೇಕು ಎಂದರೆ ಸರ್ಕಾರ ವೆಚ್ಚ ಕಡಿಮೆ ಮಾಡಬೇಕು, ಆದಾಯ ಹೆಚ್ಚಿಸಿಕೊಳ್ಳಬೇಕು” ಎಂದು ವಿವರಿಸಿದರು.

“ಕೃಷಿ ಕ್ಷೇತ್ರಕ್ಕೆ ಹೆಚ್ಚು ಹಣಕೊಟ್ಟರೆ ಕೃಷಿ ಬಜೆಟ್, ಕೈಗಾರಿಕೆ ಹಣ ಕೊಟ್ಟರೆ ಕೈಗಾರಿಕಾ ಬಜೆಟ್ ಎಂಬುದು ತಪ್ಪು ಗ್ರಹಿಕೆ. ಕೃಷಿಯಲ್ಲಿ ಯಾವುದಕ್ಕೆ ಒತ್ತು ಕೊಡುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಕಾರ್ಪೊರೆಟ್‌ ಕೃಷಿ ಕೂಡ ಕೃಷಿಯೊಳಗೆಯೇ ಇದೆ ಎಂಬುದನ್ನು ಗಮನಿಸಬೇಕು. ಅಮೃತ ಕಾಲದ ಮೊದಲ ಬಜೆಟ್ ಎಂಬುದೆಲ್ಲ ಘೋಷಣೆಯಾಗಿದೆ. ಅಮೃತ ಕಾಲವೆಂದರೆ ಕರ್ತವ್ಯ ಪಾಲಿಸಿ, ಹಕ್ಕುಗಳನ್ನು ಕೇಳಬೇಡಿ ಎಂಬುದಾಗಿದೆ” ಎಂದು ಅಭಿಪ್ರಾಯಪಟ್ಟರು.

“ಯುವಜನರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಎಂಎಸ್‌ಎಂಇ ಕ್ಷೇತ್ರಗಳಿಗೆ ಏನನ್ನೂ ಕೊಟ್ಟಿಲ್ಲ. ಬ್ಯಾಂಕುಗಳಿಗೆ ಮಾರ್ಗದರ್ಶನ ನೀಡಿದರೆ ಸಾಲದು. ಲಾಭದಾಯಕವಲ್ಲದ ಯಾವುದಕ್ಕೂ ಬ್ಯಾಂಕುಗಳು ಹಣ ನೀಡುವುದಿಲ್ಲ. ಇದೊಂದು ಕಾರ್ಪೊರೇಟ್ ಬಜೆಟ್. ಜನರಿಗೆ ಬರೀ ಘೋಷಣೆಗಳನ್ನು ನೀಡಲಾಗಿದೆ. ಕೃತಿಯೆಲ್ಲ ಕಾರ್ಪೊರೇಟ್ ಪರವಾಗಿದೆ” ಎಂದರು.

ಚಿಂತಕರಾದ ಶ್ರೀಪಾದ್ ಭಟ್ ಮಾತನಾಡಿ, “ವಿತ್ತೀಯ ಕೊರತೆ (ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸ) ಯನ್ನು ಕಡಿಮೆ ಮಾಡಬೇಕು ಎನ್ನುವುದು ಮೇಲ್ನೋಟಕ್ಕೆ ನಿಜವೆನಿಸಿದರೂ ಅದು ಸರಳವಲ್ಲ. ಏಕೆಂದರೆ ಮುಕ್ತ ಮಾರುಕಟ್ಟೆಯನ್ನು ಸಮರ್ಥಿಸುವ ಆರ್ಥಿಕ ತಜ್ಞರು ವೆಚ್ಚವನ್ನು ಕಡಿಮೆ ಮಾಡಿ, ಆ ಮೂಲಕ ವಿತ್ತೀಯ ಕೊರತೆ ಕಡಿಮೆ ಮಾಡಿ ಎಂದು ಸೂಚಿಸುತ್ತಾರೆ. ಆದರೆ ಜನಕಲ್ಯಾಣ ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ವಿತ್ತೀಯ ಕೊರತೆ ಕಡಿಮೆ ಮಾಡುವುದು ಜೀವವಿರೋಧಿ ಎನಿಸಿಕೊಳ್ಳುತ್ತದೆ. ವಿತ್ತೀಯ ಕೊರತೆಗೆ ಜನರಿಗಾಗಿ ಮಾಡುವ ವೆಚ್ಚ ಮುಖ್ಯ ಕಾರಣವಲ್ಲ. ಬದಲಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಆಶಿಸಿದರು.

“ಮೋದಿ ನೇತೃತ್ವದ ಬಿಜೆಪಿ ಸರಕಾರ ಆದಾಯ ಹೆಚ್ಚಿಸುವ ಮೂಲಗಳಾದ ಸಂಪತ್ತು ತೆರಿಗೆ ರದ್ದು ಮಾಡಿದೆ. ಕಾರ್ಪೋರೆಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತ ಮಾಡುತ್ತಾರೆ. ಶ್ರೀಮಂತರ ಆದಾಯದ ಮೇಲಿನ ಸರ್ ಜಾರ್ಜ್ ಅನ್ನು ಶೇ.12ರಷ್ಟು ಕಡಿಮೆ ಮಾಡುತ್ತಾರೆ. ಎನ್‌ಪಿಎ 11 ಲಕ್ಷ ಕೋಟಿಯಾಗಿದೆ. ಈಗ ಹೇಳಿ ವಿತ್ತೀಯ ಕೊರತೆಗೆ ಯಾರು ಹೊಣೆ? ಮತ್ತೊಂದೆಡೆ ಈ ಬಜೆಟ್‌ನಲ್ಲಿ ಮನರೇಗ, ಪಡಿತರ ವಿತರಣೆ, ಅಂಗನವಾಡಿ ಮುಂತಾದ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ. ಆದರೂ ವಿತ್ತೀಯ ಕೊರತೆ ಶೇ.5.9 ಎಂದು ಹೇಳುತ್ತಾರೆ. ಯಾಕೆ?” ಎಂದು ಪ್ರಶ್ನಿಸಿದರು.

“2014ರಲ್ಲಿ 54 ಲಕ್ಷ ಕೋಟಿಯಷ್ಟಿದ್ದ ಸಾಲದ ಪ್ರಮಾಣ 2022ರಲ್ಲಿ 152 ಲಕ್ಷ ಕೋಟಿಯಷ್ಟಿದೆ. ಒಂಬತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ 100 ಲಕ್ಷ ಕೋಟಿ ಸಾಲ ಮಾಡಿದೆ. ಬಜೆಟ್ ವೆಚ್ಚದ ಶೇ.22ರಷ್ಟು ಬಡ್ಡಿ ಕಟ್ಟುತ್ತಿದ್ದಾರೆ. ಆದರೆ ನಿರುದ್ಯೋಗ ಶೇ. 8.9ರಷ್ಟಿದೆ. 30 ಕೋಟಿ ಬಡವರಿದ್ದಾರೆ. 80 ಕೋಟಿ ಜನಸಂಖ್ಯೆ ಪಡಿತರ ಮೂಲಕ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲ.
ಶಿಕ್ಷಣಕ್ಕೆ ಜಿಡಿಪಿಯ ಶೇ.6ರಷ್ಟು ಹಣ ಕೊಡುತ್ತಿಲ್ಲ. ಹಾಗಿದ್ದಲ್ಲಿ ಸಾಲ ಮಾಡಿದ ಕೋಟಿಗಟ್ಟಲೆ ರೊಕ್ಕ ಏನಾಯಿತು? ಕೇಳುವವರಿಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ಹೈಲೈಟ್ ಮಾಡಬೇಕಾದ ಮಾಧ್ಯಮಗಳು ಈ ಬಜೆಟ್ಅನ್ನು ಅಭೂತಪೂರ್ವ ಎಂದು ಬಣ್ಣಿಸುತ್ತಿವೆ. ಈ ದೇಶ ಉದ್ಧಾರವಾಗುವ ಯಾವುದೇ ಸಾಧ್ಯತೆಗಳಿಲ್ಲ” ಎಂದು ವಿಷಾದಿಸಿದರು.

