ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಪದಚ್ಯುತಗೊಳಿಸುವ ಮೂರು ಮಸೂದೆಗಳನ್ನು ಪರಿಶೀಲಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ (ನ.12) ಸಂಸದೀಯ ಸಮಿತಿ (ಜೆಪಿಸಿ) ರಚಿಸಿದ್ದಾರೆ.
ಪ್ರಸ್ತಾವಿತ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಹೆಚ್ಚಿನ ವಿರೋಧ ಪಕ್ಷ ಸದಸ್ಯರು ಜೆಪಿಸಿ ಸೇರಲು ನಿರಾಕರಿಸಿದ್ದಾರೆ. ಹಾಗಾಗಿ, 31 ಸಂಸದರ ಸಮಿತಿಯಲ್ಲಿ ಕೇವಲ ಮೂವರು ವಿರೋಧ ಪಕ್ಷದ ಸದಸ್ಯರಿದ್ದಾರೆ ಎಂದು ವರದಿಗಳು ಹೇಳಿವೆ.
ಎರಡನೇ ಅವಧಿಗೆ ಆಯ್ಕೆಯಾಗಿರುವ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಜೆಪಿಸಿಯ ನೇತೃತ್ವ ವಹಿಸಲಿದ್ದಾರೆ. ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರು ಸಮಿತಿಯಲ್ಲಿದ್ದಾರೆ.
ಇದರಲ್ಲಿ ರವಿಶಂಕರ್ ಪ್ರಸಾದ್, ಭರ್ತೃಹರಿ ಮಹತಾಬ್ ಮತ್ತು ಅನುರಾಗ್ ಠಾಕೂರ್ ಸೇರಿದಂತೆ 15 ಬಿಜೆಪಿ ಸಂಸದರು, ಬಿಜೆಪಿ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು, ಎಲ್‌ಜೆಪಿ(ಆರ್‌ವಿ), ಶಿವಸೇನೆ, ಎನ್‌ಸಿಪಿ ಮತ್ತು ಎಐಎಡಿಎಂಕೆಯ 11 ಮಂದಿ ಹಾಗೂ ವಿರೋಧ ಪಕ್ಷಗಳಾದ ಎನ್‌ಸಿಪಿ-ಎಸ್‌ಪಿಯ ಸುಪ್ರಿಯಾ ಸುಳೆ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಒಳಗೊಂಡಿದ್ದಾರೆ.
ಆಡಳಿತಾರೂಢ ಎನ್‌ಡಿಎ ಅಥವಾ ವಿರೋಧ ಪಕ್ಷಗಳ ಇಂಡಿಯಾ ಬಣಕ್ಕೆ ಸೇರದ, ಆದರೆ ಸಂಸತ್ತಿನಲ್ಲಿ ಸರ್ಕಾರವನ್ನು ಬೆಂಬಲಿಸಿದ ವೈಎಸ್ಆರ್ ಕಾಂಗ್ರೆಸ್‌ನ ಎಸ್. ನಿರಂಜನ್ ರೆಡ್ಡಿ ಹಾಗೂ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕೂಡ ಜೆಪಿಸಿಯಲ್ಲಿದ್ದಾರೆ.
ಅನೌಪಚಾರಿಕ ಚರ್ಚೆಯ ನಂತರ ಎನ್‌ಸಿಪಿ-ಎಸ್‌ಪಿ ಹೊರತುಪಡಿಸಿ ವಿರೋಧ ಪಕ್ಷಗಳ ಇಂಡಿಯಾ ಬಣವು ಸಮಿತಿಯ ಭಾಗವಾಗಿರದಿರಲು ನಿರ್ಧರಿಸಿದ್ದರಿಂದ ಅಸಾಮಾನ್ಯವಾಗಿ ದೀರ್ಘ ವಿಳಂಬದ ನಂತರ ಸಮಿತಿಯನ್ನು ರಚಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜೆಪಿಸಿ ಸೇರುವಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ಸಂಪರ್ಕಿಸಿದ್ದರು ಎಂದು ವರದಿಯಾಗಿದೆ.
ಕಾಂಗ್ರೆಸ್ ಅಳೆದು ತೂಗಿ ಕೊನೆಗೆ ಜೆಪಿಸಿ ಸೇರಲು ನಿರಾಕರಿಸಿದೆ. ಈ ಮೂಲಕ ಮಸೂದೆಯನ್ನು ವಿರೋಧಿಸಿ ತನ್ನ ಮಿತ್ರಪಕ್ಷಗಳ ಜೊತೆ ಒಗ್ಗಟ್ಟು ಪ್ರದರ್ಶಿಸಿದೆ. ಕಾಂಗ್ರೆಸ್ ಜೊತೆ ಟಿಎಂಸಿ, ಡಿಎಂಕೆಯಂತಹ ಹಲವಾರು ಪ್ರಾದೇಶಿಕ ಪಕ್ಷಗಳು ಪ್ರಸ್ತಾವಿತ ಕಾನೂನುಗಳು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿದೆ ಎಂದಿದೆ. ವಿರೋಧ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳನ್ನು ‘ಅಸ್ಥಿರಗೊಳಿಸುವ’ ಗುರಿಯನ್ನು ಈ ಮಸೂದೆಗಳು ಹೊಂದಿವೆ ಎಂದು ಆರೋಪಿಸಿವೆ.
“ಇದು ಜಂಟಿ ಸಂಸದೀಯ ಸಮಿತಿ ಅಲ್ಲ, ಬಿಜೆಪಿ ಮತ್ತು ಅದರ ಬಿ-ಟೀಮ್‌ನ ಜೆಪಿಸಿ” ಎಂದು ಹಿರಿಯ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಸಮಿತಿಯನ್ನು ಟೀಕಿಸಿದ್ದಾರೆ. ಇಂಡಿಯಾ ಒಕ್ಕೂಟದ 340ಕ್ಕೂ ಹೆಚ್ಚು ಸಂಸದರು ಜೆಪಿಸಿಯನ್ನು ಬಹಿಷ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
340+ MPs of the INDIA alliance are boycotting the so-called JPC on the Constitution (130th Amendment Bill), J&K Reorganisation Bill, and UTs Amendment Bill.
This is not a Joint Parliamentary Committee — it’s a JPC of BJP & its B-Team.
Out of 31 members —
🟠 21 are BJP & NDA… pic.twitter.com/ROWXFP9aYU— Manickam Tagore .B🇮🇳மாணிக்கம் தாகூர்.ப (@manickamtagore) November 12, 2025
“ಈ ಜೆಪಿಸಿ ಮೋದಿಯ ಅಸಂವಿಧಾನಿಕ ಕಾರ್ಯಸೂಚಿಗೆ ರಬ್ಬರ್ ಸ್ಟಾಂಪ್ ಹೊರತುಪಡಿಸಿ ಬೇರೇನೂ ಅಲ್ಲ. ಸರ್ಕಾರವು ಒಮ್ಮತ ಅಥವಾ ಸಂಸದೀಯ ನೀತಿಶಾಸ್ತ್ರವಿಲ್ಲದೆ ಜೆಪಿಸಿಯನ್ನು ರಚಿಸಿದ್ದರಿಂದ 340 ಸಂಸದರು ಅದನ್ನು ಬಹಿಷ್ಕರಿಸಿದ್ದಾರೆ” ಎಂದು ಟ್ಯಾಗೋರ್ ತಿಳಿಸಿದ್ದಾರೆ.
2025ರ ಆಗಸ್ಟ್ 20ರಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 ಗಳನ್ನು ಮಂಡಿಸಿದ್ದರು. ನಂತರ ಅವುಗಳನ್ನು ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಲಾಗಿತ್ತು.
ಮರುದಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ಪರಿಚಯಿಸಿದಾಗ ವಿರೋಧ ಪಕ್ಷಗಳ ಸಂಸದರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿದ್ದರು ಮತ್ತು ಪ್ರಸ್ತಾವಿತ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.
ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವ ಅಪರಾಧಗಳ ಆರೋಪದ ಮೇಲೆ ಪ್ರಧಾನಿ, ಕೇಂದ್ರ ಸಚಿವರು ಅಥವಾ ಮುಖ್ಯಮಂತ್ರಿಗಳನ್ನು ಬಂಧಿಸಿ ಸತತ 30 ದಿನಗಳ ಕಾಲ ಜೈಲಿನಲ್ಲಿಟ್ಟಿರೆ ಅಥವಾ ಬಂಧನದಲ್ಲಿಟ್ಟರೆ, 31ನೇ ದಿನದಂದು ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ.
ಭೂತಾನ್‌ನ ಇಂಧನ ಯೋಜನೆಗಳಿಗೆ 4 ಸಾವಿರ ಕೋಟಿ ಸಾಲ ಘೋಷಿಸಿದ ಮೋದಿ : ಅದಾನಿ, ಅಂಬಾನಿ ಕಂಪನಿಗಳಿಂದ ಒಪ್ಪಂದಕ್ಕೆ ಸಹಿ


