ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಲ್ಲಿ ಸ್ಥಾಪಿಸಲಾಗಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಮೇಲ್ವಿಚಾರಣೆ ಮಾಡಲು ನೀತಿ ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಸಲಹೆ ನೀಡಿದೆ.
“ಎಸ್‌ಟಿಪಿಗಳಲ್ಲಿ ಮಲ ಹೊರುವ ಪದ್ದತಿ ತಡೆಗೆ ಯಾವುದಾದರು ಶಾಸನಬದ್ಧ ಕಾರ್ಯವಿಧಾನ ಇದೆಯೇ? ಇದು ಸರ್ಕಾರದ ತುರ್ತು ಗಮನದ ಅಗತ್ಯವಿರುವ ವಿಷಯ. ಅನೇಕ ಜನರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಎಸ್‌ಟಿಪಿ ಹೆಚ್ಚು ಯಾಂತ್ರೀಕರಿಸಬೇಕು” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಎಂ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಹೇಳಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಲ್ಲಿರುವ ಎಸ್‌ಟಿಪಿ ಸ್ಥಾವರಗಳ ಸಮಗ್ರ ಸಮೀಕ್ಷೆಯನ್ನು ನಡೆಸುವಂತೆ ಮತ್ತು ಅವುಗಳನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಪೀಠವು ಹೀಗೆ ಅಭಿಪ್ರಾಯಪಟ್ಟಿದೆ.
ಇದಲ್ಲದೆ, ಕೆಲಸದ ಪರಿಸ್ಥಿತಿಗಳು ಮತ್ತು ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ಕೈಪಿಡಿಯನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಟ್ರೇಡ್ ಯೂನಿಯನ್ ಕೋರಿತ್ತು.
ಒಕ್ಕೂಟದ ಪರವಾಗಿ ಹಾಜರಾದ ವಕೀಲೆ ಮೈತ್ರೇಯಿ ಕೃಷ್ಣನ್, ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಸ್ತಚಾಲಿತ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಸಾವುಗಳು ಸಂಭವಿಸಿವೆ. ದುರದೃಷ್ಟವಶಾತ್ ಈ ಪದ್ಧತಿ ವಿಭಿನ್ನ ರೂಪಗಳನ್ನು ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದ ಸಾವುಗಳು ಸಂಭವಿಸಿರುವ ಒಳಚರಂಡಿ ಸಂಸ್ಕರಣಾ ಘಟಕಗಳಲ್ಲಿ ನಡೆಯುವ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ಪರಿಶೀಲಿಸಲು ಈ ಅರ್ಜಿಯನ್ನು ನಿರ್ದಿಷ್ಟವಾಗಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
“ಸರ್ಕಾರ ಎಸ್‌ಟಿಪಿಗೆ ಸಂಬಂಧಿಸಿದಂತೆ ಒಂದು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಸ್ಥಾಪಿಸಲಾದ ಎಸ್‌ಟಿಪಿಗಳ ಸಮೀಕ್ಷೆಯನ್ನು ಮಾಡಿ ಯಾವ ಮಾರ್ಗಸೂಚಿಗಳನ್ನು ಜಾರಿಗೊಳಿಸಬಹುದು ಎಂದು ನೋಡುತ್ತೇವೆ ಎನ್ನಲಾಗಿತ್ತು. ಆದರೆ, ಇದು ಸಂಪೂರ್ಣವಾಗಿ ಅನಿಯಂತ್ರಿತವಾದ ಒಂದು ಕ್ಷೇತ್ರವಾಗಿದೆ. ಈ ಕೆಲಸವನ್ನು ಯಾರು ಮಾಡಬಹುದು ಮತ್ತು ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಯಾವುದೇ ಮಾರ್ಗಸೂಚಿಗಳಿಲ್ಲ” ಎಂದು ಮೈತ್ರೇಯಿ ಕೃಷ್ಣನ್ ವಿವರಿಸಿದ್ದಾರೆ.