ಶಿಕ್ಷಣದ ಹಕ್ಕು ನಿರ್ಲಕ್ಷಿಸಿದ ಬಜೆಟ್‌: ವಿ.ವಿ.ನಿರಂಜನಾರಾಧ್ಯ

ಶಿಕ್ಷಣ ತಜ್ಞರಾದ ಡಾ.ವಿ.ಪಿ.ನಿರಂಜನಾರಾಧ್ಯ ಅವರು ಮಾತನಾಡಿ, “ಇಂದು ಹಣಕಾಸು ಸಚಿವರು ಮಂಡಿಸಿದ ಭಾರತ ಒಕ್ಕೂಟದ ಆಯವ್ಯಯ ಕೇವಲ ನಿರಾಶಾದಾಯಕ ಮಾತ್ರವಲ್ಲ ಸಂವಿಧಾನದಲ್ಲಿನ ಶಿಕ್ಷಣದ ಮೂಲಭೂತ ಹಕ್ಕನ್ನು ಗೌರವಿಸಿ ಜಾರಿಗೊಳಿಸಲು ವಿಫಲವಾಗಿದೆ” ಎಂದರು.

“ಒಕ್ಕೂಟ ಆಯವ್ಯಯ 2023-24, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ನಿರಾಶೆಯನ್ನು ತಂದಿದೆ. ಗುಣಮಟ್ಟದ ಶಿಕ್ಷಣದ ಪ್ರಾಮುಖ್ಯತೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದರೂ, ಅದನ್ನು ಎಲ್ಲಾ ಮಕ್ಕಳಿಗೆ ಸಮಾನತೆಯ ನೆಲೆಯಲ್ಲಿ ಒದಗಿಸಲು ಅಗತ್ಯವಾದ ಹಣಕಾಸು ಸಂಪನ್ಮೂಲಗಳನ್ನು ಆಯವ್ಯದಲ್ಲಿ ಒದಗಿಸಲು ಅವರು ಪೂರ್ಣ ವಿಫಲರಾಗಿದ್ದಾರೆ” ಎಂದು ತಿಳಿಸಿದರು.

“ನಮಗೆಲ್ಲ ತಿಳಿದಿರುವಂತೆ , ಕೋವಿಡ್‌ -19 ಸಾಂಕ್ರಾಮಿಕವು ಮಕ್ಕಳ ಕಲಿಕೆಯ ಮೇಲೆ ಅದರಲ್ಲೂ, ಗ್ರಾಮೀಣ ಹಾಗೂ ನಗರ ಪ್ರದೇಶದ ಅವಕಾಶವಂಚಿತ ಹಾಗೂ ಸಮಾಜದಲ್ಲಿ ಅಂಚಿನಲ್ಲಿರುವ ಕೆಳ ಸಮುದಾಯಗಳ ಮಕ್ಕಳ ಕಲಿಕೆಯ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರಿದೆ. ಇದು ಹೆಣ್ಣುಮಕ್ಕಳ ವಿಷಯದಲ್ಲಿ ಮತ್ತಷ್ಟು ಶೋಚನೀಯವಾಗಿದೆ. ಒಟ್ಟಾರೆ, ಶಿಕ್ಷಣ ವ್ಯವಸ್ಥೆಯು ಸಾಂಕ್ರಾಮಿಕ ಹೊಡೆತದಿಂದ ಉಂಟಾದ ಕಲಿಕಾ ನಷ್ಟದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಣಕಾಸು ಸಚಿವರು ಈ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಲಿಕೆಯನ್ನು ಸಮಗ್ರವಾಗಿ ಅರ್ಥೈಸಿ ಅಗತ್ಯ ಸಾಂಸ್ಥಿಕ ಸುಧಾರಣೆಗಳ ಮೂಲಕ ಒಟ್ಟು ಕಲಿಕಾ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಲು ಆಯವ್ಯಯದಲ್ಲಿ ಗಣನೀಯ ಪ್ರಮಾಣದ ಹಣಕಾಸನ್ನು ಒದಗಿಸುವಲ್ಲಿ ಅವರು ಸೋತಿದ್ದಾರೆ. ಕೇವಲ ತೋರಿಕೆಗೆ ಓದುವ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿರುವುದು ಕಲಿಕಾ ವ್ಯವಸ್ಥೆಯ ಬಗ್ಗೆ ಅವರಿಗಿರುವ ತಿಳಿವಳಿಕೆಯ ಕೊರತೆಯನ್ನು ತೋರಿಸುತ್ತದೆ. ಇದು ಅತ್ಯಂತ ಶೋಚನೀಯ” ಎಂದು ಬೇಸರ ವ್ಯಕ್ತಪಡಿಸಿದರು.

