ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಇಜಾಝುದ್ದೀನ್ ಸಲಾವುದ್ದೀನ್ ಕಾಜಿ ಮತ್ತು ನ್ಯಾಯಾಲಯದ ಗುಮಾಸ್ತ ಚಂದ್ರಕಾಂತ್ ಹನ್ಮಂತ್ ವಾಸುದೇವ್ ವಿರುದ್ಧ ಪ್ರಕರಣ ದಾಖಲಿಸಿದೆ.
ಎಸಿಬಿಯ ಪತ್ರಿಕಾ ಟಿಪ್ಪಣಿಯ ಪ್ರಕಾರ, ದೂರುದಾರರ ಪತ್ನಿ 2015ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ತನ್ನ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 2016 ರಲ್ಲಿ, ಹೈಕೋರ್ಟ್ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಹಕ್ಕುಗಳ ಸೃಷ್ಟಿಯನ್ನು ((ಮೂರನೇ ವ್ಯಕ್ತಿಯ ಪ್ರವೇಶ) ತಡೆಯುವ ಮಧ್ಯಂತರ ಆದೇಶವನ್ನು ಹೊರಡಿಸಿತ್ತು.
ಆಸ್ತಿಯ ಮೌಲ್ಯ 10 ಕೋಟಿ ರೂಪಾಯಿಗಿಂತ ಕಡಿಮೆ ಇದ್ದ ಕಾರಣ, ಮಾರ್ಚ್ 2024ರಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ಮಜಗಾಂವ್‌ನಲ್ಲಿರುವ ಸಿವಿಲ್ ನ್ಯಾಯಾಲಯಕ್ಕೆ ವಾಣಿಜ್ಯ ಮೊಕದ್ದಮೆಯಾಗಿ ವರ್ಗಾಯಿಸಿತ್ತು.
ಈ ವರ್ಷ ಸೆಪ್ಟೆಂಬರ್ 9ರಂದು, ದೂರುದಾರನ ಉದ್ಯೋಗಿ (ದೂರುದಾರರ ಪರ ವ್ಯಕ್ತಿ) ನ್ಯಾಯಾಲಯದಲ್ಲಿ ಹಾಜರಿದ್ದಾಗ, ನ್ಯಾಯಾಲಯದ ಗುಮಾಸ್ತ ವಾಸುದೇವ್ ದೂರುದಾರರನ್ನು ಸಂಪರ್ಕಿಸಿ ಭೇಟಿಯಾಗಲು ಹೇಳಿದ್ದರು.
ಅದರಂತೆ, ದೂರುದಾರರು ಸೆಪ್ಟೆಂಬರ್ 12ರಂದು ಚೆಂಬೂರಿನ ಸ್ಟಾರ್‌ಬಕ್ಸ್ ಕೆಫೆಯಲ್ಲಿ ವಾಸುದೇವ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ಅಲ್ಲಿ ವಾಸುದೇವ್ ಅವರು ಅನುಕೂಲಕರ ಆದೇಶಗಳನ್ನು ಪಡೆಯಲು ಒಟ್ಟು 25 ಲಕ್ಷ ರೂಪಾಯಿ, ಅಂದರೆ ತನಗೆ 10 ಲಕ್ಷ ರೂ. ಮತ್ತು ನ್ಯಾಯಾಧೀಶರಿಗೆ 15 ಲಕ್ಷ ರೂ. ಲಂಚವನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ವಾಸುದೇವ್ ಕೇಳಿದ ಹಣವನ್ನು ಕೊಡಲು ದೂರುದಾರ ನಿರಾಕರಿಸಿದ್ದರು. ಆದರೂ, ಮುಂದಿನ ಹಲವು ವಾರಗಳವರೆಗೆ, ವಾಸುದೇವ್ ಲಂಚ ಕೇಳುವುದನ್ನು ಮುಂದುವರೆಸಿದ್ದರು. ನಂತರ, ನವೆಂಬರ್ 10ರಂದು ದೂರುದಾರ ಎಸಿಬಿಯನ್ನು ಸಂಪರ್ಕಿಸಿದ್ದರು.
ಅದೇ ದಿನ ಎಸಿಬಿ ಅಧಿಕಾರಿಗಳು ಪಂಚ ಸಾಕ್ಷಿಯ ಸಮ್ಮುಖದಲ್ಲಿ ಆರೋಪದ ಪರಿಶೀಲನಾ ಕಾರ್ಯವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವಾಸುದೇವ್ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ ಮತ್ತು ಕಡಿಮೆ ಮೊತ್ತ, ಅಂದರೆ, 15 ಲಕ್ಷ ರೂಪಾಯಿ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆರೋಪ ಖಚಿತವಾದ ಬಳಿಕ, ಆರೋಪಿಯ ಬಂಧನಕ್ಕೆ ನವೆಂಬರ್ 11ರಂದು ಎಸಿಬಿ ಬಲೆ ಬೀಸಿತ್ತು. ವಾಸುದೇವ್ ದೂರುದಾರರಿಂದ 15 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಹಣ ತೆಗೆದುಕೊಂಡ ತಕ್ಷಣ, ವಾಸುದೇವ್ ಅವರು ನ್ಯಾಯಾಧೀಶ ಎಜಾಝುದ್ದೀನ್ ಕಾಜಿ ಅವರಿಗೆ ತಮ್ಮ ಫೋನ್‌ನಲ್ಲಿ ಕರೆ ಮಾಡಿ ಲಂಚ ಪಡೆದ ಬಗ್ಗೆ ಮಾಹಿತಿ ನೀಡಿದ್ದರು. ನ್ಯಾಯಾಧೀಶರು ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ವಾಸುದೇವ್ ಮತ್ತು ನ್ಯಾಯಾಧೀಶ ಕಾಜಿ ಇಬ್ಬರ ಮೇಲೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 7ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ಸಾರ್ವಜನಿಕ ಕರ್ತವ್ಯದಲ್ಲಿರುವವರ ಅಕ್ರಮ ಸಂತೃಪ್ತಿಯನ್ನು ಬೇಡಿಕೆ, ಸ್ವೀಕಾರ ಮತ್ತು ಪಡೆಯುವುದಕ್ಕೆ ಸಂಬಂಧಿಸಿದೆ.
ನ್ಯಾಯಾಧೀಶ ಕಾಜಿ ಇಂದು (ನವೆಂಬರ್ 13, 2025) ನ್ಯಾಯಾಲಯದಲ್ಲಿ ಕಲಾಪ ನಡೆಸುತ್ತಿಲ್ಲ ಎಂದು ಮೂಲಗಳು ಖಚಿತಪಡಿಸಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಮಾಹಿತಿ ಕೃಪೆ : ಬಾರ್ & ಬೆಂಚ್
ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ


