Homeಅಂಕಣಗಳುಜೇಮ್ಸ್ ಬಾಲ್ಡ್‌ವಿನ್-100; ಆತ್ಮಕಥಾ ಟಿಪ್ಪಣಿಗಳು

ಜೇಮ್ಸ್ ಬಾಲ್ಡ್‌ವಿನ್-100; ಆತ್ಮಕಥಾ ಟಿಪ್ಪಣಿಗಳು

- Advertisement -
- Advertisement -

ನಾನು ಹುಟ್ಟಿದ್ದು ಮೂವತ್ತೊಂದು ವರ್ಷಗಳ ಹಿಂದೆ, ಹಾರ್ಲೆಮ್‌ನಲ್ಲಿ. ನಾನು ಓದಲು ಕಲಿಯುತ್ತಿದ್ದ ಹೊತ್ತಿಗೆ ಕಾದಂಬರಿಗಳಿಗೆ ರೂಪುರೇಷೆಕಥಾವಸ್ತುಗಳನ್ನು ನಿರ್ಮಿಸಿಕೊಳ್ಳುವುದಕ್ಕೂ ಪ್ರಾರಂಭಿಸಿದೆ. ಯಾವುದೇ ಕರಾಳ ಕಲ್ಪಿತ ಕಥೆಗಳಿರುವಂತೆಯೇ ನನ್ನ ಬಾಲ್ಯದ ದಿನಗಳಿದ್ದವು. ಬಹಳ ಸಂಯಮದೊಂದಿಗೆ, ಯಾವುದೇ ಭಾವೋದ್ವೇಗಕ್ಕೆ ಸಿಲುಕದೆಯೇ ಹೇಳಬಹುದಾದರೆ, ನನ್ನ ಬಾಲ್ಯವನ್ನು ನಾನು ಮತ್ತೊಮ್ಮೆ ಜೀವಿಸಲು ಇಚ್ಛಿಸುವುದಿಲ್ಲ. ನನ್ನ ಬಾಲ್ಯದ ಬಗೆಗಿನ ಇದೊಂದು ವ್ಯಾಖ್ಯೆಯನ್ನು ಹೊರತುಪಡಿಸಿ, ಮಿಕ್ಕೆಲ್ಲವನ್ನೂ ನಾವು ನಿರ್ಲಕ್ಷಿಸಬಹುದು. ಆ ದಿನಗಳಲ್ಲಿ, ಮಕ್ಕಳನ್ನು ಹೆರುವ ಒಂದು ರೀತಿಯ ಕಿರಿಕಿರಿಯ ಮತ್ತು ನಿಗೂಢ ಹವ್ಯಾಸವೊಂದು ನನ್ನಮ್ಮನನ್ನು ಆವರಿಸಿತ್ತು. ಆ ಮಕ್ಕಳನ್ನು ನಾನು ಒಂದು ಕೈಯಲ್ಲಿ ಹಿಡಿದು, ಮತ್ತೊಂದರಲ್ಲಿ ಪುಸ್ತಕವನ್ನು ಹಿಡಿದಿರುತ್ತಿದ್ದೆ. ಇದರಿಂದಾಗಿ ಬಹಳಷ್ಟು ತೊಂದರೆಗೆ ಒಳಗಾಗಿದ್ದರೂ, ತಮಗೇನು ತೊಂದರೆಯಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ದಯೆ ತೋರಿದ್ದಾರೆ. ನಾನು ಅಂಕಲ್ ಟಾಮ್ಸ್ ಕ್ಯಾಬಿನ್ ಮತ್ತು ಎ ಟೇಲ್ ಆಫ್ ಟು ಸಿಟೀಸ್ ಅನ್ನು ಮತ್ತೆ ಮತ್ತೆ ಓದಿದ್ದು ಹೀಗೆಯೇ; ನಿಜ ಹೇಳಬೇಕೆಂದರೆ, ನನಗೆ ಸಿಕ್ಕ ಎಲ್ಲಾ ಪುಸ್ತಕಗಳನ್ನು ನಾನು ಓದಿರುವುದು ಹೀಗೆಯೇ, ಬಹುಶಃ ಬೈಬಲ್ ಒಂದನ್ನು ಹೊರತುಪಡಿಸಿ, ಏಕೆಂದರೆ ಯಾವುದಾದರೂ ಒಂದು ಪುಸ್ತಕವನ್ನ ಓದಲು ನನ್ನನ್ನು ಪ್ರೋತ್ಸಾಹಿಸಲಾಗುತ್ತಿತ್ತು ಎಂದರೆ ಅದು ಬೈಬಲ್ ಒಂದೇ. ನಾನು ಬರೆಯುತ್ತಿದ್ದೆ. ಸಾಕಷ್ಟೇ ಬರೆಯುತ್ತಿದ್ದೆ ಎಂಬುದನ್ನೂ ಒಪ್ಪಿಕೊಳ್ಳಬೇಕು. ನಾನು ಬರೆಯಲು ಪ್ರಯತ್ನಿಸುತ್ತಿದ್ದ ವಿಚಾರ ಮೊದಲ ಬಾರಿಗೆ ಮುದ್ರಣ ಕಂಡದ್ದನ್ನೇ ನನ್ನ ಮೊದಲ ವೃತ್ತಿಪರ ಮೈಲಿಗಲ್ಲು ಅಥವಾ ಗೆಲುವು ಎನ್ನಬಹುದೇನೋ. ನಾನು ಸುಮಾರು ಹನ್ನೆರಡು ವರ್ಷದ ಆಸುಪಾಸಿನಲ್ಲಿರುವಾಗ ಸ್ಪ್ಯಾನಿಷ್ ಕ್ರಾಂತಿಯ ಬಗ್ಗೆ ಬರೆದಿದ್ದ ಸಣ್ಣಕಥೆಯೊಂದು ಅತ್ಯಂತ ಅಲ್ಪಾವಧಿಗೆ ಚಾಲ್ತಿಯಲ್ಲಿದ್ದ ಚರ್ಚಿನ ಪತ್ರಿಕೆಯೊಂದು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನವನ್ನು ಬಾಚಿತ್ತು. ನನ್ನ ಕಥೆಯನ್ನ ಪತ್ರಿಕೆಯ ಸಂಪಾದಕಿಯಾಗಿದ್ದ ಮಹಿಳೆ ಸೆನ್ಸಾರ್ ಮಾಡಿದ್ದರು ಎಂಬ ನೆನಪಿದೆ ನನಗೆ. ಆದರೂ, ಅವರೇಕೆ ಹಾಗೆ ಮಾಡಿದ್ದರು ಎಂಬ ನೆನಪಿಲ್ಲ. ಒಟ್ಟಿನಲ್ಲಿ, ನಾನು ಅಸಾಧ್ಯ ಕೋಪಗೊಂಡಿದ್ದೆ.

ನಾಟಕಗಳನ್ನೂ ಹಾಡುಗಳನ್ನೂ ನಾನು ಬರೆಯುತ್ತಿದ್ದೆ. ಅವುಗಳಲ್ಲಿ ಒಂದಕ್ಕೆ ಮಹಾಪೌರರಾಗಿದ್ದ ಲಾ ಗಾರ್ಡಿಯ ಅವರಿಂದ ಅಭಿನಂದನಾ ಪತ್ರವನ್ನೂ ಪಡೆದಿದ್ದೆ. ನಾನು ಬರೆಯುತ್ತಿದ್ದ ಕವನಗಳ ಬಗ್ಗೆ ಎಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ಒಳ್ಳೆಯದು. ನನ್ನೀ ಸಣ್ಣ-ಪುಟ್ಟ ಗೆಲುವುಗಳನ್ನು ಕಂಡು ಅಮ್ಮ ಖುಷಿ ಪಡುತ್ತಿದ್ದಳು. ಆದರೆ, ನನ್ನಪ್ಪನಿಗೆ ಇವು ಖುಷಿ ತರುತ್ತಿರಲಿಲ್ಲ; ನಾನು ಧರ್ಮಬೋಧಕನಾಗಬೇಕು ಎಂಬುದು ಅವನಾಸೆ. ಹದಿನಾಲ್ಕು ವರ್ಷದವನಾಗಿದ್ದಾಗ ಬೋಧಿಸಲು ಪ್ರಾರಂಭಿಸಿದ ನಾನು, ನನ್ನ ಹದಿನೇಳನೇ ವಯಸ್ಸಿಗೆ ಬೋಧನೆಯನ್ನು ನಿಲ್ಲಿಸಿದೆ. ಅದಾಗಿ ಒಂದಷ್ಟು ಸಮಯದಲ್ಲೇ ನಾನು ಮನೆಬಿಟ್ಟು ಬಂದೆ. ವಾಣಿಜ್ಯ ಮತ್ತು ಉದ್ಯಮ ಜಗತ್ತಿನೊಂದಿಗೆ ಅದೆಷ್ಟು ಕಾಲ ಹೆಣಗಾಡಿದೆನೋ, ಆ ದೇವರೇ ಬಲ್ಲ. ಅದರ ಬಗ್ಗೆ ಬಲ್ಲವರು ನಾನು ಅವುಗಳೊಂದಿಗೆ ಹೆಣಗಾಡಿದಕ್ಕಿಂತ ಹೆಚ್ಚಾಗಿ ಅವು ನನ್ನೊಂದಿಗೆ ಹೆಣಗಾಡಿತು ಎಂದೇ ಹೇಳುವರೇನೋ. ನನಗೆ ಇಪ್ಪತ್ತೊಂದು ವರ್ಷವಾಗುವ ಹೊತ್ತಿಗೆ ಸ್ಯಾಕ್ಸ್ಟನ್ ಫೆಲೋಶಿಪ್ ಪಡೆಯುವಷ್ಟರ ಮಟ್ಟಕ್ಕೆ ಕಾದಂಬರಿಯೊಂದನ್ನು ತಯಾರಿಸಿಕೊಂಡಿದ್ದೆ. ನನ್ನ ಇಪ್ಪತ್ತೆರಡನೆಯ ಹರೆಯದೊತ್ತಿಗೆ ಫೆಲೋಶಿಪ್ ಮುಗಿದು ಕಾದಂಬರಿ ಪ್ರತಿಗಳು ಮಾರಟವನ್ನೇ ಕಾಣದೆ ಹಳ್ಳಿಯ ರೆಸ್ಟೊರೆಂಟ್ ಒಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ ಪುಸ್ತಕಗಳನ್ನು ವಿಮರ್ಶಿಸುವುದಕ್ಕೂ ಪ್ರಾರಂಭಿಸಿದೆ- ನಾ ಹೀಗೆ ವಿಮರ್ಶಿಸಿದ ಪುಸ್ತಕಗಳಲ್ಲಿ ಹೆಚ್ಚಿನವು ನೀಗ್ರೋ ಸಮಸ್ಯೆಯ ಬಗೆಗಿನ ಪುಸ್ತಕಗಳೇ ಅಗಿದ್ದವು. ನನ್ನ ಮೈಬಣ್ಣವೇ ನನ್ನನ್ನು ನೀಗ್ರೋಗಳ ಸಮಸ್ಯೆಗಳ ಬಗೆಗಿನ ತಜ್ಞನನ್ನಾಗಿಸಿತ್ತು. ನಂತರ, ಹಾರ್ಲೆಮ್‌ನ ಅಂಗಡಿ-ಮುಂಗಟ್ಟುಗಳಲ್ಲಿದ್ದ ಚರ್ಚುಗಳ ಬಗ್ಗೆ ಛಾಯಾಗ್ರಾಹಕ ಥಿಯೋಡರ್ ಪೆಲಟೊ ವ್ಸ್ಕಿಜೊತೆಗೂಡಿ ಮತ್ತೊಂದು ಪುಸ್ತಕವನ್ನು ಬರೆದೆ. ಫೆಲೋಶಿಪ್ ತಂದುಕೊಟ್ಟರೂ (ಇದಕ್ಕೆ ರೋಸೆನ್‌ವಾಲ್ಡ್ ಫೆಲೋಶಿಪ್ ದೊರಕಿತ್ತು) ಅದರ ಪ್ರತಿಗಳೂ ಮಾರಾಟವನ್ನೇ ಕಾಣದೆ ಈ ಪುಸ್ತಕ ಕೂಡ ನನ್ನ ಮೊದಲನೆಯ ಪುಸ್ತಕದ ಹಾದಿಯನ್ನೇ ಹಿಡಿದಿತ್ತು. ಆ ಹೊತ್ತಿಗೆ ಪ್ರಕಟವಾಗುತ್ತಿದ್ದ ನೀಗ್ರೋಗಳ ಸಮಸ್ಯೆಗಳ ಬಗೆಗಿನ ಪುಸ್ತಕಗಳು, ನಿಜ ಜೀವನದಷ್ಟೇ ಭಯಾನಕವಾಗಿರುತ್ತಿದ್ದವು. ನಾನು ಇಪ್ಪತ್ತನಾಲ್ಕು ವರ್ಷದವನಾಗಿದ್ದಾಗ ನೀಗ್ರೋಗಳ ಸಮಸ್ಯೆಯಗಳ ಬಗ್ಗೆಗಿನ ಪುಸ್ತಕಗಳನ್ನು ವಿಮರ್ಶಿಸಬಾರದೆಂದು ನಿರ್ಧರಿಸಿ, ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಂಡು ಫ್ರಾನ್ಸ್‌ಗೆ ಹೊರಟೆ. ಅಲ್ಲಿ ನಾನು ಅದ್ಹೇಗೆ ಗೋ ಟೆಲ್ ಇಟ್ ಆನ್ ದಿ ಮೌಂಟೇನ್ ಪುಸ್ತಕ ಬರೆದು ಮುಗಿಸಿದೆನೋ, ಆ ದೇವರೇ ಬಲ್ಲ.

