ಜಲ ಜೀವನ್ ಮಿಷನ್ (ಜೆಜೆಎಂ)ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಕ್ಕೆ ಘೋಷಿಸಿದ್ದ ಹಣವನ್ನು ಬಿಡುಗಡೆ ಮಾಡದೆ “ಕರ್ನಾಟಕಕ್ಕೆ ದ್ರೋಹ ಮಾಡಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಗುರಿಯಾಗಿಸಿಕೊಂಡ ಅವರು, “ಸುಳ್ಳುಗಳನ್ನು ಹರಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ ನೀಡಬೇಕಿದ್ದ 28,623 ಕೋಟಿ ರೂ. ಹಂಚಿಕೆಯಲ್ಲಿ ರಾಜ್ಯವು 11,760 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, “ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಿರುವುದನ್ನು ಮುಚ್ಚಿಹಾಕಲು ಕೇಂದ್ರ ಸಚಿವ ಸೋಮಣ್ಣ ಸುಳ್ಳುಗಳನ್ನು ಹರಡುತ್ತಿದ್ದಾರೆ!” ಎಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜೆಜೆಎಂ (ರಾಜ್ಯದಲ್ಲಿ) ಒಟ್ಟು ಹಂಚಿಕೆ 49,262 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ.ಗಳಾಗಿದ್ದು, ರಾಜ್ಯದ ಪಾಲು 23,142 ಕೋಟಿ ರೂ.ಗಳಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಡುಗಡೆಯಾದ ಒಟ್ಟು ನಿಧಿ 32,202 ಕೋಟಿ ರೂ. ಆಗಿದ್ದು, ಇದರಲ್ಲಿ ಕೇಂದ್ರದ ಪಾಲು 11,760 ಕೋಟಿ ರೂ. (ಕೇಂದ್ರ ನೀಡಬೇಕಿದ್ದ ಅನುದಾನದ ಕೇವಲ 45%) ಮತ್ತು ರಾಜ್ಯದ ಪಾಲು 20,442 (ರಾಜ್ಯದ ಅನುದಾನ 88.3%) ಕೋಟಿ ರೂ. ಸೇರಿ ರಾಜ್ಯವು ಒಟ್ಟು ಮೊತ್ತ 29,413 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಕೇಂದ್ರ ಬಿಡುಗಡೆ ಮಾಡಿದ ಪ್ರತಿ ರೂಪಾಯಿಯನ್ನು ಕರ್ನಾಟಕ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ ಮೋದಿ ಸರ್ಕಾರವು ಹಣವನ್ನು ನಿರ್ಬಂಧಿಸುತ್ತಲೇ ಇದೆ ಮತ್ತು ಕರ್ನಾಟಕಕ್ಕೆ ಅದರ ಸರಿಯಾದ ಪಾಲನ್ನು ನಿರಾಕರಿಸುತ್ತಿದೆ” ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಕೂಡಾ ಕೇಂದ್ರದ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರವು 3,804 ಕೋಟಿ ರೂ.ಗಳನ್ನು ಮಂಜೂರು ಮಾಡಿತು. ಆದರೆ ಬಿಡುಗಡೆ ಮಾಡಿದ್ದು ಕೇವಲ 570 ಕೋಟಿ ರೂ.ಗಳನ್ನಾಗಿದೆ. ಹಲವು ಪತ್ರಗಳನ್ನು ಬರೆದರೂ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ. ಮತ್ತೊಂದೆಡೆ ಕರ್ನಾಟಕವು ತನ್ನದೇ ಆದ ಬಜೆಟ್‌ನಿಂದ ಹಂಚಿಕೆ ಮಾಡಿದ 7,652 ಕೋಟಿ ರೂ.ಗಳಲ್ಲಿ 4,977 ಕೋಟಿ ರೂ.ಗಳನ್ನು ಈ ಯೋಜನೆಗೆ ಬಿಡುಗಡೆ ಮಾಡಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಇದು ಕೇವಲ ಕರ್ನಾಟಕ ಮಾತ್ರವಲ್ಲ — ಬಿಜೆಪಿಯ ವೈಫಲ್ಯ ರಾಷ್ಟ್ರೀಯ!” ಎಂದು ಅವರು ಹೇಳಿದ್ದಾರೆ.
2024-25ರ ಅವಧಿಯಲ್ಲಿ ಜೆಜೆಎಂನ ಬಜೆಟ್ ಅಂದಾಜುಗಳು 70,163 ಕೋಟಿ ರೂ.ಗಳಾಗಿದ್ದವು. ಪರಿಷ್ಕೃತ ಅಂದಾಜುಗಳನ್ನು ಕೇವಲ 22,694 ಕೋಟಿ ರೂ.ಗಳಿಗೆ ಇಳಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. “ನರೇಂದ್ರ ಮೋದಿ ಸರ್ಕಾರ ಜೆಜೆಎಂ ಅನ್ನು ವ್ಯವಸ್ಥಿತವಾಗಿ ಕೊಲ್ಲುತ್ತಿದೆ ಮತ್ತು ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಾಚಿಕೆಯಿಲ್ಲದೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಜನರನ್ನು ದಾರಿ ತಪ್ಪಿಸುವ ಬದಲು, ಕರ್ನಾಟಕಕ್ಕೆ ಬರಬೇಕಾದ ನಿಧಿಯಿಂದ ಏಕೆ ನೀಡದೆ ವಂಚಿಸಲಾಗುತ್ತಿದೆ ಎಂದು ಸೋಮಣ್ಣ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಬಿಜೆಪಿಯ ವಿಧ್ವಂಸಕ ಕೃತ್ಯದ ಹೊರತಾಗಿಯೂ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಫಲಿತಾಂಶಗಳನ್ನು ನೀಡುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರವು ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಮುಂದುವರಿಸುತ್ತಿರುವಾಗ ಪ್ರತಿಯೊಂದು ಮನೆಗೆ ಸುರಕ್ಷಿತ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: 2018 ರಿಂದ 108 ಮಹಿಳೆಯರು,161 ಎಸ್‌ಸಿ, ಎಸ್‌ಟಿ, ಒಬಿಸಿಗಳು ನ್ಯಾಯಾಧೀಶರಾಗಿ ನೇಮಕ : ಕಾನೂನು ಸಚಿವಾಲಯ


