ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಶಾಲಾ ಅವಧಿ ಕಡಿತಗೊಂಡಿರುವ ನೆಪ ಇಟ್ಟುಕೊಂಡು ಟಿಪ್ಪು ಸುಲ್ತಾನ್ ಸೇರಿದಂತೆ ಹಲವು ಮಹತ್ವದ ಪಠ್ಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಡಿಎಸ್‌ಇಆರ್‌ಟಿ ತನ್ನ ವೆಬ್ ಸೈಟ್‌ನಲ್ಲಿ ಕೈಬಿಡಲಾದ ಪಠ್ಯಗಳನ್ನು ಉಲ್ಲೇಖಿಸಿದೆ. ಏಳನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿದ್ದ ಮೈಸೂರು ಸಾಮ್ರಾಜ್ಯದ ಐತಿಹಾಸಿಕ ಚರಿತ್ರೆಯ ಭಾಗದಿಂದ ಟಿಪ್ಪು ಸುಲ್ತಾನ್ ಆಧ್ಯಾಯವನ್ನು ಕಿತ್ತು ಹಾಕಲಾಗಿದೆ.
ಆರನೇ ತರಗತಿ ಮತ್ತು 10ನೇ ತರಗತಿ ಪಠ್ಯಗಳಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯಗಳನ್ನು ಉಳಿಸಿಕೊಂಡಿದ್ದೇವೆ. ಹಾಗಾಗಿ ಪುನಾರಾವರ್ತನೆ ಆಗಬಾರದೆಂದು 7ನೇ ತರಗತಿಯ ಪಠ್ಯದಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಬ್ರಿಟೀಷರ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದ ರಾಣಿ ಅಬ್ಬಕ್ಕ ಸೇರಿದಂತೆ ಕನ್ನಡದ ರಾಜಮನೆತನಗಳಾದ ಶಾತವಾಹನರು, ಕದಂಬರು ಮತ್ತು ಗಂಗರ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ವಾಸ್ತುಶಿಲ್ಪ, ರಜಪೂತರ ಕೊಡುಗೆಗಳು, ಕ್ರಿಸ್ತನ ಜೀವನ, ಧರ್ಮಬೋಧನೆ ಮುಂತಾದ ಅಧ್ಯಾಯಗಳನ್ನು ಸಹ ಕೈಬಿಡಲಾಗಿದೆ.
ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಧಾರ್ಮಿಕ ವ್ಯಕ್ತಿಗಳು ಮತ್ತು ಅವರ ಬೋಧನೆಗಳನ್ನು ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಾರೆ. ಬೌದ್ಧಧರ್ಮ ಮತ್ತು ಜೈನ ಧರ್ಮವನ್ನು ಕಲಿಸಲು ನಿಗದಿಪಡಿಸಿದ ಸಮಯವನ್ನು ಸಹ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
2020-21ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯನ್ನು ಅಂದಾಜು ಮಾಡಿ, ಪಠ್ಯಕ್ರಮಗಳನ್ನು ಪರಿಷ್ಕರಣೆ ಅಥವಾ ಮೊಟಕು ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿಅಗತ್ಯವಾದ ಪಠ್ಯಗಳನ್ನು ಮಾತ್ರ ಕಲಿಸಲು 6 ರಿಂದ 10 ನೇ ತರಗತಿಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿ ನೀಡಲಾಗಿದೆ.
ಇನ್ನೊಂದೆಡೆ ಸಿಬಿಎಸ್‌ಇ ಪೌರತ್ವ, ಜಾತ್ಯಾತೀತತೆ, ಒಕ್ಕೂಟ ಸರ್ಕಾರಕ್ಕೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಡುವುದಾಗಿ ಕಳೆದ ತಿಂಗಳು ತಿಳಿಸಿತ್ತು. ಉತ್ತರ ಪ್ರದೇಶ ಸರ್ಕಾರವು ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿದೆ ಎಂದು ಅಲ್ಲಿನ ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಇದನ್ನೂ ಓದಿ; ನೆಹರೂ-ಶಾಸ್ತ್ರಿಗೆ ಸಂಬಂಧಿಸಿದ ವಿಷಯಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಯುಪಿ ಸರ್ಕಾರ


