ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಹೊರಬೀಳುತ್ತಿದ್ದು ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ.
ಒಟ್ಟು 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ 26 ವಾರ್ಡ್‌ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ನಾಲ್ಕು ವಾರ್ಡ್‌ಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದರೆ ಒಂದು ವಾರ್ಡ್‌ನಲ್ಲಿ ಖಾತೆ ತೆರಯಲಷ್ಟೇ ಬಿಜೆಪಿ ಶಕ್ತವಾಗಿದೆ. ಆ ಮೂಲಕ ಭಾರೀ ಬಹುಮತದ ಮೂಲಕ ಕನಕಪುರ ನಗರಸಭೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇಡಿ ದಾಳಿಗೆ ಗುರಿಯಾಗಿ ಐವತ್ತು ದಿನಗಳ ಕಾಲ ವಿಚಾರಣೆಗಾಗಿ ಜೈಲಿನಲ್ಲಿದ್ದ ಡಿಕೆಶಿಗೆ ಸ್ವಂತ ಕ್ಷೇತ್ರದಲ್ಲಿ ಈಗಲೂ ಹಿಡಿತ ಮುಂದುವರೆದಿದೆ. ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರ ಕ್ಷೇತ್ರಗಳಲ್ಲಿ ಅವರೇ ದೊಡ್ಡ ಗೆಲುವು ಸಾಧಿಸುವುದು ಇತ್ತೀಚಿನ ವರ್ಷಗಳ ನಿರಂತರ ವಿದ್ಯಮಾನವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಸೋತರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಡಿಕೆಶಿ ಸಹೋದರ ಡಿ.ಕೆ ಸುರೇಶ್ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ ಗೆಲುವಿನ ಅಂತರ ಮಾತ್ರ ಕಡಿಮೆಯಾಗಿತ್ತು.
‘ತಾನು ಅಳುವ ಮಗ ಅಲ್ಲ. ಸುಮ್ಮನಾಗಲ್ಲ’ ಎಂದು ಜೈಲಿನಿಂದ ಹೊರಗೆ ಬಂದಾಗ ಹೇಳಿದ್ದ ಡಿಕೆಶಿ ಉಪಚುನಾವಣೆಯಲ್ಲಿ ಮಾತ್ರ ಹೆಚ್ಚಿನ ಪಾತ್ರ ವಹಿಸುವಂತೆ ಕಾಣುತ್ತಿರಲಿಲ್ಲ. ಈಗ ಕನಕಪುರ ನಗರಸಭೆ ಫಲಿತಾಂಶ ಅದನ್ನು ಬದಲಿಸುತ್ತದಾ ಎಂಬುದನ್ನು ಕಾದು ನೋಡಬೇಕು.