ನನಗನಿಸುವ ಮಟ್ಟಿಗೆ ಯಾವುದೇ ಬರಹಗಾರ, ತಾನು ಜನಿಸಿದ ಜಗತ್ತನ್ನು ತನ್ನ ಪ್ರತಿಭೆಯನ್ನು ಹಾಳುಗೆಡವುವದಕ್ಕೆ ನಡೆಸಲಾಗುತ್ತಿರುವ ಪಿತೂರಿ ಎಂದೇ ಭಾವಿಸುತ್ತಾನೆ- ಇಂತಹ ಮನೋಭಾವ ಖಂಡಿತವಾಗಿಯೂ ಅಂತಹ ಪ್ರತಿಭೆಯನ್ನು ಪೋಷಿಸುತ್ತದೆ. ಮತ್ತೊಂದೆಡೆ, ಜಗತ್ತು ಅವನ ಪ್ರತಿಭೆಯ ಬಗ್ಗೆ ತೋರುವ ಅತೀವ ಅಸಡ್ಡೆತನವು ಕಲಾವಿದನು ತನ್ನ ಪ್ರತಿಭೆಯನ್ನು ಮುಖ್ಯವಾಗಿಸಿಕೊಳ್ಳಲು ಒತ್ತಾಯಿಸುತ್ತದೆ. ಆದ್ದರಿಂದ, ಯಾವುದೇ ಬರಹಗಾರನಾಗಲೀ, ನಾನಿಲ್ಲಿ ಮಾಡುತ್ತಿರುವಂತೆ ತಾನು ನಡೆದುಬಂದ ಅದೆಷ್ಟೇ ಪುಟ್ಟ ಹಾದಿಯತ್ತ ಹಿಂದಿರುಗಿ ನೋಡಿದಾಗ, ತನಗೆ ನೋವುಂಟು ಮಾಡಿದ ವಿಷಯಗಳನ್ನು ಅವನಿಗೆ ನೆರವು ನೀಡಿದ ವಿಷಯಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ; ಯಾವುದೋ ಒಂದು ರೀತಿಯಲ್ಲಿ ಅವನು ಗಾಯಗೊಂಡ ಕಾರಣಕ್ಕಾಗಿಯೇ ಅವನಿಗೆ ಇನ್ನಾವುದೋ ಒಂದು ರೀತಿಯಲ್ಲಿ ನೆರವು ನೀಡಲು ಸಾಧ್ಯವಾಗುತ್ತದೆ; ಮತ್ತು, ಅವನಿಗೆ ಒದಗಿಬರುವ ಸಹಾಯವು ಅವನು ಒಂದರಿಂದ ಮತ್ತೊಂದು ಸಂಕಟಕ್ಕೆ ಚಲಿಸಲು ಮಾತ್ರವೇ ಅನುವು ಮಾಡಿಕೊಡುತ್ತದೆ- ಹಾಗಾಗಿ, ಒಂದಾದ ಮೇಲೊಂದು ತೊಂದರೆಗೆ ಸಿಲುಕುತ್ತಿರುತ್ತಾನೆ ಎಂದು ಹೇಳಲೇಬೇಕಾಗುತ್ತದೆ. ಒಬ್ಬರ ಮೇಲೆ ಏನೆಲ್ಲಾ ಪ್ರಭಾವ ಬೀರಿರಬಹುದೆಂದು ಹುಡುಕ ಹೊರಟರೆ ನಮಗೆ ಬಹಳಷ್ಟು ವಿಚಾರಗಳು ಕಾಣಸಿಗುತ್ತದೆ. ನನ್ನ ಮೇಲೆ ಏನೆಲ್ಲಾ ಪ್ರಭಾವ ಬೀರಿದೆ ಎಂಬುದನ್ನು ನಾನು ಆಳವಾಗಿ ಸಾಕಷ್ಟು ಸಮಯಕೊಟ್ಟು ಯೋಚಿಸಿಲ್ಲ. ಆದರೂ, ಕಿಂಗ್ ಜೇಮ್ಸ್ ಬೈಬಲ್, ಅಂಗಡಿ-ಮುಂಗಟ್ಟುಗಳಲ್ಲಿನ ಚರ್ಚುಗಳ ಕಥನಗಳು, ನೀಗ್ರೋಗಳ ಭಾಷಣಗಳಲ್ಲಿ ಯಾವಾಗಲೂ ತುಂಬಿರುತ್ತಿದ್ದ ಒಂದು ರೀತಿಯ ವ್ಯಂಗ ಮತ್ತು ಹಿಂಸೆ ಹಾಗೂ ಅವುಗಳಲ್ಲಿ ಬಿಟ್ಟುಹೋಗಿರುವ ಯಾವುದೋ ಒಂದಂಶ, ಅಸಾಧಾರಣವಾದ ಪ್ರದರ್ಶನಗಳ ಬಗ್ಗೆ ಡಿಕನ್ಸ್‌ಗಿದ್ದ ಪ್ರೀತಿಇವೆಲ್ಲವೂ ನಾನಿಂದು ಹೀಗಿರುವುದಕ್ಕೆ ಯಾವುದೋ ಒಂದು ರೀತಿಯಲ್ಲಿ ಕಾರಣವಾಗಿದೆ; ಆದರೆ, ನನ್ನ ಜೀವನ ಅವುಗಳನ್ನೇ ಆಧರಿಸಿದೆ ಎಂದು ನಾನು ಹೇಳುವುದಿಲ್ಲ. ಅಂತೆಯೇ, ಅದೆಷ್ಟೋ ಅಸಂಖ್ಯಾತ ಜನರು ನನಗೆ ಅನೇಕ ರೀತಿಗಳಲ್ಲಿ ನೆರೆವು ನೀಡಿದ್ದಾರೆ; ಆದರೆ ಅಂತಿಮವಾಗಿ, ನಾನು ನೀಗ್ರೋ ಆಗಿ ಜನಿಸಿದ್ದು ಮತ್ತು ಹೀಗೆ ಜನಿಸಿರುವುದೇ ವಾಸ್ತವ ಎಂದರಿತು ಅದರೊಂದಿಗೆ ಒಂದು ರೀತ್ಯ ಅನುಸಂಧಾನ ಮಾಡಬೇಕಾಗಿ ನನ್ನನ್ನು ಒತ್ತಾಯಿಸಲಾಗಿದ್ದೇ (ಅಂದಹಾಗೆ, ಈ ಅನುಸಂಧಾನವೇ ನಾವು ಆಶಿಸಬಹುದಾದ ಅತಿದೊಡ್ಡ ವಿಚಾರವಾಗಿದೆ) ನನ್ನ ಜೀವನದ ಅತ್ಯಂತ ಕಷ್ಟಕರ (ಮತ್ತು ಅತ್ಯಂತ ಹೆಚ್ಚು ಫಲಪ್ರದ) ವಿಚಾರವೂ ಆಗಿದೆ.

