ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಗದ್ದಲದ ನಡುವೆ, ರಾಜ್ಯದ ಆಡಳಿತ ಪಕ್ಷ ಮತ್ತು ಬಿಜೆಪಿ ಮಿತ್ರಪಕ್ಷ ಜೆಡಿ(ಯು) ಸಂಸದ ಗಿರಿಧರಿ ಯಾದವ್ ಬುಧವಾರ ಚುನಾವಣಾ ಆಯೋಗದ ಕಾರ್ಯವನ್ನು ಟೀಕಿಸಿದ್ದಾರೆ. “ಇದು ದುರ್ಕಲ್ಪಿತ ಆದೇಶ, ಅಗತ್ಯ ದಾಖಲೆಗಳನ್ನು ಜೋಡಿಸಲು ನನಗೇ 10 ದಿನಗಳು ಬೇಕಾಯಿತು” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಂಕಾ ಸಂಸದರು, “ಚುನಾವಣಾ ಆಯೋಗಕ್ಕೆ ಪ್ರಾಯೋಗಿಕ ಜ್ಞಾನವಿಲ್ಲ. ಅದಕ್ಕೆ ಬಿಹಾರದ ಇತಿಹಾಸ ಅಥವಾ ಭೌಗೋಳಿಕತೆ ತಿಳಿದಿಲ್ಲ; ಅದಕ್ಕೆ ಏನೇನೂ ತಿಳಿದಿಲ್ಲ” ಎಂದು ಹೇಳಿದರು.
ಈ ಮಳೆಗಾಲದಲ್ಲಿ, ಕೃಷಿ ಕೆಲಗಳು ನಡೆಯುತ್ತಿರುವಾಗ, ಜನರು ಎಸ್‌ಐಆರ್‌ಗೆ ಅಗತ್ಯವಿರುವ ದಾಖಲೆಗಳನ್ನು ವ್ಯವಸ್ಥೆ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದರು. “ಎಲ್ಲ ದಾಖಲೆಗಳನ್ನು ಜೋಡಿಸಲು ನನಗೆ 10 ದಿನಗಳು ಬೇಕಾಯಿತು, ನನ್ನ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಆತ ಇಲ್ಲಿಗೆ ಬಂದು ಸಹಿ ಹಾಕುವುದು ಹೇಗೆ” ಎಂದು ಕೇಳಿದರು.
“ಇದನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ, ಚುನಾವಣಾ ಆಯೋಗವು ಹಾಗೆ ಮಾಡಬೇಕಾದರೆ, ಕನಿಷ್ಠ ಆರು ತಿಂಗಳ ಸಮಯ ನೀಡಬೇಕಿತ್ತು” ಎಂದು ವಾದಿಸಿದರು.


