ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಒಂದು ದಿನದ ನಂತರ, ಶೋಪಿಯಾನ್ ಜಿಲ್ಲೆಯ ಸಿಆರ್‌ಪಿಎಫ್ ಕ್ಯಾಂಪ್ ಬಳಿ ಭಾನುವಾರ ಬೆಳಿಗ್ಗೆ 20 ವರ್ಷದ ನಾಗರಿಕನನ್ನು ಅನುಮಾನಾಸ್ಪದ ವ್ಯಕ್ತಿಯೆಂದು ಗುಂಡಿಕ್ಕಿ ಕೊಲ್ಲಲಾಗಿದೆ.
ಮೃತರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅರ್ವಾನಿ ಪ್ರದೇಶದ ನಿವಾಸಿ ಶಾಹಿದ್ ಅಹ್ಮದ್ ರಾಥರ್ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುತಿಸಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಶಾಹಿದ್‌ರನ್ನು ಸೇಬು ಬೆಳೆ ಕೊಯ್ಲು ಮಾಡಲು ಸಹಾಯಕ್ಕಾಗಿ ರೈತರೊಬ್ಬರು ಕರೆತಂದಿದ್ದರು ಎಂದು ವರದಿಯಾಗಿದೆ.
‘ದಿ ವೈರ್’ ಜಾಲತಾಣದೊಂದಿಗೆ ಮಾತನಾಡಿರುವ ಶಾಹಿದ್ ಅಹಮದ್ ರಾಥರ್ ಅವರ ಸಹೋದರ ಜುಬೈರ್ ಅಹಮದ್ ರಾಥರ್, “ಈ ಘಟನೆ ನಡೆದ ದಿನ (ಭಾನುವಾರ ಬೆಳಿಗ್ಗೆ) ಶಾಹಿದ್ ತನ್ನ ಮನೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದರು. ಜೈನಾಪುರದಲ್ಲಿ ಅವರಿಗಿಂತ ಸ್ವಲ್ಪ ಮೀಟರ್‌ಗಳ ದೂರದಲ್ಲಿ ನಡೆಯುತ್ತಿದ್ದಾಗ ಸಿಆರ್‌ಪಿಎಫ್ ಗುಂಪು ಶಾಹಿದ್ ಮೇಲೆ ಗುಂಡು ಹಾರಿಸಿದೆ” ಎಂದು ಆರೋಪಿಸಿದ್ದಾರೆ.

“ಇದು ಉದ್ದೇಶಿತ ಹತ್ಯೆ” ಎನ್ನುತ್ತಾ ಗದ್ಗದಿತನಾಗಿ ಮಾತು ಮುಂದುವರಿದ ಜಬೈರ್, “ಅತ್ಯಂತ ಅಮಾನುಷವಾಗಿ ಅವರು ಕೊಂದಿದ್ದಾರೆ. ಈ ಪ್ರಾಂತ್ಯದಲ್ಲಿ ಬಂದೂಕು ಜಳುಪಿಸಿರಲಿಲ್ಲ. ಆದರೆ ನಮ್ಮೊಂದಿಗೆ ಆಗಿದೆ. ಇದು ಎಲ್ಲಿ ಬೇಕಾದರೂ ಆಗಬಹುದು. ಅಮಾಯಕರನ್ನು ಕೊಲ್ಲುತ್ತಿರುವ ಅವರು (ಸಿಆರ್‌ಪಿಎಫ್), ಅಮಾಯಕರನ್ನು ಉಗ್ರಗಾಮಿಗಳಂತೆ ಬಿಂಬಿಸುತ್ತಿದ್ದಾರೆ. ನಮಗೆ ನ್ಯಾಯ ಬೇಕಿದೆ” ಎಂದು ಆಗ್ರಹಿಸಿದ್ದಾರೆ.