ನೀಗ್ರೋ ಬರಹಗಾರರಾಗುವುದಕ್ಕೆ ಇರುವ ತೊಂದರೆಗಳಲ್ಲಿ (ಅವನು ಬೇರೆಲ್ಲರಿಗಿಂತ ಕಷ್ಟದಲ್ಲಿದ್ದಾನೆ ಎಂದು ನಾನು ಸೂಚಿಸುತ್ತಿಲ್ಲ. ಆದ್ದರಿಂದ ಇದು ವಿಶೇಷ ನಿವೇದನೆಯೇನೂ ಅಲ್ಲ) ನೀಗ್ರೋಗಳ ಸಮಸ್ಯೆಗಳ ಬಗ್ಗೆ ಈಗಾಗಲೇ ಸಾಕಷ್ಟು ಬರೆಯಲಾಗಿದೆ ಎಂಬುದೂ ಒಂದು. ಪುಸ್ತಕದ ಕಪಾಟುಗಳು ಮಾಹಿತಿಯ ತೂಕವನ್ನು ಹೊರಲಾಗದೆ ಇರುವಾಗ, ಪ್ರತಿಯೊಬ್ಬರೂ ತಾವು ಆ ಬಗ್ಗೆ ತಿಳಿವಳಿಕೆಯಿರುವವರು ಎಂದೇ ಭಾವಿಸುತ್ತಾರೆ. ಈ ಮಾಹಿತಿಗಳು, ಸಾಮಾನ್ಯವಾಗಿ ಸಾಂಪ್ರದಾಯಿಕ ಮನೋಭಾವನೆಗಳನ್ನೇ ಬಲಪಡಿಸುವ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ. ಸಾಂಪ್ರದಾಯಿಕ ಮನೋಭಾವನೆಗಳಲ್ಲಿರುವುದು ಎರಡೇ ಆಯ್ಕೆ – ಪರ ಅಥವಾ ವಿರೋಧ. ಇವೆರಡರಲ್ಲಿ ಯಾವುದು ನನಗೆ ಹೆಚ್ಚು ನೋವನ್ನುಂಟು ಮಾಡಿದೆ ಎಂದು ಹೇಳವುದು ವೈಯಕ್ತಿಕವಾಗಿ ನನಗೆ ಕಷ್ಟಸಾಧ್ಯವಾಗಿದೆ. ನಾನೊಬ್ಬ ಬರಹಗಾರನಾಗಿ ಮಾತನಾಡುತ್ತಿರುವೆ: ಸಾಮಾಜಿಕ ದೃಷ್ಟಿಯಿಂದ ನೋಡುವುದಾದರೆ, ಯಾವುದೇ ಕಾರಣಕ್ಕಾಗಲೀ, ಅದೆಷ್ಟೇ ಅಪೂರ್ಣ ಪ್ರಕ್ರಿಯೆಯಾಗಿರಲೀ ಮತ್ತದು ಯಾವುದೇ ರೀತಿಯಲ್ಲಿ ವ್ಯಕ್ತವಾಗಲೀ, ಕೆಟ್ಟ-ಆಲೋಚನೆಗಳಿಂದ ಒಳ್ಳೆಯ-ಆಲೋಚನೆಗಳತ್ತ ಹೊರಳುವುದು, ಬದಲಾವಣೆ ಇಲ್ಲವೇ ಇಲ್ಲ ಎನುವುದಕ್ಕಿಂತ ಬಹುಪಾಲು ಮೇಲು ಎಂಬುದು ನನಗೆ ತಿಳಿದಿದೆ.

ಆದರೆ, ನನ್ನ ಕಣ್ಣೋಟದಲ್ಲಿ, ಮನೋಭಾವಗಳ, ವರ್ತನೆಗಳ ಮೇಲ್ಮೈಯನ್ನು ಸರಿಸಿ, ಅದರ ಆಳದಲ್ಲಿ ಅಡಗಿರುವ ಮೂಲವನ್ನ ಸ್ಪರ್ಷಿಸಿ, ಪರೀಕ್ಷಿಸುವುದು ಒಬ್ಬ ಬರಹಗಾರನ ಕೆಲಸವೇ ಆಗಿರುತ್ತದೆ. ಈ ಕಣ್ಣೋಟದಲ್ಲಿ ನೀಗ್ರೋಗಳ ಸಮಸ್ಯೆಯು ಬಹುತೇಕವಾಗಿ ಕೈಗೆಟುಕದಂತಾಗಿದೆ. ನೀಗ್ರೋಗಳ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಮಾತ್ರವಲ್ಲ, ಬಹಳ ಕಳಪೆಯಾಗಿ ಬರೆಯಲಾಗಿದೆ. ನೀಗ್ರೋ ಒಬ್ಬ ತನ್ನ ಆಲೋಚನೆಗಳನ್ನು ಸ್ಪುಟವಾಗಿ ಮಂಡಿಸಲು ತೆತ್ತಬೇಕಾದ ಬೆಲೆಯೆಂದರೆ ತನ್ನ ಬಗ್ಗೆ ಆಳವಾಗಿ ಹೇಳಿಕೊಳ್ಳಲಿಕ್ಕೆ ಏನೂ ಇಲ್ಲ ಎಂಬುದನ್ನು ಕಂಡುಕೊಳ್ಳುವುದೇ ಆಗಿದೆ ಎಂದು ಹೇಳಬಹುದು. (“ನೀವು ನನಗೆ ಭಾಷೆಯನ್ನು ಕಲಿಸಿದ್ದೀರಿ” ಎಂದು ಕ್ಯಾಲಿಬನ್ ಪ್ರಾಸ್ಪೆರೊಗೆ ಹೇಳುತ್ತಾನೆ, “ಮತ್ತದರಿಂದ ನನಗಾದ ಲಾಭವೆಂದರೆ, ಹಿಡಿಶಾಪ ಹಾಕುವುದು ಹೇಗೆಂದು ನನಗೆ ತಿಳಿದಿದೆ.”) ಈ ಸಮಸ್ಯೆ ಎಷ್ಟೆಲ್ಲಾ ಸಾಮಜಿಕ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದನ್ನು ಈಗ ಪರಿಗಣಿಸಿ. ಈ ಚಟುವಟಿಕೆಗಳು ಬಿಳಿಯರು ಮತ್ತು ನೀಗ್ರೋಗಳೆಲ್ಲರೂ ಕೂಡ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಅಗತ್ಯತೆಯನ್ನು ಸೃಷ್ಟಿಸಿ ಮುಂದೆ ಒಳ್ಳೆಯ ದಿನವೊಂದನ್ನು ನನಸಾಗಿಸಲು ನಾವು ಶ್ರಮಿಸಬೇಕೆಂದು ಒತ್ತಾಯಿಸುತ್ತದೆ. ಅದೂ ಓಕೆ. ಇವುಗಳು ತಿಳಿನೀರಿನಲ್ಲಿ ಸದಾ ಅಬ್ಬರದಲೆಗಳನ್ನು ಸೃಷ್ಟಿಸುತ್ತಾ ನೀಗ್ರೋಗಳ ಪ್ರಗತಿಯನ್ನು ಸಾಧ್ಯವಾಗಿಸಿವೆ. ಅದೇನೆ ಆಗಿದ್ದರೂ, ಸಾಮಾಜಿಕ ಸಂಗತಿಗಳು ಸಾಮಾನ್ಯವಾಗಿ ಬರಹಗಾರರ ಪ್ರಧಾನ ಕಾಳಜಿ ಆಗಿರಬೇಕೋ ಬೇಡವೋ ಎಂಬ ಪ್ರಶ್ನೆಯ ಆಚೆಗೆ, ಅದು ಬರಹಗಾರರ ಪ್ರಧಾನ ಕಾಳಜಿಯಾಗಿಲ್ಲ ಎಂಬುದಂತೂ ವಾಸ್ತವ; ಏನಿಲ್ಲವೆಂದರೂ ಮುಂದಣದ ಬಗ್ಗೆ ಚಿಂತಿಸುವುದಕ್ಕೂ ಮೊದಲು, ಹಿಂದಣವನ್ನು ಗಮನಿಸುವುದಕ್ಕಾಗಿ; ತನ್ನ ಸ್ಪಷ್ಟತೆಗಾಗಿ; ಅವನು ತನ್ನ ಮತ್ತು ಸಾಮಾಜಿಕ ಸಂಗತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕ. ನೀಗ್ರೋಗಳ ಸಮಸ್ಯೆಗಳ ವಿಚಾರದಲ್ಲಿ ಮಾತ್ರ, ತಮ್ಮದೇ ಆದ ಕಾರಣಗಳಿಗಾಗಿ ಬಿಳಿಯರೂ ಮತ್ತು ಕರಿಯರಿಬ್ಬರೂ ಒಮ್ಮೆಯೂ ಹಿಂತಿರುಗಿ ನೋಡುವ ಒಂದು ಸಣ್ಣ ವ್ಯವಧಾನವನ್ನಾಗಲೀ, ಆಶಯವನ್ನಾಗಲೀ ಹೊಂದಿರುವುದಿಲ್ಲ; ಆದರೆ, ಇಂದಿನ ಸಂಗತಿಗಳನ್ನು ನಮ್ಮ ಕಣ್ಣ ಮುಂದೆ ವ್ಯವಸ್ಥಿತವಾಗಿ ಜೋಡಿಸುವುದು ನಮ್ಮ ಭೂತವೇ ಆಗಿರುತ್ತದೆ. ಅಲ್ಲದೇ, ಎಲ್ಲಿಯವರೆಗೆ ಗತವನ್ನು ಪ್ರಾಮಾಣಿಕ ಮೌಲ್ಯಮಾಪನಕ್ಕೆ ಒಳಪಡಿಸಲು ನಾವು ನಿರಾಕರಿಸುತ್ತೇವೋ ಅಲ್ಲಿಯವರೆಗೆ ಭೂತಕಾಲ ನಮ್ಮ ಕಣ್ಣಿಗೆ ಭಯಾನಕವಾಗಿಯೇ ಕಾಣುತ್ತಿರುತ್ತದೆ.

ನಾನು ಜಗತ್ತಿನ ಪಾಶ್ಚಾತ್ಯ ದೇಶಗಳಿಗೆ ಜನಿಸಿದ ಅಕ್ರಮ ಸಂತಾನದಂತಿದ್ದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ಸಂದರ್ಭವೇ ನನ್ನ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಘಟ್ಟವಾಗಿತ್ತು ಎಂಬ ಅರಿವು ನನಗಿದೆ; ನಾನು ನನ್ನ ಇತಿಹಾಸದ ಜಾಡನ್ನು ಹಿಡಿದು ಮುನ್ನಡೆದಾಗ, ನಾನು ನನ್ನನ್ನು ಯುರೋಪಿನ ಬದಲಿಗೆ ಆಫ್ರಿಕಾದಲ್ಲಿ ಕಂಡುಕೊಂಡೆ. ಇದರರ್ಥ, ಕೆಲವು ಸೂಕ್ಷ್ಮ ಮತ್ತು ಗಂಭೀರ ರೀತಿಗಳಲ್ಲಿ, ನಾನು ಷೇಕ್ಸ್‌ಪಿಯರ್‌ನಿಗೆ, ಬಾಕ್‌ನಿಗೆ, ರೆಂಬ್ರಾಂಟ್‌ನಿಗೆ, ಪ್ಯಾರಿಸ್ಸಿನ ಕಲ್ಲುಗಳಿಗೆ, ಚಾರ್ಟ್ರೆಸ್‌ನಲ್ಲಿರುವ ಕೆಥೆಡ್ರಲ್ಲಿಗೆ ಮತ್ತು ಎಂಪೈರ್ ಸ್ಟೇಟ್ ಬಿಲ್ಡಿಂಗಿಗೆ ವಿಶಿಷ್ಟವಾದ ಮನೋವೃತ್ತಿಯನ್ನೇ ತಂದುಕೊಟ್ಟಿದ್ದೇನೆ ಎಂಬುದಾಗಿತ್ತು. ಇವುಗಳ್ಯಾವನ್ನೂ ನಾನು ಸೃಷ್ಟಿಸಿರಲಿಲ್ಲ. ಅವು ನನ್ನ ಇತಿಹಾಸವನ್ನು ಒಳಗೊಂಡಿರಲಿಲ್ಲ; ಅವುಗಳಲ್ಲಿ ನನ್ನ ಪ್ರತಿಬಿಂಬ ಕಾಣುತ್ತವೆಯೇ ಎಂದು ಜೀವನವಿಡೀ ಹುಡುಕಾಡಬಹುದು. ಆದರೆ, ಯಾವುದೇ ಹಕ್ಕಿಲ್ಲದೆಯೇ ನಾನು ಅದರೊಳಗೆ ಹೊಕ್ಕಿದ್ದೆ; ಅವು ನನ್ನ ಪರಂಪರೆಯಾಗಿರಲಿಲ್ಲ. ಮಾತ್ರವಲ್ಲ, ಬೇರೆ ಯಾವುದಾದರೂ ಪರಂಪರೆಯನ್ನು ಬಳಸಿಕೊಳ್ಳೋಣ ಎಂದರೆ, ಅಂತಹ ಯಾವುದೇ ಪರಂಪರೆ ನನಗಿರಲಿಲ್ಲ. ಆ ಕಾಡುಗಳಿಗಾಗಲೀ ಅಥವಾ ಬುಡಕಟ್ಟುಗಳಿಗಾಗಲೀ ಸರಿಹೊಂದುತ್ತಿರಲಿಲ್ಲ. ಹಾಗಾಗಿ, ಬಿಳಿಯರ ಶತಮಾನಗಳನ್ನೇ ನಾನು ವಶಪಡಿಸಿಕೊಳ್ಳಬೇಕು. ಅವುಗಳನ್ನೇ ನಾನು ನನ್ನದಾಗಿಸಿಕೊಳ್ಳಬೇಕು- ಈ ಸಂರಚನೆಯಲ್ಲಿ ನನ್ನ ವಿಶೇಷ ಸ್ಥಾನ ಮತ್ತು ನನ್ನ ವಿಶಿಷ್ಟ ಮನೋವೃತ್ತಿ ಮತ್ತು ವರ್ತನೆಗಳನ್ನು ಮೊದಲು ನಾನೇ ಒಪ್ಪಿಕೊಳ್ಳಬೇಕು- ಇಲ್ಲವಾದರೆ, ಯಾವುದೇ ಸಂರಚನೆಗಳಲ್ಲಿ ನನಗೆ ಸ್ಥಾನವಿರುತ್ತಿರಲಿಲ್ಲ. ಅತ್ಯಂತ ಕಷ್ಟವೆನಿಸಿದ ಸಂಗತಿಯೆಂದರೆ, ಅಮೆರಿಕದ ನೀಗ್ರೋ ಒಬ್ಬ ಸಾರ್ವಜನಿಕರ ಕಣ್ಣಿನಲ್ಲಿ ಪ್ರಗತಿ ಸಾಧಿಸಲು ತೆತ್ತಬೇಕಾದ ಬೆಲೆಯಾಗಿ ತನ್ನಿಂದಲೇ ತಾನು ಬಚ್ಚಿಟ್ಟುಕೊಳ್ಳಬೇಕಾದ ಕೆಲವು ವಿಚಾರಗಳನ್ನು, ಅಂದರೆ, ನನ್ನಿಂದಲೇ ನಾನು ಮುಚ್ಚಿಟ್ಟಿದ್ದ ಕೆಲವು ವಿಚಾರಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು; ಅಂತಹ ಸ್ಥಿತಿಯನ್ನು ನಾನು ದ್ವೇಷಿಸುತ್ತಿದ್ದೆ ಮತ್ತು ಬಿಳಿಯರನ್ನು ಕಂಡರೆ ಸಾಕು ಹೆದರುತ್ತಿದ್ದೆ. ಇದರರ್ಥ, ನಾನು ಕಪ್ಪು ಜನರನ್ನು ಪ್ರೀತಿಸುತ್ತಿದ್ದೆ ಎಂದಲ್ಲ; ಇದಕ್ಕೆ ವ್ಯತಿರಿಕ್ತವೆಂಬಂತೆ, ಬಹುಶಃ ಜಗತ್ತಿಗೊಬ್ಬ ರೆಂಬ್ರಾಂಟ್‌ನನ್ನೂ ನೀಡಲು ಅವರು ವಿಫಲರಾಗಿದ್ದರೆಂದು ನಾನವರನ್ನು ತಿರಸ್ಕರಿಸಿದ್ದೆ. ಇದರಿಂದಾಗಿ, ನಾನು ಜಗತ್ತನ್ನು ದ್ವೇಷಿಸುತ್ತಿದ್ದೆ ಮತ್ತು ಜಗತ್ತಿಗೆ ಹೆದರುತ್ತಿದ್ದೆ. ಹಾಗೆಂದ ಮಾತ್ರಕ್ಕೆ, ಅದು ದ್ವೇಷ ಮತ್ತು ಹೆದರಿಕೆಗೆ ಸೀಮಿತವಾಗಿರಲಿಲ್ಲ. ಬದಲಿಗೆ, ನನ್ನ ಮೇಲಿನ ಸಂಪೂರ್ಣ, ಅಂದರೆ ನನ್ನನ್ನೇ ಕೊಂದುಕೊಳ್ಳುವಷ್ಟು ಅಧಿಕಾರವನ್ನು ಜಗತ್ತಿನ ಕೈಗಿಟ್ಟಿದ್ದೆ. ಅಷ್ಟು ಮಾತ್ರವಲ್ಲ, ಇಂತಹ ಸ್ವಯಂ-ನಾಶಕಾರಿ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿ ನಾನು ಬರೆಯುವುದಿರಲಿ, ಬರೆಯಬೇಕೆಂದು ಆಶಿಸಲೂ ಸಾಧ್ಯವಿರಲಿಲ್ಲ.

ಇದನ್ನೂ ಓದಿ: ಜೇಮ್ಸ್ ಬಾಲ್ಡ್ವಿನ್ ನೂರರ ನೆನಪು

ಯಾರೇ ಆಗಲಿ, ಕೇವಲ ತಮ್ಮ ಸ್ವಾನುಭವಗಳಿಂದ ಮಾತ್ರವೇ ಬರೆಯುತ್ತಾರೆ. ಈ ಅನುಭವಗಳು ತೊಟ್ಟಿಕ್ಕಿಸಬಹುದಾದ ಕೊನೆಯ ಹನಿ; ಅದು ಸಿಹಿಯೇ ಆಗಿರಲಿ ಅಥವಾ ಕಹಿಯೇ ಆಗಿರಲಿ; ಅದನ್ನು ಪಟ್ಟುಬಿಡದೆ ಪಡೆಯುತ್ತಾನೆಯೇ ಎಂಬುದರ ಮೇಲೆಯೇ ಎಲ್ಲವೂ ಅವಲಂಬಿತವಾಗಿರುತ್ತದೆ. ಅಸ್ತವ್ಯಸ್ಥವಾದ ಜೀವನದಿಂದ ಕಲೆಯೆಂಬ ವ್ಯವಸ್ಥೆಯನ್ನು ಮರುಸೃಷ್ಟಿಸುವುದೇ ಕಲಾವಿದನ ಏಕೈಕ ನಿಜಕಾಳಜಿಯಾಗಿದೆ. ಹಾಗಿರುವಾಗ, ನೀಗ್ರೋ ಬರಹಗಾರನಾಗಿ ನಾನು ಅನುಭವಿಸಿದ ಕಷ್ಟವೆಂದರೆ, ನನ್ನ ಸಾಮಾಜಿಕ ಪರಿಸ್ಥಿತಿಯು ನನ್ನಿಂದ ಅನೇಕ ವಿಚಾರಗಳನ್ನು ಬೇಡುತ್ತಿತ್ತು. ಅಲ್ಲದೇ, ಹಲವು ನಿಜ ಅಪಾಯಗಳಿದ್ದ ಕಾರಣ ನನ್ನ ಸ್ವಂತ ಅನುಭವಗಳನ್ನು ತುಂಬಾ ಹತ್ತಿರದಿಂದ ನಿಕಶಕ್ಕೊಡ್ಡಿ ಪರೀಕ್ಷಿಸುವುದನ್ನು ನನ್ನಿಂದ ನಿಬಂಧಿಸಲಾಗಿತ್ತು.

