ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯು ಯಾವುದೇ ಒಪ್ಪಂದ ಕಾಣದೇ ವಾಗ್ವಾದದಲ್ಲಿ ಕೊನೆಯಾಗಿದೆ.
ಆರ್.ಎಸ್.ಎಸ್ ತನ್ನ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಆಯೋಜಿಸಿದ್ದ ಪಥಸಂಚಲನ ನಡೆಸಲು ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ ನಂತರ ಆರೆಸ್ಸೆಸ್‌ನ ಕಲಬುರಗಿ ವಿಭಾಗದ ಮುಖ್ಯಸ್ಥ ಅಶೋಕ್ ಪಾಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಂತರ ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನ ನಡೆಸುವಂತೆ ಅನುಮತಿ ಪಡೆಯಲು ಸಂಘಟನೆಗೆ ಅವಕಾಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ಸ್ ಸೇರಿದಂತೆ ಹಲವು ಸಂಘಟನೆಗಳು ಅದೇ ದಿನ ಅಂದರೆ ನವೆಂಬರ್ 2ರಂದು ರ‍್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ ಅಕ್ಟೋಬರ್ 21ರ ಮಂಗಳವಾರ ಕಲಬುರಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.
“ಆರೆಸ್ಸೆಸ್‌ನ ಕಾರ್ಯಗಳು ಮತ್ತು ಆಲೋಚನೆಗಳು ಯುವಜನರು ಹಾಗೂ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಪ್ಯಾಂಥರ್ಸ್, ಒಂದು ಕೈಯಲ್ಲಿ ಸಂವಿಧಾನದ ಪೀಠಿಕೆ, ಇನ್ನೊಂದು ಕೈಯಲ್ಲಿ ನೀಲಿ ಧ್ವಜ ಹಿಡಿದುಕೊಂಡು ರ‍್ಯಾಲಿ ನಡೆಸಲು ಅನುಮತಿ ಕೋರಿತ್ತು. ಇದರ ನಡುವೆ ಭೀಮ್ ಆರ್ಮಿ ಕೂಡ ತ್ರಿವರ್ಣ ಧ್ವಜ, ಬೌದ್ಧ ಧರ್ಮದ ಪಂಚಶೀಲ ಧ್ವಜ ಮತ್ತು ಬಿದಿರಿನ ಕೋಲು ಹಿಡಿದು ರ‍್ಯಾಲಿ ನಡೆಸಲು ಅನುಮತಿ ಕೇಳಿತ್ತು. ಇದಾದ ನಂತರ ಈವರೆಗೆ ಸುಮಾರು 12 ಸಂಘಟನೆಗಳು ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.
ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ. “ಈ ವಿಷಯವನ್ನು ಹೆಚ್ಚು ದಿನ ಎಳೆಯುವುದು ಒಳಿತಲ್ಲ, ಆದಷ್ಟು ಬೇಗ ಇದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ,” ಎಂದು ಎರಡೂ ಕಡೆಯವರಿಗೆ ಮೌಖಿಕವಾಗಿ ಸಲಹೆ ನೀಡಿತ್ತು.
ಹೈಕೋರ್ಟ್ ಸೂಚನೆಯಂತೆ ಶಾಂತಿ ಸಭೆ ನೇತೃತ್ವ ವಹಿಸಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸೇಡಂ ಸಹಾಯ ಆಯುಕ್ತರು, ಚಿತ್ತಾಪೂರ ತಹಸೀಲ್ದಾರ, ಪುರಸಭೆಯ ಮುಖ್ಯಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡಿರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತರಾದ ಶರಣಪ್ಪ ಎಸ್.ಡಿ, ಶಹಾಬಾದ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು, ಚಿತ್ತಾಪೂರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಅಕ್ಟೋಬರ್ 28 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಂಭಾಗಣದಲ್ಲಿ ಎಲ್ಲಾ ಸಂಘಟನೆಗಳಿ 10 ನಿಮಿಷ ಮಾತನಾಡುವ ಅವಕಾಶ ನೀಡಲಾಗಿತ್ತು. ಆರೆಸ್ಸೆಸ್ ಸಂಘಟಕರು ನ್ಯಾಯಾಲಯ ನೀಡುವ ದಿನಾಂಕಕ್ಕೆ ಪಥಸಂಚಲನ ಮಾಡುವುದಾಗಿ ತಿಳಿಸಿದರು.
ಇದರಿಂದಾಗಿ ದಲಿತ ಸಂಘಟನೆಗಳು ಹಾಗೂ ಆರ್.ಎಸ್.ಎಸ್ ಸಂಘಟನೆಗಳ ನಡುವೆ ವಾಗ್ವಾದ ಏರ್ಪಟ್ಟಿದ್ದು, ಶಾಂತಿ ಸಭೆಯಲ್ಲಿ ಒಮ್ಮತದ ಒಪ್ಪಂದ ಸಾಧ್ಯವಾಗದೆ ವಾಗ್ವಾದದಲ್ಲಿ ಸಭೆ ಮುಕ್ತಾಯಗೊಂಡಿದೆ.