“ಈಗಷ್ಟೇ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ 2022-23 ರಲ್ಲಿ ಸೂಚಿಸಿದಂತೆ, ಭಾರತದಲ್ಲಿ ಶಿಕ್ಷಣಕ್ಕೆ ದೊರಕಿರುವ ಶೇಕಡಾವಾರು ಜಿಡಿಪಿಯ ಕಳೆದ ನಾಲ್ಕು ಸತತ ಹಣಕಾಸು ವರ್ಷಗಳಿಂದ ಶೇಕಡ 2.9 ರಲ್ಲಿಯೇ ಸ್ಥಗಿತಗೊಂಡಿದೆ. ಸಾಮಾಜಿಕ ಸೇವೆಗಳ ಕೊಡಮಾಡುತ್ತಿರುವ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ವೆಚ್ಚವು 2015-16 ರಲ್ಲಿ ಶೇಕಡ 10.4 ರಿಂದ 2022-23ಕ್ಕೆ 9.5 ಕ್ಕೆ ಕುಸಿದಿದೆ ಎಂದು ಸಮೀಕ್ಷೆಯು ತೋರಿಸಿದೆ. ಒಂದೆಡೆ, ಯುಡೈಸ್‌ ( UDISE) ದತ್ತಾಂಶದ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯು 2020-21 ರಲ್ಲಿ 13,49,04560 ರಿಂದ 2021-22ರಲ್ಲಿ 14, 32,40480 ಕ್ಕೆ ಏರಿದೆ. ಈ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಉಳಿಸಿಕೊಂಡು ಮುಂದುವರಿಸಲು ಸಂಪನ್ಮೂಲದ ಅಗತ್ಯವಿದೆ. ಮತ್ತೊಂದೆಡೆ, ಸರ್ಕಾರಿ ಶಾಲೆಗಳ ಸಂಖ್ಯೆ 2020-21 ರಲ್ಲಿ 10,32049 ರಿಂದ 2021-22 ರಲ್ಲಿ 10,22386 ಕ್ಕೆ ಇಳಿದಿದೆ. ಒಂದೇ ವರ್ಷದಲ್ಲಿ ಸುಮಾರು 9663 ಶಾಲೆಗಳನ್ನು ಮುಚ್ಚಲಾಗಿದೆ. 2021-22ರ ಶೈಕ್ಷಣಿಕ ವರ್ಷದಲ್ಲಿ ದೇಶದಲ್ಲಿ ಸುಮಾರು 12.5 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಆಯವ್ಯಯದಲ್ಲಿ ಗಣನೀಯ ಹಣಕಾಸು ಒದಗಿಸದಿದ್ದರೆ, ಅದು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

“ಹಣಕಾಸು ಸಚಿವರು, ಈ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬದಲು, ಮುಂದಿನ ಮೂರು ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,000 ಶಿಕ್ಷಕರನ್ನು ನೇಮಿಸುವುದಾಗಿ ಪ್ರಸ್ತಾಪಿಸಿದ್ದಾರೆ. ದೇಶದಾದ್ಯಂತ ಇರುವ 10,22386 ಶಾಲೆಗಳಲ್ಲಿ ಖಾಲಿ ಇರುವ ಸುಮಾರು 12.5 ಲಕ್ಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಈ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಅವಕಾಶ ವಂಚಿತ ಮಕ್ಕಳ ಬಗ್ಗೆ ಏನನ್ನೂ ಪ್ರಸ್ತಾಪಿಸದೆ, ಕೇವಲ ಬೆರಳೆಣಿಕೆಯಷ್ಟಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಸರ್ಕಾರದ ಪ್ರಸ್ತಾಪ ಆರ್‌ಟಿಇ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ತಿಳಿಸಿದರು.

“ಒಟ್ಟು ಆಯವ್ಯದಲ್ಲಿ ಶಿಕ್ಷಣಕ್ಕೆ 2023-24 ನೇ ಸಾಲಿಗೆ ರೂ. 112899 ಕೋಟಿಯನ್ನು ಮೀಸಲಿಡಲಾಗಿದೆ ಇದು ಕಳೆದ ವರ್ಷಕ್ಕಿಂತ ಶೇಕಡ. 8.3 ಜಾಸ್ತಿಯಾಗಿದೆ . ಇದರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ರೂ. 68804 ಕೋಟಿಯನ್ನು ಒದಗಿಸಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ರೂ.5356 ಕೋಟಿ ಹೆಚ್ಚಾಗಿದ್ದು ಶೇಕಡವಾರು 8.4. ಜಾಸ್ತಿಯಾಗಿದೆ. ಒಟ್ಟು ಆಯವ್ಯಯದಲ್ಲಿ ಶಿಕ್ಷಣಕ್ಕೆ ದೊರೆತ ಶೇಕಡವಾರು ಹಣ 2.6 ರಿಂದ 2.5 ಕ್ಕೆ ಇಳಿದಿದೆ. ಒಟ್ಟು ಆಯವ್ಯಯದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ದೊರಕಿದ ಬಾಬತ್ತಿನ ಶೇಕಡಾವಾರು 1.61 ರಿಂದ 1.53ಕ್ಕೆ ಇಳಿದಿದೆ” ಎಂದು ವಿವರಿಸಿದರು.

“ಆಯವ್ಯಯದಲ್ಲಿ ಕೇಂದ್ರ ಪ್ರಾಯೋಜಿತ ಶಾಲಾ ಶಿಕ್ಷಣ ಕಾರ್ಯಕ್ರಮಗಳಿಗೆ ಒದಗಿಸಲಾಗಿರುವ ನೈಜ ಹಂಚಿಕೆಗಳನ್ನು ನೋಡೋಣ. ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದ ಸಾಧನವಾಗಿರುವ ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ. 37,453 ಕೋಟಿಗಳನ್ನು ಮೀಸಲಿಡಲಾಗಿದೆ. ಇದು ಕಳೆದ ಸಾಲಿನ ಮೊತ್ತಕ್ಕಿಂತ ರೂ.70 ಕೋಟಿಗಳ ಹೆಚ್ಚಳವಾಗಿದೆ. ಆದರೆ, ಇದು ಅತ್ಯಲ್ಪ ಹೆಚ್ಚಳವಾಗಿದ್ದು ಪ್ರತಿಶತ 0.19 ರಷ್ಟು ಮಾತ್ರ ಹೆಚ್ಚಿದೆ. ಆತಂಕದ ಅಂಶವೆಂದರೆ ಸಮಗ್ರ ಶಿಕ್ಷಣಕ್ಕೆ ಮೀಸಲಿಟ್ಟಿರುವ ಒಟ್ಟು ಮೊತ್ತದ ಶೇಕಡ 61 ರಷ್ಟನ್ನು ಶಿಕ್ಷಣದ ತೆರಿಗೆಯಿಂದ ಭರಿಸಲಾಗುತ್ತದೆ . ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್ ಎಂದು ಮರುನಾಮಕರಣ ಮಾಡಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಆಯವ್ಯಯದಲ್ಲಿ ನೀಡಿರುವ ಮೊತ್ತ ಕಳೆದ ಸಾಲಿಗೆ ಹೋಲಿಸಿದರೆ ರೂ.1367 ಕೋಟಿ ಜಾಸ್ತಿಯಾಗಿದೆ. ಆದರೆ , ಇದು ಕಳೆದ ಸಾಲಿನ ಪರಿಷ್ಕೃತ ಆಯವ್ಯದದ ಮೊತ್ತಕ್ಕಿಂತ ರೂ.1200 ಕೋಟಿ ಕಡಿಮೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಒದಗಿಸಲು ಭರವಷೆ ನೀಡಿ 2 ವರ್ಷ ಕಳೆದಿದೆ. ಈ ಅತ್ಯಲ್ಪ ಹೆಚ್ಚಳದಿಂದ ಯಾವ ರೀತಿಯ ಪೋಷಣ್‌ ಶಕ್ತಿ ನಿರ್ಮಾಣ್‌ ಆಗಬಹುದೆಂದು ಜನರು ತೀರ್ಮಾನಿಸಬೇಕಿದೆ” ಎಂದರು.

“ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಪುನರುಚ್ಚರಿಸಿರುವಂತೆ ಶಿಕ್ಷಣಕ್ಕೆ ಜಿಡಿಪಿಯ ಶೇಕಡ 6 ರಷ್ಟು ಹೂಡಿಕೆಯನ್ನು ಮುಟ್ಟಲು ಮೊದಲ ಹೆಜ್ಜೆ ಇಡುವಲ್ಲಿ ಆಯವ್ಯಯ ಮತ್ತೊಮ್ಮೆ ವಿಫಲವಾಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 (ಆರ್‌ಟಿಇ ಕಾಯಿದೆ)ರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದ್ಧವಾಗಿರುವ ಪೂರ್ವ- ಪ್ರಾಥಮಿಕ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಒದಗಿಸಲು ಶಿಕ್ಷಣ ಹಕ್ಕು ಕಾಯಿದೆಯನ್ನು ಕೆಳಮುಖ ಮತ್ತು ಮೇಲ್ಮುಖವಾಗಿ ವಿಸ್ತರಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಈ ಆಯವ್ಯಯ ಸಂಪೂರ್ಣ ಸೋತಿದೆ. ಬುನಾದಿ ಶಿಕ್ಷಣವನ್ನು ಸಮಾನತೆಯ ನೆಲೆಯಲ್ಲಿ ಗಟ್ಟಿಗೊಳಿಸದೆ , ಕೇವಲ ಕೃತಕ ಬುದ್ದಿಮತ್ತೆಗೆ ಒತ್ತು ನೀಡುವ ಆಯವ್ಯಯದ ಪ್ರಸ್ತಾವನೆ, ಶಿಕ್ಷಣದಲ್ಲಿ ಅಸಮಾನತೆ , ತಾರತಮ್ಯ ಮತ್ತು ಪ್ರತ್ಯೇಕತೆಯನ್ನು ಮತ್ತಷ್ಟು ಹೆಚ್ಚಸಲಿದ್ದು , ಉಳ್ಳವರಿಗೆ ಒಂದು ಬಗೆಯ ಮತ್ತು ಇಲ್ಲದರಿಗೆ ಮತ್ತೊಂದು ಬಗೆಯ ಶಿಕ್ಷಣವನ್ನು ಕೊಡಮಾಡುವ ತಾರತಮ್ಯ ನೀತಿಯ ಮುಂದವರಿಕೆಯಾಗಿದೆ” ಎಂದು ವಿಷಾದಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...