ಆಗಸ್ಟ್ 19, 2024ರಂದು ಬಹಿರಂಗಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಮಲಯಾಳಂ ಚಿತ್ರರಂಗದ ಇನ್ನೊಂದು ಮುಖ ಅಥವಾ ಭಯಾನಕತೆ ತೆರೆದಿಟ್ಟಿದೆ.
ಲೈಂಗಿಕವಾಗಿ ಒಗ್ಗಿಕೊಂಡು ಹೋಗದಿದ್ದರೆ ಮಹಿಳಾ ಕಲಾವಿದರು ಚಿತ್ರರಂಗದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಹೇಮಾ ಸಮಿತಿ ವರದಿ ಬಿಚ್ಚಿಟ್ಟಿದೆ. ವರದಿಯಲ್ಲಿ ಉಲ್ಲೇಖಿಸಿರುವ ಕೆಲವೊಂದು ಬೆಚ್ಚಿ ಬೀಳಿಸುವ ವಿಷಯಗಳು ಆರ್‌ಟಿಐ ಮೂಲಕ ಮಾಧ್ಯಮಗಳಿಗೆ ಲಭ್ಯವಾಗಿದೆ.
ವರದಿ ಹೇಳುವಂತೆ ಪ್ರೊಡಕ್ಷನ್ ಕಂಟ್ರೋಲರ್ ಅಥವಾ ಸಿನಿಮಾದಲ್ಲಿ ಪಾತ್ರವನ್ನು ನೀಡುವವರು ಮೊದಲು ಮಹಿಳೆ/ಹುಡುಗಿಯನ್ನು ಸಂಪರ್ಕಿಸುತ್ತಾರೆ. ಆಕೆಗೆ ಅವಕಾಶ ನೀಡಬೇಕಾದರೆ ಲೈಂಗಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಬೇಡಿಕೆಯನ್ನು ನೇರವಾಗಿ ಇಡುತ್ತಾರೆ. ಈ ಸಂದರ್ಭದಲ್ಲೇ ಪ್ರತಿಭೆಗೆ ಅವಕಾಶ ಸಿಗುವ ಆಸೆಯಿಂದ ಹೋಗಿರುವ ಹೆಣ್ಣು ಮಕ್ಕಳು ಕುಗ್ಗಿ ಹೋಗುತ್ತಾರೆ.
ವರದಿಯ ಪ್ರಕಾರ, ಸಿನಿಮಾಗಳಲ್ಲಿ ನಟಿಸುವ ಮಹಿಳೆಯರು/ ಹುಡುಗಿಯರು ಅವರ ಕುಟುಂಬದ ಜೊತೇನೆ ಹೆಚ್ಚಾಗಿ ಇರಲು ಬಯಸುತ್ತಾರೆ. ಏಕೆಂದರೆ, ಚಿತ್ರತಂಡದ ಜೊತೆ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಂಡರೆ, ಅದೇ ತಂಡದ ಪುರುಷರು ಅವರ ಮೇಲೆ ಲೈಂಗಿಕವಾಗಿ ಕಣ್ಣು ಹಾಕುವ ಭಯವಿರುತ್ತದೆ.
ಹೋಟೆಲ್‌ನಲ್ಲಿ ಉಳಿದುಕೊಂಡರೆ ರಾತ್ರಿ ಹೊತ್ತು ಮದ್ಯಪಾನ ಮಾಡಿ ಬರುವ ಚಿತ್ರ ತಂಡದ ಪುರುಷರು, ಮಹಿಳೆ/ ಹುಡುಗಿ ತಂಗಿರುವ ಕೊಠಡಿಯ ಬಾಗಿಲು ಬಡಿಯುತ್ತಾರೆ. ಅದೂ ಕೂಡ ಜೋರಾಗಿ ಬಾಗಿಲು ಬಡಿಯುತ್ತಾರೆ. ಒಂದು ವೇಳೆ ಬಾಗಿಲು ತೆರೆಯದಿದ್ದರೆ ಬಾಗಿಲು ಒಡೆದು ಬಲವಂತವಾಗಿ ಒಳ ನುಗ್ಗುತ್ತಾರೆ. ಲೈಂಗಿಕ ಶೋಷಣೆ ಮಾಡುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಪತ್ನಿಯಾಗಿ ನಟಿಯೊಬ್ಬರು ನಟಿಸಬೇಕಾದ ಘಟನೆಯನ್ನು ಉಲ್ಲೇಖಿಸಿ ಸಮಿತಿಯ ವರದಿಯು ಹೀಗೆ ಹೇಳಿದೆ “ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಜೊತೆ ಮರುದಿನ ಆಕೆ ಹೆಂಡತಿಯ ಪಾತ್ರ ಮಾಡಬೇಕಿತ್ತು. ಈ ಮೊದಲೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯಾದ್ದರಿಂದ, ಶೂಟಿಂಗ್ ವೇಳೆಯೂ ಆಕೆಯನ್ನು ಆತ ಅದೇ ರೀತಿ ಬಳಸಿಕೊಂಡಿದ್ದ. ಹೇಳಿಕೊಳ್ಳಲಾಗದ ಈ ನೋವು ಆಕೆಯ ಮುಖದಲ್ಲಿ ಮೂಡಿತ್ತು. ಆದ್ದರಿಂದ ಆಕೆ ಒಂದು ಶಾಟ್‌ಗೆ ಹದಿನೇಳು ರೀಟೇಕ್ ತೆಗದುಕೊಂಡಿದ್ದರು. ಈ ಕಾರಣಕ್ಕೆ ಆಕೆ ನಿರ್ದೇಶಕರಿಂದ ಅವಮಾನ ಎದುರಿಸಬೇಕಾಯಿತು”.
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್, ಅಸಭ್ಯ ಫೋಟೋ, ವಿಡಿಯೋಗಳನ್ನು ಹಾಕುವ ಮೂಲಕ ನಮ್ಮ ಮಾನನಷ್ಟ ಮಾಡಲಾಗಿದೆ. ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಅನೇಕ ಮಹಿಳಾ ನಟಿಯರು ಹೇಳಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪುರುಷರೊಂದಿಗೆ ಲೈಂಗಿಕವಾಗಿ ಒಗ್ಗಿಕೊಂಡು ಹೋಗದ ಮಹಿಳಾ ನಟಿಯರನ್ನು ಸುಖಾ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಲಾಗುತ್ತದೆ. ಅವರ ವಿರುದ್ದ ಇಲ್ಲ ಸಲ್ಲದ ಲೈಂಗಿಕ ಆರೋಪಗಳನ್ನು ತೇಲಿ ಬಿಟ್ಟು ಗುರಿಪಡಿಸಲಾಗುತ್ತದೆ. ಶಿಶ್ನ ಸೇರಿದಂತೆ ಖಾಸಗಿ ಭಾಗಗಳ ಫೋಟೋಗಳನ್ನು ನಟಿಯರ ಗೋಡೆ ಮೇಲೆ ಹಾಕಿ ಅವಮಾನಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
2017ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಚಿತ್ರರಂಗದ ಕರಾಳ ಮುಖವನ್ನು ಎಲೆ ಎಲೆಯಾಗಿ ಬಿಚ್ಚಿಟ್ಟಿದೆ.
ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಕಾಸ್ಟಿಂಗ್ ಕೌಚ್‌ನಂತ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹಿಂದಿನಿಂದಲೂ ಅಪವಾದವಿದೆ. ‘ಮೀ ಟೂ’ ಅಭಿಯಾನದ ಮೂಲಕ ಮಹಿಳಾ ಕಲಾವಿದರು ಧ್ವನಿ ಎತ್ತಿರುವುದು ಇದಕ್ಕೊಂದು ಸಾಕ್ಷಿ. ಆದರೆ, ಹೇಮಾ ಸಮಿತಿ ವರದಿ ಬಿಚ್ಚಿಟ್ಟ ಮಲಯಾಳಂ ಸಿನಿಮಾ ರಂಗದ ಸತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ನ್ಯಾಯಮೂರ್ತಿ ಹೇಮಾ ಸಮಿತಿಯು ತನ್ನ ವರದಿಯನ್ನು 2019 ರಲ್ಲಿ ಕೇರಳ ಮುಖ್ಯಮಂತ್ರಿಗೆ ಸಲ್ಲಿಸಿತ್ತು. ವರದಿಯನ್ನು ಸಾರ್ವಜನಿಕಗೊಳಿಸುವ ನಿರ್ಧಾರವನ್ನು ಜುಲೈ 5, 2024ರಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ, ಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಸಲ್ಲಿಸಿದ್ದ ರಿಟ್ ಅರ್ಜಿ ಆಧರಿಸಿ ವರದಿ ಸಾರ್ವಜನಿಕಗೊಳಿಸುವುದಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಬಳಿಕ ಹೈಕೋರ್ಟ್‌ನ ಏಕಸದಸ್ಯ ಪೀಠ ರಿಟ್ ಅರ್ಜಿಯನ್ನು ವಜಾಗೊಳಿಸಿ ವರದಿಯನ್ನು ಸಾರ್ವಜನಿಕಗೊಳಿಸಬಹುದು ಎಂದು ಆದೇಶಿಸಿತ್ತು. ಈ ನಡುವೆ ವರದಿಯ ಕುರಿತು ಸಲ್ಲಿಕೆಯಾಗಿದ್ದ ಅನೇಕ ಆರ್‌ಟಿಐ ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿತ್ತು. ವರದಿಯ ಮಾಹಿತಿ ನೀಡಿದರೆ, ಹಲವರ ಗೌಪ್ಯತೆಗೆ ಧಕ್ಕೆಯಾಗಲಿದೆ ಎಂದಿತ್ತು.
ರಿಟ್ ಅರ್ಜಿಯಲ್ಲಿ ಕಕ್ಷಿದಾರರಲ್ಲದಿದ್ದರೂ ಚಲನಚಿತ್ರ ನಟಿ ರೆಂಜಿನಿ ಅವರು ಅರ್ಜಿ ಬಹಿರಂಗಗೊಳಿಸಲು ಇದ್ದ ತಡೆ ತೆಗೆದು ಹಾಕಿರುವ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಹೈಕೋರ್ಟ್ ಆಗಸ್ಟ್ 19ರಂದು ವಜಾಗೊಳಿಸಿದೆ ಮತ್ತು ಹೊಸ ರಿಟ್ ಅರ್ಜಿಯನ್ನು ಸಲ್ಲಿಸಲು ಅವರಿಗೆ ಅವಕಾಶ ನೀಡಿದೆ. ಏಕ ಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಸರ್ಕಾರ ವರದಿ ಬಹಿರಂಗಗೊಳಿಸಿದೆ.
ಹೇಮಾ ಸಮಿತಿ ವರದಿ ಸಂಬಂಧಿತ ಇನ್ನಷ್ಟು ಬರಹಗಳು ಕೆಳಗಿವೆ
ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಜಸ್ಟೀಸ್ ಹೇಮಾ ಸಮಿತಿ’ ವರದಿ
‘ಜಸ್ಟೀಸ್ ಹೇಮಾ ಸಮಿತಿ’ ವರದಿ ಬಹಿರಂಗಕ್ಕೆ ವಿಳಂಬ; ಕೇರಳ ಸರ್ಕಾರದ ಉದಾಸೀನತೆಯನ್ನು ಟೀಕಿಸಿದ ತಜ್ಞರು