“ಶೋಪಿಯಾನ್ ಜಿಲ್ಲೆಯ ಬಾಬಾಪೋರಾ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ 178 ಬೆಟಾಲಿಯನ್‌ನ ತಂಡದ ಮೇಲೆ ‘ಅಪರಿಚಿತ ಭಯೋತ್ಪಾದಕರು’ ದಾಳಿ ನಡೆಸಿದ್ದಾರೆ” ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. “ಸಿಆರ್‌ಪಿಎಫ್ ಬಂದೂಕು ಬಳಸಿ ಪ್ರತೀಕಾರ ನಡೆಸಿತು. ತಪ್ಪಾದ ದಾಳಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ದಾಳಿಯಾಗಿದೆ ಎಂದು ಪೊಲೀಸರು ಹೇಳುತ್ತಿದ್ದು, “ಸಿಆರ್‌ಪಿಎಫ್‌ನ ಯಾವುದೇ ಅಧಿಕಾರಿಗಳು ಘಟನೆಯಲ್ಲಿ ಗಾಯಗೊಂಡಿಲ್ಲ” ಎಂದು ದಿ ವೈರ್ ವರದಿ ಮಾಡಿದೆ.
ಸಾವಿಗೀಡಾದ ವ್ಯಕ್ತಿಯು ಹತ್ತನೇ ತರಗತಿ ಡ್ರಾಪ್‌ಔಟ್ ಆಗಿದ್ದು, ನಾಲ್ಕು ಮಂದಿ ಒಡಹುಟ್ಟಿದವರಲ್ಲಿ ಹಿರಿಯವರಾಗಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದರು. ಅಜ್ಜಿ, ಪೋಷಕರು ಮತ್ತು ಕಿರಿಯ ಸಹೋದರನ್ನು ಶಾಹಿದ್ ಅಗಲಿದ್ದಾರೆ.
“ನಮ್ಮದು ಬಡ ಕುಟುಂಬ. ಶಾಹಿದ್ ಶಾಲೆಯನ್ನು ಬಿಟ್ಟು, ತಂದೆಗೆ ಸಹಕರಿಸುತ್ತಿದ್ದನು. ಅದು ಅವನ ತಪ್ಪೇ? ಆತ ಉಗ್ರಗಾಮಿಯಾಗಿರಲಿಲ್ಲ. ಏಕೆ ಆತನನ್ನು ಇಷ್ಟು ಕ್ರೂರವಾಗಿ ಕೊಂದರು?” ಎಂದು ಅಳುತ್ತಲೇ ಶಾಹಿದ್‌ನ ಅಜ್ಜಿ ಆಜಿ ಬೇಗಂ ಮಾತನಾಡುತ್ತಿದ್ದರು. ನೆರೆಹೊರೆಯವರು ಆಜಿ ಬೇಗಂ ಅವರನ್ನು ಸಂತೈಸುತ್ತಿದ್ದರು.

ಶೂಟ್ ಮಾಡಿದ ದೃಶ್ಯದ ಗ್ರಾಫಿಕ್ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಿನಿ ಟ್ರಕ್ ಅಡಿ ಶಾಹಿದ್ ಅವರ ತಲೆ ಸಿಲುಕಿರುವುದನ್ನು ಚಿತ್ರದಲ್ಲಿ ಕಾಣಬಹುದು. ಶಾಹಿದ್ ಕಾಲುಗಳು ಚಾಚಲ್ಪಟ್ಟಿವೆ.
“ಸ್ವಲ್ಪ ಹಣವನ್ನು ಸಂಪಾದಿಸಲು ಮತ್ತು ತನ್ನ ಕುಟುಂಬಕ್ಕೆ ಸಹಾಯ ಮಾಡಲು ಶಾಹಿದ್ ಶಾಲೆ ಬಿಟ್ಟಿದ್ದರು. ಶಾಹಿದ್ ಕುಟುಂಬ ಬಡತನ ರೇಖೆಗಿಂತ ಕೆಳಗಿದೆ. ಶಾಹಿದ್ ಹತ್ಯೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ” ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಅಕ್ಟೋಬರ್ 7ರಂದು ಏಳು ಜನರಿದ್ದ ಬಡ ಅಲೆಮಾರಿ ಕುಟುಂಬ ಸದಸ್ಯ ಪರ್ವೇಜ್ ಅಹ್ಮದ್ ಖಾನ್ ಅವರನ್ನು ಅನಂತನಾಗ್‌ನಲ್ಲಿ ಸಿಆರ್‌ಪಿಎಫ್ ಅಧಿಕಾರಿಗಳು ಹತ್ಯೆ ಮಾಡಿದ್ದರು.


