ಸ್ಥಳೀಯ ಬುಡಕಟ್ಟು ಸಂಪ್ರದಾಯಗಳಿಗೆ ವಿರುದ್ಧವಾಗಿ ಮರಗಳನ್ನು ಕಡಿದು ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ತೂರಾಟ ನಡೆಸಿ ಸುಟ್ಟುಹಾಕಿದ್ದ ಗುಂಪೊಂದರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವಿತ್ರ ಮರಗಳು ಎಂದು ಕರೆಯಲಾಗುವ ಮರದ ಭಾಗಗಳನ್ನು ಕತ್ತರಿಸಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ಸುಮಾರು 100 ರಿಂದ 150 ಜನರ ಗುಂಪೊಂದು 32 ವರ್ಷದ ಸಂಜು ಪ್ರಧಾನ್ ಅವರನ್ನು ಹತ್ಯೆ ಮಾಡಿದ್ದರು.
ಜನವರಿ 4 ರಂದು ಕೊಲೆಬೀರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ರಾಜರ ಬಜಾರ್ ಬಳಿ ಅವರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ಜನಸಮೂಹವು ಕಲ್ಲಿನಿಂದ ಹೊಡೆದು ಅವರನ್ನು ಹತ್ಯೆಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಶುಕ್ರವಾರ ಮೂವರನ್ನು ಬಂಧಿಸಲಾಗಿದ್ದು, ಒಟ್ಟು ಆರೋಪಿಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ನನ್ನ ತಂಡಕ್ಕೆ ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ!’: ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ
ಈ ಪ್ರಕರಣದ ಪ್ರಮುಖ ಆರೋಪಿ ಗ್ರಾಮದ ಮುಖ್ಯಸ್ಥ ಸುಬುನ್ ಬುಡ್ ಅವರನ್ನು ಜನವರಿ 9 ರಂದು ಬಂಧಿಸಲಾಗಿತ್ತು.
’ಗ್ರಾಮದ ಮುಖ್ಯಸ್ಥರು ಮೃತ ಸಂಜು ಪ್ರಧಾನ್ ಅವರ ಹತ್ಯೆಗೆ ಮುಂಚೆ ಸಭೆಯನ್ನು ಕರೆದಿದ್ದರು. ಬಳಿಕ ಅವರನ್ನು ಅವರ ಮನೆಯಿಂದ ಹೊರಗೆ ಕರೆದು ಥಳಿಸಲು ಪ್ರಾರಂಭಿಸಿದ್ದರು. ಈ ಜನರ ಗುಂಪು ಮೊದಲು ಮೃತರನ್ನು ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದೆ. ಅವರು ಸತ್ತ ಬಳಿಕ ಬೆಂಕಿಗೆ ಎಸೆದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸಂಜು ಪ್ರಧಾನ್ ಅವರನ್ನು ರಕ್ಷಿಸಲು ಏನೂ ಮಾಡಲಿಲ್ಲ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ 13 ಮಂದಿ ಗುರುತಿಸಲ್ಪಟ್ಟ ಮತ್ತು 25 ಮಂದಿ ಅಪರಿಚಿತ ಜನರ ವಿರುದ್ಧ ಕೊಲೆ, ಮಾರಕಾಯುಧಗಳಿಂದ ಗಲಭೆ ಮತ್ತು ಕಾನೂನುಬಾಹಿರ ಸಭೆಗಾಗಿ ಕೇಸ್ ದಾಖಲಿಸಲಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸಿಮ್ಡೇಗಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