ಮೇಲೆ ವಿವರಿಸಿದ ಸಂಧಿಗ್ಧತೆ ಬಹಳ ವಿಶಿಷ್ಟವಾದದ್ದು ಎಂದಾಗಲೀ, ಅದು ನನ್ನೊಬ್ಬನ ಅನುಭವ ಎಂದಾಗಲೀ ನಾನು ಭಾವಿಸುವುದಿಲ್ಲ. ಬರಹಗಾರರು ಭೀಕರ ಎನಿಸುವಷ್ಟು ಸ್ಪಷ್ಟವಾದ ಭಾಷಾ ಮಾಧ್ಯಮದಲ್ಲಿ ಕೆಲಸ ಮಾಡುತ್ತರಾದರೂ; ನೀಗ್ರೋಗಳು ಬರೆದಿರುವ ಗದ್ಯ ಏಕಿಷ್ಟು ನಿಸ್ತೇಜವಾಗಿಯೂ, ಕಠೋರವಾಗಿರುತ್ತದೆ ಎಂಬುದಕ್ಕೆ ಇದು ಕೂಡ ಸ್ವಲ್ಪಮಟ್ಟಿಗೆ ಕಾರಣವಾಗಿರಬಹುದೆಂದು ನಾನು ಭಾವಿಸಿದ್ದೇನೆ. ಇದಕ್ಕೆ ಅಪವಾದವೆಂಬಂತೊರುವ ನೀಗ್ರೋಗಳ ಸಂಗೀತವನ್ನು ಹೊರತುಪಡಿಸಿ ನೀಗ್ರೋಗಳ ಜೀವನ ಮತ್ತು ಅವರ ಭಾಷೆಗಳ ಬಗ್ಗೆ ಇರುವ ಯಾವುದೇ ಆಕರಗಳಲ್ಲಿ ಇದನ್ನು ನಾವು ಗುರುತಿಸಬಹುದಾಗಿದೆ. ಇಲ್ಲಿ ನಾನು ನನ್ನ ನೀಗ್ರೋ ಅಸ್ಮಿತೆಯ ಬಗ್ಗೆ ಇಷ್ಟೆಲ್ಲಾ ದಾಖಲಿಸಿರುವುದು ನಾನು ಅದೊಂದರ ಬಗ್ಗೆ ಮಾತ್ರ ಬರಯಬಲ್ಲೆ ಎಂಬುದಕ್ಕಲ್ಲ. ಬದಲಿಗೆ, ನಾನು ಬೇರ್ಯಾವುದೇ ವಿಷಯಗಳ ಬಗ್ಗೆ ಬರೆಯಲು ಆಶಿಸುವುದಕ್ಕೂ ಮೊದಲು ನಾನು ತೆರೆಯಬೇಕಾದ ಗೇಟ್ ಅದು ಎಂಬ ಕಾರಣಕ್ಕೆ. ಅಮೆರಿಕದಲ್ಲಿನ ನೀಗ್ರೋಗಳ ಸಮಸ್ಯೆಯನ್ನು, ಅದರ ಪರಿಸರ ಮತ್ತು ಹಿನ್ನಲೆಯನ್ನು ಗಮನಿಸದೆಯೇ ಚರ್ಚಿಸಬಹುದೆಂದು ನಾನು ಭಾವಿಸುವುದಿಲ್ಲ; ಅದರ ಪರಿಸರದಲ್ಲಿ ದೇಶದ ಇತಿಹಾಸ, ಸಂಪ್ರದಾಯಗಳು, ಪದ್ಧತಿಗಳು, ನೈತಿಕ ಊಹಪೋಹ ಮತ್ತು ಪೂರ್ವಾಪರಗಳೆಲ್ಲವೂ; ಅಥವಾ ಒಟ್ಟಿನಲ್ಲಿ ಹೇಳುವುದಾದರೆ, ಸಾಮಾನ್ಯ ಸಾಮಾಜಿಕ ರಚನೆಯನ್ನು ಗಮನಿಸದೆಯೇ ನೀಗ್ರೋಗಳ ಸಮಸ್ಯೆಯನ್ನು ಚರ್ಚಿಸಲಾಗುವುದಿಲ್ಲ. ಅದು ಎಲ್ಲರನ್ನು ಬಾಧಿಸುತ್ತಿದೆ ಎಂಬುದು ಕಾಣಿಸುವುದಿಲ್ಲವಾದರೂ ಅಮೆರಿಕದಲ್ಲಿನ ಯಾರೂ ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ಅದರ ಜವಾಬ್ದಾರಿಯನ್ನು ಹೊತ್ತಿರುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಏಕೆಂದರೆ, ಈ ಸಮಸ್ಯೆಯ ಬಗ್ಗೆ ಮಾತನಾಡಲಾಗುವ ಬಹುತೇಕ ಕಡೆಗಳಲ್ಲಿ ಇದು ಪ್ರತ್ಯೇಕವಾದ ಒಂದು ವಿಷಯವೆಂಬಂತೆ ಮಾತನಾಡಲಾಗುತ್ತದೆ. ಆದರೆ, ಫಾಕ್ನರ್ ಅವರ ಕೃತಿಗಳಲ್ಲಿ, ರಾಬರ್ಟ್ ಪೆನ್ ವಾರೆನ್ ಅವರ ನಿಲುವುಗಳಲ್ಲಿ ಮತ್ತು ಕೆಲವು ನಿರ್ದಿಷ್ಟ ಬರಹಗಳಲ್ಲಿ, ಮತ್ತು, ಎಲ್ಲಕ್ಕಿಂತ ಮುಖ್ಯವಾಗಿ ರಾಲ್ಫ್ ಎಲಿಸನ್ ಮುನ್ನಲೆಗೆ ಬಂದ ಪ್ರಕ್ರಿಯೆಯಲ್ಲಿ ಕನಿಷ್ಟ ಈ ಬಗ್ಗೆ ಪ್ರಾಮಾಣಿಕ ಶೋಧವನ್ನು ಕೈಗೊಳ್ಳುವ, ತೀಕ್ಷ್ಣವಾದ ಹುಡುಕಾಟ ನಡೆಸುವ ಪ್ರಯತ್ನಗಳ ಆರಂಭವನ್ನು ನಾವು ಕಾಣಬಹುದು. ನನ್ನ ಓದಿನ ಮಿತಿಯಲ್ಲಿ, ನೀಗ್ರೋ ಜೀವನದ ಹಲವು ಅಸ್ಪಷ್ಟತೆಗಳನ್ನೂ, ವ್ಯಂಗ್ಯವನ್ನೂ ಮೊದಲಬಾರಿಗೆ, ಅದರಲ್ಲೂ ಅದ್ಭುತವಾಗಿ ತನ್ನ ಭಾಷೆಯಲ್ಲಿ ದುಡಿಸಿಕೊಂಡ ನೀಗ್ರೋ ಬರಹಗಾರ ಎಂದರೆ, ಅದು ಮಿಸ್ಟರ್ ಎಲಿಸನ್.

ಇನ್ನು ನನ್ನ ಆಸಕ್ತಿಗಳು: ಹದಿನಾರು-ಮಿಲಿಮೀಟರ್‌ನ ಕ್ಯಾಮೆರಾ ಹೊಂದುವ ಮತ್ತು ಪ್ರಯೋಗಾತ್ಮಕ ಚಲನಚಿತ್ರಗಳನ್ನು ಮಾಡಬೇಕೆನ್ನುವ ವಿಕ್ಷಿಪ್ತ ಬಯಕೆಯನ್ನು ಆಸಕ್ತಿಯೆಂದು ವರ್ಗೀಕರಿಸದ ಹೊರತು ನನಗೆ ಅಂತಹ ಯಾವುದಾದರೂ ಆಸಕ್ತಿ ಇದೆಯಾ? ಗೊತ್ತಿಲ್ಲ. ಅದನ್ನು ಹೊರತುಪಡಿಸಿ, ತಿನ್ನುವುದು ಮತ್ತು ಕುಡಿಯುವುದೆಂದರೆ ನನಗೆ ಬಹಳ ಇಷ್ಟ- ನನಗೆ ತಿನ್ನಲು ಸಾಕಾಗುವಷ್ಟು ಸಿಕ್ಕಿದ್ದೇ ಕೆಲವು ಬಾರಿ ಎನ್ನುವುದು ನನ್ನ ಕರಾಳ ಮತ್ತು ನಿಶ್ಚಿತ ಅಭಿಪ್ರಾಯ (ಮುಂದಿನ ಊಟದ ಬಗ್ಗೆ ನೀವು ಚಿಂತಿಸುತ್ತಿದ್ದರೆ ಈ ನಿಮ್ಮ ಊಟ ಮುಂದೆ ಇದ್ದರೂ ಸಾಕಷ್ಟು ತಿನ್ನಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ)- ಮತ್ತು, ನನ್ನೊಂದಿಗೆ ತೀವ್ರವಾದ ಭಿನ್ನಾಭಿಪ್ರಾಯಗಳನ್ನು ಹೊಂದಿರದ ಜನರೊಂದಿಗೆ ವಾದ-ಸಂವಾದ ಮಾಡುವುದೆಂದರೆ ನನಗೆ ಇಷ್ಟ. ನಗುವುದೆಂದರೆ ನನಗೆ ಬಹಳ ಇಷ್ಟ. ಬೊಹಿಮಿಯಾ ಮತ್ತು ಬೊಹಿಮಿಯರು ನನಗೆ ಹಿಡಿಸಲ್ಲ. ಸುಖವನ್ನೇ ತಮ್ಮ ಜೀವನದ ಮುಖ್ಯ ಗುರಿಯಾಗಿರಿಸಿಕೊಂಡಿರುವ ಜನರನ್ನು ಮತ್ತು ಯಾವುದರ ಬಗ್ಗೆಯೂ ಶ್ರದ್ಧೆಯಿರದ ಜನರನ್ನು ನಾನು ಇಷ್ಟಪಡುವುದಿಲ್ಲ. ನೀಗ್ರೋ ಎಂಬ ಕಾರಣಕ್ಕೆ ನನ್ನನ್ನು ಇಷ್ಟಪಡುವ ಜನರನ್ನು ನಾನು ಇಷ್ಟಪಡುವುದಿಲ್ಲ; ಅಂತೆಯೇ, ನೀಗ್ರೋ ಎಂಬ ಕಾರಣಕ್ಕೆ ನನ್ನನ್ನು ತಿರಸ್ಕಾರಭಾವದಿಂದ ಕಾಣುವ ಜನರನ್ನು ಕೂಡ ನಾನು ಇಷ್ಟಪಡುವುದಿಲ್ಲ. ನಾನು ಅಮೆರಿಕವನ್ನು ಬೇರೆಲ್ಲಾ ದೇಶಗಳಿಗಿಂತಲೂ ಹೆಚ್ಚು ಪ್ರೀತಿಸುತ್ತೇನೆ ಮತ್ತು ಈ ಕಾರಣಕ್ಕಾಗಿಯೇ ಅವಳನ್ನು ನಿರಂತರವಾಗಿ ಟೀಕಿಸುವ ಹಕ್ಕು ಇರಬೇಕೆಂಬ ಒತ್ತಾಯ ನನ್ನದು. ಸಿದ್ಧಾಂತಗಳ್ಯಾವುದೂ ಪ್ರಶ್ನಾತೀತವಲ್ಲ ಎಂದು ನಾನು ನಂಬುತ್ತೇನೆ; ಅದೆಷ್ಟೇ ಮಹೋನ್ನತ ತತ್ವವಾಗಿದ್ದರೂ, ಜೀವನದ ವಾಸ್ತವಗಳನ್ನು ಬಳಸಿಕೊಂಡು ಅದನ್ನು ಸಾಣೆ ಹಿಡಿದು ಮಾರ್ಪಡಿಸಿಕೊಳ್ಳಬೇಕು ಅಥವಾ ಅದನ್ನು ಪುಡಿಪುಡಿಮಾಡಬೇಕು ಎಂದು ನಾನು ನಂಬಿದ್ದೇನೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮದೇ ಆದ ನೈತಿಕತೆಯನ್ನು ಕಂಡುಕೊಂಡು, ಅದೇ ನಮಗೆ ಸರಿದಾರಿ ತೋರುತ್ತದೆಯೆಂದು ಆಶಿಸುತ್ತಾ, ಆ ನೈತಿಕತೆಯನ್ನೇ ಕೇಂದ್ರವಾಗಿರಿಸಿಕೊಂಡು ಜಗತ್ತಿನೆಲ್ಲೆಡೆ ಸಂಚರಿಸಬೇಕು. ಅನೇಕ ಜವಾಬ್ದಾರಿಗಳು ನನ್ನ ಹೆಗಲ ಮೇಲಿವೆ ಎಂದು ನಂಬಿದ್ದೇನೆ. ಆದರೆ, ಹೆಮಿಂಗ್ವೇ ಹೇಳುವಂತೆ, ಬುದುಕುಳಿದು, ನನ್ನ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕಿಂತಲೂ ಹಿರಿದಾದ ಜವಾಬ್ದಾರಿ ಬೇರ್‍ಯಾವುದೂ ಇಲ್ಲ.

ನಾನೊಬ್ಬ ಪ್ರಾಮಾಣಿಕ ವ್ಯಕ್ತಿ ಮತ್ತು ಒಳ್ಳೆಯ ಬರಹಗಾರ ಆಗಬೇಕೆಂದಿರುವೆ.

ಜೇಮ್ಸ್ ಬಾಲ್ಡ್‌ವಿನ್
ಅನುವಾದ: ಶಶಾಂಕ್. ಎಸ್. ಆರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...