ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದೆ. ಸಿಂಧಗಿ ಕ್ಷೇತ್ರಕ್ಕೆ ನಾಜಿಯಾ ಶಕೀಲಾ ಅಂಗಡಿ ಅವರನ್ನು, ಹಾನಗಲ್ ಕ್ಷೇತ್ರಕ್ಕೆ ನಿಯಾಜ್ ಶೇಕ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು, “ಮುಸ್ಲಿಂ ಮತಗಳನ್ನು ಒಡೆದು ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ಯತ್ನಿಸಿದೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
‘ಬಿಜೆಪಿಗೆ ಅನುಕೂಲ ಮಾಡಲು ಜೆಡಿಎಸ್‌ನವರು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುತ್ತಾರೆ. ಜೆಡಿಎಸ್‌ನವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸುವ ಕೆಲಸ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅದನ್ನೇ ಮಾಡಿದ್ದರು. ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಸಂಪುಟದಲ್ಲಿ ಏಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಟಿಕೆಟ್ ಕೊಡಲ್ಲ’ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸಿಂಧಗಿಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್, ಅಶೋಕ್ ಮನಗೂಳಿ ಅವರನ್ನು ಆಯ್ಕೆ ಮಾಡಿದೆ. ಹಾನಗಲ್ ಕ್ಷೇತ್ರದ ಅಭ್ಯರ್ಥಿ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ‘ಹಾನಗಲ್‌ನಲ್ಲಿ ಮನೋಹರ ತಹಶೀಲ್ದಾರ್ ಮತ್ತು ಶ್ರೀನಿವಾಸ ಮಾನೆ ಆಕಾಂಕ್ಷಿಗಳು. ನಾವು ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. 2–3 ದಿನಗಳಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಆರೋಪಕ್ಕೆ ಎಚ್‌ಡಿಕೆ ಪ್ರತಿಕ್ರಿಯೆ
ಸಿಂಧಗಿ, ಹಾನಗಲ್ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಟೀಕಿಸಿದ್ದ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
“ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೊಡುವುದು ಬಿಡುವುದು ನಮ್ಮ ಪಕ್ಷದ ಆಂತರಿಕ ವಿಚಾರ. ಅವರಿಗೆ ಟಿಕೆಟ್ ಕೊಡಿ, ಇವರಿಗೆ ಟಿಕೆಟ್ ಕೊಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು? ಹೂ ಈಸ್ ಸಿದ್ದರಾಮಯ್ಯ?” ಎಂದಿದ್ದಾರೆ.
“ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಇದು ನಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಇದು ನಮ್ಮ ನಿಲುವೂ ಕೂಡ. ಈ ಉಸಾಬರಿ ಸಿದ್ದರಾಮಯ್ಯ ಅವರಿಗೆ ಏಕೆ?” ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಅಭ್ಯರ್ಥಿ ಹಾಕಿದರೆ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಅಂತ ಆರೋಪ ಮಾಡುತ್ತಾರೆ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ ಅನ್ನುತ್ತಾರೆ. ಓಬಿಸಿ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹೊರಟಿದ್ದಾರೆ ಎನ್ನುತ್ತಾರೆ. ಹಾಗಾದರೆ ನಾವು ಯಾರನ್ನು ಅಭ್ಯರ್ಥಿ ಮಾಡಬೇಕು? ಬೇರೆಯವರ ಮರ್ಜಿಗೆ ತಕ್ಕಂತೆ ನಾವು ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕೆ? ಎಂದು ಕೇಳಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಟಿಕೆಟ್ ಕೊಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಆ ಸಮುದಾಯಕ್ಕೆ 20ಕ್ಕೂ ಹೆಚ್ಚು ಟಿಕೆಟ್ ನೀಡುತ್ತೇವೆ. ಯಾರನ್ನು ಅಭ್ಯರ್ಥಿ ಮಾಡಬೇಕು? ಮಾಡಬಾರದು? ಎನ್ನುವುದು ನಮ್ಮ ವಿವೇಚನೆ. ನಮಗೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಯಾರು ಎಂದಿದ್ದಾರೆ.
ಜಾತಿ ರಾಜಕೀಯ ಮಾಡಬಾರದು ಅಂತ ಅದೇ ಕಾಂಗ್ರೆಸ್ ಪಕ್ಷದವರೇ ಹೇಳುತ್ತಾರೆ. ಇವರು ನೋಡಿದರೆ ಮಾಡೋದು ಜಾತಿ ರಾಜಕೀಯವನ್ನೇ. ಒಕ್ಕಲಿಗ ಸಮುದಾಯದವರು ನಮ್ಮನ್ನು ಕೈ ಬಿಡೋದಿಲ್ಲ. ಇದು ಅವರಿಗೆ ಗೊತ್ತಿರಲಿ. ಈಗ ಮತ್ತೆ ನಮ್ಮ ಸಮುದಾಯದ ನಾಯಕರನ್ನು ಹೈಜಾಕ್ ಮಾಡಲು ಹೊರಟಿದ್ದಾರಲ್ಲ? ಅದನ್ನು ಏನಂತಾರೆ ಎಂದು ಕೇಳಿದ್ದಾರೆ.


