ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಲೆಕ್ಕವಿಲ್ಲದ ನಗದು ಪತ್ತೆಯಾಗಿದೆ ಎಂಬ ಆರೋಪದ ನಡುವೆ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವುದಾಗಿ ಘೋಷಿಸಿದೆ. ಈ ನಡುವೆ ಅಲಹಾಬಾದ್ ಹೈಕೋರ್ಟ್‌ನ ವಕೀಲರು ಅವತನ್ನು ತಮ್ಮ ಕೋರ್ಟ್‌ಗೆ ವರ್ಗಾವಣೆ ಮಾಡಬಾರದು ಎಂದು ಮುಷ್ಕರ ಹೂಡಿದ್ದಾರೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ ವರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್ ಆಗಿರುವ ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸುವಂತೆ ಶಿಫಾರಸು ಮಾಡಿತ್ತು. ಆದಾಗ್ಯೂ, ಈ ಕ್ರಮವು ವರ್ಮಾ ಅವರ ಮನೆಯಲ್ಲಿ ನಗದು ಪತ್ತೆಯಾದ ಬಗ್ಗೆ ಆಂತರಿಕ ತನಿಖೆಗೆ ಸಂಬಂಧಿಸಿಲ್ಲ ಎಂದು ಒತ್ತಿ ಹೇಳಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಶುಕ್ರವಾರದಂದು, ವರ್ಮಾ ವಿರುದ್ಧ ಎಫ್‌ಐಆರ್ ನೋಂದಾಯಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಅರ್ಜಿಯನ್ನು “ಅಕಾಲಿಕ” ಎಂದು ಕರೆದ ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ನಡೆಯುತ್ತಿರುವ ಆಂತರಿಕ ವಿಚಾರಣೆಯು ಅದು ಮುಗಿದ ನಂತರ ಹಲವಾರು ಆಯ್ಕೆಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಮಾರ್ಚ್ 14 ರಂದು ವರ್ಮಾ ಅವರ ಅಧೀಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಲ್ಲಿ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆ ಸಮಯದಲ್ಲಿ ಅವರು ಭೋಪಾಲ್‌ನಲ್ಲಿದ್ದರು ಮತ್ತು ನಗದು ಅವರಿಗೆ ಅಥವಾ ಅವರ ಕುಟುಂಬಕ್ಕೆ ಸೇರಿಲ್ಲ ಎಂದು ನ್ಯಾಯಮೂರ್ತಿ ವರ್ಮಾ ಪ್ರತಿಪಾದಿಸಿದ್ದಾರೆ.
ಮಾರ್ಚ್ 22 ರಂದು ಸುಪ್ರೀಂ ಕೋರ್ಟ್ ವರ್ಮಾ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ನೋಟುಗಳ ಬಂಡಲ್‌ಗಳ ವೀಡಿಯೊ ಮತ್ತು ಮೂರು ಚಿತ್ರಗಳನ್ನು ಒಳಗೊಂಡ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ವರ್ಮಾ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ನ್ಯಾಯಾಲಯವು ಮೂವರು ಸದಸ್ಯರ ಸಮಿತಿಯನ್ನು ಸಹ ರಚಿಸಿತ್ತು.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಮಾರ್ಚ್ 21 ರಂದು ವರ್ಮಾ ಅವರಿಗೆ ಪತ್ರ ಬರೆದು, ಅವರ ಬಂಗಲೆಯಲ್ಲಿರುವ ಕೋಣೆಯಲ್ಲಿ “ಹಣ/ನಗದು ಇರುವಿಕೆಯನ್ನು ಲೆಕ್ಕ ಹಾಕುವಂತೆ” ಕೇಳಿದ್ದಾರೆ ಎಂದು ಈ ವರದಿ ಹೇಳಿತ್ತು.
ಈ ನಡುವೆ, ಹೈಕೋರ್ಟ್‌ನ ಆರು ಬಾರ್ ಅಸೋಸಿಯೇಷನ್‌ಗಳು ಗುರುವಾರ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭೇಟಿ ಮಾಡಿ, ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿತ್ತು.
ಇದೇ ವೇಳೆ ಬಾರ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳು ವರ್ಮಾ ವಿರುದ್ಧ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಅಲಹಾಬಾದ್, ಲಕ್ನೋ, ಮಧ್ಯಪ್ರದೇಶ (ಜಬಲ್‌ಪುರ), ಗುಜರಾತ್, ಕರ್ನಾಟಕ ಮತ್ತು ಕೇರಳದ ಬಾರ್ ಅಸೋಸಿಯೇಷನ್‌ಗಳ ಮುಖ್ಯಸ್ಥರು ಗುರುವಾರ ಖನ್ನಾ ಅವರನ್ನು ಭೇಟಿ ಮಾಡಿದ್ದಾರೆ.
ಮಂಗಳವಾರ, ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಈ ಪ್ರಸ್ತಾವನೆಯ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದು, ಅಲಹಾಬಾದ್ ಹೈಕೋರ್ಟ್ ಅನ್ನು “ಕಸದ ಬುಟ್ಟಿಯ ಸ್ಥಳವೆಂದು ಪರಿಗಣಿಸಲಾಗುತ್ತಿದೆ” ಎಂದು ತಿವಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸೂರತ್-ಕೋಲ್ಕತ್ತಾ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿ; ಟೇಕ್ ಆಫ್ ಆಗುವ ಮುನ್ನವೇ ಬಂಧನ
ಸೂರತ್-ಕೋಲ್ಕತ್ತಾ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿ; ಟೇಕ್ ಆಫ್ ಆಗುವ ಮುನ್ನವೇ ಬಂಧನ

