ಬಿಜೆಪಿ ಆಡಳಿತದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಈಗ ಜೈ ಶ್ರೀ ರಾಮ್ ಮತ್ತು ‘ಜೈ ಬಜರಂಗಬಲಿ’ ಘೋಷಣೆಗಳನ್ನು ಮುಸ್ಲಿಂ ಮನೆಗಳು ಮತ್ತು ಮಸೀದಿಗಳನ್ನು ಧ್ವಂಸಗೊಳಿಸಲು ಸಾಧನಗಳಾಗಿ ಬಳಸಲಾಗುತ್ತಿದೆ. ಇಂದು, ಒಂದು ಧರ್ಮದ ಜನರು ಭಯೋತ್ಪಾದಕ ಚಟುವಟಿಕೆಗಳನ್ನು ಆಶ್ರಯಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೌರ್ಯ, “ದಲಿತ ಮತ್ತು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಲಾಗುತ್ತಿದೆ. ಬಡವರ ಮನೆಗಳನ್ನು ಬುಲ್ಡೋಜರ್‌ಗಳಿಂದ ಕೆಡವಲಾಗುತ್ತಿದೆ. ಆದರೆ, ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಅಪರಾಧಿಗಳಿಗೆ ಸಂಪೂರ್ಣ ರಕ್ಷಣೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ” ಎಂದು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಫತೇಪುರದ ಸಮಾಧಿಯ ಮೇಲೂ ಅದೇ ಘೋಷಣೆಯನ್ನು ಬಳಸಿಕೊಂಡು ದಾಳಿ ನಡೆಸಲಾಗಿದೆ. ಅಲಿಗಢದ ದೇವಾಲಯದ ಮೇಲೆ ‘ಐ ಲವ್ ಮೊಹಮ್ಮದ್’ ಎಂದು ಬರೆಯುವ ಮೂಲಕ ಹಿಂದೂ-ಮುಸ್ಲಿಂ ಗಲಭೆಯನ್ನು ಪ್ರಚೋದಿಸಲು ಪಿತೂರಿ ನಡೆಸಲಾಗಿದೆ” ಎಂದು ಅವರು ಹೇಳಿದರು.
“ಅಪರಾಧ, ಅತ್ಯಾಚಾರ, ಕೊಲೆ ಮತ್ತು ಜಾತಿ ಸಂಬಂಧಿತ ಘಟನೆಗಳಲ್ಲಿ ಉತ್ತರ ಪ್ರದೇಶವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಎನ್‌ಸಿಆರ್‌ಬಿ ವರದಿ ತೋರಿಸುತ್ತದೆ. ಬಿಜೆಪಿ ಆಡಳಿತವಿರುವ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಅತ್ಯಾಚಾರ ಮತ್ತು ಕೊಲೆ ಘಟನೆಗಳು ಹೆಚ್ಚುತ್ತಿವೆ” ಎಂದು ಅವರು ಆರೋಪಿಸಿದರು.
“ಬಿಜೆಪಿ ಆಳ್ವಿಕೆಯಲ್ಲಿ, ಕಾನೂನುಬಾಹಿರ ಅಂಶಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ, ಅವರ ನೈತಿಕತೆಯನ್ನು ಹೆಚ್ಚಿಸುತ್ತಿದೆ. ಮುಖ್ಯಮಂತ್ರಿ ಘಟನೆಗಳ ಬಗ್ಗೆ ಗಮನ ಹರಿಸುವುದಿಲ್ಲ ಅಥವಾ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅದಕ್ಕಾಗಿಯೇ ದರೋಡೆಕೋರರು ಮತ್ತು ಮಾಫಿಯಾಗಳು ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿವೆ” ಎಂದು ಅವರು ಆರೋಪಿಸಿದರು.
ಬಿಜೆಪಿ ಆಳ್ವಿಕೆಯಲ್ಲಿ ನ್ಯಾಯಾಂಗವೂ ಅಸುರಕ್ಷಿತ
“ಇಬ್ಬರು ರಾಷ್ಟ್ರಪತಿಗಳನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಈಗ ನ್ಯಾಯಾಧೀಶರ ಮೇಲೆ ಶೂ ಎಸೆಯಲಾಗುತ್ತಿದೆ. ಇದು ದೇಶದ ನ್ಯಾಯ ವ್ಯವಸ್ಥೆ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ. ಬಿಜೆಪಿ ಆಳ್ವಿಕೆಯಲ್ಲಿ, ಸಾರ್ವಜನಿಕರು ಮಾತ್ರವಲ್ಲದೆ ನ್ಯಾಯಾಂಗವೂ ಅಸುರಕ್ಷಿತವಾಗಿದೆ ಎಂಬುದನ್ನು ಇಂತಹ ಘಟನೆಗಳು ಸ್ಪಷ್ಟಪಡಿಸುತ್ತವೆ” ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವ್ಯಕ್ತಿಯನ್ನು ಬಂಧಿಸದಿದ್ದರೆ, ನವೆಂಬರ್ 3 ರಂದು ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮೌರ್ಯ ಘೋಷಿಸಿದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ದಲಿತರ ಮೇಲಿನ ದೌರ್ಜನ್ಯ ಮತ್ತು ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸುವ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದರು.
ಸ್ವಾಮಿ ಪ್ರಸಾದ್ ಮೌರ್ಯ ಯಾರು?
ಉತ್ತರಪ್ರದೇಶದ ಮಾಜಿ ಸಚಿವ ಮತ್ತು ರಾಜಕಾರಣಿಸ್ವಾಮಿ ಪ್ರಸಾದ್ ಮೌರ್ಯ ಉತ್ತರಪ್ರದೇಶದ ಪಡ್ರೌನಾ ವಿಧಾನಸಭಾ ಕ್ಷೇತ್ರದಿಂದ ೧7ನೇ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ಐದು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ, ವಿಧಾನಸಭೆಯ ನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 2021ರವರೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸದಸ್ಯರಾಗಿದ್ದ ಅವರು, 2022ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)ಗೆ ಸೇರಿದರು. ಆದರೆ 2024ರಲ್ಲಿ ಎಸ್‌ಪಿge ರಾಜೀನಾಮೆ ನೀಡಿ, ತಮ್ಮ ಸ್ವಂತ ರಾಷ್ಟ್ರೀಯ ಶೋಷಿತ ಸಮಾಜ್ ಪಕ್ಷvನ್ನು ಸ್ಥಾಪಿಸಿದರು. ಅದರಲ್ಲಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಬಿಜೆಪಿ ಸಂಸದನ ಒತ್ತಾಯ


