ಪ್ರೆಸ್ ಕ್ಲಬ್ ಆಫ್ ಇಂಡಿಯಾ ಭಾರತದ ಪ್ರಮುಖ ಪತ್ರಿಕಾ ಸಂಸ್ಥೆಗಳು ಮತ್ತು ಡಿಜಿಟಲ್ ಹಕ್ಕುಗಳ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಮತ್ತು ನಿರ್ಬಂಧಿಸುವ ವಿವಿಧ ಹೊಸ ಕಾನೂನುಗಳ ನಿಬಂಧನೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಮೇ 28, 2024ರಂದು ನಡೆದ ಸಭೆಯಲ್ಲಿ ಮುಂಬೈ, ಕೋಲ್ಕತ್ತಾ, ಚಂಡೀಗಢ, ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ಪ್ರೆಸ್ ಕ್ಲಬ್‌ಗಳು, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಮತ್ತು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಸ್ತಾವಿತ ಬ್ರಾಡ್‌ಕಾಸ್ಟ್ ಸರ್ವೀಸಸ್ (ನಿಯಂತ್ರಣ) ಬಿಲ್- 2023, ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್-2023, ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಪಿರಿಯಾಡಿಕಲ್ಸ್ ಆಕ್ಟ್-2023 ಮತ್ತು ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು-2023, ಅದರಲ್ಲಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವಂತಿದೆ ಎಂದು ಭಾವಿಸಿದರೆ ಅದನ್ನು ತೆಗೆದುಹಾಕಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ, ಇದು ಪತ್ರಿಕೆಗಳನ್ನು ಮೌನಗೊಳಿಸುವ ತಂತ್ರ ಎಂದು ಪ್ರೆಸ್ ಕ್ಲಬ್ ಹೇಳಿದೆ.
ಜನರ ಮಾಹಿತಿ ಹಕ್ಕನ್ನು ತುಳಿಯದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಪುನರಾವರ್ತಿತ ಇಂಟರ್ನೆಟ್ ಸ್ಥಗಿತಗೊಳಿಸುವ ಕ್ರಮವು ನಾಗರಿಕರ ಮಾಹಿತಿ ಹಕ್ಕು ಮತ್ತು ಸುದ್ದಿಯನ್ನು ವರದಿ ಮಾಡುವ ಪತ್ರಕರ್ತರ ಸಾಮರ್ಥ್ಯ ಎರಡಕ್ಕೂ ಅಡ್ಡಿಯುಂಟು ಮಾಡುತ್ತದೆ. ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಭಾರತದ ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ನೀಡಲಾದ ಹಕ್ಕುಗಳ ಪರ ನಿಲ್ಲುವಂತೆ ಪತ್ರಿಕಾ ಸಂಸ್ಥೆಗಳಿಗೆ ನಿರ್ಣಯವು ಕರೆ ನೀಡಿದೆ.
ಮಾಹಿತಿ ಹಕ್ಕು ಕಾಯಿದೆ, 2005ನ್ನು ದುರ್ಬಲಗೊಳಿಸಲು ಉದ್ದೇಶಿಸಿರುವ ಡಿಜಿಟಲ್ ವೈಯಕ್ತಿಕ ಡೇಟಾ ಕಾಯಿದೆ-2023ರ ಎಲ್ಲಾ ನಿಬಂಧನೆಗಳನ್ನು ಸರ್ಕಾರವು ಅಳಿಸಬೇಕು ಅಥವಾ ತಿದ್ದುಪಡಿ ಮಾಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ನಿರಂತರವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಿಂದ ಹೊರಹೊಮ್ಮುವ ಸವಾಲುಗಳನ್ನು ಎದುರಿಸಲು ಮಾಧ್ಯಮ ಮಂಡಳಿಗೆ ಅಧಿಕಾರ ನೀಡಬೇಕು, ಮಧ್ಯಮ ಮಂಡಳಿ ಕಾರ್ಯನಿರತ ಪತ್ರಕರ್ತರು, ಒಕ್ಕೂಟಗಳ ಪ್ರತಿನಿಧಿಗಳು, ಮಾಧ್ಯಮ ಮಾಲೀಕರು ಮತ್ತು ಸರ್ಕಾರವನ್ನು ಒಳಗೊಂಡಿರಬೇಕು. ಮಾಧ್ಯಮ ಸಂಸ್ಥೆಗಳು, ಪ್ರಕಟಣೆಗಳು, ಪ್ರಸಾರ ಮತ್ತು ಡಿಜಿಟಲ್ ಪ್ರಕಟಿತ ವಿಷಯಗಳು ಮತ್ತು ಅದರ ಮಾಲೀಕರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡಬೇಕು. ನಾಗರಿಕರ ಖಾಸಗಿತನದ ಹಕ್ಕನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಪ್ರಸ್ತಾವಿತ ಕಾನೂನುಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಇದನ್ನು ಓದಿ: ಅರುಂಧತಿ ರಾಯ್, ಶೇಖ್ ಶೌಕತ್ ವಿರುದ್ಧ UAPAಯಡಿ ಪ್ರಕರಣ ದಾಖಲಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ


