ಮುಂಬರುವ ಐಪಿಎಲ್ ನಲ್ಲಿ ಲಕ್ನೋ ಫ್ರಾಂಚೈಸಿಗೆ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಮಂಗಳವಾರ ಪಿಟಿಐ ವರದಿ ಮಾಡಿದೆ.
2022ರ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಲಕ್ನೋ ತಂಡವನ್ನು ಕೆ.ಎಲ್.ರಾಹುಲ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇವರೊಂದಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಲಕ್ನೋ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರಾಹುಲ್ ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಸ್ಟೊಯಿನಿಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅಡುತ್ತಿದ್ದರು ಮತ್ತು ಬಿಷ್ಣೋಯ್ ಪಂಜಾಬ್ ತಂಡದಲ್ಲಿದ್ದರು.
ಲಕ್ನೋ ಫ್ರಾಂಚೈಸಿಯನ್ನು ಖರೀದಿಸಲು RPSG ಗ್ರೂಪ್ 7090 ಕೋಟಿ ರೂ. ಹೂಡಿಕೆ ಮಾಡಿದೆ.
ಕಳೆದ ತಿಂಗಳು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಲಕ್ನೋ ಫ್ರಾಂಚೈಸಿಯ ಮಾರ್ಗದರ್ಶಕರಾಗಿ ನೇಮಿಸಲಾಯಿತು. “ಈ ಅದ್ಭುತ ಅವಕಾಶವನ್ನು ಒದಗಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಸ್ಪರ್ಧೆಯಲ್ಲಿ ಗೆಲ್ಲುವ ಬೆಂಕಿಯು ನನ್ನೊಳಗೆ ಇನ್ನೂ ಉರಿಯುತ್ತಿದೆ. ನಾನು ಡ್ರೆಸ್ಸಿಂಗ್ ರೂಮ್‌ಗಾಗಿ ಸ್ಪರ್ಧಿಸುವುದಿಲ್ಲ. ಆದರೆ ಉತ್ತರ ಪ್ರದೇಶಕ್ಕಾಗಿ ಶ್ರಮಿಸುತ್ತೇನೆ” ಎಂದು ಗಂಭೀರ್ ತಿಳಿಸಿದ್ದಾರೆ.
ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಅವರು ಗಂಭೀರ್ ಅವರನ್ನು ಲಕ್ನೋ ತಂಡಕ್ಕೆ ಸ್ವಾಗತಿಸಿದ್ದಾರೆ. ಗೌತಮ್ ಗಭೀರ್ 58 ಟೆಸ್ಟ್, 147 ಓಡಿಐ ಮತ್ತು 37 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿರಿ: ‘ನನ್ನ ತಂಡಕ್ಕೆ ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ!’: ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ


