ಪ್ರಧಾನಿ ನರೇಂದ್ರ ಮೋದಿ, ಕಾನೂನು ಜಾರಿ ಸಂಸ್ಥೆಗಳ ವಿರುದ್ದ ಕ್ಯಾಂಪಸ್ ಒಳಗಡೆ ಘೋಷಣೆಗಳನ್ನು ಕೂಗದಂತೆ ಮತ್ತು ಪ್ರತಿಭಟಿಸದಂತೆ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
“ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಯಾವುದೇ ‘ಸಾಂವಿಧಾನಿಕ ಗಣ್ಯರ’ ವಿರುದ್ಧ ಪ್ರತಿಭಟನೆಗಳು ಮತ್ತು ಧರಣಿಗಳನ್ನು ಅನುಮತಿಸಲಾಗುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ” ವರದಿಗಳು ತಿಳಿಸಿವೆ.
ಈ ಕುರಿತು ಜ್ಞಾಪಕ ಪತ್ರ ಹೊರಡಿಸಿರುವ ವಿವಿಯ ರಿಜಿಸ್ಟ್ರಾರ್ ಎಂ.ಡಿ ಮಹತಾ ಆಲಂ ರಿಝ್ವಿ ಅವರು “ಕೆಲವು ವಿದ್ಯಾರ್ಥಿಗಳು ಪೂರ್ವಾನುಮತಿ ಪಡೆಯದೆ ಶಿಕ್ಷಣ ಮತ್ತು ವಿವಿಗೆ ಸಂಬಂಧಿಸದಂತೆ ವಿಷಯಗಳನ್ನು ಮುಂದಿಟ್ಟುಕೊಂಡು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ದೇಶದ ಇತರ ಕಾನೂನು ಜಾರಿ ಸಂಸ್ಥೆಗಳ ವಿರುದ್ಧ ಘೋಷಣೆ ಕೂಗುವುದು, ಪ್ರತಿಭಟಿಸುವುದನ್ನು ವಿವಿ ಗಮನಿಸಿದೆ ಎಂದಿದ್ದಾರೆ.
ನವೆಂಬರ್ 29ರಂದು ಹೊರಡಿಸಿದ ಜ್ಞಾಪಕ ಪತ್ರದಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಮತ್ತು ಧರಣಿಗಳಿಗೆ ಪೂರ್ವಾನುಮತಿ ಅಗತ್ಯ ಎಂಬ ಆಗಸ್ಟ್ 2022ರ ನಿರ್ದೇಶವನ್ನು ವಿದ್ಯಾರ್ಥಿಗಳಿಗೆ ನೆನಪಿಸಿದ್ದಾರೆ.
ವಿವಿಯ ಜ್ಞಾಪಕ ಪತ್ರಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎಡಪಕ್ಷಗಳ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) ವಿವಿಯ ನಿರ್ದೇಶನಗಳನ್ನು ಖಂಡಿಸಿದೆ. ಇದು ಶೈಕ್ಷಣಿಕ ಸಂಸ್ಥೆಗಳ ಮೇಲಿನ ‘ಸಂಘ ಪರಿವಾರದ ಸರ್ವಾಧಿಕಾರಿ ಹಿಡಿತ’ದ ಪ್ರತಿಬಿಂಬ ಎಂದಿದೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಎಐಎಸ್ಎ, “ಈ ನಿರ್ದೇಶನವು ಕೇವಲ ವಿದ್ಯಾರ್ಥಿಗಳ ಮೇಲಿನ ದಾಳಿಯಲ್ಲ. ಇದು ವಿಶ್ವವಿದ್ಯಾನಿಲಯದ ಮೂಲತತ್ವದ ಮೇಲಿನ ದಾಳಿಯಾಗಿದೆ. ಬಿನ್ನಾಭಿಪ್ರಾಯವನ್ನು ಸಮಸ್ಯೆಯೊಂದಿಗೆ ಸಮೀಕರಿಸುವ ಮೂಲಕ ವಿವಿ ಆಡಳಿತವು ದೇಶದಾದ್ಯಂತ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಬಿಜೆಪಿಯ ದೊಡ್ಡ ಯೋಜನೆಯ ಭಾಗವಾಗಿದೆ ಎಂಬುವುದನ್ನು ತೋರಿಸಿದೆ. ಜಾಮಿಯಾ ವಿದ್ಯಾರ್ಥಿಗಳಿಗೆ ಸೇರಿದ್ದು, ಬಿಜೆಪಿ ಅಥವಾ ಸಂಘ ಪರಿವಾರಕ್ಕೆ ಅಲ್ಲ” ಎಂದು ಕಿಡಿಕಾರಿದೆ.
ವರದಿಗಳ ಪ್ರಕಾರ, ವಿವಿಯು ತನ್ನ ಜ್ಞಾಪಕ ಪತ್ರವನ್ನು ಅಧ್ಯಾಪಕರು ಮತ್ತು ವಿಭಾಗಗಳಾದ್ಯಂತ ವಿತರಿಸಿದೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು ಮತ್ತು ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : “ಮಸೀದಿಗಳ ಸಮೀಕ್ಷೆಗೆ ಅನುಮತಿಸುವ ಮೂಲಕ ‘ಸಂವಿಧಾನಕ್ಕೆ ಅಪಚಾರ’ವೆಸಗಿದ ನ್ಯಾ. ಚಂದ್ರಚೂಡ್” : ದುಷ್ಯಂತ್ ದವೆ