ರಾಜ್ಯವು ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿದೆ. ಈಗಾಗಲೇ ಅದನ್ನು ಕೆಎಸ್‌ಪಿಸಿಬಿಗೆ ಸಲ್ಲಿಸಲಾಗಿದೆ. ಅಂತಿಮಗೊಳಿಸಿದ ನಂತರ ಅದನ್ನು ಜಾರಿಗೆ ತರಲಾಗುವುದು ಎಂದು ಹೆಚ್ಚುವರಿ ಸರ್ಕಾರಿ ವಕೀಲ ನಿಲೋಫರ್ ಅಕ್ಬರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ರಾಜ್ಯದಲ್ಲಿ ಪ್ರತಿಯೊಂದು ಎಸ್‌ಟಿಪಿಯನ್ನು ಎಲ್ಲಿ ಸ್ಥಾಪಿಸಿದರೂ ಅದಕ್ಕೆ ಒಂದು ಸಂಯೋಜಿತ ಯೋಜನೆ ಇರಬೇಕು. ಅದು ಮಾರ್ಗಸೂಚಿಗಳ ಸ್ವರೂಪದಲ್ಲಿರಲಿ ಅಥವಾ ಶಾಸನಬದ್ಧ ಕಾರ್ಯವಿಧಾನವಾಗಿರಲಿ, ಅದು ನಿಮ್ಮ ದೃಷ್ಟಿಕೋನವಾಗಿದೆ. ಆದರೆ, ಅದು ಕಾನೂನಿನ ನಿಯಂತ್ರಣ ಹೊಂದಿರಬೇಕು” ಎಂದು ಹೇಳಿದೆ.
ಎಸ್‌ಟಿಪಿಗಳ ನಿರ್ವಹಣೆಗೆ ಕೆಲವು ಕಾರ್ಯವಿಧಾನ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನ ಇರಬೇಕು. ಅಧಿಕಾರಿಗಳು ಒಟ್ಟಾಗಿ ಕುಳಿತು ಆ ಬಗ್ಗೆ ಮನಸ್ಸು ಮಾಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಎಸ್‌ಟಿಪಿಗಳ ಮೇಲೆ ನಿಗಾ ಇಡುತ್ತಿಲ್ಲವೇ ಎಂದೂ ನ್ಯಾಯಾಲಯ ಕೇಳಿದೆ.
ಇದಕ್ಕೆ ಉತ್ತರಿಸಿದ ವಕೀಲೆ ಕೃಷ್ಣನ್, “ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರದ ವಿಷಯ ನೋಡುತ್ತದೆ ಮತ್ತು ಸ್ಥಾವರಗಳ ಸ್ಥಾಪನೆಯನ್ನು ನಿರ್ದೇಶಿಸುತ್ತದೆ. ಕಾರ್ಮಿಕರ ವಿಷಯದಲ್ಲಿ ಇದು ಅನಿಯಂತ್ರಿತವಾಗಿಯೇ ಉಳಿದಿದೆ. ಕಳೆದ ವರ್ಷ ಎಸ್‌ಟಿಪಿಯಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಮಂಡಳಿ ಅಲ್ಲೇ ಇತ್ತು, ನಾವು ಕಾರ್ಮಿಕರನ್ನು ನೋಡುವುದಿಲ್ಲ ಎಂದು ಅದು ಹೇಳಿದೆ” ಎಂದು ಹೇಳಿದ್ದಾರೆ.
ನಂತರ ನ್ಯಾಯಾಲಯವು, ಎಸ್‌ಟಿಪಿಗಳಲ್ಲಿ ಹಸ್ತಚಾಲಿತ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿಗಳನ್ನು ಪರಿಶೀಲಿಸಲು ಸುರಕ್ಷತಾ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಕೆಲಸದ ಅವಧಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರ: ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ


