ಬೆಂಗಳೂರು: ನಗರದ ಭಾರತಿನಗರ ಠಾಣೆಯ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (44) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆ.ಆರ್.ಪುರಂನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದೆ. ಕೊಲೆಯಾದ ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಲೆಯ ಹಿನ್ನೆಲೆ ಮತ್ತು ಆರೋಪಗಳು:
ಮಂಗಳವಾರ ರಾತ್ರಿ ಹಲಸೂರು ಕೆರೆಯ ಸಮೀಪದ ಹರ್ಮಿಟ್ ಕಾಲೋನಿಯ ಮೀನಿ ಅವೆನ್ಯೂ ರಸ್ತೆಯಲ್ಲಿರುವ ಶಿವಪ್ರಕಾಶ್ ಮನೆಯ ಮುಂದೆ ಈ ಕೊಲೆ ನಡೆದಿದೆ. ಬಿಕ್ಲು ಶಿವ ತನ್ನ ಚಾಲಕ ಇಮ್ರಾನ್ ಖಾನ್ ಮತ್ತು ಸ್ನೇಹಿತ ಲೋಕೇಶ್ ಜೊತೆ ಮಾತನಾಡುತ್ತಿದ್ದಾಗ, ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8-9 ಮಂದಿ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ತಲೆಬುರುಡೆ ತುಂಡು ತುಂಡಾಗಿ ಒಡೆದಿದ್ದು, ಮುಖ ಸಂಪೂರ್ಣವಾಗಿ ವಿರೂಪಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಭೀಕರತೆಯನ್ನು ಕಂಡು ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಸಾಕ್ಷಿಗಳು ಭಯಭೀತರಾಗಿ ಓಡಿಹೋಗಿದ್ದಾರೆ.
ಕೊಲೆಯಾದ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಈ ಕೊಲೆಗೆ ಪೂರ್ವ ಬೆಂಗಳೂರಿನ ಕಿತ್ತಕನೂರು ಗ್ರಾಮದ ಜಮೀನು ವಿವಾದವೇ ಕಾರಣ ಎಂದು ಆರೋಪಿಸಿದ್ದಾರೆ. ಶಿವಪ್ರಕಾಶ್ 2023ರಲ್ಲಿ ಒಂದು ಆಸ್ತಿಯನ್ನು ಖರೀದಿಸಿ ಜನರಲ್ ಪವರ್ ಆಫ್ ಅಟಾರ್ನಿ (GPA) ಹೊಂದಿದ್ದ. ಆ ಜಾಗದಲ್ಲಿ ಶೆಡ್ ನಿರ್ಮಿಸಿ, ಇಬ್ಬರು ಮಹಿಳೆಯರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಿಸಿದ್ದ.
ಫೆಬ್ರವರಿ 11ರಂದು, ಜಗದೀಶ್ (A1), ಕಿರಣ್ (A2), ವಿಮಲ್ (A3), ಅನಿಲ್ (A4) ಸೇರಿದಂತೆ ಆರೋಪಿಗಳ ಗುಂಪು ಆ ಸ್ಥಳಕ್ಕೆ ಆಗಮಿಸಿ, ಭದ್ರತಾ ಸಿಬ್ಬಂದಿ ಮಹಿಳೆಯರನ್ನು ಬಲವಂತವಾಗಿ ಹೊರಹಾಕಿ, ಶಿವನ GPA ಹಕ್ಕುಗಳನ್ನು ಜಗದೀಶ್‌ಗೆ ವರ್ಗಾಯಿಸುವಂತೆ ಬೆದರಿಕೆ ಹಾಕಿತ್ತು. ಈ ಬಗ್ಗೆ ಶಿವಪ್ರಕಾಶ್ ಫೆಬ್ರವರಿ 21ರಂದೇ ಭಾರತಿನಗರ ಠಾಣೆಯಲ್ಲಿ ಜಗದೀಶ್ ಮತ್ತು ಇತರರ ವಿರುದ್ಧ ಜೀವ ಬೆದರಿಕೆ ಮತ್ತು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದರೂ ಬೆದರಿಕೆಗಳು ಮುಂದುವರಿದಿದ್ದವು ಎಂದು ತಾಯಿ ವಿವರಿಸಿದ್ದಾರೆ.
ವಿಜಯಲಕ್ಷ್ಮಿ ಅವರ ದೂರಿನಲ್ಲಿ, “ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಈ ಕೊಲೆ ನಡೆದಿದೆ” ಎಂದು ನೇರವಾಗಿ ಆರೋಪಿಸಿದ್ದಾರೆ. ದೂರಿನ ಸಂಬಂಧ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಪಿತೂರಿ) ಮತ್ತು 190 (ಇತರ ಅಪರಾಧಕ್ಕೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. FIR ನಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಮಾಜಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ:
ತಮ್ಮ ವಿರುದ್ಧ FIR ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್, ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಕೊಲೆಯಾದವನ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಯಾರೇ ಸುಮ್ಮನೆ ದೂರು ನೀಡಿದರೂ FIR ದಾಖಲಿಸಬಹುದೇ? FIR ದಾಖಲಿಸುವ ಮುನ್ನ ಪೊಲೀಸರು ನನ್ನಿಂದ ಮಾಹಿತಿ ಪಡೆದಿದ್ದಾರಾ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
“ಈ ವಿಚಾರದಲ್ಲಿ ನನ್ನ ಹೆಸರು ತಂದಿದ್ದಕ್ಕೆ ತುಂಬಾ ಬೇಸರವಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ” ಎಂದು ಬಸವರಾಜ್ ಹೇಳಿದ್ದಾರೆ.
ಪೊಲೀಸ್ ತನಿಖೆ:
ಜಂಟಿ ಪೊಲೀಸ್ ಆಯುಕ್ತ (ಪೂರ್ವ) ಬಿ. ರಮೇಶ್ ಅವರು, ದಾಳಿ ಮಾಡಿದವರು ಯಾರು ಎಂದು ತಿಳಿದರೆ ಕೊಲೆಯ ಹಿಂದಿನ ಉದ್ದೇಶ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ಭಾಗವಾಗಿ ಐವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಶಿವಪ್ರಕಾಶ್ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ 11 ಕ್ರಿಮಿನಲ್ ಪ್ರಕರಣಗಳಿದ್ದು, 2006ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ಇತ್ತೀಚೆಗೆ ಅವರು ರೌಡಿ ಪೆರೇಡ್‌ನಲ್ಲಿ ಭಾಗವಹಿಸಿದ್ದರು.
ವರದಿ ಮಾಡುತ್ತಿದ್ದಾಗಲೇ ಪತ್ರಕರ್ತೆ ಮೇಲೆ ಭೀಕರ ಹಲ್ಲೆ: ಅಷ್ಟಕ್ಕೂ ಆಗಿದ್ದೇನು?


