ಒಡಿಶಾ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಇದು ‘ಬಿಜೆಪಿಗರ ಅಸಹಿಷ್ಣುತೆಗೆ ಉದಾಹರಣೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಶನಿವಾರ ಹೇಳಿದ್ದಾರೆ.
ಕರ್ನಾಟಕದ ಸಂಸದರಾದ ತೇಜಸ್ವಿ ಸೂರ್ಯ, ಸದಾನಂದ ಗೌಡ, ಪಿ.ಸಿ. ಮೋಹನ್ ಮತ್ತು ಎಸ್. ಮುನಿಸ್ವಾಮಿ ಅವರು ಖರ್ಗೆ ಅವರ ಪತ್ರವನ್ನು ಆಕ್ಷೇಪಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಈ ವಿಚಾರವಾಗಿ ಮಾತನಾಡಿದ ಚಿದಂಬರಂ ಅವರು, ”ಈ ಪ್ರತಿಕ್ರಿಯೆಯಲ್ಲಿ ಸತ್ವವಿಲ್ಲ ಮತ್ತು ವಿಷಯ ಮಂಡನೆಯು ಪೊಳ್ಳಾಗಿದೆ” ಎಂದಿದ್ದಾರೆ.
ಖರ್ಗೆ ಅವರು ಪತ್ರದಲ್ಲಿ, ”ರೈಲ್ವೆ ಭದ್ರತೆಯ ಕುರಿತು ಅಶ್ವಿನಿ ವೈಷ್ಣವ್ ಅವರು ನೀಡಿದ್ದ ಟೊಳ್ಳು ಭರವಸೆಗಳ ನಿಜ ಬಣ್ಣ ಈಗ ಬಯಲಾಗಿದೆ ಎಂದು ಉಲ್ಲೇಖಿಸಿದ್ದರು. ಜೊತೆಗೆ, ರೈಲು ಅಪಘಾತ ತನಿಖೆಯನ್ನು ಸಿಬಿಐಗೆ ವಹಿಸುವುದನ್ನು ವಿರೋಧಿಸಿದ್ದ ಅವರು, ಸಿಬಿಐ ಇರುವುದು ಅಪರಾಧ ಪ್ರಕರಣಗಳ ತನಿಖೆ ನಡೆಸಲು ಹೊರತು ಅಪಘಾತದ ತನಿಖೆ ನಡೆಸಲು ಅಲ್ಲ” ಎಂದು ಟೀಕಿಸಿದ್ದರು.
ಇದನ್ನೂ ಓದಿ: ಸಿಬಿಐ ಕೆಲಸ ಅಪರಾಧಗಳನ್ನು ತನಿಖೆ ಮಾಡುವುದು, ರೈಲ್ವೆ ಅಪಘಾತಗಳ ತನಿಖೆ ಮಾಡುವುದಲ್ಲ: ಪ್ರಧಾನಿಗೆ ಖರ್ಗೆ ಪತ್ರ
ಇದಕ್ಕೆ ಸಂಸರು ಪ್ರತಿಕ್ರಿಯಿ, ”ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಿಂದ ಎರವಲು ಪಡೆದ ಮಾಹಿತಿ ಆಧರಿಸಿ ಪ್ರಧಾನಿ ಅವರಿಗೆ ಪತ್ರ ಬರೆಯುವುದು ನಿಮ್ಮಂಥ ಉನ್ನತ ನಾಯಕರಿಗೆ ಸರಿಹೊಂದುವುದಿಲ್ಲ. ವಾಟ್ಸ್‌ಆ್ಯಪ್ ವಿ.ವಿಯ ಕುಲಪತಿಗಳಾದ ನೀವು ಸುಳ್ಳು ಸುದ್ದಿಗಳನ್ನು ಉಗುಳಲೇಬೇಕು ಎಂಬ ಒತ್ತಡಕ್ಕೆ ಒಳಗಾಗಿರುತ್ತೀರಿ” ಎಂದು ಸಂಸದರು ಹೇಳಿದ್ದಾರೆ.
ಬಿಜೆಪಿ ಸಂಸದರ ಈ ಹೇಳಿಕೆಯನ್ನು ವಿರೋಧಿಸಿರುವ ಚಿದಂಬರಂ ಅವರು, ”ಕಾರ್ಯಪ್ರವೃತ ಪ್ರಜಾಪ್ರಭುತ್ವದಲ್ಲಿ ಇಂಥ ಪತ್ರಗಳಿಗೆ ಪ್ರಧಾನಿ ಉತ್ತರಿಸಲಿ ಎಂದು ಜನರು ಎದುರು ನೋಡುತ್ತಾರೆ. ಆದರೆ ನಮ್ಮದೇಶದ ಪ್ರಜಾಪ್ರಭುತ್ವ ಹೇಗಿದೆ ಎಂದರೆ, ಪ್ರಧಾನಿಯು ಪತ್ರಕ್ಕೆ ಪ್ರತಿಕ್ರಿಯಿಸಬೇಕು ಎಂಬುದನ್ನು ಪರಿಗಣಿಸುವುದೂ ಇಲ್ಲ” ಎಂದು ಹೇಳಿದ್ದಾರೆ.
”ಖರ್ಗೆ ಅವರು ಎತ್ತಿದಂಥ ಪ್ರಶ್ನೆಗಳನ್ನೇ ಹೋಲುವಂಥ ಅಂಶಗಳನ್ನು ಮಹಾಲೇಖಪಾಲರು 2022ರ ಡಿಸೆಂಬರ್‌ನಲ್ಲಿ ನೀಡಿದ್ದ ವರದಿಯು ಉಲ್ಲೇಖಿಸಿತ್ತು. ಆಗ್ನೆಯ ವಿಭಾಗೀಯ ರೈಲ್ವೆಯ ಮುಖ್ಯ ಕಾರ್ಯಕಾರಿ ನಿರ್ವಾಹಕರು 2023ರ ಫೆಬ್ರುವರಿ 9ರಂದು ಬರೆದಿದ್ದ ಪತ್ರದಲ್ಲಿ ಒಡಿಶಾದ ಬಾಲೇಶ್ವರ ರೈಲು ದುರಂತದಂಥ ಘಟನೆಗಳು ನಡೆಯುವ ಸಂಭವದ ಕುರಿತು ಎಚ್ಚರಿಸಿದ್ದರು. ಈ ಪತ್ರಕ್ಕೆ ಸಂಬಂಧಿಸಿ ಸರ್ಕಾರವು ಯಾವ ಕ್ರಮ ಕೈಗೊಂಡಿದೆ ಎಂದು ಗೌರವಾನ್ವಿತ ಸಂಸದರು ಮಾಹಿತಿ ನೀಡುತ್ತಾರೆಯೇ?” ಎಂದು ಚಿದಂಬರಂ ಅವರು ಪ್ರಶ್ನೆ ಮಾಡಿದ್ದಾರೆ.


