2020ರ ಬ್ಯಾಚಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ತೆರೆದು, ಕ್ಯಾಂಪಸ್ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಜವಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು) ಒತ್ತಾಯಿಸಿದೆ. ವಿದ್ಯಾರ್ಥಿಗಳ ಡೀನ್ ಕಚೇರಿ ಎದುರು ಜೆಎನ್‌ಯುಎಸ್‌ಯು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.
ಸೆಪ್ಟೆಂಬರ್ 6ರಿಂದ ಮೊದಲ ಹಂತದ ತರಗತಿಗಳನ್ನು ಆರಂಭಿಸುವುದಾಗಿ ಜೆಎನ್‌ಯು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಡಿಸೆಂಬರ್ 31ರೊಳಗೆ ಸಂಶೋಧನಾ ಪ್ರಬಂಧವನ್ನು ಸಲ್ಲಿಸಬೇಕಿರುವ ಸಂಶೋಧನಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎನ್ನಲಾಗಿತ್ತು ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಬೋಧನಾ ಕಲಿಕಾ ಚಟುವಟಿಕೆಗಳು ಆನ್ಲೈನ್‌ನಲ್ಲೇ ಮುಂದುವರಿಯಲಿವೆ. ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯ ಹೊರತುಪಡಿಸಿ, ಇತರ ಕೇಂದ್ರೀಯ ಗ್ರಂಥಾಲಯಗಳು, ತರಗತಿಗಳು ನಡೆಯುವುದಿಲ್ಲ ಎಂದು ತಿಳಿಸಲಾಗಿತ್ತು.
ವಿದ್ಯಾರ್ಥಿಗಳು 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ವರದಿ (ಆರ್ಟಿಪಿಸಿಆರ್) ತಂದು, ಸ್ವಯಂ ಘೋಷಣಾ ಪತ್ರದೊಂದಿಗೆ ಸಲ್ಲಿಸಬೇಕು ಎಂದು ವಿವಿಯ ಆಡಳಿತ ವಿಭಾಗ ಹೇಳಿದೆ. “ವಿದ್ಯಾರ್ಥಿಗಳ ಒತ್ತಡದಿಂದಾಗಿ ಕೇವಲ ಪೊಳ್ಳು ಭರವಸೆಗಳನ್ನು ನೀಡಲಾಗುತ್ತಿದೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ಅರ್ಥಪೂರ್ಣ ರೀತಿಯಲ್ಲಿ ಕ್ಯಾಂಪಸ್‌ಗೆ ಅವಕಾಶ ನೀಡುವುದೆಂದರೆ ಸಂಶೋಧನಾ ಪ್ರಬಂಧ ಸಲ್ಲಿಸಬೇಕಾಗಿರುವ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ನೀಡುವುದೇ ಆಗಿದೆ” ಎಂದು ಎಐಎಸ್‌ಎ ಕಾರ್ಯದರ್ಶಿ, ಎಂಫಿಎಲ್ ವಿದ್ಯಾರ್ಥಿ ಮಧುರಿಮಾ ಕುಂದು ಅಭಿಪ್ರಾಯಪಟ್ಟಿದ್ದಾರೆ.
ದಿ ವೈರ್ ಸುದ್ದಿ ಜಾಲತಾಣದೊಂದಿಗೆ ಮಾತನಾಡಿರುವ ಕುಂದು, “2020ರ ಬ್ಯಾಚಿನ ವಿದ್ಯಾರ್ಥಿಗಳು ಒಂದು ವರ್ಷ ಇಲ್ಲಿ ಪೂರೈಸಿದ್ದಾರೆ. ಕ್ಯಾಂಪಸ್ ಪ್ರವೇಶಕ್ಕಾಗಿ ಅವರು ಒಮ್ಮೆಯಾದರೂ ಕೋರಿಕೆ ಸಲ್ಲಿಸಿಲ್ಲ. ಆನ್ಲೈನ್ ತರಗತಿಗಳಲ್ಲಿ ಅವರು ಹಾಜರಾಗುತ್ತಿಲ್ಲ. ಅವರಿಗೆ ಹಾಸ್ಟೆಲ್‌ಗಳನ್ನೂ ನೀಡಲಾಗಿಲ್ಲ. ಎಷ್ಟು ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆಗಳನ್ನು ಗೂಗಲ್ ಮೀಟ್ ನಲ್ಲೇ ನಡೆಯಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜೆಎನ್‍ಯು ಘಟನೆ: ಸಂಪೂರ್ಣ ಹಿನ್ನೆಲೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು – ಪ್ರೊ. ಪುರುಷೋತ್ತಮ ಬಿಳಿಮಲೆ
ಮುಂದುವರಿದು, “ಹಿಂದುಳಿದ ವರ್ಗದಿಂದ ಬಂದ ಹಾಗೂ ತಾಂತ್ರಿಕ ಸೌಲಭ್ಯಗಳಿಲ್ಲದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೂ ಹಾಜರಾಗುತ್ತಿಲ್ಲ. ಕಲಿಕೆಯಿಂದ ಹೊರಗುಳಿಯುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಎಲ್ಲ ಕೋರ್ಸ್‌ಗಳಲ್ಲೂ ಈ ಬೆಳವಣಿಗೆಯಾಗಿದೆ. ಬಹುಶಃ ಸಂಪನ್ಮೂಲದ ಕೊರತೆಯಿಂದಾಗಿ ಆ ವಿದ್ಯಾರ್ಥಿಗಳು ವ್ಯಾಸಂಗವನ್ನು ಮುಂದವರಿಸಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ” ಎಂದು ತಿಳಿಸಿದ್ದಾರೆ.


