ಕೊರೊನಾ ಮತ್ತು ಲಾಕ್ ಡೌನ್ ನೆಪಹೇಳಿ ಜೆ ಡಬ್ಲ್ಯೂ ಎಸ್ (ಜಿಂದಾಲ್) ಕಂಪನಿ ಸುಮಾರು 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಹಲವಾರು ಉದ್ಯೋಗಿಗಳು ಮತ್ತು ವಿವಿಧ ಸಂಘಟನೆಗಳು ಸೋಮವಾರ ಬಳ್ಳಾರಿಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಆಗಸ್ಟ್ 31 ರೊಳಗೆ ಸ್ವಯಂ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ, ಮೊದಲ ಹಂತದಲ್ಲಿ ಸುಮಾರು 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಉದ್ಯೋಗಿಗಳು ದೂರಿದ್ದಾರೆ.

ಇದನ್ನೂ ಓದಿ: ಮೋದಿ ಭಾರತ ಯುವಜನರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
ಕಂಪನಿಯವರ ಬೆದರಿಕೆಗೆ ಮಣಿದು ರಾಜಿನಾಮೆ ನೀಡಿದ ಜಾಹ್ನವಿ ಎಂಬ ಉದ್ಯೋಗಿ ನಾನುಗೌರಿ.ಕಾಂ ಜೊತೆ ಮಾತನಾಡಿ, “ಲಾಕ್ ಡೌನ್ ಮುಕ್ತಾಯವಾಗುವ ಹಿಂದಿನ ರಾತ್ರಿ ಎಚ್ ಆರ್ ನನಗೆ ಫೋನ್ ಮಾಡಿದರು. ಕೊರೊನಾ ಕಾರಣದಿಂದ ಕಂಪನಿಗೆ ನಷ್ಟವಾಗಿದೆ. ಹಾಗಾಗಿ ನೀವು ಸ್ವಯಂ ರಾಜಿನಾಮೆ ಕೊಡಬೇಕು ಇಲ್ಲದಿದ್ದರೆ ನಿಮ್ಮನ್ನ ಟರ್ಮಿನೇಟ್ ಮಾಡಲಾಗುತ್ತದೆ ಎಂದು ನೇರವಾಗಿ ಹೇಳಿದರು” ಎಂದು ಅಳಲು ತೋಡಿಕೊಂಡಿದ್ದಾರೆ.
“ಎಷ್ಟು ಬೇಡಿಕೊಂಡರೂ ನಮ್ಮ ಮನವಿಗೆ ಮಣಿಯದೆ, ಇದು ಉನ್ನತ ಮಟ್ಟದ ನಿರ್ಧಾರ ಎಂದು ಹೇಳಿ ನನ್ನಿಂದ ರಾಜಿನಾಮೆ ಪಡೆದುಕೊಂಡರು. ನಮ್ಮದು ಸಾಮಾನ್ಯ ವರ್ಗದ ಕುಟುಂಬವಾಗಿದ್ದು, ನನಗೆ ಈ ಕೆಲಸ ಬಿಟ್ಟರೆ ಬೇರೆ ಆಧಾರವಿಲ್ಲ” ಎಂದು ಕಳೆದ ಹನ್ನೊಂದು ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಜಾಹ್ನವಿ ಹೇಳಿದರು.
“ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳನ್ನೇ ಪ್ರಶ್ನಿಸಿದಾಗ, ‘You are Non Performer’ ಎಂದು ಹೇಳಿದರು. ಹನ್ನೊಂದು ವರ್ಷದಿಂದ ಇದು ಇವರಿಗೆ ತಿಳಿದಿರಲಿಲ್ಲವೇ?. ಆದರೆ ಈಗ ಈ ಕಾರಣ ನೀಡುತ್ತಿದ್ದಾರೆ. ನನ್ನ ರೀತಿ ಕಳೆದ 20-25 ವರ್ಷ ಜಿಂದಾಲ್‌ಗಾಗಿ ಕೆಲಸ ಮಾಡಿರುವವರನ್ನೂ ಉದ್ಯೋಗದಿಂದ ತೆಗೆಯಲಾಗುತ್ತಿದೆ. ಈಗ ನಾವೆಲ್ಲ ಎಲ್ಲಿಗೆ ಹೋಗಬೇಕು” ಎಂದು ಪ್ರಶ್ನಿಸಿದ್ದಾರೆ.
“ನಮ್ಮ ಕಂಪನಿಯಿಂದಲೇ ನಮ್ಮ ದಿನದ ಸಂಬಳದ ಭಾಗವಾಗಿ ಪಿಎಂ ಕೇರ್ ಫಂಡ್‌ಗೆ ಕೊರೊನಾ ಪರಿಹಾರಕ್ಕೆಂದು 100 ಕೋಟಿ ಕಳುಹಿಸಲಾಗಿತ್ತು. ಆದರೆ ಇಂದು ನಮ್ಮ ಕಷ್ಟ ಕೇಳುವವರೇ ಇಲ್ಲ. ಯಾವ ರಾಜಕಾರಣಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬೇಡಿ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಆದರೂ ನಮ್ಮನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಇದರ ಬಗ್ಗೆ ನಾವು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಕೈಗೊಳ್ಳಲಿದ್ದೇವೆ. ಹಾಗಾಗಿ ನಮಗೆ ಎಲ್ಲರೂ ಸಹಕರಿಸಿ” ಎಂದು ಕೇಳಿಕೊಂಡರು.
ಈ ಕುರಿತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿ ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿ, “ಕೊರೊನಾ ಕಾರಣದಿಂದ ಕಂಪನಿಯಲ್ಲಿ ಉತ್ಪಾದನೆ ಕಡಿಮೆಯಾಗಿದೆ ಎಂಬ ನೆಪ ಹೇಳಿ 40 ವರ್ಷಕ್ಕೆ ಮೇಲ್ಪಟ್ಟ 400ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಕೆಲಸಕ್ಕೆ ಸ್ವಯಂ ಸ್ವಯಂ ರಾಜಿನಾಮೆ ನೀಡುವಂತೆ ಕಂಪನಿಯೊಳಗೆ ಕೆಲವು ಗೂಂಡಾಗಳಿಂದ ಬೆದರಿಕೆ ಹಾಕಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಅವರಿಗೆ ಸಿಗಬೇಕಾದ ಹಣದ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂಬುದಾಗಿ ಜಿಂದಾಲ್ ಮಾಲಿಕರಾದ ಸಜ್ಜನ್ ಜಿಂದಾಲ್ ಹೇಳಿದ್ದಾರೆ. ಆದರೆ ಅದನ್ನು ಮಾಡುತ್ತಾರೆ ಎಂದು ಕಾರ್ಮಿಕರಿಗೆ ನಂಬಿಕೆಯಿಲ್ಲ. ಅಲ್ಲದೇ ಏಕಾಏಕಿ ಕೆಲಸ ಕಳೆದುಕೊಂಡವರು ಈಗ ಎಲ್ಲಿಗೆ ಹೋಗಬೇಕು” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟ: CMIE


