ಸೋಮವಾರ ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ ಕನಿಷ್ಠ 15 ಕ್ಕೆ ಏರಿಕೆಯಾಗಿದ್ದು, ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲಿನ ಇಂಜಿನ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಕ್ಸ್‌ಪ್ರೆಸ್ ರೈಲಿನ ಮೂರು ಹಿಂಭಾಗದ ಕಂಪಾರ್ಟ್‌ಮೆಂಟ್‌ಗಳು ಹಳಿತಪ್ಪಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. “ಇದುವರೆಗೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಗಾಯಾಳುಗಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. “ನನ್ನ ಹೆಂಡತಿ, ಮಗು ಮತ್ತು ನಾನು ಹೇಗೋ ಕೋಚ್‌ನಿಂದ ಹೊರಬಂದೆವು. ನಾವು ಪ್ರಸ್ತುತ ಸಿಕ್ಕಿಬಿದ್ದಿದ್ದೇವೆ… ರಕ್ಷಣಾ ಕಾರ್ಯಾಚರಣೆಗಳು ಸಹ ತಡವಾಗಿ ಪ್ರಾರಂಭವಾಯಿತು” ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದಾರೆ.
ಎಕ್ಸ್‌ನಲ್ಲಿನ ಪೋಸ್ಟ್ ಮಾಡಿರುವ ಪ್ರಧಾನಿ “ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ” ಎಂದು ಹೇಳಿದ್ದಾರೆ.
“ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಅಪಘಾತದ ಸ್ಥಳಕ್ಕೆ ಹೋಗುತ್ತಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ; ಪಶ್ಚಿಮ ಬಂಗಾಳ: ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ; 5 ಸಾವು, 30 ಮಂದಿ ಗಾಯ


