ಕೇಂದ್ರ ಸರ್ಕಾರ ಅಂಗೀಕರಿಸಿರುವ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಎಪಿಎಂಸಿ, ಭೂಸುಧಾರಣೆ ಮತ್ತು ವಿದ್ಯುತ್ ತಿದ್ದುಪಡಿಗಳನ್ನು ಹಿಂಪಡೆಯುವಂತೆ ರೈತ ಸಂಘಟನೆಗಳು ಕರೆ ನೀಡಿರುವ ನಾಳೆಯ ಕರ್ನಾಟಕ ಬಂದ್‌ಗೆ ಜೆಡಿಎಸ್ ಪಕ್ಷವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೋಮವಾರದ ಕರ್ನಾಟಕ ಬಂದ್ ಗೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಚ್.ಡಿ.ದೇವೇಗೌಡರು
ಇನ್ನೂ ರಾಜ್ಯಸಭೆಯ ಸದನದಲ್ಲಿ ಕೃಷಿ ಮಸೂದೆಗಳ ವಿರುದ್ಧ ಗದ್ದಲ ನಡೆಸಿದಕ್ಕಾಗಿ ಅಮಾನತುಗೊಂಡ ಸಂಸದರಿಗು ದೇವೇಗೌಡರು ಬೆಂಬಲ ಸೂಚಿಸಿದ್ದರು. ಅಹೊರಾತ್ರಿ ಧರಣಿ ನಡೆಸಿದ್ದ ಪ್ರತಿಭಟನಾ ನಿರತ ಸಂಸದರ ಜೊತೆ ನಿಂತು ಕೃಷಿ ಮಸೂದೆಗಳ ವಿರುದ್ಧದ ಹೋರಾಟದ ಪರ ಒಗ್ಗಟ್ಟು ಪ್ರದರ್ಶಿಸಿದ್ದರು.
ಕಳೆದ ಆಗಸ್ಟ್‌ನಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ತುಮಕೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಾತ್ಯತೀತ ಜನತಾ ದಳ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಭೂಸುಧಾರಣ ಕಾಯ್ದೆಯು ಕಾರ್ಪೋರೇಟ್ ಕುಳಗಳು ರೈತರಿಂದ ಭೂಮಿ ಖರೀದಿಸಲು ಅವಕಾಶ ನೀಡುತ್ತದೆ. ಅವರು ಭೂಮಿ ಖರೀದಿಸುತ್ತಾರೆಯೇ ವಿನಃ ಉಳುಮೆ ಮಾಡುವುದಿಲ್ಲ. ಪರಿಣಾಮ ಕೃಷಿ ಸತ್ತು ಹೋಗುತ್ತದೆ. ಕೃಷಿಕರು ಗುಲಾಮಗಿರಿಗೆ ತಳ್ಳಲ್ಪಡುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ.


