ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳು ‘ಚಟುವಟಿಕೆ ಆಧಾರಿತ ಕಲಿಕೆ’ಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿರುವ ಹಾಗೂ ಒಂದು ಕಾಲದಲ್ಲಿ ‘ಪರಿವರ್ತಕ’ ಕಾರ್ಯಕ್ರಮ ಎಂದು ಪ್ರಚಾರ ಮಾಡಲಾಗಿದ್ದ ‘ನಲಿ ಕಲಿ’ ಉಪಕ್ರಮವನ್ನು ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
2009ರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದ ನಲಿ ಕಲಿ ಕಾರ್ಯಕ್ರಮ, ಒಂದರಿಂದ ಮೂರನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಒಂದೇ ತರಗತಿ ಕೊಠಡಿಯಲ್ಲಿ ಒಟ್ಟುಗೂಡಿಸಿ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿಳ್ಳುವಂತೆ ಮಾಡಲಾಗುತ್ತದೆ.
‘ನಲಿ ಕಲಿ’ 1995ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ (ಎಚ್.ಡಿ ಕೋಟೆ) ತಾಲೂಕಿನಲ್ಲಿ ಯುನಿಸೆಫ್ ಸಹಾಯದೊಂದಿಗೆ ಪ್ರಾಯೋಗಿಕವಾಗಿ (ಪೈಲಟ್) ಆರಂಭವಾಯಿತು. ಆದಿವಾಸಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡುವ ಉದ್ದೇಶದಿಂದ ರಿಷಿ ವ್ಯಾಲಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ರಿಸೋರ್ಸಸ್ (RiVER) ಸಹಕಾರದೊಂದಿಗೆ ಇದನ್ನು ಜಾರಿಗೆ ತರಲಾಯಿತು. ನಂತರ 1998ರಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ಕೆಲವೆಡೆ ನಲಿ ಕಲಿ ಇನ್ನೊಂದು ಪ್ರಾಯೋಗಿಕ ಹಂತಕ್ಕೆ ಬಂತು.
2009ರಲ್ಲಿ ನಲಿ ಕಲಿ ರಾಜ್ಯದಾದ್ಯಂತ ಸಂಪೂರ್ಣವಾಗಿ ಜಾರಿಗೆ ಬಂತು. ಆದರೆ, ಇದು ಹೊಸ ಉಪಕ್ರಮದ ಆರಂಭವಾಗಿರಲಿಲ್ಲ. ಆಗಲೇ ನಡೆಯುತ್ತಿದ್ದ ಪ್ರಾಯೋಗಿಕ ಹಂತದಿಂದ ಪೂರ್ಣ ಅನುಷ್ಠಾನಕ್ಕೆ ಬದಲಾವಣೆ ಮಾಡಲಾಗಿತ್ತು.
ಇಂದು ಕರ್ನಾಟಕದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ (ಸುಮಾರು 40,000ಕ್ಕೂ ಹೆಚ್ಚು) ಕಡ್ಡಾಯವಾಗಿ ನಲಿ ಕಲಿ ಕಾರ್ಯಕ್ರಮ ಜಾರಿಯಲ್ಲಿದ್ದು, District Institute of Education and Training (DIET) ಮತ್ತು Directorate of State Educational Research and Training (DSERT)ಗಳ ಮೂಲಕ ನಿರ್ವಹಣೆಯಾಗುತ್ತಿದೆ.
‘ನಲಿ ಕಲಿ’ ಉಪಕ್ರಮ ಸ್ಥಗಿತಗೊಳಿಸಿದ ಬಳಿಕ, ಅದಕ್ಕೆ ಬಳಸಲಾಗುತ್ತಿರುವ ತರಗತಿ ಕೊಠಡಿಗಳನ್ನು ಹಂತ ಹಂತವಾಗಿ ಏಕ ತರಗತಿ ಕೊಠಡಿಗಳಾಗಿ ಪರಿವರ್ತಿಸಲಾಗುವುದು. ಮೊದಲ ಹಂತದಲ್ಲಿ, ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವ ಶಾಲೆಗಳು ಸೇರಿದಂತೆ 29,000 ಶಾಲೆಗಳಲ್ಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗುವುದು” ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ಮಂಗಳವಾರ (ನ.4) ವರದಿ ಮಾಡಿದೆ.
ನಲಿ ಕಲಿಯಿಂದಾಗಿ ಮಕ್ಕಳು ಒಂದು ವಾಕ್ಯ ರಚಿಸಲು ಹೆಣಗಾಡುತ್ತಿದ್ದಾರೆ. ಇದು ಅವರು ಮುಂದಿನ ತರಗತಿಗಳಿಗೆ ಹೋದಂತೆ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 2026-27ನೇ ಶೈಕ್ಷಣಿಕ ವರ್ಷದಿಂದ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಖಚಿತ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂಬುವುದಾಗಿ ಮೂಲಗಳು ಹೇಳಿವೆ ಎಂದು ವರದಿ ತಿಳಿಸಿದೆ.
ನಲಿಕಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿರುವ ಕುರಿತು ಶಿಕ್ಷಣ ತಜ್ಞ ಹಾಗೂ ಚಿಂತಕ ಶ್ರೀಪಾದ್ ಭಟ್ ಅವರು ನಾನುಗೌರಿ.ಕಾಂ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಡಳಿತದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ನಲಿ ಕಲಿ ಉಪಕ್ರಮದ ಜಾರಿಯ ಕ್ರಮವೇ ಬದಲಾಗಿದೆ. ಹಾಗಾಗಿ, ಅದನ್ನು ಸ್ಥಗಿತಗೊಳಿಸುವುದೇ ಉತ್ತಮ ಎಂದಿದ್ದಾರೆ.
ಅನಿತಾ ಕೌಲ್ ಎಂಬ ಐಎಎಸ್ ಅಧಿಕಾರಿಯ ಮುತುವರ್ಜಿಯಿಂದ ಜಾರಿಗೆ ಬಂದ ಈ ಕಾರ್ಯಕ್ರಮದ ಉದ್ದೇಶ ಅತ್ಯುತ್ತಮವಾಗಿದೆ. ಪುಸ್ತಕಗಳ ಹೊರತಾಗಿ ಪ್ರಾಯೋಗಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನವನ್ನು ಇದರ ಮೂಲಕ ಮಾಡಲಾಗಿತ್ತು. ಆದರೆ, ಬರುಬರುತ್ತಾ ಆಡಳಿತದ (ಸರ್ಕಾರದ) ಬೇಜವಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಕಾರ್ಯಕ್ರಮ ಹಳ್ಳ ಹಿಡಿಯಿತು ಎಂದು ಹೇಳಿದ್ದಾರೆ.
ನಲಿ ಕಲಿ ಕಾರ್ಯಕ್ರಮ ಉತ್ತಮವಾಗಿದ್ದರೂ, ಅದನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಜಾರಿಗೆ ತರಲಾಯಿತು. ಖಾಸಗಿ ಶಾಲೆಗಳಲ್ಲಿ ಅದು ಜಾರಿಗೆ ಬರಲಿಲ್ಲ. ಹಾಗಾಗಿ, ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ಕಲಿಕಾ ವಿಧಾನ ಬದಲಾಯಿತು. ಖಾಸಗಿ ಶಾಲೆಗಳ ಮಕ್ಕಳು ಪುಸ್ತಕ ಆಧಾರಿತ ಕಲಿಕಾ ವಿಧಾನದ ಮೂಲಕ ಮುಂದುವರಿಯುತ್ತಿದ್ದರೆ, ನಲಿಕಲಿಯ ಪ್ರಾಯೋಗಿಕ ಕಲಿಕೆ ಸರಿಯಾಗಿ ಜಾರಿಯಾಗದೆ ಸರ್ಕಾರಿ ಶಾಲೆಯ ಮಕ್ಕಳು ಹಿಂದುಳಿದರು. ಇದು ನಲಿಕಲಿ ಕಾರ್ಯಕ್ರಮದ ಬಗ್ಗೆ ಪೋಷಕರಲ್ಲೇ ಅಸಮಾಧಾನ ಮೂಡುವಂತೆ ಮಾಡಿತು ಎಂದಿದ್ದಾರೆ.
ನಲಿಕಲಿ ಕಾರ್ಯಕ್ರಮದಲ್ಲಿ 1ರಿಂದ 3ನೇ ತರಗತಿವರೆಗಿನ ಮಕ್ಕಳನ್ನು ಒಂದೇ ತರಗತಿ ಕೊಠಡಿಯಲ್ಲಿ ಕೂರಿಸಿ ಕಲಿಸುವ ವಿಧಾನವಿದೆ. ಇದನ್ನೇ ಲಾಭ ಮಾಡಿಕೊಂಡ ಸರ್ಕಾರ ಮೂರು ತರಗತಿಗಳಿಗೆ ಮೂವರು ಶಿಕ್ಷಕರನ್ನು ನೇಮಿಸುವ ಬದಲು, ಒಬ್ಬರೇ ಶಿಕ್ಷಕರನ್ನು ನೇಮಿಸಲು ಶುರು ಮಾಡಿತು. ಅದರಲ್ಲೂ ನಲಿಕಲಿ ತರಗತಿಗಳ ಬಗ್ಗೆ ನಿರ್ಲಕ್ಷ್ಯ ತೋರಿ ಅಥಿತಿ ಶಿಕ್ಷಕರನ್ನು ನೇಮಿಸಲು ಪ್ರಾರಂಭಿಸಿತು. ಆ ಅತಿಥಿ ಶಿಕ್ಷಕರಿಗೆ ನಲಿಕಲಿಯ ಮೂಲ ಉದ್ದೇಶವೇ ಗೊತ್ತಿರುವುದಿಲ್ಲ. ಇದರಿಂದ ಕಾರ್ಯಕ್ರಮದ ಉದ್ದೇಶವೇ ಬದಲಾಯಿತು ಎಂದು ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿ, ಅದರಲ್ಲೂ ರಾಯಚೂರಿನಂತಹ ಜಿಲ್ಲೆಗಳಲ್ಲಿ 1ರಿಂದ 3ನೇ ತರಗತಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ಒಂದೇ ನಲಿಕಲಿ ತರಗತಿಯಲ್ಲಿ ಕೂರಿಸಿ ಅವರಿಗೆ ಪಾಠ ಮಾಡುವುದು ಸವಾಲಾಯಿತು. ಇದರಿಂದ ಮಕ್ಕಳು ಕಲಿಯಲು ಅಸಾಧ್ಯವಾಯಿತು. 1ನೇ ತರಗತಿ ಮತ್ತು 3ನೇ ತರಗತಿ ಮಕ್ಕಳ ನಡುವಿನ ವಯಸ್ಸಿನ ಅಂತರವೂ, ಅವರು ಒಂದೇ ತರಗತಿಯಲ್ಲಿ ಹೊಂದಿಕೊಳ್ಳುವುದಕ್ಕೆ ಅಡ್ಡಿಯಾಯಿತು. ಇವೆಲ್ಲವೂ ಕಾರ್ಯಕ್ರಮ ಹಳ್ಳ ಹಿಡಿಯಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
ಉತ್ತಮ ಉದ್ದೇಶದಿಂದ ನಲಿಕಲಿ ಕಾರ್ಯಕ್ರಮ ಪ್ರಾರಂಭಿಸಿದ್ದರೂ, ಅದನ್ನು ಸರ್ಕಾರ ಜಾರಿ ಮಾಡಿದ ರೀತಿಯಿಂದ ಈಗ ಸಮಸ್ಯೆಗಳಿಂದ ತುಂಬಿಕೊಂಡಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ನಲಿಕಲಿಯ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದುಳಿದಿರುವುದು ಸತ್ಯ. ಹೀಗಿರುವಾಗ ಈ ಕಾರ್ಯಕ್ರಮವನ್ನು ಕೈಬಿಟ್ಟು ಪ್ರತ್ಯೇಕ ತರಗತಿಗಳನ್ನು ನಡೆಸುವುದು ಒಳಿತು. ಸರ್ಕಾರ ಪ್ರತೀ ತರಗತಿಗೆ ಅಗತ್ಯ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಗಮನಹರಿಸಬೇಕು ಎಂದು ಶ್ರೀಪಾದ್ ಭಟ್ ಹೇಳಿದ್ದಾರೆ.
ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, “ಒಂದೇ ಕೊಠಡಿಯಲ್ಲಿ ಮೂರು ತರಗತಿಗಳ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡುವ ಕ್ರಮ ಅಷ್ಟೊಂದು ಸರಿಯಾಗಿಲ್ಲ. ಹಾಗಾಗಿ, ಸರ್ಕಾರ ನಲಿಕಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಿ. ಅದರ ಬದಲಾಗಿ ಪ್ರತ್ಯೇಕ ತರಗತಿಗಳನ್ನು ನಡೆಸಲಿ. ಅದಕ್ಕೆ ಅಗತ್ಯವಿರುವ ಶಿಕ್ಷಕರು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲಿ ಎಂದಿದ್ದಾರೆ.


