ಕಲಬುರ್ಗಿಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ದುಷ್ಕರ್ಮಿಗಳ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಲಿತ ವ್ಯಕ್ತಿ ಮೃತಪಟ್ಟಿದ್ದಾರೆ. ಅ.27ರಂದು ದುಷ್ಕರ್ಮಿಗಳ ದಾಳಿ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಗದೇವಪ್ಪ ಶಂಕರ ಕ್ವಾಟನೂರ(45) ಮೃತರು. ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ.
ದಲಿತ ವ್ಯಕ್ತಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೌಡಿಶೀಟರ್ ಶಂಕರ ಪರಮೇಶ್ವರ ನಾಯ್ಕೋಡಿ ಮತ್ತು ಇತರ 6 ಮಂದಿ ವಿರುದ್ಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಕೂಡಲೇ ಅವರಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇತರರು ಸದ್ಯ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.
ಹರಕಂಚಿ ಗ್ರಾಮದ ರೌಡಿಶೀಟರ್ ಶಂಕರ ಪರಮೇಶ್ವರ ನಾಯ್ಕೋಡಿ ಹಾಗೂ ಮಾಣಿಕಪ್ಪ ಶಾಮರಾವ ನಾಯಕೋಡಿ ಸೇರಿ ಗುಂಪುಗೂಡಿಕೊಂಡು ಬಂದು ಹಲ್ಲೆಗೈದಿದ್ದಾರೆ ಎಂದು ಜಗದೇವಪ್ಪ ಕುಟುಂಬಸ್ಥರು ದೂರು ನೀಡಿದ್ದು ಈ ಬಗ್ಗೆ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಅ.26 ರಂದು ಮೆಹಬೂಬ್ ಸುಭಾನಿ ಸಂದಲ್ ವಾರ್ಷಿಕ ಜಾತ್ರೆ ನಡೆದಿದ್ದು, ಆರೋಪಿ ಶಂಕರ್ ಮತ್ತು ಆತನ ಕೆಲವು ಸಹಚರರು ಕುಡಿದ ಮತ್ತಿನಲ್ಲಿ ಜಗದೇವಪ್ಪನವರ ಮೇಲೆ ಜಾತಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ನಂತರ ಮಾತಿನ ಚಕಮಕಿ ನಡೆದು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಜಗದೇವಪ್ಪನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಜಾತಿ ನಿಂದನೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ದಾಳಿ ನಡೆದ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಗ್ರಾಮಕ್ಕೆ ಭೇಟಿ ನೀಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ವಿ ನಾರಾಯಣ್ ಮತ್ತು ಪಿಎಸ್‌ಐ ಆಶಾ ರಾಥೋಡ್ ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆಯನ್ನು ಹೆಚ್ಚಿಸಿದ್ದರು.
ಇದನ್ನು ಓದಿ: ಬೋವಿ ಸಮುದಾಯಕ್ಕೆ ಅವಮಾನ ಆರೋಪ: ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಪ್ರಕರಣ ದಾಖಲು



Case should be filed on colors kannada not only one her. She spoke but they could have muted voice. But they have not done it intentionally.